ಎಟ್ ದಿ ಎಂಡ್ ಆಫ್ ದಿ ಡೇ…
Team Udayavani, Aug 21, 2017, 7:35 AM IST
ಉಡುಪಿ: ಒಂದು ಹೊಸ ಜಿಲ್ಲೆಯಾಗಿ ರೂಪುಗೊಳ್ಳಲು ಎಷ್ಟು ಕಷ್ಟವಿದೆ ಎಂಬುದು ಜಿಲ್ಲೆಗಳ ಪುನರ್ವಿಂಗಡನೆ ಇತಿಹಾಸವನ್ನು ನೋಡಿದರೆ ತಿಳಿಯುತ್ತದೆ. ಆದರೂ ಈ ಸವಾಲನ್ನು ಎದುರಿಸಿ ಉಡುಪಿ ಜಿಲ್ಲೆ 1997 ಆಗಸ್ಟ್ 25 ರಂದು ಉದಯವಾಯಿತು. ಇದು ಒಬ್ಬಿಬ್ಬರ ಪರಿಶ್ರಮದಿಂದ ನಡೆಯುವಂಥದ್ದಲ್ಲ.
ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರೇ ಜಿಲ್ಲೆಯನ್ನು ವಿಂಗಡಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಉಡುಪಿ ಜಿಲ್ಲೆಯಾದರೂ ಗಾತ್ರದಲ್ಲಿ ಚಿಕ್ಕದು. ದೊಡ್ಡ ದೊಡ್ಡ ಜಿಲ್ಲೆಗಳ ನಾಯಕರು ತಮ್ಮ ಜಿಲ್ಲೆಗಳನ್ನು ವಿಂಗಡಿಸಿ ಎಂದು ಪಟ್ಟು ಹಿಡಿಯುವಾಗ ಚಿಕ್ಕ ಗಾತ್ರದ ಜಿಲ್ಲೆಯನ್ನು ವಿಂಗಡಿಸುವುದು ಕಷ್ಟಸಾಧ್ಯ.
ವಯಸ್ಸು ಮಾಗಿದಂತೆ, ಅನುಭವ ಹೆಚ್ಚಿದಂತೆ ಜೀವನದ ಘಟನಾವಳಿಗಳನ್ನು ಹಿಂದಿರುಗಿ ನೋಡಿದಾಗ ಸಾಧನೆಗಳ, ವೈಫಲ್ಯಗಳ ಬ್ಯಾಲೆನ್ಸ್ ಶೀಟ್ ಕಣ್ಣೆದುರಿಗೆ ಬರುತ್ತದೆ. ಸಾಮಾನ್ಯವಾಗಿ ಅಧಿಕಾರದಲ್ಲಿರುವಾಗ ಈ ಅವಲೋಕನ ಸಾಧ್ಯವಾಗುವುದಿಲ್ಲ ಎಂದೆನಿಸುತ್ತದೆ, ಈ ಅಭಿಪ್ರಾಯದಲ್ಲಿ ತಪ್ಪೂ ಇರಬಹುದು. ಒಟ್ಟಾರೆ 20 ವರ್ಷಗಳ ಬಳಿಕ ಆ ಕಾಲದ ಜನಪ್ರತಿನಿಧಿಗಳಿಗೆ ಈ ಐತಿಹಾಸಿಕ ನಿರ್ಧಾರದ ದಿನಗಳು ಸಂತೃಪ್ತಿ ಕೊಡುತ್ತಿದೆ.
“ನನ್ನ ಸಹೋದ್ಯೋಗಿ ಮಿತ್ರರೂ ಇದು ಚಿಕ್ಕ ಜಿಲ್ಲೆ. ಬೆಳಗಾವಿಯಂತಹ ದೊಡ್ಡ ಜಿಲ್ಲೆಗಳನ್ನು ಬಿಟ್ಟು ಇದನ್ನು ಹೇಗೆ ವಿಂಗಡಿಸುತ್ತೀರಿ ಎಂದು ಪ್ರಶ್ನಿಸಿದ್ದರು. ದೂರದೂರುಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಬರುವ ಜನರು ಬೆಳಗ್ಗೆ ಹೊರಟು ರಾತ್ರಿಯೊಳಗೆ ಮನೆ ಸೇರುವಂತಾಗಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಮನಗಾಣಿಸಿದೆ. ಪಟೇಲ್ ಅವರದು ಮೆಗ್ನಾನಿಮಸ್ ಪರ್ಸನಾಲಿಟಿ. ಒಪ್ಪಿದರು, ಅದರಂತೆ ನಡೆದುಕೊಂಡರು. ಉದ್ಘಾಟನೆಯ ದಿನ ಬಹಳ ಸಂತೋಷ ಪಟ್ಟಿದ್ದರು. ಒಂದು ವೇಳೆ ಉಡುಪಿ ಜಿಲ್ಲೆ ಸ್ಥಾಪನೆಯಾಗದೆ ಇದ್ದಿದ್ದರೆ ಇಷ್ಟೊಂದು ಅಭಿವೃದ್ಧಿ, ಅನುದಾನ ಬರುತ್ತಿರಲಿಲ್ಲ. ಎಟ್ ದಿ ಎಂಡ್ ಆಫ್ ದಿ ಡೇ ನಮಗೇನು ಬೇಕು ಹೇಳಿ. ಶಾಶ್ವತವಾಗಿ ಉಳಿಯುವ ಕೆಲಸ ನಡೆಯಬೇಕು. ಇದೊಂದು ನನಗೆ ಬಹಳ ಸಂತೋಷ ಕೊಟ್ಟ ಕೆಲಸ’ ಎನ್ನುತ್ತಾರೆ ಸ್ಥಾಪಕ ಉಸ್ತುವಾರಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆಯವರು.
“ನಾವು ಜಿಲ್ಲೆಗಾಗಿ ಹೋರಾಟ ಮಾಡುತ್ತಿದ್ದೆವು. ನಾವು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿರಲಿಲ್ಲ, ಕ್ಷುಲ್ಲಕ ರಾಜಕಾರಣ ಮಾಡುತ್ತಿರಲಿಲ್ಲ. ನಾನು ವಿಧಾನಸಭೆಯಲ್ಲಿ ಮತ್ತು ಡಾ| ವಿ.ಎಸ್.ಆಚಾರ್ಯ ವಿಧಾನ ಪರಿಷತ್ತಿನಲ್ಲಿ ಜಿಲ್ಲೆ ಆಗಬೇಕೆಂದು ಒತ್ತಾಯಿಸುತ್ತಿದ್ದೆವು. ಜೆ.ಎಚ್. ಪಟೇಲ್ ಅವರ ಇಚ್ಛಾಶಕ್ತಿಯಿಂದಾಗಿ ಏಳು ಜಿಲ್ಲೆಗಳು ಉದಯವಾದವು. ನನ್ನ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಉದ್ಘಾಟನೆಯಾಯಿತು ಎನ್ನುವುದಕ್ಕೆ ಸಂತೋಷವೆನಿಸುತ್ತಿದೆ. ಈಗ ಜಿಲ್ಲಾಧಿಕಾರಿ ಕಚೇರಿಯೂ ಆಗಿದೆ. ದೂರದ ಮಂಗಳೂರಿಗೆ ಹೋಗುವ ಕೆಲಸ ತಪ್ಪಿತು’ ಎನ್ನುತ್ತಾರೆ ಆಗಿನ ಶಾಸಕ ಯು.ಆರ್.ಸಭಾಪತಿಯವರು.
“1983ರಲ್ಲಿ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದ ಡಾ| ವಿ.ಎಸ್.ಆಚಾರ್ಯರು ತಮ್ಮ ಸುದೀರ್ಘ ಅನುಭವದಿಂದ ಸಣ್ಣ ಸಣ್ಣ ಜಿಲ್ಲೆಗಳನ್ನು ರಚಿಸಲು ಆಡಿದ ಭಾಷಣ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಆಕರ್ಷಿಸಿತು. ಅವರು ಜಿಲ್ಲೆಗಳ ಪುನರ್ವಿಂಗಡನೆಗೆ ಟಿ.ಎಂ. ಹುಂಡೇಕರ್ ಸಮಿತಿಯನ್ನು ರಚಿಸಿದರು. 1996 ರಲ್ಲಿ ವಿಧಾನ ಪರಿಷತ್ ಸದಸ್ಯರಾದಾಗಲೂ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ರಿಗೆ ಜಿಲ್ಲೆಗಳ ಪುನರ್ವಿಂಗಡನೆಗೆ ಮನವೊಲಿಸಿದರು. ಸಮಿತಿಯ ಮುಂದೆ ಮೂರು ತಾಲೂಕುಗಳನ್ನು ಒಳಗೊಂಡ ಜಿಲ್ಲಾ ರಚನೆಗೆ ಬೇಕಾದ ಪ್ರಸ್ತಾವನೆ ಗಳನ್ನು ಮಂಡಿಸಿದರು. ಇದಕ್ಕಾಗಿ ಬಹಳ ಶ್ರಮಪಟ್ಟಿರುವುದನ್ನು ಜೆ.ಎಚ್. ಪಟೇಲ್ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದ್ದರು’ ಎಂದು ಪುರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ನೆನಪಿಸಿಕೊಳ್ಳುತ್ತಾರೆ.
ಆಗಿನ ಕಂದಾಯ ಸಚಿವ ರಮೇಶ ಜಿಗಜಿಣಗಿ, ಗ್ರಾಮೀಣಾಭಿವೃದ್ಧಿ ಸಚಿವ ಎಂ.ಪಿ. ಪ್ರಕಾಶ್, ನಗರಾಭಿವೃದ್ಧಿ ಸಚಿವ ಬಿ.ಎನ್. ಬಚ್ಚೇಗೌಡರು, ಸಣ್ಣ ಕೈಗಾರಿಕಾ ಸಚಿವ ಬಿ.ಎ. ಮೊದಿನ್ ಮೊದಲಾದವರು ಐತಿಹಾಸಿಕ ದಿನದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪಟೇಲರ ಹಾಸ್ಯಚಟಾಕಿ!
ಒಂದೊಮ್ಮೆ ವಿಪಕ್ಷದ ಶಾಸಕರು ಶಿವಮೊಗ್ಗದಿಂದ ಬೆಂಗಳೂರಿಗೆ ಬರುವ ರಸ್ತೆಗಳು ಹೊಂಡಗುಂಡಿಗಳಿಂದ ಸಂಪೂರ್ಣ ಕುಲಗೆಟ್ಟಿವೆ ಎಂದು ಆಕ್ರೋಶ ಭರಿತವಾಗಿ ಮಾತನಾಡಿದರು. ನಗುನಗುತ್ತ ಮಾತನಾಡುವ ಜೆ.ಎಚ್. ಪಟೇಲರು “ಹಾಗಿದ್ದರೆ ಕುದುರೆ ಏರಿ ಬನ್ನಿ’ ಎಂದು ಹಾಸ್ಯಚಟಾಕಿ ಹಾರಿಸಿದರು. ಪಟೇಲರು ಉಡುಪಿ ಜಿಲ್ಲೆಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಾಗ “ಉಡುಪಿ ಕ್ಷೇತ್ರ ಪ್ರಸಿದ್ಧ. ಶ್ರೀಕೃಷ್ಣನ ನಾಡು. ಶ್ರೀಕೃಷ್ಣನೆಂದರೆ ನನಗೂ ಇಷ್ಟ. ನನಗೆ ಒಂಥರಾ…’ ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ಪಟೇಲರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಮಾತಿನಲ್ಲಿ ಹಾಸ್ಯ ಕಾಣುತ್ತಿತ್ತೇ ವಿನಾ ಅವಮಾನ, ಸಿಟ್ಟು ಬರುತ್ತಿರಲಿಲ್ಲ. ಸಚಿವ ಜಿಗಜಿಣಗಿಯವರ ಹೆಸರನ್ನು ಸರಿಯಾಗಿ ಉತ್ಛರಿಸಲಾಗದೆ ಪಟೇಲರು ದಡಬಡಿಸಿದಾಗಲೂ ಸಭಿಕರಲ್ಲಿ ನಗು ಬಂತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.