ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ
Team Udayavani, Oct 22, 2021, 4:10 AM IST
ಉಡುಪಿ: ಆಹಾರ ನಿಗಮದಿಂದ ಅಕ್ಕಿ ಹೊರತುಪಡಿಸಿ ಇತರ ವಸ್ತುಗಳನ್ನು ಒಟ್ಟುಗೂಡಿಸುವುದು ಕಷ್ಟ ಎಂಬ ನೆಲೆಯಲ್ಲಿ ಅದರ ಜವಾಬ್ದಾರಿಯನ್ನು ಆಯಾ ಶಾಲೆಗಳಿಗೆ ನೀಡಿದೆ. ಉಡುಪಿ ವಲಯದ ಶಿಕ್ಷಣ ಸಂಸ್ಥೆಗಳು ಬಿಸಿಯೂಟಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಬಿಸಿ ಯೂಟ ಹಂಚಿಕೆಯಾಗಿದೆ.
ಅನುದಾನ ಬಳಸಲು ಆದೇಶ :
ಪ್ರತೀ ಶಾಲೆಗೆ ಅಕ್ಕಿ, ಗೋಧಿ, ಎಣ್ಣೆ ಹಾಗೂ ತೊಗರಿ ಬೆಳೆಯನ್ನು ಸೇರಿದಂತೆ ಕೆಲವು ಪದಾರ್ಥ ಗಳನ್ನು ಅಕ್ಷರ ದಾಸೋಹದಿಂದ ಸರಬರಾಜು ಮಾಡಲಾಗುತ್ತದೆ. ಉಳಿದಂತೆ ತರಕಾರಿ, ಅಡುಗೆ ಅನಿಲ, ಸಾಂಬಾರು ಪದಾರ್ಥಗಳನ್ನು ಶಾಲೆಯವರು ಅಕ್ಷರ ದಾಸೋಹ ಖಾತೆಯಲ್ಲಿರುವ ಪರಿವರ್ತನ ವೆಚ್ಚವನ್ನು ಬಳಸಿಕೊಂಡು ಖರೀದಿಸಬೇಕು. ಪ್ರಸ್ತುತ ಉಡುಪಿ ವಲಯದಲ್ಲಿ ಇಲಾಖೆಯಿಂದ ಸರಬರಾಜು ಆಗದೆ ಇರುವ ಪದಾರ್ಥಗಳನ್ನು ಪಕ್ಕದ ಶಾಲೆಗಳಿಂದ ಎರವಲು ಪಡೆಯಲು ತಿಳಿಸಲಾಗಿದೆ. ಅಲ್ಲಿಯೂ ಲಭ್ಯವಿಲ್ಲದಿದ್ದರೆ ಆಯಾ ಶಾಲೆಯ ಅಕ್ಷರದಾಸೋಹ ಖಾತೆಯ ಪರಿವರ್ತನ ವೆಚ್ಚದಿಂದ ಖರೀದಿಸಲು ಸರಕಾರ ಆದೇಶ ನೀಡಿದೆ ಎಂದು ಉಡುಪಿ ಅಕ್ಷರ ದಾಸೋಹ ಅಧಿಕಾರಿ ಎ.ಕೆ. ನಾಗೇಂದ್ರಪ್ಪ ತಿಳಿಸಿದರು.
ಪಾಯಸದೂಟ:
ಉಡುಪಿ ವಲಯದ 44 ಸರಕಾರಿ ಹಾಗೂ 49 ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ 4,832 ವಿದ್ಯಾರ್ಥಿಗಳು, ಸರಕಾರಿ 22 ಹಾಗೂ ಅನುದಾನಿತ 25 ಪ್ರೌಢಶಾಲೆಯಲ್ಲಿ 4,673 ವಿದ್ಯಾರ್ಥಿಗಳು ಗುರುವಾರ ಬಿಸಿಯೂಟ ಸೇವನೆ ಮಾಡಿದ್ದಾರೆ. ವಿವಿಧ ಶಾಲೆಗಳಲ್ಲಿ ಪಾಯಸ, ಕೇಸರಿಬಾತ್ ಸೇರಿದಂತೆ ವಿವಿಧ ಸಿಹಿ ತಿಂಡಿಗಳನ್ನು ಮಾಡಲಾಯಿತು. ಕೆಲವು ಶಾಲೆಗಳಲ್ಲಿ ಚಿತ್ರಾನ್ನ, ಅನ್ನ ಸಾರು ಸೇರಿದಂತೆ ಇತರ ರುಚಿಯಾದ ಅಡುಗೆಯನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಉಣ ಬಡಿಸಿದರು. ಕ್ಷೀರ ಭಾಗ್ಯ ಯೋಜನೆ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಹಾಲು ವಿತರಣೆಯಾಗಿಲ್ಲ.
ಗೋಧಿ ಕಡಿ ಪಾಯಸ :
ಉದ್ಯಾವರ: ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಇಲಾಖೆಯು ನೀಡಿದ್ದ ಉಳಿಕೆ ಅಕ್ಕಿ ಬಳಸಿಕೊಂಡು 84 ವಿದ್ಯಾರ್ಥಿಗಳಿಗೆ ಅನ್ನ, ಸಾಂಬಾರ್ ಗೋಧಿ ಕಡಿ ಪಾಯಸದೂಟ ವನ್ನು ವಿತರಣೆಯನ್ನು ಮಾಡಲಾಗಿತ್ತು.
ಅನ್ನ, ದಾಲ್, ಉಪ್ಪಿನಕಾಯಿ… :
ಮಲ್ಪೆ: ಇಲ್ಲಿನ ಸರಕಾರಿ ಪ್ರೌಢಶಾಲೆ (ಫಿಶರೀಶ್)ಯಲ್ಲಿ 87 ಮಕ್ಕಳಿಗೆ ಉಳಿಕೆ ಅಕ್ಕಿಯನ್ನು ಬಳಸಿಕೊಂಡು ಬಿಸಿಯೂಟವನ್ನು ನೀಡಲಾಗಿದೆ. ಅನ್ನ, ದಾಲ್, ಉಪ್ಪಿನಕಾಯಿ ಜತೆ ಮುಖ್ಯ ಶಿಕ್ಷಕಿ ಸಂಧ್ಯಾ ಅವರು ಪಾಯಸದ ವ್ಯವಸ್ಥೆ ಮಾಡಿದ್ದರು.
ಬ್ರಹ್ಮಾವರ ವಲಯ: 155 ಶಾಲೆಗಳಲ್ಲಿ ವ್ಯವಸ್ಥೆ :
ಬ್ರಹ್ಮಾವರ: ಇಲ್ಲಿನ ವಲಯದ ಬಹುತೇಕ ಎಲ್ಲ ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆ ನಿರಾತಂಕವಾಗಿ ಪ್ರಾರಂಭಗೊಂಡಿತು.
ವಲಯದ ಪ್ರಾಥಮಿಕ ವಿಭಾಗದ 61 ಸರಕಾರಿ, 51 ಅನುದಾನಿತ ಶಾಲೆಗಳಲ್ಲಿ ಹಾಗೂ ಪ್ರೌಢ ವಿಭಾಗದ 22 ಸರಕಾರಿ, 21 ಅನುದಾನಿತ ಒಟ್ಟು 155 ಶಾಲೆಗಳಲ್ಲಿ ಗುರು ವಾರ ಬಿಸಿಯೂಟ ಯೋಜನೆ ಯಶಸ್ವಿಯಾಗಿ ಜರಗಿತು.
ಡಿಡಿಪಿಐ ಮಾರ್ಗದರ್ಶನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್. ಪ್ರಕಾಶ್ ಅವರ ಸಹಿತ 20 ಮಂದಿ ಅಧಿಕಾರಿಗಳು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಹುತೇಕ ಶಾಲೆಗಳಲ್ಲಿ ಅಕ್ಕಿಯ ದಾಸ್ತಾನಿದ್ದು, ಎಣ್ಣೆ, ಬೇಳೆ ಕಾಳಿನ ಕೊರತೆ ಸ್ವಲ್ಪ ಮಟ್ಟಿಗೆ ಕಂಡು ಬಂದಿದೆ. ಕೆಲವರು ಬಿಸಿಯೂಟದ ಸಾಮಗ್ರಿ ಅನುದಾನದಿಂದ ಖರೀದಿಸಿದರೆ, ಬೆರಳೆಣಿಕೆಯ ಮಂದಿ ಪಕ್ಕದ ಶಾಲೆಯಿಂದ ಎರವಲು ಪಡೆದರು.
ಕಾಪು: ಪ್ರಥಮ ದಿನ ಶೇ. 70ರಷ್ಟು ಹಾಜರಾತಿ :
ಕಾಪು: ಇಲ್ಲಿನ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗುರುವಾರ 6ರಿಂದ 10ನೇ ತರಗತಿಯವರೆಗೆ ತರಗತಿಗಳು ಪೂರ್ಣ ರೂಪದಲ್ಲಿ ಪುನರಾರಂಭಗೊಂಡಿದ್ದು ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಅಧ್ಯಾಪಕರೇ ಮುತುವರ್ಜಿ ವಹಿಸಿ ಬಿಸಿಯೂಟ ಬಡಿಸಿದ್ದಾರೆ.
ಕಾಪು ಸ.ಮಾ.ಹಿ.ಪ್ರಾ. ಶಾಲೆಯಲ್ಲಿ 30, ಕಾಪು ಪಡು ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ 10, ಪೊಲಿಪು ಸ.ಹಿ.ಪ್ರಾ. ಶಾಲೆಯಲ್ಲಿ 7, ಮಲ್ಲಾರು ಜನರಲ್ ಸ. ಹಿ. ಪ್ರಾ. ಶಾಲೆಯಲ್ಲಿ 33, ಮಲ್ಲಾರು ಉರ್ದು ಶಾಲೆಯಲ್ಲಿ 7, ಬೆಳಪು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 22, ಮಲ್ಲಾರು ಮೌಲಾನಾ ಆಜಾದ್ ಮಾದರಿ ಹಿ. ಪ್ರಾ. ಮತ್ತು ಸಂಯುಕ್ತ ಪ್ರೌಢಶಾಲೆಯಲ್ಲಿ 85, ಪೊಲಿಪು ಸರಕಾರಿ ಪ್ರೌಢಶಾಲೆಯಲ್ಲಿ 50, ಕಾಪು ಮಹಾದೇವಿ ಪ್ರೌಢಶಾಲೆಯಲ್ಲಿ 76 ಮಂದಿ, ಬೆಳಪು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 48 ವಿದ್ಯಾರ್ಥಿಗಳು ಬಿಸಿಯೂಟದ ಸವಿಯನ್ನು ಉಂಡಿದ್ದಾರೆ.
ಅಕ್ಕಿ ದಾಸ್ತಾನಿತ್ತು…
ಪೊಲಿಪು ಸರಕಾರಿ ಪ್ರೌಢಶಾಲೆಯ 60 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಪೊಲಿಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6 ಮತ್ತು 7ನೇ ತರಗತಿಯಲ್ಲಿ ಕೇವಲ 7 ಮಂದಿ ಮಕ್ಕಳಿದ್ದು ಎಲ್ಲರೂ ತರಗತಿಗೆ ಹಾಜರಾಗಿದ್ದಾರೆ. ಅವರಿಗೆ ಅನ್ನ ಮತ್ತು ಸಾಂಬಾರನ್ನು ನೀಡಲಾಗಿದ್ದು ಸಂಸ್ಥೆಯ ದಾಸ್ತಾನು ಕೊಠಡಿಯಲ್ಲಿ ಸಂಗ್ರಹವಾಗಿದ್ದ ಸಾಮಗ್ರಿಗಳನ್ನು ಬಿಸಿಯೂಟಕ್ಕಾಗಿ ಬಳಸಿಕೊಳ್ಳಲಾಗಿದೆ.
ಬೆಳಪು ಸರಕಾರಿ ಪ್ರೌಢಶಾಲೆಯ 66 ವಿದ್ಯಾರ್ಥಿ ಗಳಲ್ಲಿ 48 ಮಂದಿ ಹಾಜರಾಗಿದ್ದು ಅವರಿಗೆ ಅನ್ನ, ಸಾಂಬಾರು, ಪಲ್ಯ, ಪಾಯಸ ನೀಡಲಾಗಿದೆ.
ಬಿಸಿಯೂಟಕ್ಕೆ ಚಿತ್ರಾನ್ನ:
ಕಾಪು ಮಹಾದೇವಿ ಪ್ರೌಢಶಾಲೆಯಲ್ಲಿ 126 ಮಂದಿ ವಿದ್ಯಾರ್ಥಿಗಳಿದ್ದು ಅವರಲ್ಲಿ 76 ಮಂದಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಚಿತ್ರಾನ್ನ ಮತ್ತು ಪಾಯಸದೂಟವನ್ನು ನೀಡಲಾಗಿದೆ.
ಕಾಪು ಪಡು ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ 6 ಮತ್ತು 7ನೇ ತರಗತಿಯಲ್ಲಿ 22 ವಿದ್ಯಾರ್ಥಿಗಳ ಪೈಕಿ 10 ಮಂದಿ ತರಗತಿಗೆ ಹಾಜರಾಗಿದ್ದು ಅವರಿಗೆ ಊಟಕ್ಕೆ ಅನ್ನ ಮತ್ತು ದಾಲ್ ಸಾರ್ ನೀಡಲಾಗಿದೆ.
ಕಾಪು ಸ.ಮಾ.ಹಿ.ಪ್ರಾ. ಶಾಲೆಯಲ್ಲಿ 6 ಮತ್ತು 7ನೇ ತರಗತಿಯಲ್ಲಿ 49 ಮಂದಿ ವಿದ್ಯಾರ್ಥಿ ಗಳ ಪೈಕಿ 30 ಮಂದಿ ತರಗತಿಗೆ ಹಾಜರಾಗಿದ್ದು ಅವರಿಗೆ ಊಟಕ್ಕೆ ಅನ್ನ, ದಾಲ್ ಸಾರ್ ನೀಡಲಾಗಿದೆ.
ಮಲ್ಲಾರು ಜನರಲ್ ಶಾಲೆಯಲ್ಲಿ 6 ಮತ್ತು 7ನೇ ತರಗತಿಯಲ್ಲಿ 54 ಮಕ್ಕಳಿದ್ದು ಅವರಲ್ಲಿ 33 ಮಂದಿ ತರಗತಿಗೆ ಹಾಜರಾಗಿದ್ದು ಅವರೆಲ್ಲರಿಗೂ ಸಂಸ್ಥೆಯ ವತಿಯಿಂದ ಅನ್ನ ಮತ್ತು ದಾಲ್ ಸಾರ್ ಮತ್ತು ಪಾಯಸವನ್ನು ನೀಡಲಾಗಿದೆ.
ಪಲಾವ್, ಪಾಯಸದೂಟ:
ಮಲ್ಲಾರು ಉರ್ದು ಸರಕಾರಿ ಶಾಲೆಯಲ್ಲಿ 14 ಮಕ್ಕಳಲ್ಲಿ 7 ಮಂದಿ ತರಗತಿಗೆ ಹಾಜರಾಗಿದ್ದು ಅವರಿಗೆ ಬಿಸಿಯೂಟವಾಗಿ ಪಲಾವ್ ಮತ್ತು ಪಾಯಸದೂಟವನ್ನು ಒದಗಿಸಲಾಗಿದೆ.
ಮಲ್ಲಾರು ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ 6, 7, 8, 9 ತರಗತಿಯಲ್ಲಿ 147 ಮಂದಿ ವಿದ್ಯಾರ್ಥಿಗಳಿದ್ದು ಅವರಲ್ಲಿ 85 ಮಂದಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದು ಎಲ್ಲರಿಗೂ ಬಿಸಿಯೂಟ ವ್ಯವಸ್ಥೆ ಮಾಡಲಾಗಿದೆ. ಬಿಸಿಯೂಟ ದೊಂದಿಗೆ ಅನ್ನ ಮತ್ತು ಸಾಂಬಾರು ನೀಡಲಾಗಿದೆ.
ಬೆಳಪು ಸ.ಹಿ.ಪ್ರಾ. ಶಾಲೆಯಲ್ಲಿ 31 ಮಕ್ಕಳಿದ್ದು ಅವರಲ್ಲಿ 22 ಮಂದಿ ತರಗತಿಗೆ ಹಾಜರಾಗಿದ್ದಾರೆ. ಅವರಿಗೆ ಅನ್ನ, ಸಾರು, ಪಲ್ಯ ಮತ್ತು ಪಾಯಸ ದೊಂದಿಗೆ ಬಿಸಿಯೂಟದ ವ್ಯವಸ್ಥೆ ಮಾಡಲಾಗಿತ್ತು.
5-8 ಸಾ.ರೂ. ಅನುದಾನ:
ಉಡುಪಿ ವಲಯದ ಎಲ್ಲ ಸರಕಾರಿ, ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಪ್ರಾರಂಭಿಸಲಾಗಿದೆ. ಅಡುಗೆ ಮಾಡಲು ಅಗತ್ಯವಿರುವ ಪಾತ್ರೆ ಹಾಗೂ ಇತರ ವಸ್ತುಗಳ ದುರಸ್ತಿಗೆ 5ರಿಂದ 8 ಸಾವಿರ ರೂ.ವರೆಗೆ ಅಕ್ಷರದಾಸೋಹ ಅನುದಾನ ಬಳಸಿಕೊಳ್ಳಲು ಹಾಗೂ ಆಹಾರ ಪದಾರ್ಥಗಳನ್ನು ಆಯಾ ಶಾಲೆಗಳ ಅಕ್ಷರದಾಸೋಹದ ಖಾತೆಯಲ್ಲಿನ ಪರಿವರ್ತನ ವೆಚ್ಚದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ.–ಎ.ಕೆ. ನಾಗೇಂದ್ರಪ್ಪ, ಅಕ್ಷರ ದಾಸೋಹ ಅಧಿಕಾರಿ, ಪ್ರಭಾರ ಬಿಇಒ, ಉಡುಪಿ ವಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.