ಬಿಜೆಪಿಯನ್ನು ಸೋಲಿಸುವುದೇ ನಮ್ಮ ಅಜೆಂಡಾ
Team Udayavani, Apr 2, 2018, 6:30 AM IST
ಉಡುಪಿ: ಜನಸಾಮಾನ್ಯರ ನೆಮ್ಮದಿಯ ಬದುಕಿಗಾಗಿ ಬಿಜೆಪಿಯನ್ನು ಬಿಟ್ಟು ಉಳಿದ ಯಾವುದೇ ಪಕ್ಷಗಳಿಗೆ ನಮ್ಮ ಬೆಂಬಲವಿದೆ. ರಾಜ್ಯ, ಜಿಲ್ಲೆಯ ಯಾವ ಭಾಗದಲ್ಲಿ ಯಾವ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎನ್ನುವುದನ್ನು ನಾವೇ ನಿರ್ಧರಿಸಿಕೊಳ್ಳುತ್ತೇವೆ. ಒಟ್ಟಾರೆಯಾಗಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಪ್ರಮುಖ ಅಜೆಂಡಾವಾಗಿದೆ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿರುವ ಬಾಲಕೃಷ್ಣ ಶೆಟ್ಟಿ ಅವರು ಹೇಳುತ್ತಾರೆ. ಕಳೆದ 34 ವರ್ಷಗಳಿಂದ ಸಿಪಿಐಎಂ ಕಾರ್ಯಕರ್ತ ರಾಗಿದ್ದು ಪ್ರಸ್ತುತ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿರುವ ಅವರೊಂದಿಗೆ “ಉದಯ ವಾಣಿ’ ನಡೆಸಿದ ಸಂವಾದದಲ್ಲಿ ಚುನಾವಣೆ ತಯಾರಿಯ ಬಗ್ಗೆ ಮಾತನಾಡಿದ್ದಾರೆ.
ಬಿಜೆಪಿ ದೇಶಕ್ಕೆ ಅಪಾಯಕಾರಿ
ಭಾರತೀಯ ಜನತಾ ಪಕ್ಷವು ದೇಶಕ್ಕೆ ಅಪಾಯಕಾರಿ. ಜನರಲ್ಲಿ ವೈಮನಸ್ಸು ಮೂಡಿಸಿ ಅವರನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸಿ ತಮ್ಮ ಕಾರ್ಯ ಸಾಧನೆಯನ್ನು ಮಾಡಿಕೊಳ್ಳುವುದು ಅವರ ಉದ್ದೇಶವಾಗಿದೆ. ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆಗಳನ್ನು ಅಧಿಕಾರ ಹಿಡಿದು ನಾಲ್ಕು ವರ್ಷ ಪೂರೈಸಿದರೂ ಈಡೇರಿಸಿಲ್ಲ. ಬಡವರಿಗೆ ಉದ್ಯೋಗ ಸಿಕ್ಕಿಲ್ಲ, ಜನರ ಆದಾಯದಲ್ಲಿ ಏರಿಕೆಯಾಗಿಲ್ಲ. ಸಾಮಾನ್ಯ ಜನರಿಗೆ ಈ ಸರಕಾರದಿಂದ ಯಾವುದೇ ಲಾಭವೇ ಇಲ್ಲ. ಆದರೆ ಉದ್ಯಮಪತಿಗಳ ಆಸ್ತಿಯ ಪ್ರಮಾಣ ಮಾತ್ರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ್ದರು; ಆದರೆ ಇಂದು 1.50 ಲಕ್ಷ ಉದ್ಯೋಗ ಮಾತ್ರ ಸೃಷ್ಟಿಯಾಗಿದೆ ಎಂದು ಸರಕಾರದ ಅಂಕಿ-ಅಂಶಗಳೇ ಹೇಳುತ್ತವೆ. ಅಂಗನವಾಡಿಗೆ ಬರುತ್ತಿದ್ದ ಐಸಿಡಿಎಸ್ ಅನುದಾನವನ್ನೇ ಕಡಿತ ಮಾಡಿದ್ದಾರೆ ಎಂದರು.
ಬಿಜೆಪಿ, ಕಾಂಗ್ರೆಸ್: ಒಂದೇ ನಾಣ್ಯದ 2 ಮುಖ
ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ 5 ವರ್ಷಗಳಲ್ಲಿ ಮೂವರು ಸಿಎಂ ಆಗುವಂತೆ ಮಾಡಿತ್ತು. ಅಧಿಕಾರದಲ್ಲಿ ಸ್ಥಿರತೆಯೇ ಇರಲಿಲ್ಲ. ಕೋಮುಗಲಭೆಗಳು ಜಾಸ್ತಿಯಾಗಿದ್ದವು. 2008ರ ಹಿಂದಿನ ಚುನಾವಣೆ ಸಂದರ್ಭ 25 ಕೆ.ಜಿ. ಅಕ್ಕಿ 2 ರೂ.ಗೆ ಕೊಡುತ್ತೇವೆ ಎನ್ನುವ ಆಶ್ವಾಸನೆ ನೀಡಿದ್ದರು. ಅಧಿಕಾರಕ್ಕೇರಿದ ಬಳಿಕ ಅದನ್ನು ಈಡೇರಿಸಿಲ್ಲ. ಕುಮ್ಕಿ ಜಮೀನು ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಅಕ್ರಮ-ಸಕ್ರಮ ಕಾನೂನು ಮಾಡಿಲ್ಲ. ಈಗಿನ ಕಾಂಗ್ರೆಸ್ ಸರಕಾರ ಉದ್ಯೋಗ, ವಸತಿ, ಆರೋಗ್ಯ, ಶಿಕ್ಷಣ ಮೊದಲಾದ ಮೂಲಸೌಲಭ್ಯಗಳಿಗೆ ಹೂಡಿಕೆಯನ್ನೇ ಸರಿಯಾಗಿ ಮಾಡುತ್ತಿಲ್ಲ. ಸರಕಾರಿ ಹೂಡಿಕೆ ಕಡಿಮೆಯಾಗುತ್ತಿದೆ. ಖಾಸಗಿ ರಂಗಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇದು ಅಪಾಯಕಾರಿ. ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ 2 ಮುಖವಿದ್ದಂತೆ ಎಂದು ಬಾಲಕೃಷ್ಣ ಶೆಟ್ಟಿ ಹೇಳುತ್ತಾರೆ.
ಜನಪರ ಹೋರಾಟವೇ ನಮಗೆ ಸ್ಫೂರ್ತಿ
ಹೋರಾಟವೇ ನಮಗೆ ಸ್ಫೂರ್ತಿಯಾಗಿದೆ. ಹೋರಾಟದ ಮುಖಾಂತರ ಜನಪರ ಕೆಲಸವನ್ನು ಸಿಪಿಐಎಂ ಮಾಡುತ್ತಲಿದೆ. ಪಕ್ಷದ ಅಂಗಸಂಸ್ಥೆ ಯಾಗಿರುವ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಾವು ಮಾಡಿರುವ ಹೋರಾಟಗಳಿಂದ ಜನರಿಗೆ ನ್ಯಾಯ ಸಿಕ್ಕಿದೆ. ಕರಾವಳಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಿಕೊಡುವಂತೆ ಬಹುಕಾಲದ ಹೋರಾಟ ಮಾಡಿದೆವು. ಈ ಹೋರಾಟದ ಫಲವಾಗಿ ಉಡುಪಿ, ಬೈಂದೂರು, ಕುಂದಾಪುರ ಭಾಗಗಳಲ್ಲಿ ಫಲಾನುಭವಿ ನಿವೇಶನ ರಹಿತರ ಪಟ್ಟಿ ತಯಾರಾಗಿದೆ. ಬಸ್ರೂರು, ಅಂಪಾರು, ಕಂಡ್ಲೂರು ಗ್ರಾ.ಪಂ.ಗಳಲ್ಲಿ ನಿವೇಶನ ಹಂಚಿಕೆಯೂ ಆಗಿದೆ. ಗಂಗೊಳ್ಳಿಯಲ್ಲಿ ತೀವ್ರತರ ಕಡಲ್ಕೊರೆತವಾದಾಗ ನಾವು ಮಾಡಿದ ಹೋರಾಟದಿಂದ ತಡೆಗೋಡೆ ನಿರ್ಮಾಣವಾಗಿದೆ. ಇದರಿಂದ ಈ ಭಾಗದ 40 ಕುಟುಂಬಗಳಿಗೆ ಅದರ ಪ್ರಯೋಜನವಾಗಿದೆ.
ರೈಲಿಗೆ ವೇಗ
ಕಾರವಾರ-ಬೆಂಗಳೂರು ರೈಲು ಆಮೆಗತಿಯ ಲ್ಲಿತ್ತು. ಪ್ರಯಾಣದ ಅವಧಿ ಕಡಿಮೆ ಮಾಡಬೇಕು ಎನ್ನುವ ಹೋರಾಟ ಮಾಡಿದ್ದೆವು. ಇದಕ್ಕಾಗಿ 14,000 ಸಹಿ ಸಂಗ್ರಹಿಸಿ ಹುಬ್ಬಳ್ಳಿಯಲ್ಲಿ ರೈಲ್ವೇ ಜಿಎಂಗೆ ಕೊಟ್ಟಿದ್ದೆವು. ಇದರ ಫಲವಾಗಿ ವಾರಕ್ಕೆ 4 ದಿನ ಹಗಲು ರೈಲು ಓಡಾಡುತ್ತಿದೆ. ರಾತ್ರಿ ರೈಲಿಗಾಗಿ ಹೋರಾಟ ಮುಂದುವರಿಯುತ್ತದೆ. ಬೈಂದೂರು ಕ್ಷೇತ್ರದಲ್ಲಿ ರತ್ನಾ ಕೊಠಾರಿ ನಿಗೂಢ ಸಾವಿಗೆ ಸರಕಾರ 3 ಲ.ರೂ. ಪರಿಹಾರ ಘೋಷಿಸಿತ್ತು. ಆದರೆ ವರ್ಷ ಕಳೆದರೂ ಕೊಟ್ಟಿರಲಿಲ್ಲ. ನಮ್ಮ ಹೋರಾಟಕ್ಕೆ ಮಣಿದು ಶಾಸಕರು ರತ್ನಾ ಕುಟುಂಬಕ್ಕೆ ಪರಿಹಾರ ಧನ ಹಸ್ತಾಂತರಿಸಿದ್ದಾರೆ ಎಂದವರು ಹೇಳಿದ್ದಾರೆ.
ಹೋರಾಟ, ಸಾಧನೆಯ ಆಧಾರದಲ್ಲಿ ಮತ
ನಮ್ಮ ಹೋರಾಟ, ಸಾಧನೆಯ ಆಧಾರದಲ್ಲಿ ಮತ ಸಿಗುತ್ತದೆ. ನಿವೇಶನ ರಹಿತರು, ಹಕ್ಕುಪತ್ರ ವಂಚಿತರು, ಅಕ್ರಮ-ಸಕ್ರಮಕ್ಕೆ ನಾವು ನಡೆಸಿರುವ ಹೋರಾಟವನ್ನು ಜನರಿಗೆ ವಿವರಿಸಿ ಮತ ಕೇಳುತ್ತೇವೆ. ಬೈಂದೂರು ಕ್ಷೇತ್ರ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ಗಂಗೊಳ್ಳಿ ಬಂದರು ನಿರೀಕ್ಷಿತ ಮಟ್ಟದ ಅಭಿವೃದ್ಧಿಯಾಗಿಲ್ಲ. ಬೈಂದೂರಿನಲ್ಲಿ ಹೇರಳವಾಗಿ ಅದಿರು ಸಿಗುವ ಕಾರಣ ಸರಕಾರಿ ಅಥವಾ ಸಹಕಾರಿ ಅಡಿಯಲ್ಲಿ ಅಲ್ಯೂಮಿನಿಯಂ ಉತ್ಪನ್ನಗಳ ಕಾರ್ಖಾನೆ ಯಾಗಬೇಕು. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಕಳೆದ ವರ್ಷ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಬ್ಬರ್‌ಗೆ ಬೆಂಬಲ ಬೆಲೆ
ಸಿಗಬೇಕು. ಕಾಡುತ್ಪನ್ನಗಳಿಗೆ ಬೇಡಿಕೆ ಹೆಚ್ಚಬೇಕು. ಲಾವಂಚದ ಎಣ್ಣೆ ಕಾರ್ಖಾನೆ ಬೈಂದೂರಿನಲ್ಲಾಗ ಬೇಕು. ಬೈಂದೂರಿನಲ್ಲಿ ನಮ್ಮ ಅಭ್ಯರ್ಥಿ ಗೆದ್ದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಕಾರ್ಮಿಕರು, ಕೃಷಿಕೂಲಿಕಾರರು ನಮ್ಮ ಪರವಾಗಿಯೇ ಇದ್ದಾರೆ. ಎನ್ನುವುದು ಬಾಲಕೃಷ್ಣ ಶೆಟ್ಟಿ ಅವರ ಮಾತು.
ಜಿಲ್ಲೆಗೊಬ್ಬರೇ ಅಭ್ಯರ್ಥಿ!
ಉಡುಪಿ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದರೂ ಸಿಪಿಐಎಂ ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಿಸಿರುವುದು ಬೈಂದೂರು ಕ್ಷೇತ್ರದಲ್ಲಿ ಮಾತ್ರ. ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಬೆಂಬಲ ನೀಡಬೇಕು ಎನ್ನುವುದನ್ನು ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಬಿಜೆಪಿ ಮುಕ್ತ ಮಾಡಿ ವೈಮನಸ್ಸಿಲ್ಲದೆ ಜನರು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡುವುದೇ ನಮ್ಮ ಗುರಿ.
– ಬಾಲಕೃಷ್ಣ ಶೆಟ್ಟಿ
- ಚೇತನ್ ಪಡುಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.