ಅಟೊಮೇಟೆಡ್ ಹಾಲಿನ ಡೇರಿ, ಆಡಳಿತ ಕಚೇರಿ ಸಂಕೀರ್ಣಕ್ಕೆ ಶಂಕುಸ್ಥಾಪನೆ
Team Udayavani, Apr 14, 2017, 10:50 AM IST
ಉಡುಪಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ವತಿಯಿಂದ ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದ ಜಾತಬೆಟ್ಟುವಿನಲ್ಲಿ ಖರೀದಿಸಲಾದ 5.9 ಎಕರೆ ವಿಸ್ತೀರ್ಣದ ಜಮೀನಿನಲ್ಲಿ 92 ಕೋ.ರೂ. ವೆಚ್ಚದಲ್ಲಿ 2.50 ಲಕ್ಷ ಲೀಟರ್ ಸಾಮರ್ಥ್ಯದ ಅಟೋಮೇಟೆಡ್ ಹಾಲಿನ ಡೇರಿ ಮತ್ತು ಆಡಳಿತ ಕಚೇರಿ ಸಂಕೀರ್ಣವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಎ. 16ರಂದು ಶಂಕು ಸ್ಥಾಪನೆ ನೆರವೇರಲಿದೆ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಅವರು ಮಣಿಪಾಲ ಡೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಎ. 16ರ ಬೆಳಗ್ಗೆ 10.30ಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್. ಯಡಿಯೂರಪ್ಪ ಅವರು ಡೇರಿ ಸಂಸ್ಕರಣ ಘಟಕಕ್ಕೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಆಡಳಿತ ಕಚೇರಿ ಸಂಕೀರ್ಣಕ್ಕೆ ಶಂಕುಸ್ಥಾಪನೆಗೈಯಲಿದ್ದಾರೆ. ಗಣ್ಯರು ಉಪಸ್ಥಿತರಿರುವರು ಎಂದರು.
ಮಣಿಪಾಲ ವಲಯವು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 326 ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದು, 40 ಬಿಎಂಸಿ ಕೇಂದ್ರಗಳ ಮೂಲಕ ದಿನಕ್ಕೆ 1.87 ಲಕ್ಷ ಲೀ. ಹಾಲು ಸಂಗ್ರಹಣೆಯಾಗುತ್ತಲಿದೆ. ಆರಂಭದಲ್ಲಿ 20,000 ಲೀ. ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದ್ದ ಕೆಮುಲ್ ಡೇರಿಯು 2011ರಲ್ಲಿ 80,000 ಲೀ.ಗೆ ಹೆಚ್ಚಿಸಿಕೊಂಡಿದೆ. ಹಾಲು ಸಹಿತ ಹಾಲಿನ ಎಲ್ಲ ಉತ್ಪನ್ನಗಳನ್ನು ಸಂಸ್ಥೆಯು ಮಾಡುತ್ತಿದೆ ಎಂದು ಹೇಳಿದ ಅವರು, ರೈತರಿಗೆ ಹಾಲಿನ ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ ಬರುವ ವ್ಯವಸ್ಥೆಯನ್ನು ರಾಜ್ಯಮಟ್ಟದಲ್ಲಿಯೇ ಮಾಡಲಾಗಿದ್ದು, ಅದಕ್ಕಾಗಿ ಎಲ್ಲ ಹೈನುಗಾರರು ಬ್ಯಾಂಕಿನಲ್ಲಿ ಆಧಾರ್ ಜೋಡಣೆಯನ್ನು ಮಾಡಿಕೊಳ್ಳಬೇಕು ಎಂದರು.
ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ ಚೇರ್ಕಾಡಿ, ಜಾನಕಿ ಹಂದೆ, ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ ಸತ್ಯನಾರಾಯಣ, ವ್ಯವಸ್ಥಾಪಕ ಜಿ. ರಾಯ್ಕರ್, ಉಪವ್ಯವಸ್ಥಾಪಕ ಲಕ್ಕಪ್ಪ, ಡೇರಿ ಮ್ಯಾನೇಜರ್ ಶಿವಶಂಕರ್, ಮಾರ್ಕೆಟಿಂಗ್ ಮ್ಯಾನೇಜರ್ ಹೇಮಶೇಖರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
“ಮಣಿಪಾಲದ ಡೇರಿ-ಐಸ್‌ಕ್ರೀಂ
ಘಟಕವಾಗಿ ಪರಿವರ್ತನೆ’
ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ವತಿಯಿಂದ ಟರ್ನ್ಕೀ ಆಧಾರದಲ್ಲಿ ಡೇರಿ ನಿರ್ಮಾಣವಾಗಲಿದ್ದು, 2 ವರ್ಷದೊಳಗೆ ನಿರ್ಮಾಣ ಮಾಡಿಕೊಡಲು ಒಪ್ಪಂದವಾಗಿದೆ. ಈಗಾಗಲೇ ಸರಿಸುಮಾರು ಆರು ತಿಂಗಳು ಕಳೆದಿದೆ. 2018ರ ಡಿಸೆಂಬರ್ ಒಳಗೆ ಕಾಮಗಾರಿ ಸಂಪೂರ್ಣಗೊಳ್ಳುವ ಭರವಸೆ ಇದೆ. ಆನಂತರದಲ್ಲಿ ಮಣಿಪಾಲದಲ್ಲಿರುವ ಹಾಲಿನ ಡೇರಿಯನ್ನು ಉಪ್ಪೂರಿಗೆ ಶಿಫ್ಟ್ ಮಾಡಲಾಗುತ್ತದೆ. ಮಣಿಪಾಲದಲ್ಲಿ ಸುಮಾರು 2 ಎಕರೆ ಜಾಗವಿದ್ದು, ಡೇರಿ ಶಿಫ್ಟ್ ಮಾಡಿದರೂ ಕಟ್ಟಡಗಳು ಇರುವುದರಿಂದ ಅದನ್ನು ನಂದಿನಿ ಐಸ್‌ಕ್ರೀಂ ಘಟಕವನ್ನಾಗಿ ಪರಿವರ್ತಿಸುವ ಚಿಂತನೆ ಇರಿಸಿಕೊಳ್ಳಲಾಗಿದೆ ಎಂದರು.
“ಟಿ.ಎ. ಪೈ-ಕೆ.ಕೆ. ಪೈ ಸಾರಥ್ಯದ ಸಂಸ್ಥೆ’
ಸಂಸ್ಥೆಯನ್ನು ಮಣಿಪಾಲದ ದಿಗ್ಗಜರಾದ ಟಿ.ಎ. ಪೈ, ಕೆ.ಕೆ. ಪೈ ಅವರು ಸ್ಥಾಪಿಸಿ ಮುನ್ನಡೆಸಿದ್ದರು. ಗುಜರಾತ್‌ನ ಅಮೂಲ್ ಮಾದರಿಯಲ್ಲಿ 1974ರಲ್ಲಿ ಟಿ.ಎ. ಪೈ ಅವರು “ಕೆನರಾ ಮಿಲ್ಕ್ ಯೂನಿಯನ್’ (ಕೆಮುಲ್) ಎನ್ನುವ ಹಾಲು ಒಕ್ಕೂಟವನ್ನು ಮಣಿಪಾಲದಲ್ಲಿ ಪ್ರಾರಂಭಿಸಿದರು. ಬಳಿಕ ಸಂಸ್ಕರಣಾ ಘಟಕ ಸ್ಥಾಪನೆಯಾಯಿತು. ಆಗ ದಿನಕ್ಕೆ 3 ಸಾವಿರ ಲೀ. ಹಾಲು ಸಂಗ್ರಹಿಸಲಾಗುತ್ತಿತ್ತು. 1981ರಲ್ಲಿ ಟಿ.ಎ. ಪೈ ಅವರ ಕಾಲಾನಂತರ ಕೆ.ಕೆ. ಪೈ ಅವರು ಆಡಳಿತ ಚುಕ್ಕಾಣಿ ಹಿಡಿದರು. 1985ರಲ್ಲಿ ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಕೆಮುಲ್ ವೀಲೀನವಾಯಿತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.