ಬಿ.ಆರ್. ಅಂಬೇಡ್ಕರ್ ಭವನ: ಮಂಜೂರು 39; ನಿರ್ಮಾಣ 3 ಮಾತ್ರ!
Team Udayavani, Feb 20, 2023, 7:00 AM IST
ಉಡುಪಿ: ಮೂರು ವರ್ಷಗಳಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ 39 ಡಾ| ಬಿ.ಆರ್. ಅಂಬೇಡ್ಕರ್ ಭವನ/ ಡಾ| ಬಾಬು ಜಗಜೀವನ್‌ರಾಮ್ ಭವನವು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಜೂರಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ವಾಗಿರುವುದು ಕೇವಲ ಮೂರು!
ಭವನ ನಿರ್ಮಾಣಕ್ಕೆ ಸಮುದಾಯದಿಂದ ಬಂದಿರುವ ಬೇಡಿಕೆ ಆಧರಿಸಿ ತಾಲೂಕಿಗೆ ಒಂದು ಅಥವಾ ಎರಡರಂತೆ ಹಂಚಿಕೆ ಮಾಡಲಾಗಿತ್ತು. ರಾಜ್ಯದಲ್ಲಿ ಒಟ್ಟು 484 ಭವನ ನಿರ್ಮಾಣಕ್ಕೆ ಆಯಾ ಜಿಲ್ಲೆ, ತಾಲೂಕುಗಳಿಗೆ ಹಂಚಿಕೆ ಮಾಡಲಾಗಿದೆ. 121.16 ಕೋ.ರೂ. ಮೀಸಲಿಡಲಾಗಿದ್ದು, ಮೊದಲ ಕಂತಿನಲ್ಲಿ 46.73 ಕೋ.ರೂ. ಬಿಡುಗಡೆ ಮಾಡಲಾಗಿದೆ; 78 ಭವನ ನಿರ್ಮಾಣವಾಗಿದೆ.
ಇವುಗಳಲ್ಲಿ ಉಡುಪಿಗೆ 15, ದಕ್ಷಿಣ ಕನ್ನಡಕ್ಕೆ 24 ಭವನ ಮಂಜೂರಾಗಿದೆ. ದ.ಕ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 24 ಭವನ ನಿರ್ಮಾ ಣಕ್ಕೆ 4.80 ಕೋ.ರೂ. ಅನುದಾನ ಮೀಸಲಿಟ್ಟಿದ್ದು, ಮೊದಲ ಕಂತಿನಲ್ಲಿ 1.44 ಕೋ.ರೂ. ಬಿಡುಗಡೆ ಮಾಡಲಾಗಿದೆ. ಉಡುಪಿಗೆ ಮಂಜೂರಾಗಿರುವ 15 ಭವನ ನಿರ್ಮಾಣಕ್ಕೆ 3 ಕೋ.ರೂ. ಮೀಸಲಿಟ್ಟಿದ್ದು 98 ಲಕ್ಷ ರೂ. ಬಿಡುಗಡೆಯಾಗಿದೆ. ಮೂರು ಭವನ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ.
ನಿರ್ಮಾಣ ಹಂತದಲ್ಲಿ ಹಲವು
ಉಭಯ ಜಿಲ್ಲೆಗೆ ಮಂಜೂರಾ ಗಿರುವ 39 ಭವನಗಳಲ್ಲಿ 20ಕ್ಕೂ ಅಧಿಕ ಭವನ ನಿರ್ಮಾಣ ಹಂತ ಅಥವಾ ಗುದ್ದಲಿ ಪೂಜೆ ಪೂರ್ಣಗೊಂಡು ಕಾಮಗಾರಿ ಈಗಷ್ಟೇ ಆರಂಭವಾಗಿದೆ. ಕಾಮಗಾರಿ ಆರಂಭವಾಗಿರುವ ಭವನಗಳಿಗೆ ಮೊದಲ ಕಂತಿನ ಹಣ ಬಂದಿದೆ. ಸ್ಥಳ ಗುರುತಿಸಿದ್ದು, ಭವನ ನಿರ್ಮಾಣ ಕಾಮಗಾರಿ ಆರಂಭವಾಗದ ಕಡೆಗಳಿಗೆ ಇನ್ನೂ ಅನುದಾನ ಹೋಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿ ರುವುದರಿಂದ ವಿವಿಧ ಕಾಮಗಾರಿಗಳಿಗೆ ವೇಗ ಸಿಕ್ಕಿದೆ. ಅದೇ ಮಾದರಿಯಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಭವನ/ ಡಾ| ಬಾಬು ಜಗಜೀವನ್‌ರಾಮ್ ಭವನ ನಿರ್ಮಾಣ ಕಾಮಗಾರಿಯನ್ನು ಚುನಾವಣೆ ಘೋಷಣೆಯೊಳಗೆ ಆದಷ್ಟು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮೌಖೀಕ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಡಾ| ಬಿ.ಆರ್. ಅಂಬೇಡ್ಕರ್ ಭವನ/ ಡಾ| ಬಾಬು ಜಗಜೀವನ್‌ರಾಮ್ ಭವನ ನಿರ್ಮಾಣಕ್ಕೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಘೋಷಣೆಯಾಗಿರುವ ಬಹುತೇಕ ಎಲ್ಲ ಭವನಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಸಚಿವ, ಸಮಾಜ ಕಲ್ಯಾಣ ಹಾಗೂ ಹಿಂ. ವರ್ಗಗಳ ಕಲ್ಯಾಣ ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.