ಟಿಕೆಟು ಸಿಗದಿದ್ದರೂ, ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ: ಹಾಲಾಡಿ
Team Udayavani, Feb 1, 2018, 9:56 AM IST
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಬಿಜೆಪಿ ಶಾಸಕರಾಗಿ, ಬಿಜೆಪಿಯಿಂದ ಮುನಿಸಿಕೊಂಡು ಒಂದು ಬಾರಿ ಪಕ್ಷೇತರ ಶಾಸಕರಾಗಿ ಗೆದ್ದು, ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮತ್ತೆ ತನ್ನ ಮಾತೃಪಕ್ಷ ಬಿಜೆಪಿಗೆ ಸೇರಲು ಸಜ್ಜಾಗಿದ್ದಾರೆ. ಫೆ. 2ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ಈ ಬಗ್ಗೆ, ಸೇರ್ಪಡೆಗೆ ಪಕ್ಷದಲ್ಲೇ ಉಂಟಾಗಿರುವ ಅಪಸ್ವರಗಳ ಕುರಿತು, ಅವಧಿಗೆ ಮುನ್ನ ರಾಜೀನಾಮೆ ನೀಡಿರುವ ಕುರಿತ ವಿರೋಧದ ಕುರಿತು “ಉದಯವಾಣಿ’ ಜತೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಾತನಾಡಿದ್ದಾರೆ.
ಬಿಜೆಪಿ ತೊರೆದಿದ್ದರೂ ಮಾನಸಿಕವಾಗಿ ಬಿಜೆಪಿ ಯಲ್ಲಿದ್ದ ನೀವು ಈಗ ಮತ್ತೆ ಮಾತೃಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ಧೀರಿ?
ಬಿಜೆಪಿ ತೊರೆದಿದ್ದರೂ ಪಕ್ಷದ ಬಗ್ಗೆ ಯಾವಾಗಲೂ ಗೌರವವಿತ್ತು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ನಾಯಕರು, ಕೇಂದ್ರ ಸಚಿವರು, ರಾಜ್ಯ ನಾಯಕರ ಬಗ್ಗೆ ಅಭಿಮಾನವಿದೆ. ಎಲ್ಲ ಸಂದರ್ಭಗಳಲ್ಲೂ ಬಿಜೆಪಿ ಬಿಟ್ಟರೆ ಬೇರೆ ಯಾವ ಪಕ್ಷಕ್ಕೂ ಬೆಂಬಲ ನೀಡಿಲ್ಲ.
ಬಿಜೆಪಿ ಸೇರ್ಪಡೆಗೆ ಪಕ್ಷದಲ್ಲೇ ವಿರೋಧವಿದೆಯಲ್ಲ?
ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಭಿನ್ನಮತವನ್ನು ಶಮನಗೊಳಿಸಲು ನಾನು ಶಕ್ತನಲ್ಲ. ಅದನ್ನು ರಾಜ್ಯಾಧ್ಯಕ್ಷರು, ನಾಯಕರು, ಜಿಲ್ಲಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಡಾ| ವಿ. ಎಸ್. ಆಚಾರ್ಯರಿದ್ದಾಗ ಜಿಲ್ಲೆಯಲ್ಲಿ ಭಿನ್ನಮತವೆಂಬುದೇ ಇರಲಿಲ್ಲ. ಆದರೆ ಅವರ ಕಾಲಾನಂತರ ಬಿಜೆಪಿಯಲ್ಲಿ ಭಿನ್ನಮತ ಸಂಸ್ಕೃತಿ ಹುಟ್ಟುಕೊಂಡಿದೆ. ತಮ್ಮ ವಿರುದ್ಧ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಅವ
ಹೇಳನಕಾರಿಯಾಗಿ ಬರೆಯುತ್ತಿರುವವರ ಕುರಿತು ಕ್ರಮ ಕೈಗೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ. ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ರಾಜೀನಾಮೆ ಅಂಗೀಕರಿಸಿರುವುದರಿಂದ ಬಿಜೆಪಿ ಸೇರ್ಪಡೆಗೆ ನನಗಿದ್ದ ತಾಂತ್ರಿಕ ತೊಂದರೆ ನಿವಾರಣೆಯಾಗಿದೆ. ಫೆ. 2ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷಕ್ಕೆ ಸೇರುತ್ತಿದ್ದೇನೆ.
ಹಾಲಾಡಿಗೆ ಬಿಜೆಪಿ ಅಗತ್ಯವೋ ಅಥವಾ ಬಿಜೆಪಿಗೆ ಹಾಲಾಡಿ ಅಗತ್ಯವೋ ?
ಅದು ಗೊತ್ತಿಲ್ಲ. ಜನ ಹೇಳಬೇಕು. ಸ್ವಇಚ್ಛೆಯಿಂದ, ಕಾರ್ಯಕರ್ತರು, ಹಿತೈಷಿಗಳು, ಹಿರಿಯರ ಒತ್ತಾಸೆಯಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರುತ್ತಿದ್ದೇನೆ.
ಅವಧಿಗೂ ಮುನ್ನ, ಅದು ಕೂಡ ಬಜೆಟ್ ಮಂಡನೆಗೂ ಮುನ್ನವೇ ರಾಜೀನಾಮೆ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯಲ್ಲ?
ಬಜೆಟ್ ಮಂಡನೆ ರಾಜ್ಯ ಸರಕಾರದ ಕೆಲಸ. ಪ್ರಸ್ತಾವನೆಯಲ್ಲಿ ಭಾಗವಹಿಸಬಹುದಷ್ಟೇ. ಅದರ ಅವಧಿಯೂ ಈಗಾಗಲೇ ಮುಗಿದಿದೆ. ಬಜೆಟ್ ಸಭೆಗೆ ಕೂಡ ಶಾಸಕರಿಗೆ ಆಹ್ವಾನ ಇರುವುದಿಲ್ಲ. ಪ್ರತಿಭಟನೆ ನಡೆಸಲಿ. ಅದು ಅವರ ಹಕ್ಕು. ಈ ಬಗ್ಗೆ ನಾನೇನು ಹೇಳಲ್ಲ. ಅಷ್ಟಕ್ಕೂ ಈ ಬಾರಿ ಬಜೆಟ್‌ನಲ್ಲಿ ಘೋಷಿಸಿರುವುದನ್ನು ಚುನಾವಣೆಗೆ ಮುನ್ನವೇ ಅನುಷ್ಠಾನ ಮಾಡುತ್ತಾರೆಯೇ ?.
ಕ್ಷೇತ್ರದಲ್ಲಿ ಯಾವುದೇ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎನ್ನುವ ಆರೋಪವಿದೆಯಲ್ಲ?
ಆರೋಪದಲ್ಲಿ ಹುರುಳಿಲ್ಲ. ನನ್ನ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಸಮಯ ಬಂದಾಗ ದಾಖಲೆ ಸಹಿತ ಇದಕ್ಕೆ ಉತ್ತರಿಸುತ್ತೇನೆ. ಶೇ. 90ರಷ್ಟು ಪ್ರಮುಖ ರಸ್ತೆಗಳು ದುರಸ್ತಿಗೊಂಡಿವೆ. ಶಾಲೆ-ಕಾಲೇಜುಗಳಿಗೆ ಬೇಕಾದ ಮೂಲ ಸೌಕರ್ಯ ಒದಗಿಸಲಾಗಿದೆ.
ಹಿಂದೆ ಅವಮಾನವಾಗಿದೆಯೆಂದು ಪಕ್ಷ ತೊರೆದು ಈಗ ಮತ್ತದೇ ಪಕ್ಷಕ್ಕೇ ಸೇರುತ್ತಿದ್ದೀರಿ?
ನನಗೊಂದು ಗಾಯವಾಗಿತ್ತು. ಅದೀಗ ಗುಣವಾಗಿದೆ. ಮತ್ತೆ ಗುಣವಾದ ಮೇಲೂ ವೈದ್ಯರ ಬಳಿ ಹೋಗಬೇಕೆ? ಪಕ್ಷದಿಂದ ನೋವಾಗಿದ್ದು ಒಂದು ಆಕಸ್ಮಿಕ. ಅದು ಕೆಟ್ಟಗಳಿಗೆ. ಅದನ್ನು ಈಗಾಗಲೇ ತೋರ್ಪಡಿಸಿದ್ದೇನೆ. ಮತ್ತೆ ಮತ್ತೆ ಅದನ್ನೇ ಮುಂದುವರಿಸುವುದು ಸರಿಯಲ್ಲ.
ಟಿಕೆಟ್ ಸಿಗದಿದ್ದರೂ ಪಕ್ಷದಲ್ಲೇ ಮುಂದುವರಿಯುತ್ತೀರಾ ?
ನಾನು ಯಾವುದೇ ಬೇಡಿಕೆ ಇಟ್ಟು ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ನಿಸ್ವಾರ್ಥ ಮನಸ್ಸಿನಿಂದ, ಓರ್ವ ನಿಷ್ಠಾವಂತ, ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದೇನೆ. ಕೊಟ್ಟ ಹೊಣೆಗಾರಿಕೆಯನ್ನು ಸೂಕ್ತವಾಗಿ ನಿರ್ವಹಿಸುತ್ತೇನೆ. ನನಗೆ ಟಿಕೆಟ್ ಕೊಡುವುದು ಬಿಡುವುದು ಪಕ್ಷಕ್ಕೆ, ನಾಯಕರಿಗೆ ಬಿಟ್ಟ ವಿಚಾರ. ಪಕ್ಷದ ನಿರ್ದಾರಕ್ಕೆ ಬದ್ಧ.
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.