“ಬಜೆ ಅಣೆಕಟ್ಟು-ನೀರಿನ ಮಟ್ಟ ಇಳಿಕೆ: ಹೊಂದಾಣಿಕೆಯಲ್ಲಿ ನೀರು ಸರಬರಾಜು’
Team Udayavani, Apr 1, 2017, 4:20 PM IST
ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿ ಮತ್ತು ಸುತ್ತಮುತ್ತಲ ಕೆಲ ಪಂಚಾಯತ್‌ಗಳಿಗೆ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ಪ್ರಸಕ್ತ ವರ್ಷ ನೀರಿನ ಮಟ್ಟ ಇಳಿಕೆಯಾಗಿದೆ.
ಮಾ. 30ರಂದು ನೀರಿನ ಸಂಗ್ರಹ ಮಟ್ಟ 3.31 ಮೀ.ನಷ್ಟಿದ್ದು, ಈ ಸಂಗ್ರಹ ಮಟ್ಟ ಕಳೆದ ವರ್ಷ ಎ. 24ಕ್ಕೆ ಇದ್ದಂತಹದ್ದು. ಹಾಗಾಗಿ 25 ದಿನಗಳ ಅಂತರದ ನೀರನ್ನು ಹೊಂದಾಣಿಕೆ ಮಾಡಿಕೊಂಡು 2 ದಿನಕ್ಕೊಮ್ಮೆ ಸೀಮಿತ ಅವಧಿಯಲ್ಲಿ ನೀರು ಸರಬರಾಜು ಮಾಡಬೇಕಾಗಿರುವುದು ಅನಿವಾರ್ಯ ಎಂದು ನಗರಸಭೆಯ ಪರಿಸರ ಎಂಜಿನಿಯರ್ ರಾಘವೇಂದ್ರ ಅವರು ನಗರಸಭೆ ಸಾಮಾನ್ಯ ಸಭೆಗೆ ಮಾಹಿತಿ ನೀಡಿದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.
ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಬಾವಿ, ಬೋರ್‌ವೆಲ್‌ಗಳ ದುರಸ್ತಿಯಾಗಿಲ್ಲ. ಟ್ಯಾಂಕರ್ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಡಿಮೆ ಪ್ರಮಾಣದಲ್ಲಾದರೂ ದಿನನಿತ್ಯ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಯಶಪಾಲ್ ಎ. ಸುವರ್ಣ ಅವರು ಆಗ್ರಹಿಸಿದರು. 2 ದಿನಕ್ಕೊಮ್ಮೆ ನೀರು ಬಿಡುತ್ತೀರಿ ಎಂದು ಹೇಳುತ್ತೀರಲ್ಲಾ, ಮಠದಬೆಟ್ಟು ಮೊದಲಾದ ಕಡೆಗಳಲ್ಲಿ 10 ದಿನದಿಂದ ನೀರು ಬಂದಿಲ್ಲವೆಂದು ಹರೀಶ್‌ರಾಮ್ ಬನ್ನಂಜೆ ಆರೋಪಿಸಿದರು. ಸ್ಥಳೀಯ ಪಂಚಾಯತ್‌ಗಳಿಗೆ ನಗರಸಭೆ ನೀಡುತ್ತಿರುವ ನೀರನ್ನು ಮೊದಲು ನಿಲ್ಲಿಸಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದರು. ಕೆಲ ಅಭಿವೃದ್ಧಿ ಕಾರ್ಯಗಳಿಗೆ ನಗರಸಭೆಯೊಂದಿಗೆ ಪಂಚಾಯತ್‌ನವರು ಕೂಡ ಸಹಕರಿಸುತ್ತಿದ್ದಾರೆ. ಹಾಗಾಗಿ ಒಮ್ಮೆಗೆ ನೀರು ಸ್ಥಗಿತಗೊಳಿಸುವ ಮೊದಲು ಚಿಂತಿಸಬೇಕಿದೆ ಎಂದು ಪೌರಾಯುಕ್ತರು ಹೇಳಿದರು.
ಎತ್ತರದ ಪ್ರದೇಶಗಳ ಸಹಿತ ಕೆಲ ಕಡೆಗಳಿಗೆ ನೀರು ಹೋಗಲು ತಾಂತ್ರಿಕ ಸಮಸ್ಯೆ ಇದೆ ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿದರೂ, ಸದಸ್ಯರು ಒಪ್ಪಲಿಲ್ಲ. ಪ್ರತಿಕ್ರಿಯಿಸಿದ ಎಂಜಿನಿಯರ್ ಗಣೇಶ್, ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಳೆದ ಬಾರಿಗಿಂತ 1.17 ಮೀ. ಕಡಿಮೆ ಇದೆ. 355 ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಕನೆಕ್ಷನ್‌ಗೆ ಈ ಹಿಂದೆ ಬೇಡಿಕೆ ಇದ್ದಿರಲಿಲ್ಲ. ಪ್ರಸ್ತುತ 14 ಕನೆಕ್ಷನ್‌ವರೆಗೂ ಒಂದು ಅಪಾರ್ಟ್‌ಮೆಂಟ್‌ಗೆ ಕೊಡಲಾಗಿದೆ. ನೀರು ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ಸಮಸ್ಯೆಯಾಗಿದೆ ಎಂದರು.
ಮರಳಿಗಿಂತ ಕಲ್ಲು ಜಾಸ್ತಿ
ಪೌರಾಯುಕ್ತ ಡಿ. ಮಂಜುನಾಥಯ್ಯ ಅವರು ಮಾತನಾಡಿ, ಮಾಣೈ ಸೇತುವೆ ಬಳಿ ನೀರಿದೆ. ಅಲ್ಲಿಂದ ನೀರನ್ನು ತರಲು ಸ್ಥಳೀಯ ಪಂಚಾಯತ್ ವಿರೋಧಿಸುತ್ತಿದೆ. ಅಲ್ಲಿಂದ ನೀರು ತರಲು ಯತ್ನಿಸಲಾಗುತ್ತಿದೆ. ಡ್ರೆಜ್ಜಿಂಗ್ ಕುರಿತು ಮುಂಬಯಿಯ ಸಂಸ್ಥೆ ಹೈಡ್ರಲಾಜಿಕಲ್ ಸರ್ವೇ ನಡೆಸಿದೆ. ಮರಳಿಗಿಂತ ಕಲ್ಲು ಜಾಸ್ತಿ ಇದೆ ಎನ್ನುವ ವರದಿ ಬಂದಿದೆ ಎಂದರು.
ಸ್ವಂತ ನೀರಿನ ಮೂಲ ಬಳಸಿಕೊಳ್ಳಲಿ
ನಗರಸಭೆ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಅವರು ಮಾತನಾಡಿ, ಸ್ವಂತ ಬಾವಿ, ನಳ್ಳಿಗಳಿದ್ದರೆ ಅಂತಹವರು ನಗರಸಭೆ ನೀರನ್ನು ಅವಲಂಬಿಸಬಾರದು. ಆ ನೀರು ಇತರರ ಬಳಕೆಗೆ ಅನುವು ಮಾಡಿಕೊಡಲು ಸೂಚಿಸಿ ಎಂದರು. ಸ್ವಂತ ಮೂಲ ಹೆಚ್ಚಿಸಿಕೊಳ್ಳಲು ಆಯಾ ಪಂಚಾಯತ್ ಅಧ್ಯಕ್ಷರುಗಳಿಗೆ ಪತ್ರ ಬರೆಯಲಾಗಿದೆ ಎಂದು ಪೌರಾಯುಕ್ತರು ಹೇಳಿದರು.ಕ್ಲಾಕ್ ಟವರ್‌ನಲ್ಲಿ ಅಸ್ವಸ್ಥ ಮಹಿಳೆ ಠಿಕಾಣಿ, ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಅವ್ಯವಸ್ಥೆ, ವಾರ್ಡ್ ವಿಂಗಡನೆ, ಎಸ್ಸಿಎಸ್ಟಿ ಅನುದಾನ, ದಾರಿದೀಪಗಳ ದೂರು ಬಾಕಿ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಯಿತು.
ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಉಪಸ್ಥಿತರಿದ್ದರು. ವಿಪಕ್ಷ ನಾಯಕ ಡಾ| ಎಂ.ಆರ್. ಪೈ, ಶ್ಯಾಮ್‌ಪ್ರಸಾದ್ ಕುಡ್ವ, ವಸಂತಿ ಶೆಟ್ಟಿ, ನರಸಿಂಹ ನಾಯಕ್, ಸುಮಿತ್ರಾ ನಾಯಕ್, ಗೀತಾ ಶೇಟ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಸುಕೇಶ್ ಕುಂದರ್ ಹೆರ್ಗ, ನಾರಾಯಣ ಪಿ. ಕುಂದರ್, ಚಂದ್ರಕಾಂತ್, ಪ್ರಶಾಂತ್ ಅಮೀನ್, ಪ್ರಶಾಂತ್ ಭಟ್, ವಿಜಯ ಮಂಚಿ, ಹಾರ್ಮಿಸ್ ನೊರೊನ್ಹ, ಸೆಲಿನಾ ಕರ್ಕಡ, ಶಾಂತಾರಾಮ್ ಸಾಲ್ವಂಕರ್ ಮತ್ತಿತರ ಸದಸ್ಯರು ಮಾತನಾಡಿದರು.
ಹೊಸದಿಲ್ಲಿಯಿಂದ ಅಧಿಕಾರಿಗೆ ಕರೆ!
ಬೀಡಿನಗುಡ್ಡೆಯಲ್ಲಿ ಶ್ವಾನಗಳಿಂದ ಮನುಷ್ಯರ ಮೇಲೆ ದಾಳಿಯಾಗುತ್ತಿದೆ. ಬೀದಿ ಬದಿ ಶ್ವಾನಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮವಾಗಬೇಕು ಎಂದು ಸದಸ್ಯರು ಆಗ್ರಹಿಸಿದಾಗ ಪರಿಸರ ಎಂಜಿನಿಯರ್ ರಾಘವೇಂದ್ರ ಅವರು ಮಾತನಾಡಿ, ಪ್ರಾಣಿಗಳ ಪರವಾಗಿ ಮಣಿಪಾಲದಿಂದ ಯಾರೋ ಹೊಸದಿಲ್ಲಿಯ ಮನೇಕಾ ಗಾಂಧಿ ಅವರ ಕಚೇರಿಗೆ ದೂರು ಸಲ್ಲಿಸಿದ್ದು, ಅದರಂತೆ ಮನೇಕಾ ಗಾಂಧಿ ಅವರ ಕಚೇರಿಯಿಂದ ನನಗೆ ದೂರವಾಣಿ ಕರೆ ಬಂದಿದೆ. ಹೊಸದಿಲ್ಲಿ ನ್ಯಾಯಾಲಯದಲ್ಲಿ ಕೇಸು ದಾಖಲಾದರೆ ಸಮಸ್ಯೆಯಾಗುತ್ತದೆ ಎಂದರು.
ಮಾತಿನ ಗಲಾಟೆ, ಪ್ರತಿಭಟನೆ
ನೀರಿನ ಬಗ್ಗೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ, ಆಡಳಿತ ಪಕ್ಷದ ಜನಾರ್ದನ ಭಂಡಾರ್ಕರ್ ಮಾತನಾಡುತ್ತಿದ್ದಾಗ, ಯಶಪಾಲ್ ಸುವರ್ಣ ಅವರು “ಏ ಕುಲ್ಲುಯಾ’ (ಕನ್ನಡದಲ್ಲಿ=ಏ ಕುಳಿತುಕೊ) ಎಂದರು. ಇದಕ್ಕೆ ಆಕ್ಷೇಪಿಸಿದ ಸದಸ್ಯ ರಮೇಶ್ ಕಾಂಚನ್ ಮತ್ತು ಇತರ ಸದಸ್ಯರು ಅವಮಾನ ಮಾಡಿದ ನೀವು ಬಹಿರಂಗ ಕ್ಷಮೆ ಕೇಳಬೇಕು. ಅಗೌರವ ತೋರಿದ ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು. ಅಧ್ಯಕ್ಷರು ಉತ್ತರಿಸದೆ ಸದಸ್ಯರು ಈ ರೀತಿ ಹೇಳುತ್ತಿರುವುದನ್ನು ವಿರೋಧಿಸಿ ವಿಪಕ್ಷದ ಎಲ್ಲ ಸದಸ್ಯರು ಅಧ್ಯಕ್ಷರ ಪೀಠದೆದುರು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ನೀರಿನ
ವಿಶೇಷ ಸಭೆಗೆ ಬಾರದೆ ಇದೀಗ ಯಾಕೆ ಮಾತನಾಡುತ್ತಿದ್ದೀರಿ ಎಂದು ಯುವರಾಜ್ ಹೇಳಿದರು. ಬಳಿಕ ಅಧ್ಯಕ್ಷರು ಸಮಾಧಾನಿಸಿ ಸಭೆ ಮುಂದುವರಿಯಿತು. ಕೆಲ ಕಾಲ ಗದ್ದಲ, ಮಾತಿನ ಗಲಾಟೆ ಪ್ರತಿಧ್ವನಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.