ಬೆಂಗಳೂರು – ವಾಸ್ಕೋ ರೈಲು: ಇಂದು ದಿನಾಂಕ ನಿರ್ಣಯ?
Team Udayavani, Feb 28, 2020, 1:21 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಬೆಂಗಳೂರಿನಲ್ಲಿ ಗುರುವಾರ ನಡೆದ ಭಾರತೀಯ ರೈಲ್ವೇಯ ವೇಳಾಪಟ್ಟಿ ಸಮಿತಿ (ಐಆರ್‌ಟಿಸಿ) ಸಭೆಯಲ್ಲಿ ಬೆಂಗಳೂರು – ಉಡುಪಿ – ಕಾರವಾರ – ವಾಸ್ಕೋ ರೈಲು ಸಂಚಾರವನ್ನು ಆರಂಭಿಸುವ ಕುರಿತು ಮತ್ತು ಅದರ ಸಾಧಕ – ಬಾಧಕಗಳ ಬಗ್ಗೆ ಭಾರೀ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಶುಕ್ರವಾರವೂ ಸಭೆ ಮುಂದುವರಿ ಯಲಿದ್ದು, ವಾಸ್ಕೋ ರೈಲು ಓಡಾಟ ಆರಂಭದ ದಿನಾಂಕ ನಿರ್ಧಾರ ವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗಾಗಲೇ ರೈಲಿನ ಕೋಚ್‌ಗಳು ಬೆಂಗಳೂರಿಗೆ ಆಗಮಿಸಿದ್ದು, ವೇಳಾಪಟ್ಟಿ ಪ್ರಕಟವಾಗಿ 15 ದಿನಗಳಾಗಿವೆ. ಆದರೆ ರೈಲು ಸಂಚಾರ ಆರಂಭಕ್ಕೆ ಸಂಬಂಧಪಟ್ಟ ರೈಲ್ವೇ ಅಧಿಕಾರಿಗಳು, ಕೊಂಕಣ್ ರೈಲ್ವೇ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವ ಬಗ್ಗೆ ಕರಾವಳಿಯಾದ್ಯಂತ ಆಕ್ರೋಶ ಹೆಚ್ಚುತ್ತಿದೆ.
ಸಚಿವರಿಗೆ ಹೆಗ್ಡೆ ಕರೆ
ಇದೇ ವಿಚಾರವಾಗಿ ರೈಲ್ವೇ ಸಚಿವ ಸುರೇಶ್ ಅಂಗಡಿ ಅವರಿಗೆ ಗುರುವಾರ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಕೊಂಕಣ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು, ರೈಲ್ವೇ ವಿಳಂಬದಿಂದಾಗಿ ಕರಾವಳಿ ಭಾಗದಲ್ಲಿ ವ್ಯಕ್ತವಾಗುತ್ತಿರುವ ಜನರ ಆಕ್ರೋಶವನ್ನು ಸಚಿವರ ಗಮನಕ್ಕೆ ತಂದಿದ್ದಾರೆ. ಸಚಿವರು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಜಯಪ್ರಕಾಶ ಹೆಗ್ಡೆ ಉದಯವಾಣಿಗೆ ತಿಳಿಸಿದ್ದಾರೆ.
ಬೆಂಗಳೂರು – ವಾಸ್ಕೋ ರೈಲು ಸಂಚಾರ ರದ್ದಾಗಿದೆ ಎಂದು ಅಧಿಕೃತವಾಗಿ ಗೊತ್ತಿರುವವರು ನನಗೂ ಬಂದು ಹೇಳಲಿ. ನಾನು ಕರಾವಳಿ ಭಾಗದ ಜನತೆಯ ಅನುಕೂಲಕ್ಕಾಗಿ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿದ ಸುರೇಶ್ ಅಂಗಡಿಯವರು, ಹೊಸ ರೈಲು ನೀಡಿದ್ದಾರೆ. ಶೀಘ್ರ ಆರಂಭಿಸುವುದಾಗಿಯೂ ಭರವಸೆ ನೀಡಿದ್ದಾರೆ.
– ಶೋಭಾ ಕರಂದ್ಲಾಜೆ, ಸಂಸದರು