ಆಗುಂಬೆ:ಮೇ 15ರಿಂದ ಮುಕ್ತ
ಜೂ. 1ರ ಬಳಿಕ ಘನವಾಹನಗಳಿಗೆ ಸಂಚಾರಕ್ಕೆ ಅವಕಾಶ
Team Udayavani, May 14, 2019, 6:00 AM IST
ಹೆಬ್ರಿ: ದುರಸ್ತಿ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಬಂದ್ ಆಗಿದ್ದ ಆಗುಂಬೆ ಘಾಟಿ ರಸ್ತೆಯ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮೇ 15ರ ಮಧ್ಯರಾತ್ರಿಯಿಂದ ಲಘುವಾಹನಗಳು ಮತ್ತು ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಆಗುಂಬೆ ಘಾಟಿ 14 ಮತ್ತು 7ನೇ ತಿರುವುಗಳಲ್ಲಿ ಕಳೆದ ಮಳೆಗಾಲದಲ್ಲಿ ಕುಸಿತ ಸಂಭವಿಸಿ ಸಂಚಾರ ಅಪಾಯಕಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಎ. 1ರಿಂದ ಘಾಟಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ.
ಸುಮಾರು 2 ಕೋಟಿ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು 7 ಕಿ.ಮೀ. ರಸ್ತೆ ವ್ಯಾಪ್ತಿಯಲ್ಲಿ ಕಾಂಕ್ರೀಟ್ ಕಾಮಗಾರಿ, ಹೇರ್‌ಪಿನ್ ತಿರುವುಗಳಲ್ಲಿ ಶಿಲೆಕಲ್ಲಿನ ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 14ನೇ ಸುತ್ತು ಹಾಗೂ 5ನೇ ಸುತ್ತು ಮಾತ್ರ ದುರಸ್ತಿಗೊಂಡಿದ್ದು 7ನೇ ಸುತ್ತಿನ ಕಾಮಗಾರಿ ಬಾಕಿ ಇದೆ. 2018 ಜು. 10 ಮತ್ತು 13ರಂದು ಸುರಿದ ಭಾರೀ ಮಳೆಯಿಂದಾಗಿ ಆಗುಂಬೆ ಘಾಟ್ ರಸ್ತೆಯ 7 ಮತ್ತು 14ನೇ ತಿರುವಿನಲ್ಲಿ ಹಾಗೂ ಆನೆ ಬಂಡೆ ಬಳಿ ಗುಡ್ಡ ಕುಸಿತ ಉಂಟಾಗಿತ್ತು.
ಯಾವ ವಾಹನಕ್ಕೆ ಅವಕಾಶ
ಬಸ್, ಆ್ಯಂಬುಲೆನ್ಸ್, ಕಾರು, ದ್ವಿಚಕ್ರ ವಾಹನಗಳಿಗೆ ಮೇ 15ರ ಮಧ್ಯರಾತ್ರಿಯಿಂದ ಸಂಚಾರಕ್ಕೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಸರಕು ಸಾಗಾಟ ಮಾಡುವ ಘನ ವಾಹನಗಳಿಗೆ ಜೂ. 1ರಿಂದ ಸಂಚಾರ ಅವಕಾಶ ಕಲ್ಪಿಸಲಾಗಿದೆ.
ನಿತ್ಯ ಸಂಚಾರಿಗಳ ಆಕ್ರೋಶ
ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ದಿನನಿತ್ಯ ಈ ಮಾರ್ಗದಲ್ಲಿ ಉದ್ಯೋಗಿಗಳು, ವಿದ್ಯಾರ್ಥಿಗಳು ಸಂಚರಿಸುತ್ತಿದ್ದು 45 ದಿನಗಳಿಂದ ಘಾಟಿ ಬಂದ್ ಆದ ಪರಿಣಾಮ ಸಮಸ್ಯೆ ಎದುರಿಸುತ್ತಿದ್ದರು. ಆದರೆ ಈಗ 7ನೇ ತಿರುವಿನ ಕಾಮಗಾರಿ ನಡೆಸದೇ ಸಂಚಾರಕ್ಕೆ ಅವಕಾಶ ಕೊಡುತ್ತಿದ್ದು ಮುಂದೆ ಸಮಸ್ಯೆ ಆದರೆ ಯಾರು ಹೊಣೆ.
ಈ ಬಗ್ಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಯಾಕೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂದರ್ಭ
ದಲ್ಲಿ ಘಾಟಿ ರಸ್ತೆ ಸಂಚಾರ ಸ್ಥಗಿತದಿಂದ ತೊಂದರೆಯಾಗಿತ್ತು.
7ನೇ ತಿರುವಿನ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ
ಆಗುಂಬೆ ಘಾಟಿಯ ಹೇರ್‌ಪಿನ್ 7ನೇ ತಿರುವು ಕಳೆದ ವರ್ಷ ಸುರಿದ ಮಳೆಯಲ್ಲಿ ಅತೀ ಹೆಚ್ಚು ಭೂಕುಸಿತಗೊಂಡ ಪ್ರದೇಶ. ಈ ಭಾಗದಲ್ಲಿ ಸಂಚಾರ ಅಪಾಯ ಎಂಬ ಕಾರಣಕ್ಕೆ ಆಗುಂಬೆ ಘಾಟಿ ಸಂಚಾರ ಬಂದ್ ಮಾಡಲಾಗಿತ್ತು. ಇಲ್ಲಿ ಈಗ ಕೇವಲ ತಾತ್ಕಾಲಿಕ ಮರಳು ಚೀಲಗಳನ್ನು ಅಳವಡಿಸಿರುವುದಷ್ಟೇ ಅಲ್ಲದೆ ಯಾವುದೇ ದುರಸ್ಥಿ ಕಾರ್ಯ ಕೈಗೊಂಡಿಲ್ಲ. ಮುಂದಿನ ಮಳೆಗಾಲದಲ್ಲಿ ಮತ್ತೆ ವಿಪರೀತ ಮಳೆ ಸುರಿದರೇ ಘಾಟಿ ಕುಸಿತಗೊಂಡು ಮತ್ತೆ ಸಂಚಾರ ಬಂದ್ ಆಗುವ ಭೀತಿ ಇದೆ.
ಸಮಸ್ಯೆಯಾಗದು: ಇಲಾಖೆ
ಕಳೆದ ವರ್ಷದ ಮಳೆಗೆ 7ನೇ ತಿರುವಿನಲ್ಲಿ ಕೂಡ ಭೂಕುಸಿತಗೊಂಡು ರಸ್ತೆಯ ಒಂದು ಪಾರ್ಶ್ವ ಬಿರುಕು ಬಿಟ್ಟಿತ್ತು. ಸಮಯದ ಅಭಾವದಿಂದ ಈ ತಿರುವುಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿಲ್ಲ. ಈ ಮಳೆಗಾಲದಲ್ಲಿ ಇದು ಸಮಸ್ಯೆಯಾಗದು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.