ಕುಸಿಯುತ್ತಿರುವ ಶಾಲಾ ಕಟ್ಟಡ: ದುರಸ್ತಿಯೂ ಇಲ್ಲ, ತೆರವೂ ಇಲ್ಲ
Team Udayavani, Jul 2, 2018, 6:00 AM IST
ಅಜೆಕಾರು: ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಜ್ಞಾನದೇಗುಲವಾಗಬೇಕಿದ್ದ ಅಂಡಾರು ಸರಕಾರಿ ಹಿ.ಪ್ರಾ. ಶಾಲೆ ಕಟ್ಟಡವು ನಿರಂತರ ಕುಸಿಯುತ್ತಿದ್ದು, ಈ ಕಟ್ಟಡದಲ್ಲಿ ಸಮಾಜಬಾಹಿರ ಚಟುವಟಿಕೆ ನಡೆಯುತ್ತಿದೆ.
2001ನೇ ಸಾಲಿನಲ್ಲಿ ಸುಮಾರು 2.50 ಲ.ರೂ. ವೆಚ್ಚದಲ್ಲಿ ಈ ಕಟ್ಟಡವು ನಿರ್ಮಾಣವಾಗಿದ್ದು, ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಯದೇ ಪಾಳು ಬಿದ್ದು ಕುಸಿಯುವ ಹಂತದಲ್ಲಿದೆ.
17 ವರ್ಷಗಳ ಹಿಂದಿನ ಕಟ್ಟಡ
ಈಗ ಶಾಲೆಯು ದಾನರೂಪದಲ್ಲಿ ಕೊಟ್ಟಿರುವ ಜಾಗದಲ್ಲಿ ನಡೆಯುತ್ತಿದ್ದು, ಸುಮಾರು 4 ಎಕ್ರೆ ಶಾಲೆಯ ಸ್ವಂತ ಜಾಗದಲ್ಲಿ 17 ವರ್ಷಗಳ ಹಿಂದೆ ಸರಕಾರದ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡ ಇದಾಗಿದೆ. ಶಾಲೆಯ ಮೇಲ್ಛಾವಣಿಯ ಹೆಂಚು ನೆಲಕ್ಕೆ ಉರುಳಿ ಬಿದ್ದಿದ್ದು ಮಳೆಗಾಲದಲ್ಲಿ ಕಟ್ಟಡದ ಒಳಗೆ ನೀರು ನಿಲ್ಲುತ್ತಿದೆ. ಕಟ್ಟಡದ ಬಾಗಿಲು, ಕಿಟಕಿಯ ಗಾಜುಗಳು ತುಂಡಾಗಿ ಬಿದ್ದಿವೆ.
ಸಮಾಜಬಾಹಿರ ಚಟುವಟಿಕೆ
ಶಾಲೆಯ ಕಟ್ಟಡದಲ್ಲಿ ಮದ್ಯದ ಬಾಟಲಿ, ಸಿಗರೇಟ್ ತುಂಡುಗಳು, ಪ್ಲಾಸ್ಟಿಕ್ ವಸ್ತುಗಳು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸಮಾಜಬಾಹಿರ ಚಟುವಟಿಕೆ ನಡೆಯುತ್ತಿರುವುದು ಕಂಡುಬರುತ್ತಿದೆ. ಕಟ್ಟಡದ ಮುಂಭಾಗ ವಿಶಾಲವಾದ ಮೈದಾನವಿರುವುದರಿಂದ ಸ್ಥಳೀಯ ಮಕ್ಕಳು ಆಟವಾಡಲು ಪ್ರತಿನಿತ್ಯ ಇಲ್ಲಿಗೆ ಬರುತ್ತಾರೆ. ಈ ವೇಳೆ ಕಟ್ಟಡ ಕುಸಿದಲ್ಲಿ ಮಕ್ಕಳ ಜೀವದ ಗತಿ ಏನೆಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಶೌಚಾಲಯ ಕೂಡ ನಿರ್ವಹಣೆ ಕಂಡಿಲ್ಲ.
ದಾನಿಗಳು ನೀಡಿರುವ ಜಾಗದಲ್ಲಿ ಈಗ ಕಾರ್ಯಾ ಚರಿಸುತ್ತಿರುವ ಶಾಲಾ ಕಟ್ಟಡ ಪ್ರಾಥಮಿಕ ಶಿಕ್ಷಣಕ್ಕೆ ಸಾಕಾಗುವಷ್ಟಿದೆೆ. ಶಾಲೆಯ ಜಾಗದಲ್ಲಿರುವ ಈ ಪಾಳುಕಟ್ಟಡವನ್ನು ದುರಸ್ತಿಪಡಿಸಿದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪೂರಕವಾಗಿ ಉದ್ಯೋಜ ಅಧಾರಿತ ತಾಂತ್ರಿಕ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸ ಬಹುದಾಗಿದೆ. ಆಗ ಕಟ್ಟಡವೂ ಉಪ ಯೋಗಕ್ಕೆ ಬರುತ್ತದೆ. ಜತೆಗೆ ಸ್ಥಳೀಯ ಯುವಕ- ಯುವತಿ ಯರಿಗೂ ಉನ್ನತ ಶಿಕ್ಷಣ ಲಭಿಸಿದಂತಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಮುತುವರ್ಜಿ ವಹಿಸಿ
ಶಾಲೆಯ ಕಟ್ಟಡದ ಮೇಲ್ಛಾವಣಿ ದುರಸ್ತಿಪಡಿಸುವಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭ ಜಿ.ಪಂ., ತಾ. ಪಂ., ಶಿಕ್ಷಣಾಧಿಕಾರಿ ಕಚೆೇರಿ, ಗ್ರಾ.ಪಂ.ಗಳಿಗೆ ಮನವಿ ಮಾಡಿದ್ದೆ. ಆದರೆ ದುರಸ್ತಿಯಾಗದೆ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಹಾನಿಗೀಡಾಗಿದೆ. ಇನ್ನಾದರೂ ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸಬೇಕು.
– ಗಿರೀಶ್ ಕಾಮತ್, ನಿಕಟಪೂರ್ವ ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.