ಕೃಷಿ ಉತ್ಸವ – 2017 ಕೃಷಿ ಲಾಭದಾಯಕ: ಡಾ| ವೀರೇಂದ್ರ ಹೆಗ್ಗಡೆ
Team Udayavani, Feb 19, 2017, 8:56 AM IST
ಹೆಬ್ರಿ: ರೈತರು ಕೃಷಿಯ ಜತೆಗೆ ಇತರ ಉಪ ಕೃಷಿಗಳು, ಹೈನುಗಾರಿಕೆ, ಪುಷ್ಪ ಕೃಷಿ ಮಾಡುವುದರೊಂದಿಗೆ ತಮ್ಮ ಕೃಷಿ ಚಟುವಟಿಕೆಯಲ್ಲಿ ಖರ್ಚು ವೆಚ್ಚಗಳನ್ನು ಹತೋಟಿಯಲ್ಲಿಟ್ಟು ಕೊಂಡರೆ ಕೃಷಿ ಲಾಭದಾಯಕ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಶನಿವಾರ ಕಾರ್ಕಳ ತಾಲೂಕಿನ ಮುದ್ರಾಡಿ ಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು, ಕೃಷಿ ಉತ್ಸವ ವ್ಯವಸ್ಥಾಪನ ಸಮಿತಿ ಕಾರ್ಕಳ, ಕಾರ್ಕಳ ತಾಲೂಕು ಪ್ರಗತಿ ಬಂಧು ಸ್ವ-ಸಹಾಯ ಜ್ಞಾನ ವಿಕಾಸ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ತಾಲೂಕು ಮಟ್ಟದ ಕೃಷಿ ಉತ್ಸವ-2017ನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳದ ಯೋಜನೆಯು ಕೃಷಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಸರಕಾರದ ಕೃಷಿಯಂತ್ರಧಾರೆ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಯೋಜನೆಯ ಸಹಕಾರದೊಂದಿಗೆ 160 ಕೃಷಿಯಂತ್ರಧಾರೆಗಳು ಕೆಲಸ ಮಾಡುತ್ತಿವೆ. ಸರಕಾರ ಮತ್ತು ನಮ್ಮ ಧರ್ಮಸ್ಥಳ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಕೃಷಿಯಲ್ಲಿ ಯಶಸ್ಸನ್ನು ಪಡೆಯಿರಿ. ಈ ನಿಟ್ಟಿನಲ್ಲಿ ಇಂತಹ ಕೃಷಿ ಮೇಳಗಳು ಯುವ ಜನರನ್ನು ಕೃಷಿಯತ್ತ ಪ್ರೇರೇಪಿಸಲು ಸಹಕಾರಿ. ಮುದ್ರಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ನಡೆದ ಕೃಷಿ ಉತ್ಸವ ರಾಜ್ಯ ಮಟ್ಟದ ರೀತಿಯಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಕ್ರಾಂತಿ
ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಇಂದು ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಕೃಷಿ ಚಟುವಟಿಕೆ ಉಳಿಸುವುದರೊಂದಿಗೆ ವೀರೇಂದ್ರ ಹೆಗ್ಗಡೆಯವರ ಧರ್ಮಸ್ಥಳ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಕ್ರಾಂತಿ ಮೂಡಿಸಿದೆ ಎಂದರು. ಹೇಮಾವತಿ ಹೆಗ್ಗಡೆ ಅವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರು ಸಿಕ್ಕ ಅವಕಾಶ ಗಳನ್ನು ಬಳಸಿಕೊಳ್ಳಬೇಕು. ಸಂಘಟನೆಯಿಂದ ಶಕ್ತಿ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಶಾಸಕ ವಿ. ಸುನಿಲ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಾನುವಾರು ಪ್ರದರ್ಶನವನ್ನು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಚ್. ಗೋಪಾಲ್ ಭಂಡಾರಿ ಉದ್ಘಾಟಿಸಿದರು. ಕೃಷಿ ಉತ್ಸವ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ ದಿವಾಕರ ಶೆಟ್ಟಿ, ಯೋಜನೆಯ ಟ್ರಸ್ಟಿ ಎಸ್.ಡಿ. ಸಂಪತ್ ಸಾಮ್ರಾಜ್ಯ, ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಮುದ್ರಾಡಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಡಿ. ಪೂಜಾರಿ¤, ಕಾರ್ಕಳ ತಾಲೂಕು ಕೃಷಿ ಉತ್ಸವ ಸಮಿತಿಯ ಅಧ್ಯಕ್ಷ ಎಂ. ದಿನೇಶ್ ಪೈ, ಮಹಾವೀರ ಅಜ್ರಿ, ಮಾಜಿ ಜಿ.ಪಂ ಸದಸ್ಯ ಮಂಜುನಾಥ ಪೂಜಾರಿ, ಕಮಲಾಕ್ಷ ನಾಯಕ್, ಭೂತುಗುಂಡಿ ಕರುಣಾಕರ ಶೆಟ್ಟಿ, ಸುರೇಶ್ ಶೆಟ್ಟಿ ಮುಟ್ಲಪಾಡಿ ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ. ಸ್ವಾಗತಿಸಿ, ಯೋಜನಾಧಿಕಾರಿ ಕೃಷ್ಣ ಟಿ. ವಂದಿಸಿದರು. ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಯ ಮೊದಲು ಆಕರ್ಷಕ ಮೆರವಣಿಗೆ, ಗ್ರಾಮೀಣ ಸೊಗಡನ್ನು ಬಿಂಬಿಸುವ ವಸ್ತು ಪ್ರದರ್ಶನ, ಗ್ರಾಮೀಣ ಹಟ್ಟಿ, ಹಳ್ಳಿ ಮನೆ ಗುಡಿಕೈಗಾರಿಕೆ ಮೊದಲಾದ ಕಲಾಕೃತಿಗಳ ಪ್ರದರ್ಶನ ಆಕರ್ಷಣೀಯವಾಗಿತ್ತು. ಅಪರಾಹ್ನ ವಿವಿಧ ಕೃಷಿ ವಿಚಾರಗಳ ಬಗ್ಗೆ ಗೋಷ್ಠಿಗಳು ನಡೆದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.