ಸ್ಥಳೀಯಾಡಳಿತ ಪ್ರತಿನಿಧಿಗಳ ಒಲಿಂಪಿಕ್ಸ್‌ಗೆ ಸಜ್ಜುಗೊಂಡ ಕೋಟ
Team Udayavani, Dec 7, 2018, 2:25 AM IST
ಕೋಟ: ಜನಪ್ರತಿನಿಧಿಗಳಾದವರು ಸದಾ ಅಭಿವೃದ್ಧಿ, ಜನಸೇವೆ, ಕ್ಷೇತ್ರದ ಸಮಸ್ಯೆ ಮುಂತಾದ ರಾಜಕೀಯ ಚಟುವಟಿಕೆಗಳಲ್ಲೇ ತಲ್ಲೀನರಾಗಿರುತ್ತಾರೆ. ಹೀಗಾಗಿ ಇವರಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶಗಳು ಸಿಗುವುದು ತುಂಬಾ ಕಡಿಮೆ. ಇದಕ್ಕಾಗಿಯೇ ಕೋಟದ ಕೋಟತಟ್ಟು ಗ್ರಾ.ಪಂ. ಹಾಗೂ ಡಾ| ಶಿವರಾಮ ಕಾರಂತ ಪ್ರತಿಷ್ಠಾನ ಆಶ್ರಯದಲ್ಲಿ ವಿಶೇಷ ಕ್ರೀಡಾಕೂಟ ‘ಹೊಳಪು’ (ಸ್ವರಾಜ್ಯ ಸಂಗಮಕ್ಕೊಂದು ಮುನ್ನುಡಿ) ಎನ್ನುವ ಶೀಷಿಕೆಯಡಿ ಎರಡು ವರ್ಷದಿಂದ ಆಯೋಜಿಸುತ್ತಾ ಬಂದಿದೆ. ಈ ಬಾರಿ ಡಿ.8ರಂದು ಕೋಟದ ವಿವೇಕ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಜರಗಲಿದೆ.
ಆಯೋಜನೆ ಹೇಗೆ
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಆಗಮಿಸಿದ ಪ್ರತಿನಿಧಿಗಳು ಬೆಳಗ್ಗೆ 8.30ಕ್ಕೆ ಕೋಟದ ವಿವೇಕ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಒಟ್ಟುಗೂಡುತ್ತಾರೆ. ಅನಂತರ ಇವರಿಂದ ಪಥಸಂಚಲನ ನಡೆಯುತ್ತದೆ. ಪಥಸಂಚಲನದಲ್ಲಿ ಬೇರೆ- ಬೇರೆ ಪಂ.ಸದಸ್ಯರು ವಿಶಿಷ್ಟ ಸಮವಸ್ತ್ರದ ಮೂಲಕ ಕಂಗೊಳಿಸುತ್ತಾರೆ. ಕ್ರೀಡಾಕೂಟವನ್ನು ಆಯೋಜಿಸಿದ ಕೋಟತಟ್ಟು ಗ್ರಾ.ಪಂ.ನಿಂದ ಕ್ರೀಡಾಜ್ಯೋತಿ ಆಗಮನವಾಗುತ್ತದೆ. ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸುವ ರಾಷ್ಟ್ರೀಯ, ರಾಜ್ಯ ಮಟ್ಟದ ಕ್ರೀಡಾಪಟುಗಳು ಕ್ರೀಡಾಜ್ಯೋತಿ ಮುನ್ನಡೆಸುತ್ತಾರೆ. ಅನಂತರ ಕ್ರೀಡಾಕೂಟಗಳು ನಡೆಯುತ್ತದೆ. ಆಗಮಿಸಿದವರಿಗೆ ಊಟದ ವ್ಯವಸ್ಥೆಯೂ ಇರಲಿದೆ.
ಯಾವೆಲ್ಲ ಸ್ಪರ್ಧೆಗಳು?
100 ಮೀ. ಓಟ, ಗುಂಡೆಸೆತ, ರಿಂಗ್ ಇನ್ ದಿ ವಿಕೆಟ್, ಮಡಿಕೆ ಒಡೆಯುವುದು, ಸೂಪರ್ ಮಿನಿಟ್, ತ್ರೋಬಾಲ್, ಹಗ್ಗಜಗ್ಗಾಟ ಮುಂತಾದ ಕ್ರೀಡೆಗಳು, ಗಾಯನ, ಛದ್ಮವೇಷ, ಸೂಪರ್ ಮಿನಿಟ್ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳು ಜರಗಲಿವೆ. ಸೀನಿಯರ್, ಸಬ್‌ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಭಾಗವಹಿಸುವ ಸ್ಪರ್ಧಾಳುಗಳಿಗೆ ಸಮವಸ್ತ್ರ, ವಿಜೇತರಿಗೆ ಟ್ರೋಫಿ, ಪ್ರಮಾಣಪತ್ರ ನೀಡಲಾಗುತ್ತದೆ.
ಸ್ನೇಹ ಸೌಹಾರ್ದತೆಗಾಗಿ ಕೂಟ
ಪಂಚಾಯತ್ ಪ್ರತಿನಿಧಿಗಳ ಕ್ರೀಡಾಕೂಟ ವಿಭಿನ್ನವಾಗಿದ್ದು, ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಿ ತಮ್ಮ ಪಂಚಾಯತ್‌ನ್ನು ಪ್ರತಿನಿಧಿಸಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯಾಡಳಿತ ಪ್ರತಿನಿಧಿಗಳನ್ನು ಪರಿಚಯಿಸಿಕೊಳ್ಳಲು ಹಾಗೂ ಸ್ನೇಹ, ಸೌಹಾರ್ದತೆಗಾಗಿ ಕ್ರೀಡಾಕೂಟ ಸಹಕಾರಿಯಾಗಲಿದೆ.
– ಕೋಟ ಶ್ರೀನಿವಾಸ್ ಪೂಜಾರಿ, ವಿ.ಪರಿಷತ್ ವಿಪಕ್ಷ ನಾಯಕರು, ಕಾರ್ಯಕ್ರಮದ ಸಂಘಟನೆ ಪ್ರಮುಖರು
ವಿಶೇಷತೆ ಎನು?
ದೇಶದಲ್ಲೇ ಪಂಚಾಯತ್ ಪ್ರತಿನಿಧಿಗಳ ಕ್ರೀಡಾಕೂಟ ಬೇರೆಲ್ಲೂ ಇಲ್ಲ. ಆದ್ದರಿಂದ ಪಂಚಾಯತ್ ಪ್ರತಿನಿಧಿಗಳ ಪಾಲಿಗೆ ಇದೊಂದು ಒಲಿಂಪಿಕ್ಸ್. 13 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, 410 ಗ್ರಾ.ಪಂ.ಗಳ, ಎಂಟು ತಾ.ಪಂ., ಎರಡು ಜಿ.ಪಂ. ಹಾಗೂ ಎರಡು ಮಹಾನಗರ ಪಾಲಿಕೆ, ಎರಡು ನಗರಸಭೆ, ಹತ್ತು ಪ.ಪಂ.ಗಳ 9,200 ಜನಪ್ರತಿನಿಧಿಗಳಿಗೆ ಭಾಗಿಯಾಗಲು ಅವಕಾಶ. ಈಗಾಗಲೇ 385 ಸ್ಥಳೀಯಾಡಳಿತ ಸಂಸ್ಥೆಗಳ 5,000ಕ್ಕೂ ಹೆಚ್ಚು ಮಂದಿಯಿಂದ ನೋಂದಣಿ. ತೀರ್ಪುಗಾರರಾಗಿ 110 ಮಂದಿ ದೈ.ಶಿ.ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಸಾಂಸ್ಕೃತಿಕ ಸ್ಪರ್ಧೆಗೆ 25 ಮಂದಿ ತೀರ್ಪುಗಾರರಿದ್ದಾರೆ.
— ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.