ದೊಡ್ಡ ಕಾಯಿಲೆಗಷ್ಟೇ ಬೇಕು ಆಯುಷ್ಮಾನ್ ಕಾರ್ಡ್
Team Udayavani, Oct 2, 2019, 5:57 AM IST
ಕರ್ನಾಟಕದಲ್ಲಿ ವಾಸಿಸುತ್ತಿರುವ ಎಲ್ಲರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಎಂಬ ಸಂಯೋಜಿತ ಯೋಜನೆ ಜಾರಿಯಲ್ಲಿದೆ. ಯೋಜನೆ ಜಾರಿಗೆ ಬಂದು 11 ತಿಂಗಳಾಗಿದ್ದು
ಇನ್ನೂ ಈ ಕುರಿತು ಗೊಂದಲ ನಿವಾರಣೆಯಾಗಿಲ್ಲ. ಜನರಿಗೆ ಪೂರ್ಣಪ್ರಮಾಣದಲ್ಲಿ ಆರೋಗ್ಯ ಕಾರ್ಡ್ ವಿತರಣೆಯಾಗಿಲ್ಲ. ಕೆಲವೆಡೆ ನಕಲಿ ಆರೋಗ್ಯ ಕಾರ್ಡ್ ವಿತರಿಸುವ ದಂಧೆ ಕೂಡ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗರೂಕತೆ ಕೂಡ ಅಗತ್ಯ. ಈ ಕುರಿತು “ಉದಯವಾಣಿ’ ಮಾಹಿತಿ ಸಂಚಯ ಇಲ್ಲಿದೆ.
ಕುಂದಾಪುರ: ಆಯುಷ್ಮಾನ್ ಯೋಜನೆ ಆಯಾ ರಾಜ್ಯಗಳ ಉಚಿತ ಚಿಕಿತ್ಸಾ ಯೋಜನೆ ಗಳೊಂದಿಗೆ ವಿಲೀನಗೊಂಡಿದೆ. ಕರ್ನಾಟಕ ದಲ್ಲಿ ಆರೋಗ್ಯ ಕರ್ನಾಟಕ ಯೋಜನೆಯ ಜತೆ ವಿಲೀನಗೊಂಡು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಾಗಿದೆ. ಪ್ರಾಥಮಿಕ, ಸಾಮಾನ್ಯ ದ್ವಿತೀಯ ಹಂತ, ಸಂಕೀರ್ಣ ದ್ವಿತೀಯ ಹಂತ, ತೃತೀಯ ಹಂತ, ತುರ್ತು ಹಂತದ ಚಿಕಿತ್ಸೆಗಳು ಎಂದು ವಿಂಗಡಿಸಲಾಗಿದ್ದು ಎಪಿಎಲ್, ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಚಿಕಿತ್ಸೆ ದೊರೆಯುತ್ತದೆ. ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್ ಕುಟುಂಬಗಳಿಗೆ, ಸಾಮಾನ್ಯ ವರ್ಗದ 19 ಲಕ್ಷ ಕುಟುಂಬಗಳಿಗೆ ಈ ಯೋಜನೆಯ ಲಾಭ ದೊರೆಯುತ್ತದೆ.
ಯಾವ ಚಿಕಿತ್ಸೆಗಳು
ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸೆಗಳು ತಾಲೂಕು ಸರಕಾರಿ ಆಸ್ಪತ್ರೆ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಆಯುಷ್ಮಾನ್ ಕಾರ್ಡ್ ಮೂಲಕ ಚಿಕಿತ್ಸೆ ಪಡೆಯಬಹುದು. ಈ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆ ಅನ್ವಯವಾಗುವುದಿಲ್ಲ. ಕ್ಲಿಷ್ಟಕರ ದ್ವಿತೀಯ ಹಂತದ 254 ಕಾಯಿಲೆಗಳಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಸಾಧ್ಯವಾಗದಿದ್ದರೆ ವೈದ್ಯರ ಶಿಫಾರಸಿನ ಮೇರೆಗೆ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಮಾರಣಾಂತಿಕವಾದ, 24 ಗಂಟೆಗಳ ಒಳಗೆ ಚಿಕಿತ್ಸೆ ಅಗತ್ಯವಿರುವ ತುರ್ತು ಹಂತದ ಚಿಕಿತ್ಸೆ ಬೇಕಿರುವ ಕಾಯಿಲೆಗಳಿಗೆ ರೋಗಿ ದಾಖಲಾದ ಬಳಿಕ ವೈದ್ಯರ ಪತ್ರ ನೀಡಿದರೂ ಸಾಕಾಗುತ್ತದೆ.
ಇದಿಷ್ಟು ಗಮನದಲ್ಲಿರಲಿ
ಆಯುಷ್ಮಾನ್ ಯೋಜನೆಯಲ್ಲಿ ನೋಂದಾ ಯಿತ ಖಾಸಗಿ ಆಸ್ಪತ್ರೆಗಳಲ್ಲಿ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತ ಚಿಕಿತ್ಸೆ ದೊರೆಯುತ್ತದೆ. ರೋಗಿಯನ್ನು ಮೊದಲು ಸರಕಾರಿ ಆಸ್ಪತ್ರೆಗೆ ಕರೆ ದೊಯ್ಯಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯಾ ಧುನಿಕ ಉಪಕರಣಗಳು ಇಲ್ಲದಿದ್ದರೆ ರೆಫರೆಲ್ ಲೆಟರ್ ಮತ್ತು ಆಯುಷ್ಮಾನ್ ಕಾರ್ಡ್‌ನೊಂದಿಗೆ ನೋಂದಾಯಿತ ಆಸ್ಪತ್ರೆಗೆ ಹೋಗಬೇಕು.
ಆಯುಷ್ಮಾನ್ ಕಾರ್ಡ್ ಮಾಡಿಸಿಲ್ಲವಾದರೆ ನೋಂದಾಯಿತ ಆಸ್ಪತ್ರೆಗೆ ಸರಕಾರಿ ವೈದ್ಯರು ಕೊಟ್ಟ ರೆಫೆರಲ್ ಲೆಟರ್, ಪಡಿತರ ಚೀಟಿ, ಮತ್ತು ಆಧಾರ್ ಕಾರ್ಡ್ ಕೊಟ್ಟರೆ ಸಾಕಾಗುತ್ತದೆ. ಯಾವುದೇ ಊರಿನಲ್ಲಿ ಇದ್ದರೂ ಆಯುಷ್ಮಾನ್ ಕಾರ್ಡ್ ಮಾಡಿಸಬಹುದು. ಆದರೆ ರೇಷನ್ ಕಾರ್ಡ್ ಜೆರಾಕ್ಸ್ , ಆಧಾರ್ ಕಾರ್ಡ್ ಜೆರಾಕ್ಸ್ , ರೇಷನ್ ಕಾರ್ಡಿನಲ್ಲಿ ಫೋಟೋ ಇಲ್ಲದೆ ಇದ್ದರೆ ಎರಡು ಫೋಟೋ ಇದ್ದರೆ ಸಾಕು. ಚಿಕಿತ್ಸಾ ವೆಚ್ಚದ ಜತೆ ನೀವು ನಿಮ್ಮೂರಿನಿಂದ ಆಸ್ಪತ್ರೆಗೆ ಹೋಗಿ ಬರುವ ವೆಚ್ಚವನ್ನೂ ಸರಕಾರ ಭರಿಸುತ್ತದೆ. ಬಸ್ ಟಿಕೆಟ್, ರೈಲ್ವೇ ಟಿಕೆಟ್‌ಗಳು ಇರಲಿ. ಬಿಪಿಎಲ್ ಕಾರ್ಡ್‌ನವರಿಗೆ 5 ಲಕ್ಷ ರೂ.ವರೆಗೆ ಉಚಿತ ಮತ್ತು ಎಪಿಎಲ್ ಕಾರ್ಡ್‌ನವರಿಗೆ 1.5 ಲಕ್ಷ ರೂ.ವರೆಗೆ ಉಚಿತ ಅಥವಾ 30 ಶೇ. ಚಿಕಿತ್ಸಾ ಮೊತ್ತ ದೊರೆಯುತ್ತದೆ.
ಖಾಸಗಿಯಲ್ಲಿ ಇಲ್ಲ
ಕುಂದಾಪುರ ಸರಕಾರಿ ಆಸ್ಪತ್ರೆಗೆ ಸೆ.25ರವರೆಗೆ 16.51 ಲಕ್ಷ ರೂ. ಈ ಯೋಜನೆಯಲ್ಲಿ ದೊರೆತಿದೆ. ಇದರಲ್ಲಿ ಶೇ.90ನ್ನು ಆಸ್ಪತ್ರೆಯ ಆರೋಗ್ಯ ರಕ್ಷಾ ನಿಧಿಗೆ ಬಳಸಿಕೊಳ್ಳಲಾಗುವುದು. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದ ಪ್ರಕರಣಗಳನ್ನು ಮಾತ್ರ ದಾಖಲಿಸಲು ಅವಕಾಶವಿರುವ ಕಾರಣ ಖಾಸಗಿ ಆಸ್ಪತ್ರೆಗಳು ನೋಂದಾಯಿಸಿದ್ದರೂ ಈವರೆಗೆ ಚಿಕಿತ್ಸೆ ನೀಡಿಲ್ಲ.
ಆಸ್ಪತ್ರೆಗಳು
ಕುಂದಾಪುರ, ಬೈಂದೂರು ತಾಲೂಕುಗಳಲ್ಲಿ ಆಯುಷ್ಮಾನ್ ಭಾರತ ಅಡಿಯಲ್ಲಿ ಚಿಕಿತ್ಸೆ ದೊರೆಯುವ ಆಸ್ಪತ್ರೆಗಳೆಂದರೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ, ಕುಂದಾಪುರದ ಸಮುದಾಯ ಆರೋಗ್ಯ ಕೇಂದ್ರ, ಚಿನ್ಮಯಿ ಆಸ್ಪತ್ರೆ, ಶ್ರೀಮಾತಾ ಆಸ್ಪತ್ರೆ, ಶ್ರೀ ಮಂಜುನಾಥ ಆಸ್ಪತ್ರೆ, ವಿವೇಕ ಆಸ್ಪತ್ರೆ ಮೂರುಕೈ, ಶ್ರೀದೇವಿ ಆಸ್ಪತ್ರೆ ವಡೇರಹೋಬಳಿ, ಡಾ| ಎನ್. ಆರ್. ಆಚಾರ್ಯ ಆಸ್ಪತ್ರೆ ಕೋಟೇಶ್ವರ. ಇವಿಷ್ಟು ಕಡೆ 169 ತುರ್ತು ಚಿಕಿತ್ಸೆಗಳಿಗೆ ಜಿಲ್ಲಾ ಆಸ್ಪತ್ರೆಯ ಅನುಮತಿ ಪತ್ರ ಇಲ್ಲದೆಯೇ ನೇರವಾಗಿ ಚಿಕಿತ್ಸೆ ಪಡೆಯಬಹುದು. ಆದರೆ ರೋಗಿಯು ದಾಖಲಾದ 24 ಗಂಟೆಯ ಒಳಗೆ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್‌ನ ಮೂಲಪ್ರತಿಯನ್ನು ಕಡ್ಡಾಯವಾಗಿ ನೋಂದಾ ಯಿತ ಆಸ್ಪತ್ರೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
ಇತರ ಎಲ್ಲ ಚಿಕಿತ್ಸೆಗಳಿಗೆ ಸರಕಾರಿ ಆಸ್ಪತ್ರೆಯ ಪತ್ರ ಕಡ್ಡಾಯ. ನೆರೆ ಪೀಡಿತರಾದ ಸಂದರ್ಭದಲ್ಲಿ ಆಧಾರ್ ಇತ್ಯಾದಿ ದಾಖಲೆ ನಾಶವಾಗಿದ್ದರೆ ಯಾವು ದಾದರೂ ಒಂದು ದಾಖಲೆಯನ್ನು ವೈದ್ಯರು ಪರಿಶೀಲಿಸಿ ಅನುಮೋದನಾ ಪತ್ರ ನೀಡುವಂತೆ ಇಲಾಖೆ ಆದೇಶಿಸಿದೆ.
ಸೇವಾಸಿಂಧು
20 ಕಡೆಗಳಲ್ಲಿ ಆರೋಗ್ಯ ಕಾರ್ಡ್ ಪಡೆಯಬಹುದು. ಕುಂದಾಪುರದ ರಕ್ತೇಶ್ವರೀ ದೇವಸ್ಥಾನ ರಸ್ತೆಯ ರೆವೆನ್ಯೂ ಕಾಂಪ್ಲೆಕ್ಸ್‌ನ ನವೀನ್ ಕುಮಾರ್, ಮುಖ್ಯರಸ್ತೆಯ ಯಡ್ತರೆ ಬಿಲ್ಡಿಂಗ್‌ನ ಸೈಬರ್ ಕ್ರೌನ್, ತಾ.ಪಂ. ಕಟ್ಟಡದ ಸಿಟಿ ಕಂಪ್ಯೂಟರ್ಸ್ ಆ್ಯಂಡ್ ಎಂಟರ್‌ಪ್ರೈಸಸ್, ಹೊಸ ಬಸ್‌ಸ್ಟಾಂಡ್‌ನ ಸದ್ಗುರು ಎಂಟರ್‌ಪ್ರೈಸಸ್, ಉಪ್ಪುಂದ ಮುಖ್ಯರಸ್ತೆಯ ಪ್ರವೀಣ್, ಬೈಂದೂರಿನ ಮುಖ್ಯರಸ್ತೆಯ ಶಾಂತಿ ಕಂಪ್ಯೂಟರ್, ಗೋಳಿಹೊಳೆ ಮೂರುಕೈಯ ಬಿ.ಎಲ್. ಕಂಪ್ಯೂಟರ್, ಯಡ್ತರೆಯ ಭರತ್ ಕಮ್ಯುನಿಕೇಶನ್ ಡಿಜಿಟಲ್ ಸರ್ವಿಸ್, ಶಿರೂರಿನ ಕರ್ನಾಟಕ ಕಂಪ್ಯೂಟರ್ ಎಜುಕೇಶನ್, ಕೊಲ್ಲೂರಿನ ಸ್ಫೂರ್ತಿ ಫೋಟೊ ಪಾಯಿಂಟ್ ಎದುರಿನ ಗಿರೀಶ್ ಶೆಟ್ಟಿ, ನಾವುಂದ ಮಾಂಗಲ್ಯ ಮಂಟಪ ಎದುರು ಬೆಳಕು ಎಂಟರ್‌ಪ್ರೈಸಸ್, ಉಪ್ಪುಂದದ ಕರ್ನಾಟಕ ಕಂಪ್ಯೂಟರ್, ತಲ್ಲೂರಿನ ತಲ್ಲೂರು ಮೊಬೈಲ್ಸ್, ಮುಳ್ಳಿಕಟ್ಟೆಯ ಶ್ರೀದುರ್ಗಾ ಎಂಟರ್‌ಪ್ರೈಸಸ್, ಆನಗಳ್ಳಿಯ ಶ್ರೇಯಾ ಕಮ್ಯುನಿಕೇಶನ್ ಸೆಂಟರ್, ಕೋಟೇಶ್ವರದ ಎಂಪಾಯರ್ ಕಂಪ್ಯೂಟರ್, ಬಸೂÅರಿನ ಸಾಫ್ಟ್ನೆಟ್ ಕಂಪ್ಯೂಟರ್ಸ್, ನಾಡಾ ದ ಶ್ರೀಗುರುಕೃಪಾ ಎಲೆಕ್ಟ್ರಾನಿಕ್ಸ್, ಆಲೂರಿನ ಶ್ರೀರಾಮ್ ಗಣೇಶ್ ಕಮ್ಯುನಿಕೇಶನ್ಸ್, ಶಂಕರನಾರಾಯಣದ ಸಿಂಡಿಕೇಟ್ ಬ್ಯಾಂಕ್ ಕಟ್ಟಡದ ಪ್ರಜೀತ್ ಕುಮಾರ್ ಶೆಟ್ಟಿ .
ದರ ನಿಗದಿ
ತಾಲೂಕು ಸರಕಾರಿ ಆಸ್ಪತ್ರೆ, ಸೇವಾಸಿಂಧು ಕೇಂದ್ರಗಳಲ್ಲಿ ಹಾಗೂ ಕರ್ನಾಟಕ ಒನ್ ಸೆಂಟರ್‌ಗಳಲ್ಲಿ 35 ರೂ. ನೀಡಿ ಸ್ಮಾರ್ಟ್ ಕಾರ್ಡ್, 10 ರೂ. ನೀಡಿ ಎ4 ಹಾಳೆಯಲ್ಲಿ ಆರೋಗ್ಯ ಕಾರ್ಡ್ ಪಡೆಯಬಹುದು. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ 10 ರೂ. ಮಾತ್ರ ದರ ವಿಧಿಸಲಾಗುತ್ತದೆ. ಇದಕ್ಕಿಂತ ಹೆಚ್ಚಿನ ದರ ಪಡೆದರೆ ಆಯುಷ್ಮಾನ್ ಭಾರತ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ (9448911425)ಗೆ ದೂರು ನೀಡಬಹುದು. ಹೆಚ್ಚು ದರ ಪಡೆದವರ ಅನುಮತಿಯೇ ರದ್ದಾಗಲಿದೆ.
ಉತ್ತಮ ಸ್ಪಂದನೆ ಇದೆ
ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ವರೆಗೆ 718 ಪ್ರಕರಣ ಗುರುತಿಸಿ 703 ಪ್ರಕರಣಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗಿದೆ. 15 ಪ್ರಕರಣಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿದೆ.
-ಡಾ| ರಾಬರ್ಟ್ ರೆಬೆಲ್ಲೋ,
ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ, ತಾಲೂಕು ಆಸ್ಪತ್ರೆ, ಕುಂದಾಪುರ
ಮಾಹಿತಿ ನೀಡಲಾಗುತ್ತಿದೆ
ಯೋಜನೆಯ ಯಶಸ್ವಿ ಅನುಷ್ಠಾನದ ದೃಷ್ಟಿಯಿಂದ ಮಾಹಿತಿ ನೀಡಲಾಗುತ್ತಿದೆ. ಈಚೆಗೆ ಸಂಘ- ಸಂಸ್ಥೆಗಳು, ಪಿಡಿಒಗಳಿಗೆ ಮಾಹಿತಿ ಕಾರ್ಯಾಗಾರ ಕೂಡ ನಡೆಸಲಾಗಿತ್ತು. ಸಮರ್ಪಕ ಅನುಷ್ಠಾನಕ್ಕಾಗಿ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ.
-ಡಾ| ನಾಗಭೂಷಣ್ ಉಡುಪ,
ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ
ಉಪ್ಪುಂದ: 7 ಸಾವಿರ ಕಾರ್ಡ್ ವಿತರಣೆ
ಉಪ್ಪುಂದ: ಬಿಜೂರು, ಉಪ್ಪುಂದ, ಕಂಚಿಕಾನ್, ಕೆರ್ಗಾಲು ಸುತ್ತಮುತ್ತಲಿನ ಗ್ರಾಮದ ಜನರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಪಡೆದು ಕೊಳ್ಳಲು ಉಪ್ಪುಂದ ಕಂಚಿಕಾನ್ ರಸ್ತೆಯಲ್ಲಿರುವ ಸೇವಾ ಸಿಂಧು ಕಾಮನ್ ಸರ್ವಿಸ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಾರ್ವಜನಿಕರು ಈ ಕಾರ್ಡ್ ಪಡೆಯಲು ಪ್ರತಿ ದಿನ ಸೇವಾ ಕೇಂದ್ರ ಮುಂದೆ ಮುಗಿಬೀಳುತ್ತಿದ್ದಾರೆ. ಈ ಕೇಂದ್ರದಲ್ಲಿ ಇದುವರೆಗೆ ಸುಮಾರು ಏಳು ಸಾವಿರ ಕಾರ್ಡ್‌ನ್ನು ವಿತರಿಸಲಾಗಿದೆ. ದಿನಕ್ಕೆ 100 ಅರ್ಜಿಗಳನ್ನು ನೀಡಲಾಗುತ್ತದೆ. ಮಾಹಿತಿ ಪಡೆದು ಅಪ್‌ಡೇಟ್ ಆದ 15 ನಿಮಿಷಗಳಲ್ಲಿ ಕಾರ್ಡ್ ನೀಡಲಾಗುತ್ತಿದೆ.
ಸರಕಾರಿ ಆಸ್ಪತ್ರೆಯಲ್ಲಿ ಹೊರತುಪಡಿಸಿ, ಇತರ ಸೇವಾ ಕೇಂದ್ರದಲ್ಲಿ ಪಡೆದ ಆಯುಷ್ಮಾನ್ ಕಾರ್ಡ್‌ಗೆ ಸರಕಾರಿ ಆಸ್ಪತ್ರೆಯ ಸೀಲ್ ಹಾಕಿಸಿ ಕೊಳ್ಳಬೇಕು. ಇಲ್ಲದಿದ್ದರೆ ಆ ಕಾರ್ಡ್‌ಗೆ ಮಾನ್ಯತೆ ಇಲ್ಲ ಎನ್ನುವ ಗೊಂದಲ ಸಾರ್ವಜನಿಕರಲ್ಲಿ ಇದೆ.ಆದರೆ ನೋಂದಾಯಿತ ಸೇವಾಕೇಂದ್ರದಲ್ಲಿ ಪಡೆದ ಕಾರ್ಡ್‌ಗೆ ಸರಕಾರಿ ಆಸ್ಪತ್ರೆಯ ಸೀಲ್ (ಮೊಹರು) ಅಗತ್ಯವಿರುವುದಿಲ್ಲ ಎಂದು ಇಲ್ಲಿನ ಮೇಲ್ವಿಚಾರಕ ಪ್ರವೀಣ ಸ್ಪಷ್ಟಪಡಿಸಿದ್ದಾರೆ.
ಒಬ್ಬರಿಗೆ ಸಿಗಲೇ ಇಲ್ಲ, ಇನ್ನೊಬ್ಬರು ಸಿಗದೇ ಬಿಡಲಿಲ್ಲ
ಬಸ್ರೂರು: ಬಸ್ರೂರು ನಿವಾಸಿ ನಾಗರಾಜ ಪೂಜಾರಿ ಅವರು ಆಧಾರ್ ಕಾರ್ಡ್ ಹೊಂದಿದ್ದಾರೆ. ಆದರೆ ಅವರ ಹೆಸರು ಪಡಿತರ ಚೀಟಿ ಯಲ್ಲಿ ಇರಲಿಲ್ಲ! ತತ್‌ಕ್ಷಣ ಅವರು ಬಸ್ರೂರು ಗ್ರಾ.ಪಂ.ಗೆ ತೆರಳಿದರು. ಪಂಚಾಯತ್‌ನವರು ಹೆಸರನ್ನು ಸೇರಿಸಲು ಆಗುವುದಿಲ್ಲ ತಾಲೂಕು ಕಚೇರಿಗೆ ಹೋಗಿ ಎಂದರು.
ನಾಗರಾಜ ಅವರು ಕುಂದಾಪುರ ತಾಲೂಕು ಕಚೆೇರಿಗೆ ಹೋಗುವ ಮುನ್ನ ಬ್ರೋಕರ್ ಬಳಿ ತೆರಳಿದರು. 500 ರೂ. ಕೊಟ್ಟರೆ ಮಾಡಿಸಿಕೊಡುವುದಾಗಿ ಹೇಳಿದರು. ಇದರಿಂದಾಗಿ ಇನ್ನೂ ಕಾರ್ಡ್ ಪಡೆಯಲು ಸಾಧ್ಯವಾಗಿಲ್ಲ. ಕೃಷಿ ಕೂಲಿ ಕಾರ್ಮಿಕ ಬಳ್ಕೂರು ಹಕ್ಲುಮನೆ ರಾಮ ಪೂಜಾರಿ ಸೈಬರ್ ಒಂದಕ್ಕೆ ತೆರಳಿ 60 ರೂ. ತೆತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಅನ್ನು ಪಡೆದರು.
ಮಾಹಿತಿ: ಲಕ್ಷ್ಮೀ ಮಚ್ಚಿನ, ಕೃಷ್ಣ ಬಿಜೂರು, ದಯಾನಂದ ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.