ಅಂಡಾರು: ಪಾಳುಬಿದ್ದ ಸಮಾಜಕಲ್ಯಾಣ ಇಲಾಖೆ ಕಟ್ಟಡ
ಕಟ್ಟಡ ಇಲಾಖೆಗೆ ಹಸ್ತಾಂತರವಾಗಿಲ್ಲ ; ಕುಸಿಯುವ ಹಂತದಲ್ಲಿದೆ.
Team Udayavani, Oct 18, 2019, 5:35 AM IST
ಅಜೆಕಾರು: ಹಲವು ದಶಕಗಳಕಾಲ ಪುಟಾಣಿ ಮಕ್ಕಳ ಕಲರವದೊಂದಿಗೆ ಕಂಗೊಳಿಸುತ್ತಿದ್ದ ಕಟ್ಟಡ ಇದೀಗ ಸೂಕ್ತ ನಿರ್ವಹಣೆ ಯಿಲ್ಲದೆ ಹಲವು ವರ್ಷಗಳಿಂದ ಪಾಳು ಬಿದ್ದಿದೆ.
90ರ ದಶಕದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿ ನಡೆಯುತ್ತಿದ್ದ ಬಾಲವಾಡಿ ಕೇಂದ್ರವು ಈ ಕಟ್ಟಡದಲ್ಲಿ ನಡೆಯುತ್ತಿತ್ತು. 2006ರವರೆಗೆ ಅಂಗನವಾಡಿ ಕೇಂದ್ರ ಮಕ್ಕಳ ಕಲರವದಿಂದ ತುಂಬಿರುತ್ತಿತ್ತು. ಆದರೆ ಅನಂತರದ ದಿನಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಸುಪರ್ದಿಯಲ್ಲಿ ಅಂಗನವಾಡಿ ಕೇಂದ್ರ ಆರಂಭವಾಗಿರುವುದರಿಂದ ಬಾಲವಾಡಿಗೆ ಬೀಗ ಬಿದ್ದಿತ್ತು. ಮಕ್ಕಳು ಬಾಲವಾಡಿಯಿಂದ ಅಂಗನವಾಡಿಗೆ ಬದಲಾದರೂ ಕಟ್ಟಡ ಮಾತ್ರ ಇಲಾಖೆಗೆ ಹಸ್ತಾಂತರವಾಗದೆ ಪಾಳು ಬೀಳುವಂತಾಗಿದೆ. 2006ರ ಅನಂತರ ಬಾಲವಾಡಿ ಮುಚ್ಚಿತಾದರೂ 2007ರಿಂದ 2015ರವರೆಗೆ ಅಂಡಾರು ರಾಮಗುಡ್ಡೆಯ ಅಂಗನವಾಡಿ ಕೇಂದ್ರ ಈ ಕಟ್ಟಡದಲ್ಲಿಯೇ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿತ್ತು.
ಕುಸಿಯುವ ಹಂತಕ್ಕೆ ತಲುಪಿದ ಕಟ್ಟಡ
2015ರಲ್ಲಿ ಅಂಗನವಾಡಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣಗೊಂಡ ಅನಂತರ ಹಳೆಯ ಬಾಲವಾಡಿ ಕಟ್ಟಡ ಪಾಳು ಬಿದ್ದಿದೆ. ಕಳೆದ 4 – 5 ವರ್ಷಗಳಿಂದ ಸೂಕ್ತ ನಿರ್ವಹಣೆಯಿಲ್ಲದೆ ಕಟ್ಟಡವು ಗಿಡಗಂಟಿಗಳಿಂದ ಮುಚ್ಚಿ ಹೋಗಿದೆ. ಸಾವಿರಾರು ಪುಟಾಣಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡಿದ ಕಟ್ಟಡವು ಇದೀಗ ಕುಸಿಯುವ ಹಂತಕ್ಕೆ ತಲುಪಿದೆ. ಕಟ್ಟಡದ ತಳಪಾಯ ಹಾಗೂ ಗೋಡೆ ಈಗಲೂ ಸುಸ್ಥಿತಿಯಲ್ಲಿದ್ದು, ಮೇಲ್ಛಾವಣಿ ನಿರ್ವಹಣೆ ಇಲ್ಲದೆ ಭಾಗಶಃ ಹಾನಿಗೊಂಡಿದೆ.
ಇಲಾಖೆ ಸ್ಪಂದಿಸಿಲ್ಲ
ಬಾಲವಾಡಿ ಕೇಂದ್ರವು ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಹಿಂದೆ ನಡೆಯುತ್ತಿದ್ದರೂ ಅನಂತರ ಬೇರೆ ಇಲಾಖೆಯ ಸುಪರ್ದಿಗೆ ಹೋದ ಸಂದರ್ಭ ಕಟ್ಟಡ ಹಸ್ತಾಂತರಿಸುವ ಅಥವಾ, ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಕಟ್ಟಡ ಪಾಳು ಬೀಳುವಂತಾಗಿದೆ.
ಗ್ರಂಥಾಲಯಕ್ಕೆ ಸೂಕ್ತ
ಈ ಕಟ್ಟಡದ ಸಮೀಪದಲ್ಲಿಯೇ ಸರಕಾರಿ ಹಿ. ಪ್ರಾ. ಶಾಲೆ ಇದ್ದು, ದುಃಸ್ಥಿತಿಯಲ್ಲಿರುವ ಈ ಕಟ್ಟಡವನ್ನು ದುರಸ್ತಿಪಡಿಸಿ ಗ್ರಂಥಾಲಯವಾಗಿ ಮಾರ್ಪಡಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಜತೆಗೆ ಸ್ಥಳೀಯರಿಗೂ ಉತ್ತಮ ಗ್ರಂಥಾಲಯ ದೊರಕಿದಂತಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ತೀರಾ ಅಪಾಯಕಾರಿ
ಈ ಕಟ್ಟಡವು ಪ್ರಾಥಮಿಕ ಶಾಲೆಯ ಸನಿಹದಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳು ಈ ಕಟ್ಟಡದ ಪರಿಸರ ದಲ್ಲಿಯೇ ಓಡಾಡುತ್ತಿದ್ದು ನಿರ್ವಹಣೆ ಇಲ್ಲದೆ ಕಟ್ಟಡ ಕುಸಿದು ಬಿದ್ದಲ್ಲಿ ಅನಾಹುತ ಸಂಭವಿಸಬಹುದಾಗಿದೆ. ಸಂಬಂಧಪಟ್ಟ ವರು ಕಟ್ಟಡ ದುರಸ್ತಿಗೊಳಿಸಿ ಇತರರ ಉಪಯೋಗಕ್ಕೆ ಅನುಕೂಲ ಮಾಡಿಕೊಡ ಬೇಕು ಅಥವಾ ಕಟ್ಟಡವನ್ನು ಕೆಡವಿ ಆಗಬಹುದಾದ ಅನಾಹುತ ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪರಿಶೀಲನೆ ನಡೆಸಲಾಗುವುದು
ಈ ಹಿಂದೆ ಈ ಕಟ್ಟಡದಲ್ಲಿ ಬಾಲವಾಡಿಕೇಂದ್ರ ನಡೆಯುತ್ತಿತ್ತು. ಅನಂತರದ ದಿನಗಳಲ್ಲಿ ಅಂಗನವಾಡಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ಬಂದಿರುವುದರಿಂದ ಕಟ್ಟಡ ಹಾಗೇ ಉಳಿದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
-ವಿಜಯಕುಮಾರ್,ಸಮಾಜಕಲ್ಯಾಣಾಧಿಕಾರಿಕಾರ್ಕಳ
ಹಸ್ತಾಂತರಿಸಿದಲ್ಲಿ ಅನುಕೂಲ
ಸಂಬಂಧಪಟ್ಟ ಇಲಾಖೆ ಹಳೆಯ ಕಟ್ಟಡ ತೆರವುಗೊಳಿಸಿ ನಿವೇಶನ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿದಲ್ಲಿ ಸ್ಥಳೀಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಲಿದೆ.
-ಸದಾಶಿವ ಸೇರ್ವೆಗಾರ್, ಪಿಡಿಒ, ವರಂಗ ಗ್ರಾಮ ಪಂಚಾಯತ್
ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮ
ಹಲವು ವರ್ಷಗಳಿಂದ ಪಾಳು ಬಿದ್ದಿರುವ ಕಟ್ಟಡದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ಜ್ಯೋತಿ ಹರೀಶ್, ಜಿ.ಪಂ. ಸದಸ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.