ಅತ್ರಾಡಿ-ಬಜ್ಪೆ ಹೆದ್ದಾರಿ
ಕಾಮಗಾರಿ ಚುರುಕು
Team Udayavani, May 12, 2022, 11:00 AM IST
ಬೆಳ್ಮಣ್: ರಾಜ್ಯ ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರ ಮುತುವರ್ಜಿಯಲ್ಲಿ ಲೋಕೋಪಯೋಗಿ ಇಲಾಖೆಯ 20 ಕೋಟಿ ರೂ. ಅನುದಾನದ ಬೆಳ್ಮಣ್ -ಸಂಕಲಕರಿಯ ರಸ್ತೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು ಮಂಗಳವಾರ ಡಾಮರು ಕಾಮಗಾರಿ ಪ್ರಾರಂಭಗೊಂಡಿದೆ.
ಅತ್ರಾಡಿ-ಬಜ್ಪೆ ವಿಮಾನ ನಿಲ್ದಾಣ ಹೆದ್ದಾರಿ ಕಾಮಗಾರಿಯ ಭಾಗವಾಗಿರುವ ಈ ರಸ್ತೆಗೆ ಕಳೆದ ತಿಂಗಳು ಸಚಿವ ವಿ. ಸುನಿಲ್ ಕುಮಾರ್ ಅವರೇ ಖುದ್ದಾಗಿ ಭೂಮಿ ಪೂಜೆ ನೆರವೇರಿಸಿದ್ದು ಗುತ್ತಿಗೆ ವಹಿಸಿಕೊಂಡಿರುವ ಕಾರ್ಲ ಕನ್‌ಸ್ಟ್ರಕ್ಷನ್ಸ್ ನವರು ಸಂಕಲಕರಿಯದಿಂದ ಮುಂಡ್ಕೂರು ವಿದ್ಯಾವರ್ಧಕ ಪ.ಪೂ. ಕಾಲೇಜಿನ ವರೆಗೆ ರಸ್ತೆ ವಿಸ್ತರಣೆ ಪ್ರಕ್ರಿಯೆ ಬಹುತೇಕ ಮುಗಿಸಿದ್ದು ಸಂಕಲಕರಿಯ ಸೇತುವೆಯಿಂದ ಬೆಳ್ಮಣ್ ಕಡೆಗೆ 1 ಕಿ.ಮೀ. ರಸ್ತೆಗೆ ಡಾಮರು ಕಾಮಗಾರಿ ಕಾರ್ಯವೂ ಪ್ರಾರಂಭಗೊಂಡಿದೆ. ಸಂಕಲಕರಿಯ -ಮುಂಡ್ಕೂರು ವರೆಗಿನ ಕಾಮಗಾರಿ ಹಾಗೂ ಮುಂಡ್ಕೂರು-ಬೆಳ್ಮಣ್ ವರೆಗಿನ ಕಾಮಗಾರಿಗಳಿಗೆ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಲಾಗಿದೆ.
ರಸ್ತೆ ವಿಸ್ತರಣೆ ಯಶಸ್ಸು
ಸಂಕಲಕರಿಯ ಸೇತುವೆಯಿಂದ ಈ ಕಾಮಗಾರಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಹಲವೆಡೆ ಖಾಸಗಿ ಜಮೀನು, ಆವರಣ ಗೋಡೆಗಳು ಹಿಟಾಚಿಗೆ ಉರುಳಿದ್ದು ಉಳಿದಂತೆ ಹೆಚ್ಚಿನ ಹಾನಿ ಮಾಡದೆ ವಿಸ್ತರಣೆ ಯಶಸ್ವಿಯಾಗಿ ನಡೆದಿದೆ. ಸಂಕಲಕರಿಯ ವಿಜಯಾ ಯುವಕ ಸಂಘದ 20 ವರ್ಷಗಳ ಹಿಂದಿನ ರಂಗ ಮಂಟಪ ಧರೆಗುರುಳಿತ್ತು. ಈ ರಂಗ ಮಂದಿರವನ್ನು ಸಂಘದ ಉದ್ದೇಶಿತ ಜಾಗದಲ್ಲಿ ನಿರ್ಮಿಸಿಕೊಡುವ ಭರವಸೆ ನೀಡಲಾಗಿದೆ. ಉಳಿದಂತೆ ರಸ್ತೆಗೆ ತಾಗಿಕೊಂಡಿದ್ದ ಎರಡು ಕೆಲವೊಂದು ಬಸ್ ತಂಗುದಾಣಗಳನ್ನು ಕೆಡವಲಾಗಿದ್ದು ಬಿಟ್ಟರೆ ಯಾವುದೇ ಇತರ ಹಾನಿಯುಂಟುಮಾಡದೆ ರಸ್ತೆ ವಿಸ್ತರಣೆ ಕಾರ್ಯ ನಡೆದಿದೆ.
ವಿಮಾನ ನಿಲ್ದಾಣ, ಕಟೀಲು ಹತ್ತಿರದ ರಸ್ತೆ
ಅತ್ರಾಡಿ-ಬಜ್ಪೆ ರಸ್ತೆ ಕಾಮಗಾರಿಯಿಂದ ಉಡುಪಿ -ಮಂಗಳೂರು ರಸ್ತೆಯ ಒತ್ತಡ ಕಡಿಮೆಯಾಗಲಿದ್ದು ಬಜ್ಪೆ ವಿಮಾನ ನಿಲ್ದಾಣ ಹಾಗೂ ಕಟೀಲು ಸಹಿತ ಇತರ ಭಾಗಗಳಿಗೆ ಸಂಚರಿಸುವ ವಾಹನ ಸವಾರರು ಈ ರಸ್ತೆಯ ಮೂಲಕ ಸಂಚರಿಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಹೆದ್ದಾರಿಗೆ ಸಂಬಂಧಪಟ್ಟ ಇತರೆಡೆಗಳಲ್ಲಿಯೂ ಕಾಮಗಾರಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.
ಮಳೆಗಾಲದ ಬಳಿ ಕಾಮಗಾರಿ ಪೂರ್ಣ
ಪ್ರಸ್ತುತ ಮಳೆ ಪ್ರಾರಂಭಗೊಂಡಿದ್ದು ಮಳೆಗಾಲದ ಬಳಿಕ ಕಾಮಗಾರಿಗೆ ತೊಂದರೆಯಾಗುತ್ತಿದ್ದು ಮಳೆಗಾಲದ ಬಳಿಕ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಚಿವ ವಿ. ಸುನಿಲ್ ಕುಮಾರ್ ಅವರ ವಿಶೇಷ ಮುತುವರ್ಜಿಯಿಂದ ಈ ಸದುದ್ದೇಶಿತ ರಸ್ತೆ ಕಾಮಗಾರಿಗೆ ಚುರುಕಿನ ಸ್ಪರ್ಶ ನೀಡಿದ ಕಾರ್ಲ ಕನ್‌ಸ್ಟ್ರಕ್ಷನ್ಸ್ ನವರ ವಿಶೇಷ ಕಾಳಜಿಗೆ ಭಾರೀ ಮನ್ನಣೆ ವ್ಯಕ್ತವಾಗಿದೆ.
ಜನರಿಗೆ ಅನುಕೂಲ
ಈ ಭಾಗದ ಶಾಸಕನಾಗಿದ್ದಾಗಲೂ ತಾಲೂಕಿನ ಹೆಚ್ಚಿನ ರಸ್ತೆಗಳ ಅಭಿವೃದ್ಧಿಯಲ್ಲಿ ಶ್ರಮಿಸಿದ್ದೆ. ಇದೀಗ ಸಚಿವನಾಗಿ ಇನ್ನೂ ಜವಾಬ್ದಾರಿ ಹೆಚ್ಚಿದೆ. ಈ ರಸ್ತೆಯಿಂದ ಕಟೀಲು ಮತ್ತು ಬಜ್ಪೆ ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದ್ದು ಉಡುಪಿ-ಮಂಗಳೂರು ಹೆದ್ದಾರಿ ನಿರಾಳವಾಗಲಿದೆ. ರಸ್ತೆ ವಿಸ್ತರಣೆ ವಿಚಾರದಲ್ಲಿ ಬೆಳ್ಮಣ್, ಮುಂಡ್ಕೂರು, ಸಂಕಲಕರಿಯ ಭಾಗದ ಜನರ ಉತ್ತಮ ಸ್ಪಂದನೆ ಶ್ಲಾಘನೀಯ. –ವಿ. ಸುನಿಲ್ ಕುಮಾರ್, ಸಚಿವ
ಜನರಿಗೆ ಅನುಕೂಲ
ಅತ್ರಾಡಿ-ಬಜ್ಪೆ ಹೆದ್ದಾರಿಯ ಭಾಗವಾಗಿರುವ ಬೆಳ್ಮಣ್ -ಸಂಕಲಕರಿಯ ರಸ್ತೆ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿರುವುದು ಪ್ರಶಂಸನೀಯ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಹಾಗೂ ಅಧಿಕಾರಿಗಳ ತಂಡ ಈ ಕಾಮಗಾರಿಯನ್ನು ನಿರಂತರವಾಗಿ ಪರಿಶೀಲಿಸುತ್ತಿರುವುದು ಕಾಮಗಾರಿಯ ದಕ್ಷತೆಗೆ ಸಾಕ್ಷಿ. –ಕೃಷ್ಣ ಸಾಲ್ಯಾನ್, ಸಂಕಲಕರಿಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.