ಜಾನುವಾರು ಆರೋಗ್ಯಕ್ಕೂ ಆಯುರ್ವೇದ ಔಷಧ ಶ್ಲಾಘನೀಯ
Team Udayavani, Dec 4, 2017, 12:35 PM IST
ಉಡುಪಿ: ಪಶುಗಳಿಗೂ ಆಯುರ್ವೇದ ಔಷಧ ಒದಗಿಸುವ ನಿಟ್ಟಿನಲ್ಲಿ “ಜಾನ್‌ವರ್’ ಪಶು ಆಯುರ್ವೇದ ಔಷಧಗಳನ್ನು ಮಾರುಕಟ್ಟೆಗೆ ಶನಿವಾರ ಬಿಡುಗಡೆ ಮಾಡಲಾಯಿತು.
ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಣಿಪಾಲ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಟಿ.ಗೌತಮ್ ಪೈ ಅವರು, ಆಯುರ್ವೇದದಲ್ಲೂ ಪ್ರಾಣಿಗಳಿಗೆ ಅನೇಕ ಔಷಧಗಳನ್ನು ಉಲ್ಲೇಖೀಸಲಾಗಿದೆ. ಇದನ್ನೇ ಆಧಾರವಾಗಿಟ್ಟು ಮುನಿಯಾಲು ಆಯುರ್ವೇದ ಸಂಸ್ಥೆ ಸಂಶೋಧನೆ ನಡೆಸಿ ದನ, ಬೆಕ್ಕು, ನಾಯಿ ಮೊದಲಾದ ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಹಾಗೂ ರೋಗ ವಾಸಿಗೆ ಸುರಕ್ಷಿತ ಆಯುರ್ವೇದ ಔಷಧ ಸಿದ್ಧಗೊಳಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ವೈವಿಧ್ಯಮಯ ಔಷಧಿಗಳು
ರಾಜ್ಯದ ಆಯುಷ್ ವಿಭಾಗದಿಂದ ಮಾನ್ಯತೆ ಪಡೆದಿರುವ ಈ ಔಷಧಗಳಲ್ಲಿ ಹಸುಗಳಲ್ಲಿ ಹಾಲು ಹೆಚ್ಚಿಸಲು ಮುನಿಲ್ಯಾಕ್ಟೊ ಗ್ರಾನ್ಯೂಲ್ಸ್, ಹಸಿವೆ, ಜೀರ್ಣಶಕ್ತಿ, ಬೆಳವಣಿಗೆ ಮತ್ತು ಯಕೃತ್ತಿನ ಕಾರ್ಯವನ್ನು ಉತ್ತಮಗೊಳಿಸಲು ಮುನಿಲಿವ್ ಗ್ರಾನ್ಯುಲ್ಸ್, ಉಳುಕು, ಗಂಟು ನೋವು ಶಮನಕ್ಕಾಗಿ ಮುನಿಪೈರಿನ್ ಗ್ರಾನ್ಯುಲ್ಸ್, ರೋಗ ನಿರೋಧಕ ಶಕ್ತಿ ಹೆಚ್ಚುಗೊಳಿಸುವುದರೊಂದಿಗೆ ಅಧಿಕ ಕೊಬ್ಬನ್ನು ಕರಗಿಸಿ ಲವಲವಿಕೆ ನೀಡುವ ಮುನಿಟೋನ್ ಗ್ರಾನ್ಯೂಲ್ಸ್,ಪ್ರಾಣಿಗಳ ವರ್ತನೆ ಯಲ್ಲಾಗುವ ಏರುಪೇರು, ಕೆರಳುವಿಕೆ, ಹಠಮಾರಿತನ ನಿಯಂತ್ರಿಸಿ, ಕಲಿಕಾ ಶಕ್ತಿಯನ್ನು ಕೂಡ ಹೆಚ್ಚುಗೊಳಿಸಲು ಸಹಾಯ ಮಾಡುವ ಮುನಿ ಪ್ರಜ್ಞಾ ಗ್ರಾನೂಲ್ಸ್, ಅತಿಸಾರ, ಆಮ ಶಂಕೆ, ಜಠರ ಹಾಗೂ ಕರುಳಿನ ಉರಿ ಯೂತಗಳನ್ನು ಶಮನಗೊಳಿಸುವ ಮುನಿ ಕಾಂಪೌಂಡ್ ಗ್ರಾನ್ಯೂಲ್ಸ್, ಗರ್ಭಕೋಶದ ಆರೋಗ್ಯ ಮತ್ತು ಸಮರ್ಪಕ ಅಂಡಾಣುಗಳ ಬಿಡುಗಡೆ ಗಾಗಿ ಮುನಿಫೆಮ್ ಗ್ರಾನ್ಯೂಲ್ಸ್, ದನಗಳ ಕೆಚ್ಚಲ ಬಾವಿಗೆ ಮುನಿಹೀಲ್ ತೈಲ ಇತ್ಯಾದಿಗಳನ್ನು ಸಂಸ್ಥೆ ಬಿಡುಗಡೆ ಮಾಡಿದೆ.
ಸಿಗಡಿ ಕೃಷಿಯಲ್ಲಿ ಮುನಿಲಿವ್ ಗ್ರಾನ್ಯೂಲ್ಸನ್ನು ಆಹಾರದೊಂದಿಗೆ ಮಿಶ್ರ ಮಾಡಿ ಬಳಸಿದಾಗ ಅವುಗಳಿಗೆ ಬರುವ ರೋಗಗಳೂ ಗಣನೀಯ ಪ್ರಮಾಣ ದಲ್ಲಿ ಕಡಿಮೆಯಾಗಿದ್ದಷ್ಟೇ ಅಲ್ಲದೇ ಅವುಗಳ ತೂಕದಲ್ಲೂ ಸಾಕಷ್ಟು ಹೆಚ್ಚಳ ಕಂಡು ಬಂದಿದೆ. ಗುಣಮಟ್ಟದ ಆಯು ರ್ವೇದ ಔಷಧಿಗಳ ತಯಾರಿಕೆಗೆ ಹೆಸರು ವಾಸಿಯಾದ ಮುನಿಯಾಲು ಆಯು ರ್ವೇದ ಸಂಸ್ಥೆಯಿಂದ ಹೊಸ ಬಗೆಯ ಈ ಪ್ರಯತ್ನ ಶ್ಲಾಘನೀಯ ಎಂದರು.
“ಜಾನ್‌ವರ್’ ಪಶು ಆಯುರ್ವೇದ ಔಷಧಗಳ ಉತ್ಪನ್ನಗಳು ಪ್ರಮುಖ ಔಷಧಿ ಅಂಗಡಿಗಳಲ್ಲಿ ಲಭ್ಯವಿದ್ದು, www.muniyalayurveda.inನ ಮೂಲಕ ಆನ್‌ಲೈನ್ ಮುಖಾಂತರ ನೇರವಾಗಿ ತರಿಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.