Ajekar Case Follow Up: ಪತಿ ಕೊಲೆಗಾಗಿ ರಾತ್ರಿಯಿಡೀ ಜಾಗರಣೆ ಕುಳಿತಿದ್ದ ಪತ್ನಿ
Team Udayavani, Oct 27, 2024, 7:12 AM IST
ಅಜೆಕಾರು: ಅಜೆಕಾರು ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಅವರನ್ನು ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದ ಪತ್ನಿ ಪ್ರತಿಮಾ ಇದಕ್ಕಾಗಿ ರಾತ್ರಿಯಿಡೀ ಜಾಗರಣೆ ಕುಳಿತಿದ್ದಳು. ಆದರೆ ಅದೇ ಪತ್ನಿ ತನ್ನ ಪತಿ ಆಸ್ಪತ್ರೆಯಲ್ಲಿದ್ದಾಗ ಅವರ ಆರೈಕೆಗೆ ಗಮನವೇ ನೀಡುತ್ತಿರಲಿಲ್ಲ ಎಂಬ ಅಂಶ ಗೊತ್ತಾಗಿದೆ.
ಕಾರ್ಕಳ, ಮಣಿಪಾಲ, ಮಂಗಳೂರು, ಬೆಂಗಳೂರು ಸಹಿತ 7 ಆಸ್ಪತ್ರೆಗಳಲ್ಲಿ ಬಾಲಕೃಷ್ಣ ಪೂಜಾರಿ (44) ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಸಂದರ್ಭ ಅವರ ಪತ್ನಿ ಪ್ರತಿಮಾ (38) ಜತೆಗೆ ಇದ್ದರೂ ಚಿಕಿತ್ಸೆ ಅಥವಾ ಆರೈಕೆಯ ಕುರಿತು ಗಮನವೇ ನೀಡುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಬಾಲಕೃಷ್ಣ ಅವರ ಚಿಕ್ಕಮ್ಮನೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಪ್ರತಿಮಾ ಆಸ್ಪತ್ರೆಯಿಂದ ಬೆಳಗ್ಗೆ ಹೋದರೆ ಕೆಲವೊಮ್ಮೆ ಮಧ್ಯಾಹ್ನದ ವೇಳೆಗೆ ಮತ್ತೆ ಕೆಲವೊಮ್ಮೆ ಸಂಜೆಯೂ ಬಂದದ್ದು ಇದೆ ಎಂದು ಚಿಕ್ಕಮ್ಮ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೂ ಇಡೀ ದಿನ ಫೋನ್‌ನಲ್ಲಿ ಮಾತನಾಡುತ್ತ ಅಥವಾ ಚಾಟ್ ಮಾಡುತ್ತ ಇರುತ್ತಿದ್ದರು. ರಾತ್ರಿ ಸ್ವಲ್ಪ ಹೊತ್ತು ಫೋನ್‌ನಲ್ಲಿಯೇ ಇದ್ದು ಅನಂತರ ಮಲಗುತ್ತಿದ್ದಳು. ರಾತ್ರಿ ಬಾಲಕೃಷ್ಣ ಅವರ ಆರೈಕೆಯನ್ನು ಚಿಕ್ಕಮ್ಮನೇ ಮಾಡುತ್ತಿದ್ದರು ಎಂಬ ಅಂಶ ಗೊತ್ತಾಗಿದೆ. ಆದರೆ ಅದೇ ಪ್ರತಿಮಾ ತನ್ನ ಪತಿಯನ್ನು ಅ. 19ರಂದು ಮನೆಗೆ ಕರೆದುಕೊಂಡು ಬಂದ ದಿನ ಮುಂಜಾವದವರೆಗೂ ಜಾಗರಣೆ ಕುಳಿತು ಪ್ರಿಯಕರನನ್ನು ಕರೆಸಿ ಕೊಲೆ ಮಾಡಿದ್ದಳು.
ಚಿಕ್ಕಮ್ಮನನ್ನು ಒತ್ತಾಯವಾಗಿ ಮನೆಗೆ ಕಳುಹಿಸಿದ್ದಳು:
ಬೆಂಗಳೂರಿನಲ್ಲಿ ಚಿಕಿತ್ಸೆಯ ಬಳಿಕ ಸಾಕಷ್ಟು ಚೇತರಿಸಿದ್ದ ಬಾಲಕೃಷ್ಣ ಅವರನ್ನು ಅ. 19ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಅಲ್ಲಿಂದ ಹೊರಟು ರಾತ್ರಿ 8 ಗಂಟೆಗೆ ಅಜೆಕಾರಿನ ಮನೆಗೆ ತಲುಪಿದ್ದರು. ಈ ವೇಳೆ ಮನೆಯಲ್ಲಿ ಕೆಲವು ಸಂಬಂಧಿಕರು ಇದ್ದರು. ಎಲ್ಲರೊಂದಿಗೂ ಬಾಲಕೃಷ್ಣ ಮಾತನಾಡಿಕೊಂಡಿದ್ದರು. ಅವರ ಭಾವ ಸಂದೀಪ್ (ಪ್ರತಿಮಾಳ ಅಣ್ಣ) ಮಧ್ಯರಾತ್ರಿಯವರೆಗೂ ಇದ್ದು ಎಲ್ಲರ ಜತೆ ಊಟ ಮಾಡಿ ತೆರಳಿದ್ದರು. ತಂದೆ-ತಾಯಿ ಆಸ್ಪತ್ರೆಯಲ್ಲಿದ್ದಾಗ ಸೋದರ ಮಾವನ ಆಸರೆಯಲ್ಲಿದ್ದ ಮಕ್ಕಳು ಕೂಡ ಆ ದಿನ ರಾತ್ರಿ ಅವರ ಜತೆ ಹೋಗುವ ಇಂಗಿತ ವ್ಯಕ್ತಪಡಿಸಿ ಅವರ ಜತೆ ಹೋಗಿದ್ದರು. ಅದಕ್ಕಿಂತ ಮೊದಲೇ ಬಂದಿದ್ದ ಸಂಬಂಧಿಕರೆಲ್ಲರನ್ನೂ ಪ್ರತಿಮಾ ಬೇಗನೆ ಸಾಗ ಹಾಕಿದ್ದಳು. ಚಿಕ್ಕಮ್ಮ ಹಾಗೂ ಅವರ ಮಕ್ಕಳು ಮನೆಯಲ್ಲಿಯೇ ಇದ್ದರು. ಚಿಕ್ಕಮ್ಮ ರಾತ್ರಿ ಇಲ್ಲೇ ಇರುವುದನ್ನು ಖಾತ್ರಿಪಡಿಸಿಕೊಂಡು ಸಂದೀಪ್ ಅಲ್ಲಿಂದ ತಮ್ಮ ಮನೆಗೆ ತೆರಳಿದ್ದರು. ಆದರೆ ಸಂದೀಪ್ ತೆರಳಿದ ಬಳಿಕ ಚಿಕ್ಕಮ್ಮನ ಮಕ್ಕಳು ಮನೆಗೆ ಹೋಗಲು ಹೊರಟಾಗ ಉಪಾಯದಲ್ಲಿ ಅವರನ್ನೂ ಸಾಗ ಹಾಕಿದ್ದಳು. ಕೆಲವು ದಿನ ಆಸ್ಪತ್ರೆಯಲ್ಲಿದ್ದುದರಿಂದ ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ ಎಂದು ಕಳುಹಿಸಿದ್ದಳು. ಸುಮಾರು 50 ಮೀಟರ್ ದೂರದಲ್ಲಿಯೇ ಅವರ ಮನೆ ಇದ್ದುದರಿಂದ ಅವರು ಮಧ್ಯರಾತ್ರಿ ಮಕ್ಕಳೊಂದಿಗೆ ಮನೆಗೆ ಹೋಗಿದ್ದರು.
100 ಮೀಟರ್ ದೂರವೇ ಸ್ಕೂಟರ್ ನಿಲ್ಲಿಸಿ ಬಂದಿದ್ದ ದಿಲೀಪ್:
ಮನೆಯಿಂದ ಎಲ್ಲರೂ ತೆರಳಿದ ಬಳಿಕ ಮಧ್ಯರಾತ್ರಿಯಲ್ಲಿ ಪ್ರಿಯಕರ ದಿಲೀಪ್ ಹೆಗ್ಡೆ (28)ಗೆ ಕರೆ ಮಾಡಿ ಪ್ರತಿಮಾ ತನ್ನ ಮನೆಗೆ ಕರೆಸಿಕೊಂಡಿದ್ದಳು. ಬಾಲಕೃಷ್ಣ ಮತ್ತು ಅವರ ತಂದೆ-ತಾಯಿ ಹಾಗೂ ಸಂಬಂಧಿಕರ ಮನೆ ಹತ್ತಿರ ಹತ್ತಿರವೇ ಇದೆ. ಆದುದರಿಂದ ರಾತ್ರಿ ವಾಹನ ಬಂದದ್ದು ಗೊತ್ತಾಗದಿರಲಿ ಎಂದು ದಿಲೀಪ್ ಸುಮಾರು 100 ಮೀಟರ್ ದೂರದಲ್ಲಿಯೇ ಸ್ಕೂಟರ್ ನಿಲ್ಲಿಸಿ ನಡೆದುಕೊಂಡು ಬಂದಿದ್ದ. ಸುಮಾರು 1.30ರ ವೇಳೆ ಮನೆ ತಲುಪಿದ್ದ ದಿಲೀಪ್‌ನನ್ನು ಬಾತ್‌ರೂಮಿನಲ್ಲಿ ಕುಳಿತುಕೊಳ್ಳುವಂತೆ ಪ್ರತಿಮಾ ತಿಳಿಸಿದ್ದಳು. ಬೇರೆ ಯಾರಾದರೂ ಬಂದರೂ ಬಾತ್‌ರೂಮಿಗೆ ಹೋಗುವ ಸಾಧ್ಯತೆ ಕಡಿಮೆ ಎಂದು ಈ ತಂತ್ರ ಹೆಣೆದಿದ್ದಳು. ಪತಿ ಗಾಢ ನಿದ್ರೆಗೆ ಜಾರುವುದನ್ನೇ ಕಾಯುತ್ತಿದ್ದ ಪ್ರತಿಮಾ ಅನಂತರ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದಳು.
ಎದೆ, ಕಾಲು ಒತ್ತಿ ಹಿಡಿದಿದ್ದ ಪತ್ನಿ:
ಬಾಲಕೃಷ್ಣ ಅವರಿಗೆ ಗಾಢ ನಿದ್ರೆ ಬಂದಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಪ್ರತಿಮಾ ಪ್ರಿಯಕರನನ್ನು ಬೆಡ್‌ರೂಮಿಗೆ ಕರೆದಿದ್ದಳು. ದಿಲೀಪ್ ತಲೆ ದಿಂಬನ್ನು ಮುಖಕ್ಕೆ ಒತ್ತಿಹಿಡಿದರೆ, ಪ್ರತಿಮಾ ಸ್ವತಃ ಪತಿಯ ಎದೆ ಮತ್ತು ಕಾಲನ್ನು ಒತ್ತಿ ಹಿಡಿದು ಅವರು ಮಿಸುಕಾಡದಂತೆ ನೋಡಿಕೊಂಡಿದ್ದಳು. ಪತಿ ಕೊನೆಯುಸಿರೆಳೆದುದನ್ನು ಖಚಿತಪಡಿಸಿಕೊಂಡ ಬಳಿಕ ಪ್ರಿಯಕರನನ್ನು ಕಳುಹಿಸಿದ್ದಳು. ಇವೆಲ್ಲವೂ ಸುಮಾರು 2.30 ವೇಳೆಗೆ ಮುಗಿದಾಗಿತ್ತು.
ಬೊಬ್ಬೆ ಹೊಡೆದು ನಾಟಕ!:
ಪತಿಯನ್ನು ಕೊಲೆ ನಡೆಸಿದ ಬಳಿಕ ಪ್ರಿಯಕರ ಮನೆ ಸೇರಿದ ಅನಂತರ ರಾತ್ರಿ 3 ಗಂಟೆಯ ವೇಳೆಗೆ ಬಾಲಕೃಷ್ಣ ಅವರ ತಂದೆ-ತಾಯಿಗೆ ಫೋನ್ ಮಾಡಿ ಪ್ರತಿಮಾ ಬೊಬ್ಬೆ ಹಾಕಲು ಆರಂಭಿಸಿದ್ದರು. ವಿಷಯ ಏನೆಂದು ಅವರಿಗೆ ತಿಳಿಸಿರಲಿಲ್ಲ. ಬರೇ ಕೂಗುವುದು ಮಾತ್ರ ಕೇಳಿದ್ದರಿಂದ ಅವರು ಮನೆಗೆ ಧಾವಿಸಿದ್ದರು. ಇದೇ ವೇಳೆ ಅಣ್ಣ ಸಂದೀಪ್ ಅವರಿಗೂ ಕರೆ ಮಾಡಿ ಇದೇ ರೀತಿ ಬೊಬ್ಬೆ ಹಾಕುವ ನಾಟಕ ಮಾಡಿದ್ದಳು. ಎಲ್ಲರೂ ಮನೆಗೆ ಬಂದಾಗಲಷ್ಟೇ ಬಾಲಕೃಷ್ಣ ಸಾವಿಗೀಡಾಗಿದ್ದು ಗೊತ್ತಾಗಿದ್ದು.
ಬಾಟಲಿ ಬಿತ್ತು ಎಂದಿದ್ದಳು:
ಮನೆಗೆ ಬಂದ ಬಳಿಕ ಪ್ರತಿಮಾಳ ಅಣ್ಣ ಸಂದೀಪ್‌ಗೆ ಬಾಲಕೃಷ್ಣ ಅವರ ಮುಖದ ಹತ್ತಿರ ಕೆಂಪಗಾಗಿರುವುದು ಮತ್ತು ಕುತ್ತಿಗೆಯ ಬಳಿ ಉಗುರಿನಿಂದ ಪರಚಿದಂತಿರುವುದು ಗಮನಕ್ಕೆ ಬಂದು ತಂಗಿಯಲ್ಲಿ ಪ್ರಶ್ನೆ ಮಾಡಿದ್ದರು. ಅದಕ್ಕೆ ಆಕೆ ರಾತ್ರಿ ಪತಿ ಉಸಿರಾಡಲು ಕಷ್ಟಪಡುತ್ತಿದ್ದಾಗ ನೀರು ಕೊಡಲು ಯತ್ನಿಸಿದೆ. ಅವರು ಏನೇ ಮಾಡಿದರೂ ಸ್ಪಂದಿಸದಿದ್ದಾಗ ಇಷ್ಟೆಲ್ಲ ಮಾಡಿಯೂ ಹೀಗಾಯಿತಲ್ವ ಎಂಬ ಗೊಂದಲದಲ್ಲಿ ನೀರಿನ ಬಾಟಲಿಯನ್ನು ಎಸೆದಿದ್ದು, ಅದು ಅವರ ಮುಖದ ಮೇಲೆ ಬಿದ್ದಿತ್ತು. ಇದರಿಂದ ಕೆಂಪಗಾಗಿರಬಹುದು ಎಂದಿದ್ದಲ್ಲದೆ, ನೀರು ಕೊಡುವಾಗ ಕುತ್ತಿಗೆ ಎತ್ತರಿಸಿದ್ದಾಗ ಉಗುರು ತಾಗಿರಬಹುದೆಂದು ಕತೆ ಕಟ್ಟಿದ್ದಳು!
ತಾಯಿಯ ಜತೆ ಹೋಗುವುದಿಲ್ಲ ಎನ್ನುತ್ತಿದ್ದ ಮಕ್ಕಳು
ಪ್ರತಿಮಾ ಅವರ ಇಬ್ಬರು ಮಕ್ಕಳು 2-3 ತಿಂಗಳಿನಿಂದ ತಾಯಿಯ ಜತೆ ಇರುವುದಿಲ್ಲ ಎನ್ನುತ್ತಿದ್ದರು. ಎರಡು ತಿಂಗಳ ಹಿಂದೆ ಪ್ರತಿಮಾಳು ದಿಲೀಪ್ ಜತೆ ತಿರುಗಾಡುತ್ತಿರುವುದನ್ನು ಗಮನಿಸಿ ಬಾಲಕೃಷ್ಣ ಎಚ್ಚರಿಕೆ ನೀಡಿದ್ದರು. ಪ್ರತಿಮಾಳ ಅಣ್ಣ ಸಂದೀಪ್ ಅವರನ್ನೂ ಕರೆಸಿ ವಿಷಯ ತಿಳಿಸಿದ್ದರು. ಇದು ಪೊಲೀಸ್ ಠಾಣೆಯವರೆಗೂ ಹೋಗಿ ಮುಚ್ಚಳಿಕೆ ಬರೆಸಿಕೊಂಡಿದ್ದರು. ಅಣ್ಣ ಗದರಿದ ಬಳಿಕ ಪತಿ ಜತೆ ಇರುವುದಾಗಿ ಪ್ರತಿಮಾ ಹೇಳಿದ್ದಳು. ಆದರೆ ಮಕ್ಕಳು ಮಾತ್ರ ಅಂದಿನಿಂದಲೇ ತಾಯಿ ಜತೆ ಅಷ್ಟಕ್ಕಷ್ಟೇ ಇದ್ದರು.
ಅಣ್ಣನಿಂದ ತಂಗಿಯ ಕೃತ್ಯ ಬಯಲು:
ಇಡೀ ಪ್ರಕರಣ ಬೆಳಕಿಗೆ ಬಂದದ್ದು ಮುಖ್ಯವಾಗಿ ಅಣ್ಣನಿಂದ. ತಂಗಿಯ ನಡವಳಿಕೆ ಮತ್ತು ಭಾವನ ದೇಹದ ಮೇಲಿನ ಗಾಯದ ಬಗ್ಗೆ ಸಂಶಯ ಹೊಂದಿದ್ದ ಸಂದೀಪ್ ಪೊಲೀಸರಿಗೆ ದೂರು ನೀಡುವಂತೆ ಬಾಲಕೃಷ್ಣ ಅವರ ತಂದೆಗೆ ಸೂಚಿಸಿದ್ದರು. ಮರಣೋತ್ತರ ಪರೀಕ್ಷೆಗೂ ಸೂಚಿಸಿದ್ದರು. ಈ ನಡುವೆ ಅವರು ಮತ್ತೆ ಮತ್ತೆ ವಿಚಾರಿಸಿದಾಗ ಶುಕ್ರವಾರ ತಂಗಿ ಎಲ್ಲ ವಿಷಯವನ್ನು ಬಾಯಿ ಬಿಟ್ಟಿದ್ದಳು. ಇದನ್ನೆಲ್ಲ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ ಅವರು ಪೊಲೀಸರಿಗೆ ಎಲ್ಲ ವಿಷಯ ತಿಳಿಸಿದ್ದರು. ಸಮುದಾಯದ ಪದ್ಧತಿಯ ಪ್ರಕಾರ ಪಾರ್ಥಿವ ಶರೀರವನ್ನು ಸುಡಲಾಗಿತ್ತು. ಒಂದು ವೇಳೆ ಪೋಸ್ಟ್ ಮಾರ್ಟಂ ಮಾಡಿರದೆ ಇರುತ್ತಿದ್ದರೆ ಯಾವುದೇ ಸಾಕ್ಷ್ಯಗಳು ಇಲ್ಲವಾಗುವ ಸಾಧ್ಯತೆ ಇತ್ತು. ಪೋಸ್ಟ್ ಮಾರ್ಟಂ ವರದಿ ಇನ್ನಷ್ಟೇ ಕೈ ಸೇರಬೇಕಾಗಿದೆ.
ಬಂಗಾರದಂತಹ ಭಾವ…
ಕೊರೊನಾ ಬಳಿಕ ಊರಿಗೆ ಬರುವ ಮೊದಲು ಸಂದೀಪ್ ಅವರು ಆರು ವರ್ಷ ಮುಂಬಯಿಯಲ್ಲಿ ಬಾಲಕೃಷ್ಣ ಅವರ ಜತೆಯಲ್ಲಿ ಅವರ ರೂಮಿನಲ್ಲಿಯೇ ವಾಸವಾಗಿದ್ದರು. ಬಾಲಕೃಷ್ಣ ಅವರಿಗೆ ತಂಗಿಯನ್ನು ಮದುವೆ ಮಾಡಿ ಕೊಡುವ ಮೊದಲೇ ಸಂದೀಪ್ ಅವರ ಆತ್ಮೀಯ ಗೆಳೆಯರಾಗಿದ್ದರು. ಭಾವನ ಕೊಲೆಯ ಬಳಿಕ ಸಂದೀಪ್ ಅವರು ಪ್ರತಿಮಾಳ ವಿಚಾರಣೆ ಮಾಡುತ್ತ “ಬಂಗಾರದಂತಹ ಭಾವನನ್ನು ಕೊಲೆ ಮಾಡಿದೆಯಲ್ಲವೇ’ ಎಂದು ಹೇಳಿದ್ದು ಎಲ್ಲೆಡೆ ವೈರಲ್ ಆಗಿದೆ. ಕೊರೊನಾ ಬಳಿಕ ಊರಿಗೆ ಬಂದು ಸಂದೀಪ್ ಅಂಗಡಿ ನಡೆಸುತ್ತಿದ್ದರೆ, ಬಾಲಕೃಷ್ಣ ನಿಟ್ಟೆಯಲ್ಲಿ ಹೊಟೇಲ್ ನಡೆಸುತ್ತಿದ್ದರು. ವರ್ಷದ ಹಿಂದೆ ಹೊಸ ಮನೆ ಕಟ್ಟಿಸಿದ್ದ ಬಾಲಕೃಷ್ಣ ಅವರು ಆರು ತಿಂಗಳ ಹಿಂದೆ ಪತ್ನಿಗಾಗಿ ಬ್ಯೂಟಿ ಪಾರ್ಲರ್ ತೆರೆದುಕೊಟ್ಟಿದ್ದರು.
ಉಡುಪಿಯಲ್ಲಿ ವಿಷ ಖರೀದಿ:
ಕೊಲೆಗಾಗಿ ಪ್ರತಿಮಾ ಜತೆ ಸೇರಿ ಯೋಜನೆ ರೂಪಿಸಿದ್ದ ದಿಲೀಪ್ ಅದಕ್ಕಾಗಿ ಉಡುಪಿಯಲ್ಲಿ ವಿಷ ಖರೀದಿಸಿದ್ದ. ಅನಂತರ ಅದನ್ನು ಆತ ಪ್ರತಿಮಾಳಿಗೆ ನೀಡಿದ್ದ. ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ದಿಲೀಪ್‌ನನ್ನು ಶನಿವಾರ ಉಡುಪಿಗೆ ಕರೆ ತಂದು ವಿಷ ಖರೀದಿಸಿದ ಅಂಗಡಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ದಿಲೀಪ್ ಮತ್ತು ಪ್ರತಿಮಾಳ ಮೊಬೈಲ್ ಫೋನ್ ಹಾಗೂ ಸ್ಕೂಟರ್ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಾಗಿದೆ ಎಂದು ಎಸ್‌ಪಿ ಡಾ| ಅರುಣ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.