ನಾಪತ್ತೆಯಾದವನಿಗೆ ಮುಂದುವರಿದ ಶೋಧ
Team Udayavani, Oct 30, 2019, 5:10 AM IST
ಅಪಾಯಕ್ಕೆ ಸಿಲುಕಿದ್ದ ಎರಡು ದೋಣಿಗಳಲ್ಲಿದ್ದ 9 ಮಂದಿಯನ್ನು ಮಲ್ಪೆಗೆ ಕರೆತರಲಾಯಿತು.
ಮಲ್ಪೆ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿ ಗೋವಾ ಗಡಿಯ ಸಮುದ್ರದಲ್ಲಿ ಸಂಪರ್ಕ ಕಳೆದುಕೊಂಡು ಅಪಾಯಕ್ಕೆ ಸಿಲುಕಿದ್ದ ಎರಡು ದೋಣಿಗಳಲ್ಲಿದ್ದ 9 ಮಂದಿಯನ್ನು ಮಲ್ಪೆಗೆ ಕರೆತರಲಾಗಿದೆ. ಈ ಸಂದರ್ಭ ಕಡಲಿಗೆ ಧುಮುಕಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಇನ್ನೂ ಪತ್ತೆಯಾಗಿಲ್ಲ. ಆತನ ಪತ್ತೆಗೆ ಕೋಸ್ಟ್‌ಗಾರ್ಡ್ ಕಾರ್ಯಾಚರಣೆ ನಡೆಸುತ್ತಿದೆ.
ದೋಣಿಗಳಲ್ಲಿ ಒಟ್ಟು 11 ಮಂದಿ ಇದ್ದರು. ಭಟ್ಕಳದ ಮಲ್ಲಿಕಾರ್ಜುನ (42), ಪುರುಷೋತ್ತಮ (38), ಅನಂತ (43), ಮಂಜುನಾಥ (45), ಹೊನ್ನಾವರದ ಗಣಪತಿ (46) ಕುಮಟಾದ ಹನುಮಂತ (56), ಕೊಪ್ಪಳ ತಾಲೂಕಿನ ಹನುಮಪ್ಪ (34), ಮಧ್ಯ ಪ್ರದೇಶದ ಜಯಪ್ರಕಾಶ್ (32), ಝಾರ್ಖಂಡ್‌ನ ಕೃಷ್ಣ ಗೌಡ (23) ಅವರನ್ನು ಕೋಸ್ಟ್‌ಗಾರ್ಡ್ ಸಿಬಂದಿ ರಕ್ಷಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಒಡಿಶಾದ ಶಂಕರ ಅವರನ್ನು ಕೊಚ್ಚಿಗೆ ಕರೆದೊಯ್ಯಲಾಗಿದೆ. ಒಡಿಶಾದ ಚೋಟು ನಾಪತ್ತೆಯಾಗಿರುವ ವ್ಯಕ್ತಿ.
ಬೋಟ್‌ಗಳ ಪತ್ತೆಗೆ ತೆರಳಿದ ತಂಡ
ಹಗ್ಗ ತುಂಡಾದ ಬಳಿಕ ಎರಡೂ ಬೋಟುಗಳು ಬೇರೆ ಬೇರೆ ದಿಕ್ಕಿಗೆ ಚಲಿಸಿದ್ದವು. ಅವರನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್‌ನವರು ಮೀನುಗಾರರನ್ನು ಗೋವಾಕ್ಕೆ ಕರೆತಂದರು. ಬಳಿಕ ಮಲ್ಪೆ ಡೀಪ್‌ಸೀ ತಾಂಡೇಲ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಮತ್ತು ಬೋಟ್ ಮಾಲಕರು ಮೀನುಗಾರರು ಮಲ್ಪೆಗೆ ಕರೆದುಕೊಂಡು ಬಂದಿದ್ದಾರೆ. ಕೋಸ್ಟ್‌ಗಾರ್ಡ್ ಮೀನುಗಾರರನ್ನು ಮಾತ್ರ ರಕ್ಷಿಸಿದ್ದು ದೋಣಿಗಳನ್ನು ತೊರೆದು ಬಂದಿರುವುದರಿಂದ ಅವುಗಳನ್ನು ಪತ್ತೆ ಮಾಡಿ ತರಲು ಮಂಗಳವಾರ ಮಲ್ಪೆಯ ಇತರ ಬೋಟುಗಳು ತೆರಳಿವೆ.
ಕಡಲ ನಡುವೆ ಏನಾಗಿತ್ತು?
ಗಂಗಾಗಣೇಶ್ ಮತ್ತು ಸುವರ್ಣ ಜ್ಯೋತಿ ಬೋಟುಗಳು ಆ. 19ರಂದು ಮಲ್ಪೆಯಿಂದ ಹೊರಟಿದ್ದವು. ರತ್ನಗಿರಿ ಸಮೀಪ ಮೀನುಗಾರಿಕೆ ವೇಳೆ ಚಂಡಮಾರುತದ ಅಪಾಯದ ಮುನ್ಸೂಚನೆ ಅರಿತು ಬೋಟುಗಳು ತೀರದತ್ತ ಧಾವಿಸಲಾರಂಭಿಸಿದ್ದು, ಆ ಸಂದರ್ಭ ಸುವರ್ಣ ಜ್ಯೋತಿಯ ಸ್ಟೇರಿಂಗ್ ತುಂಡಾಯಿತು. ಗಂಗಾಗಣೇಶ್ ಬೋಟಿನವರು ಅದನ್ನು ಎಳೆದುಕೊಂಡು ಬರುವಾಗ ಹಗ್ಗ ತುಂಡಾಗಿ ಗಂಗಾಗಣೇಶ್‌ನ ಫ್ಯಾನಿಗೆ ಸುತ್ತಿಕೊಂಡಿತು. ಹೀಗೆ ಎರಡೂ ಬೋಟುಗಳು ಚಲಿಸಲಾರದೆ ಅಪಾಯಕ್ಕೆ ಸಿಲುಕಿದವು. ವಯರ್‌ಲೆಸ್ ಮೂಲಕ ಬೇರೆ ಬೋಟ್‌ನವರಿಗೆ ಮಾಹಿತಿ ನೀಡಿದ್ದು ವಿಷಯ ತಿಳಿದ ಬೋಟು ಮಾಲಕರು ಮೀನುಗಾರಿಕೆ ಇಲಾಖೆ ಮೂಲಕ ಕೋಸ್ಟ್ ಗಾರ್ಡ್‌ಗೆ ದೂರು ನೀಡಿದ್ದರು.
ರಕ್ಷಣೆಗೆ ಬಂದ ವಾಣಿಜ್ಯ ಹಡಗು
ಈ ನಡುವೆ ಕೊಚ್ಚಿನ್‌ಗೆ ಹೊರಟಿದ್ದ ಹರಿಹರಧನ್ ವಾಣಿಜ್ಯ ಹಡಗು ಮೀನುಗಾರರ ರಕ್ಷಣೆಗೆ ಧಾವಿಸಿತು. ಒಡಿಶಾದ ಶಂಕರ್‌ಗೆ ಅನಾರೋಗ್ಯ ಇದ್ದುದರಿಂದ ಆತನನ್ನು ಮೊದಲು ಹೋಗುವಂತೆ ಜತೆಗಾರರು ತಿಳಿಸಿದ್ದರಿಂದ ಹರಿಹರಧನ್ ಹಡಗಿನವರು ಲೈಫ್ ಜಾಕೆಟನ್ನು ನೀರಿಗೆ ಎಸೆದರು. ಅದನ್ನು ಹಿಡಿಯಲೆಂದು ಚೋಟು ನೀರಿಗೆ ಹಾರಿದ್ದು, ಸಮುದ್ರಪಾಲಾದ. ಆತ ಮೊದಲ ಸಲ ಮೀನುಗಾರಿಕೆಗೆ ತೆರಳಿದ್ದ ಎನ್ನಲಾಗಿದೆ.