Land: ಸರಕಾರಿ ಸೊತ್ತುಗಳ ರಕ್ಷಣೆಗೆ ಸೂಕ್ತ ಕ್ರಮ; ಒತ್ತುವರಿ ಭೂಮಿಗೆ ಬೇಲಿ!
ನೂರಾರು ಎಕ್ರೆ ಭೂಮಿ ಸ್ವಾಧೀನ
Team Udayavani, Oct 3, 2024, 7:35 AM IST
ಕಾರ್ಕಳ: ಸರಕಾರಿ ಭೂಮಿಯ ಸಂರಕ್ಷಣೆಗೆ ಜಿಲ್ಲೆಯಲ್ಲಿ ಕ್ರಮ ಆರಂಭವಾಗಿದ್ದು, ಈಗಾಗಲೇ ಒತ್ತುವರಿಯಿಂದ ತೆರವುಗೊಳಿಸಿರುವ ಸರಕಾರಿ ಜಮೀನುಗಳನ್ನು ಹಾಗೂ ಒತ್ತುವರಿ ನಡೆಯಬಹುದಾದಂತಹ ಜಮೀನುಗಳ ಸಂರಕ್ಷಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ನೂರಾರು ಎಕ್ರೆ ಸರಕಾರಿ ಭೂಮಿ ಒತ್ತುವರಿಯಾಗಿದ್ದು, ಬೇಲಿ ನಿರ್ಮಿಸುವ ಮೂಲಕ ಒತ್ತುವರಿ ತೆರುವುಗೊಳಿಸಲಾಗುತ್ತಿದೆ. ಈಗಾಗಲೇ ಲ್ಯಾಂಡ್ ಬೀಟ್ ಆ್ಯಫ್ ಆಧರಿಸಿ ಒತ್ತುವರಿಯಾಗಿರುವ ಭೂಮಿಯ ವಿಸ್ತೀರ್ಣವನ್ನು ಖಚಿತಪಡಿಸಲಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೆಯಲಿದೆ.
ಬೇಲಿ ನಿರ್ಮಾಣ ಸಹಿತ ಅಗತ್ಯ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಆಯಾ ವಿಭಾಗದ ಸಹಾಯಕ ಕಮಿಷನರಿಗೆ ಸೂಚನೆ ನೀಡಿದ್ದಾರೆ. ಉಡುಪಿ, ಕುಂದಾಪುರ, ಕಾರ್ಕಳ, ಕಾಪು, ಬ್ರಹ್ಮಾವರ, ಹೆಬ್ರಿ ತಾಲೂಕುಗಳ ವಿವಿಧೆಡೆ ಒತ್ತುವರಿ ಭೂಮಿಗಳನ್ನು ಗುರುತಿಸಲಾಗಿದೆ.
ಒತ್ತುವರಿ ತೆರವುಗೊಳಿಸಿ ತಂತಿ ಬೇಲಿ ಅಳವಡಿಸುವ ಸಲುವಾಗಿ ಉಡುಪಿ ಜಿಲ್ಲೆಗೆ ಒಟ್ಟು 2 ಕೋ.ರೂ ಅನುದಾನ ಮಂಜೂರಾಗಿದ್ದು, ಅದನ್ನು ಜಿಲ್ಲಾಧಿಕಾರಿಗಳ ಮಿಸಲೇನಿಯಸ್ ಪಿಡಿ ಖಾತೆಗೆ ಜಮೆ ಮಾಡಲಾಗಿದೆ. ಸರಕಾರಿ ಭೂಮಿಗಳ ಒತ್ತುವರಿಗೆ ಸಂಬಂಧಿಸಿ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಅವರ ವೃತ್ತದ ಸರಕಾರಿ ಜಮೀನು ಎಷ್ಟಿವೆ ಎಂಬ ವಿವರಗಳನ್ನು ಆ್ಯಪ್ ಮೂಲಕ ಅಪ್ಲೋಡ್ ಮಾಡಲು ಸರಕಾರ ಸೂಚಿಸಿತ್ತು. ಅದರಂತೆ ಪೂರ್ಣ ಮಾಹಿತಿ ಜಿಲ್ಲಾಡಳಿತಕ್ಕೆ ದೊರಕಿದೆ. ಜಿಲ್ಲಾವಾರು, ತಾಲೂಕುವಾರು ಹಾಗೂ ಗ್ರಾಮವಾರು ಸರ್ವೆ ನಂಬ್ರ, ಲೊಕೇಶನ್ ಮತ್ತು ವಿಸ್ತೀರ್ಣದ ಮಾಹಿತಿ ಜಿಲ್ಲಾಡಳಿತದ ಕೈ ಸೇರಿದೆ. ಎರಡನೇ ಹಂತದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಗುರುತಿಸಿದ ಸರ್ವೆ ನಂಬರುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಒತ್ತುವರಿ ಭೂಮಿಯ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ರೈತರ ಭೂಮಿ ಹೊರತುಪಡಿಸಿ ಉಳಿದೆಲ್ಲ ಒತ್ತುವರಿಗಳನ್ನು ತಹಶೀಲ್ದಾರ್ ಮೂಲಕ ತೆರವುಗೊಳಿಸಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಮತ್ತು ನಮೂನೆ 57 ಅರ್ಜಿ ಬಾಕಿಯಿರುವ ಪ್ರಕರಣಗಳನ್ನು ಈ ವ್ಯವಸ್ಥೆಯಿಂದ ಹೊರಗಿಡಲಾಗಿದೆ. ಅನಧಿಕೃತ ಸಾಗುವಳಿ ಮತ್ತು ವಾಸದ ಮನೆ ಇರುವ ಪ್ರಕರಣಗಳಲ್ಲಿ ನಾಗರಿಕರಿಗೆ ಯಾವುದೇ ಕಿರುಕುಳ, ತೊಂದರೆ ಆಗದಂತೆ ನೋಡಿಕೊಳ್ಳಲು ತಹಶಿಲ್ದಾರ್ ಹಾಗೂ ಕಂದಾಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಸಂರಕ್ಷಣೆ?
ಕುಂದಾಪುರ ಕೋಟೇಶ್ವರದ ಸರ್ವೆ ನಂಬ್ರ 263/9ರಲ್ಲಿ 0.79 ಎಕ್ರೆ, ಹಕೂìರಿನ ಸರ್ವೆ ನಂಬ್ರ 98ರಲ್ಲಿ 3 ಎಕ್ರೆ, ಕಾರ್ಕಳ ಕಸಬಾದ ಸರ್ವೆನಂಬ್ರ 341/1 ರಲ್ಲಿ 3 ಎಕ್ರೆ, ಕಾರ್ಕಳ ಕಸಬಾದ 616/2ರಲ್ಲಿ 2 ಎಕ್ರೆ, ನಿಟ್ಟೆಯ 360/1ರಲ್ಲಿ 2 ಎಕ್ರೆ, ಉಡುಪಿಯ ಬೊಮ್ಮರಬೆಟ್ಟಿನ 328/2ಎರಲ್ಲಿ 1.44.50 ಎಕ್ರೆ, ಬೈರಂಪಳ್ಳಿ 29/1ರಲ್ಲಿ 1.20 ಎಕ್ರೆ, ಅಂಜಾರಿನ 161.1ಸಿ1ರಲ್ಲಿ 2.95 ಎಕ್ರೆ, ಬ್ರಹ್ಮಾವರದ ವಾರಂಬಳ್ಳಿಯ 200/1ರಲ್ಲಿ 0.79 ಎಕ್ರೆ, ಗಿಳಿಯಾರಿನ 244/1ಸಿ1ರಲ್ಲಿ 0.10 ಎಕ್ರೆ, ಹೆಬ್ರಿ ಕೆರೆಬೆಟ್ಟಿನ 21ರಲ್ಲಿ 5 ಎಕ್ರೆ, ಹೆಬ್ರಿಯ 251ರಲ್ಲಿ 0.10 ಎಕ್ರೆ, ಕಾಪು ಪಡು ಗ್ರಾಮದಲ್ಲಿ 27/1ಎ. ರಲ್ಲಿ 0.72 ಎಕ್ರೆ, 27/1ಬಿ.ರಲ್ಲಿ 0.28 ಎಕ್ರೆ, 27/1ಸಿರಲ್ಲಿ 0.20 ಎಕ್ರೆ, 29/2ಎ3ರಲ್ಲಿ 0.16.77 ಎಕ್ರೆ, 29/2ಸಿರಲ್ಲಿ 0.12 ಎಕ್ರೆ, 115/5ಎ2ಸಿರಲ್ಲಿ 0.30 ಎಕ್ರೆ, ಕಟ್ಟಿಂಗೇರಿ 61/1ರಲ್ಲಿ 013,50 ಎಕ್ರೆ, ಇನ್ನಂಜೆ 8/13ಎರಲ್ಲಿ 0.57 ಎಕ್ರೆ, ಪಾಂಗಾಳ 111/3ಎ1ರಲ್ಲಿ 1.61 ಎಕ್ರೆ, ಹೆಜಮಾಡಿ 246ರಲ್ಲಿ 0.02 ಎಕ್ರೆ ವಿಸ್ತೀರ್ಣದ ಭೂಮಿ ಸ್ವಾಧೀನಕೊಳ್ಳಪಡಿಸಿ ಬೇಲಿ ಅಳವಡಿಸಲಾಗುತ್ತದೆ.
ಸರಕಾರಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಸಂಬಂಧ ಪಟ್ಟಿ ಸಿದ್ಧಪಡಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಶೀಘ್ರವೇ ಬೇಲಿ ಅಥವಾ ತಡೆಗೋಡೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.
-ಡಾ| ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.