ವಿಶ್ವದಲ್ಲೇ ಬೃಹತ್ ದಾರು ರಚನೆಯ ಬಲಿಪೂಜಾ ವೇದಿ
Team Udayavani, Dec 1, 2017, 8:39 AM IST
ಮಣಿಪಾಲ: ಸ್ವರ್ಣೆಯ ತಟದಲ್ಲಿ ಹಸಿರನ್ನು ಹೊದ್ದು ಕಂಗೊಳಿಸುತ್ತಿರುವ ಪ್ರದೇಶವೇ ಪೆರಂಪಳ್ಳಿ. ಉಡುಪಿಯಿಂದ 5 ಕಿ.ಮೀ. ಹಾಗೂ ಮಣಿಪಾಲದಿಂದ ಕೇವಲ 2 ಕಿ.ಮೀ. ಅಂತರದಲ್ಲಿರುವ ಈ ಊರು, ಆಧುನಿಕತೆಯ ಸ್ಪರ್ಶದಿಂದ ಪ್ರಭಾವಿತವಾಗಿದ್ದರೂ ಪ್ರಕೃತಿ ಸಹಜ ಮೂಲ ಸ್ವರೂಪವನ್ನು ಬಿಡದೆ ಬೆಳೆಯುತ್ತಿದೆ. ಈ ಸುಂದರ ಪ್ರದೇಶದಲ್ಲಿ ಜಾಗತಿಕವಾಗಿ ಹಲವು ವೈಶಿಷ್ಟಗಳನ್ನು ಹೊಂದಿರುವ ಕ್ರೈಸ್ತ ಆರಾಧನಾ ಕೇಂದ್ರ ಫಾತಿಮಾ ಚರ್ಚ್ ನ. 23ರಂದು ಲೋಕಾರ್ಪಣೆಗೊಂಡಿದ್ದು ಭಕ್ತರನ್ನು, ಕಲಾಸಕ್ತರನ್ನು ಸೆಳೆಯುತ್ತಿದೆ. ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಸಾವಿರಾರು ಜನರ ಮನಗೆದ್ದ ಪೆರಂಪಳ್ಳಿ ಚರ್ಚ್, ಉಡುಪಿಯ ಪ್ರವಾಸಿ ಆಕರ್ಷಣೆಗೆ ಇನ್ನೊಂದು ಸೇರ್ಪಡೆಯಾಗಿದೆ.
ಅವಳಿ ಗೋಪುರ, “7’ರ ಆಕೃತಿ
ಚರ್ಚ್ ಕಟ್ಟಡವು 190 ಅಡಿ ಉದ್ದವಿದ್ದು 99 ಅಡಿ ಅಗಲವಿದೆ. ಚರ್ಚಿನ ಮುಂಭಾಗ 170 ಅಡಿ ಎತ್ತರ, 83 ಅಡಿ ಅಗಲವಿದ್ದು ಅವಳಿ ಗೋಪುರಗಳನ್ನು ಒಳಗೊಂಡಿದೆ. ಇದನ್ನು ಗೋಥಿಕ್ ಶೈಲಿಯಲ್ಲಿ ಬೈಬಲ್ ಅನುಸಾರ ವಿನ್ಯಾಸ ಮಾಡಲಾಗಿದ್ದು, ಇದರಲ್ಲಿ ಪಂಚ ದೇವದೂತರ ಕಲಾಕೃತಿ ಇದೆ. ಜತೆಗೆ ಮಾತೆ ಮೇರಿಗೆ ಸಂಬಂಧಿಸಿದ 3 ಘಟನೆಗಳನ್ನು ಚಿತ್ರಿಸಲಾಗಿದೆ. ಸಂತ ಪೇತ್ರ ಹಾಗೂ ಪೌಲರ ಮೂರ್ತಿಗಳಿವೆ. ಈ ಇಡೀ ಸಂರಚನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೈಬಲ್ ಪ್ರಣೀತ “7′ ಸಂಖ್ಯೆ ಗೋಚರಿಸುತ್ತದೆ.
ದ್ವಾರಗಳಲ್ಲಿ ಕುಸುರಿ ಕೈಚಳಕ
ಸಾಗುವಾನಿ ಮರದಿಂದ ಮಾಡಲ್ಪಟ್ಟ ಚರ್ಚಿನ ಪ್ರತಿ ದ್ವಾರದಲ್ಲೂ ಕುಸುರಿ ಕೈಚಳಕ ಗಮನ ಸೆಳೆಯುತ್ತದೆ. ಪ್ರಧಾನ ದ್ವಾರದಲ್ಲಿ ಏಸುವಿನ ಜೀವನದ ಘಟನೆಗಳನ್ನು ಕೆತ್ತಲಾಗಿದೆ. ಎಡ, ಬಲ ಪಾರ್ಶ್ವದ ದ್ವಾರಗಳಲ್ಲಿ ಹಳೆಯ ಒಡಂಬಡಿಕೆಯ ಘಟನೆಗಳನ್ನು ಹಾಗೂ ಅಪೋಸ್ತಲರ ಚಿತ್ರಗಳನ್ನು ಕೆತ್ತಲಾಗಿದೆ. ಪ್ರಧಾನ ದ್ವಾರದ ಮೇಲ್ಭಾಗದಲ್ಲಿ ಗಾಜಿನಲ್ಲಿ ದೇವರು ಪ್ರಕೃತಿಗೆ ರೂಪ ನೀಡಿದ ಕಲಾಕೃತಿ ಹಾಗೂ ಕೆಳಭಾಗದಲ್ಲಿ 7 ಪವಿತ್ರ ಸಂಸ್ಕಾರಗಳ ಸಂಕೇತಗಳನ್ನು ಬಿತ್ತರಿಸಲಾಗಿದೆ. ಒಳಭಾಗದಲ್ಲಿ ಪ್ರಧಾನ ದ್ವಾರದ ಮೇಲ್ಗಡೆ ಮೊಸಾಯಿಕ್‌ನಲ್ಲಿ “ಏಸು ಒಳ್ಳೆಯ ಕುರುಬರು’ ಕಲಾಕೃತಿಯನ್ನು ಮೂಡಿಸಲಾಗಿದೆ.
ಸ್ಪೆಕ್ಟ್ರಂ ಗ್ಲಾಸ್-ವರ್ಣ ಚಿತ್ತಾರ
ವರ್ಣಗಳ ಚಿತ್ತಾರವನ್ನು ಮೂಡಿಸುವ ಸ್ಪೆಕ್ಟ್ರಂ ಗ್ಲಾಸ್‌ಗಳು ಚರ್ಚ್‌ನ ಆಕರ್ಷಣೆಯಾಗಿವೆ. ಇಟೆಲಿ, ಅಮೆರಿಕ ಮತ್ತು ಬೆಲ್ಜಿಯಂನಿಂದ ಈ ಗ್ಲಾಸ್‌ಗಳನ್ನು ತರಿಸಿಕೊಳ್ಳಲಾಗಿದೆ. ಹೊರಗೆ ಬಿಸಿಲಿದ್ದಾಗ ಈ ಬಣ್ಣದ ಗಾಜುಗಳಿಂದ ಅದೇ ಬಣ್ಣದ ಬೆಳಕು ಬರುತ್ತದೆ. ರಾತ್ರಿ ವೇಳೆ ಒಳಗಿನಿಂದ ಬೆಳಕು ಹಾಯಿಸಿದಲ್ಲಿ ಚರ್ಚ್ ಹೊರಭಾಗದಲ್ಲಿ ವರ್ಣಗಳ ಮಾಯಾಲೋಕ ಅನಾವರಣಗೊಳ್ಳುತ್ತದೆ.
“ಫಾತಿಮಾ’ ನಂಟು
ಮೇರಿ ಮಾತೆ ದರುಶನ ನೀಡಿದ ಪೋರ್ಚುಗಲ್‌ನ ಫಾತಿಮಾದಿಂದ ಅವರ ಮೂರ್ತಿ ಹಾಗೂ ರೆಲಿಕ್ (ಪವಿತ್ರ ಕುರುಹು)ನ್ನು ತರಿಸಲಾಗಿದ್ದು ಚರ್ಚಿನಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದರಿಂದ ಚರ್ಚಿಗೂ ಫಾತಿಮಾಕ್ಕೂ ನಂಟು ಬೆಸೆದಿದೆ.
ಕಲೆಯಲ್ಲೂ ಸಾಮರಸ್ಯ
ಕಲೆಗೆ ಧರ್ಮದ ಗೊಡವೆ ಇಲ್ಲವಾದರೂ ಚರ್ಚ್‌ನಲ್ಲಿ ಸರ್ವ ಧರ್ಮದ ಸಮರಸವನ್ನು ಕಲೆಯ ಮೂಲಕವೇ ಸಾರುವ ಪ್ರಯತ್ನ ಮಾಡಲಾಗಿದೆ. ಮುಖ ಮಂಟಪದಲ್ಲಿ ಹಿಂದೂ ವಾಸ್ತು ಶೈಲಿಯ ಕಂಬಗಳು, ಇಸ್ಲಾಂ ಶೈಲಿಯ ಕಮಾನು-ಗೋಪುರಗಳು ಹಾಗೂ ಚರ್ಚ್ ನಿರ್ಮಾಣ ಶೈಲಿ ಸಮ್ಮಿಳಿತವಾಗಿವೆ.
ಭಕ್ತರು, ಕಲಾಸಕ್ತರ ದಂಡು
ಪೆರಂಪಳ್ಳಿ ಚರ್ಚ್‌ನ ಸೌಂದರ್ಯವನ್ನು ಸವಿಯಲು ಹಾಗೂ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯಲು ದಿನಕ್ಕೆ ಸಾವಿರಾರು ಮಂದಿ ಚರ್ಚ್‌ಗೆ ಬರುತ್ತಿದ್ದಾರೆ. ರಾತ್ರಿ 12 ಗಂಟೆಯ ವರೆಗೂ ಭಕ್ತರು, ಕಲಾಸಕ್ತರು ಭೇಟಿ ನೀಡುತ್ತಿರುತ್ತಾರೆ ಎನ್ನುತ್ತಾರೆ ಚರ್ಚ್ ಧರ್ಮಗುರು ವಂ| ರೋಮಿಯೋ ಲೂವಿಸ್. ವಾಸ್ತುಶಿಲ್ಪ ಅಧ್ಯಯನದ ವಿದ್ಯಾರ್ಥಿಗಳೂ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮುಖ್ಯವಾಗಿ 7 ಮತ್ತು 13ರ ಆಕೃತಿಯಲ್ಲಿ ಮೂಡಿಬಂದ ಸಂರಚನೆಗಳು ಹಾಗೂ ಗೋಥಿಕ್ ವಿನ್ಯಾಸಗಳು ಇವರ ಅಧ್ಯಯನ ವಿಷಯಗಳಾಗಿವೆ.
ಘಂಟೆಗೆ ಜಿಐಎಸ್ ಸ್ಯಾಟಲೈಟ್
ತಾಂತ್ರಿಕತೆ-ದೇಶಕ್ಕೇ ಮೊದಲು ಪೀಸಾ ಗೋಪುರವನ್ನು ಹೋಲುವ ಘಂಟೆ ಗೋಪುರ ಚರ್ಚ್‌ನ ಪ್ರಮುಖ ಆಕರ್ಷಣೆ. 7 ಅಂತಸ್ತು ಹೊಂದಿರುವ ಈ ಗೋಪುರ 135 ಅಡಿ ಎತ್ತರವಿದ್ದು, 178 ಮೆಟ್ಟಿಲುಗಳಿವೆ. ತುತ್ತತುದಿಯಲ್ಲಿ ಆಸ್ಟ್ರಿಯಾದಿಂದ ತಂದ 360 ಕೆ.ಜಿ. ತೂಕದ ಘಂಟೆ ಇದೆ. 7ನೇ ಅಂತಸ್ತಿನಿಂದ ಮಣಿಪಾಲದ ಹಾಗೂ ಸುತ್ತಲಿನ ವಿಹಂಗಮ ನೋಟ ಕಾಣಸಿಗುತ್ತದೆ. ಘಂಟೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವಂತಾಗಲು ಜಿಐಎಸ್ ಸ್ಯಾಟಲೈಟ್ ತಂತ್ರಜ್ಞಾನ ಆಸ್ಟ್ರಿಯಾದಿಂದಲೇ ತರಿಸಿಕೊಳ್ಳಲಾಗಿದೆ. ಕಾಂತೀಯ ತಣ್ತೀದಂತೆ ಕಾರ್ಯನಿರ್ವಹಿಸುವ ಈ ತಂತ್ರಜ್ಞಾನದ ಪರಿಕರಗಳಿಗೆ 4.5 ಲಕ್ಷ ರೂ. ವೆಚ್ಚವಾಗಿದೆ. ಘಂಟೆ ಹಾಗೂ ಗೋಪುರ ನಿರ್ಮಾಣಕ್ಕೆ ಸುಮಾರು 1.5 ಕೋಟಿ ರೂ. ಖರ್ಚಾಗಿದೆ. ಈ ತಂತ್ರಜ್ಞಾನವನ್ನು ಇನ್ನಷ್ಟೇ ಅಳವಡಿಸಬೇಕಿದ್ದು ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಆ ಬಳಿಕ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಘಂಟೆ ಗೋಪುರವಿರುವ ಭಾರತದ ಪ್ರಥಮ ಚರ್ಚ್ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಿದೇಶದ ಚರ್ಚ್‌ಗಳ ಘಂಟಾ ಗೋಪುರಗಳಲ್ಲಿ ಈ ತಂತ್ರಜ್ಞಾನವನ್ನು ಈಗಾಗಲೇ ಅಳವಡಿಸಲಾಗಿದೆ.
ವಿಶ್ವಮಾನ್ಯ ಪೂಜಾವೇದಿ
ವಿಶ್ವ ದಲ್ಲೇ ದೊಡ್ಡ ದಾರು ರಚನೆಯ ಪೂಜಾ ವೇದಿಯನ್ನು ಹೊಂದಿರುವ ಚರ್ಚ್ ಎಂಬ ಹೆಗ್ಗಳಿಕೆಗೆ ಪೆರಂಪಳ್ಳಿ ಚರ್ಚ್ ಪಾತ್ರವಾಗಿದೆ. ಪೂಜಾವೇದಿಯ ಮೇಲ್ಗಡೆ 70 ಅಡಿ ಎತ್ತರದಲ್ಲಿ ಗುಮ್ಮಟ ಇದೆ. ಪೂಜಾ ವೇದಿಯ ಕೇಂದ್ರಸ್ಥಾನದಲ್ಲಿ ಸ್ವರ್ಣ ವರ್ಣದಲ್ಲಿ ಪರಮ ಪ್ರಸಾದದ ಪೆಟ್ಟಿಗೆ ಕಂಗೊಳಿಸುತ್ತದೆ. ಇದರ ಮೇಲ್ಗಡೆ ಒಂದೇ ಮರದಿಂದ ಮಾಡಲ್ಪಟ್ಟ 20 ಅಡಿ ಎತ್ತರದ ಶಿಲುಬೆ ಇದೆ. ಇದು 2,000 ಕೆ.ಜಿ. ತೂಕದ್ದಾಗಿದೆ. ಶಿಲುಬೆಯಲ್ಲಿರುವ ಏಸುವಿನ ಮೂರ್ತಿಯೂ ಭಕ್ತರನ್ನು ಭಾವಪರವಶಗೊಳಿಸುತ್ತದೆ. ಪೂಜಾವೇದಿಯಲ್ಲಿರುವ ಎಲ್ಲ ಕಲಾಕೃತಿಗಳು ಸಾಗುವಾನಿ ಮರದಲ್ಲೇ ಕೆತ್ತಲ್ಪಟ್ಟಿವೆ. ಶಿಲುಬೆಯ ಇಕ್ಕಡೆಗಳಲ್ಲಿ ಏಸುವಿನ ಜನನ-ಜೀವನ-ಪುನರುತ್ಥಾನದ ದಾರು ಕಲಾಕೃತಿ ಗಳ ವೈಭವವಿದೆ. ಮಧ್ಯದಲ್ಲಿ ಶಿಲುಬೆಯಲ್ಲಿ ಮರಣಿಸಿದ ಏಸುವಿನ ಮೂರ್ತಿ, ಮೇಲ್ಗಡೆ ಬೈಬಲ್‌ನಲ್ಲಿ ಬರುವ ವಿವಿಧ ಕಲಾಕೃತಿಗಳನ್ನು ಮೂಡಿಸಲಾಗಿದೆ. ಇದರ ಮೇಲೆ ಸ್ವರ್ಗದ ರಚನೆಯನ್ನು ಮಾಡಲಾಗಿದ್ದು ಪಿತ-ಸುತ-ಪವಿತ್ರಾತ್ಮರೊಂದಿಗೆ ದೇವದೂತರು ಗಾಯನ ಮಾಡುವ ಚಿತ್ರಣ ಇದೆ. ಗುಮ್ಮಟದಲ್ಲಿ ಆಗಸದ ರಚನೆಯಿದ್ದು, ಇದಕ್ಕೆ ಎಫ್ಒಸಿ ಲೈಟ್‌ಗಳನ್ನು ಅಳವಡಿಸಲಾಗಿದ್ದು ಕತ್ತಲಲ್ಲಿ ನಕ್ಷತ್ರಗಳು ಮಿನುಗುವುದನ್ನು ಕಾಣಬಹುದಾಗಿದೆ. ಆಕರ್ಷಕ ಬಲಿಪೀಠ, ವಾಚನಾ ಸ್ಥಳದಲ್ಲಿ ಸುವಾರ್ತೆ ಬರೆದವರ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ಚರ್ಚ್‌ನಲ್ಲಿ ಸುಮಾರು 2 ಸಾವಿರ ಮಂದಿ ಕುಳಿತು ಪ್ರಾರ್ಥನೆ ಮಾಡಲು ಅವಕಾಶ ಇದೆ. ವೇದಿಯಲ್ಲಿ ಪ್ರಧಾನ ಧರ್ಮಗುರುಗಳ ಆಸನ ಸಹಿತ 25 ಆಸನಗಳನ್ನು ಇರಿಸಲಾಗಿದೆ.
ಧರ್ಮಗುರು ವಂ| ರೋಮಿಯೋ ಲೂಯಿಸ್ ಅವರೇ ಎಂಜಿನಿಯರ್, ಆರ್ಕಿಟೆಕ್ಟ್ !
2010ರಲ್ಲಿ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಗಿತ್ತು. ಚರ್ಚ್ ಪ್ರಧಾನ ಧರ್ಮಗುರು ವಂ| ರೋಮಿಯೋ ಲೂಯಿಸ್ ಅವರೇ ಚರ್ಚ್ ನಿರ್ಮಾಣದ ಎಂಜಿನಿಯರ್, ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸಿರುವುದು ವಿಶೇಷ. ಮಾದರಿ ಚರ್ಚನ್ನು ನಿರ್ಮಿಸುವ ಉದ್ದೇಶದಿಂದ ಪ್ರತಿಯೊಂದು ವಿಷಯದಲ್ಲೂ ಶ್ರದ್ಧೆ ವಹಿಸಿ, ಪುಸ್ತಕ, ಇಂಟರ್‌ನೆಟ್‌ನಲ್ಲಿ ಅಧ್ಯಯನ ನಡೆಸಿ ಅವರು ಕಾರ್ಯನಿರ್ವಹಿಸಿದ್ದಾರೆ. ಮರ, ಕಚ್ಚಾ ಸಾಮಗ್ರಿ, ಮೂರ್ತಿಗಳ ಖರೀದಿಯನ್ನೂ ಇವರೇ ನಿರ್ವಹಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಇವರು ಸ್ವತಃ ಸ್ಕೆಚ್‌ಗಳನ್ನು ರಚಿಸುತ್ತಿದ್ದರು ಎಂಬುದು ವಿಶೇಷ. ಈ ಸ್ಕೆಚ್‌ನಂತೆ ಮುಖಮಂಟಪವನ್ನು ಕೇರಳದ ಸೆಬಾಸ್ಟಿಯನ್ ಟಿ.ಆರ್. ಅವರು ನಿರ್ವಹಿಸಿದ್ದರೆ, ದಾರು ಕೆತ್ತನೆಯನ್ನು ಗ್ಲೆನೀಶಿಯಾ ಡಿಸೈನ್, ಬೆಳ್ಮಣ್ ಹಾಗೂ ಮೂರ್ತಿಗಳ ಕೆತ್ತನೆಯನ್ನು ಸೈಮನ್ ಆರ್ಟ್ ಮಂಗಳೂರು ಅವರು ನಿರ್ವಹಿಸಿದ್ದಾರೆ. ನಿರ್ಮಾಣದ ಒಟ್ಟು ವೆಚ್ಚ 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಪ್ರವಾಸಿ ಸ್ಥಳ ಪಟ್ಟಿಯಲ್ಲಿ ಸ್ಥಾನ: ಪ್ರಮೋದ್
ಆಕರ್ಷಕ ವಿನ್ಯಾಸ, ವೈಶಿಷ್ಟಗಳನ್ನು ಹೊಂದಿರುವ ಚರ್ಚನ್ನು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸಲು ಅಗತ್ಯ ನೆರವು ನೀಡುವುದಾಗಿ ಸಚಿವ ಪ್ರಮೋದ್ ಮಧ್ವರಾಜ್ ಭರವಸೆಯಿತ್ತಿದ್ದಾರೆ ಎಂದು ಧರ್ಮಗುರು ವಂ| ರೋಮಿಯೋ ತಿಳಿಸಿದ್ದಾರೆ. ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ದೊರೆತರೆ ಕ್ಷೇತ್ರದ ಸಂದರ್ಶಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.
ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ
ಚಿತ್ರ: ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!
Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
UGC Draft: ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರ: ಸಿಎಂ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.