ಬೈರಂಪಳ್ಳಿ ಕೊಲೆ ಪ್ರಕರಣ: ಇನ್ನೋರ್ವನ ಬಂಧನ
Team Udayavani, Jul 25, 2019, 10:15 AM IST
ಹೆಬ್ರಿ: ಪೆರ್ಡೂರು ಸಮೀಪದ ಬೈರಂಪಳ್ಳಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಸಚಿನ್ ನಾಯ್ಕ (20) ಬಂಧಿತ. ಈತನ ಪತ್ತೆಗಾಗಿ ಬ್ರಹ್ಮಾವರ ಸಿಐ ಮತ್ತು ಹಿರಿಯಡಕ ಎಸ್‌ಐ ಬಲೆ ಬೀಸಿದ್ದರು. ಜು. 23ರಂದು ಸಂಜೆ ಈತ ಬೆಳ್ತಂಗಡಿ ತಾಲೂಕಿನ ವೇಣೂರು ಮೂರ್ಜೆ ಕ್ರಾಸ್ ಬಸ್ಸು ನಿಲ್ದಾಣದ ಬಳಿ ಇರುವ ಮಾಹಿತಿ ಆಧಾರದಲ್ಲಿ ಹಿರಿಯಡಕ ಎಸ್‌ಐ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈತನನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರಕ್ಷಕ್ ಎಂಬಾತನನ್ನು ಜು.14ರಂದು ಬಂಧಿಸಲಾಗಿದೆ.
ಕೊಲೆಗೆ ಹಣದ ವಿಷಯ ಕಾರಣ
ಸಚಿನ್ ನಾಯ್ಕ, ರಕ್ಷಕ್ ಮತ್ತು ಕೊಲೆಯಾದ ಪ್ರಶಾಂತ ಪೂಜಾರಿ ಸ್ನೇಹಿತರಾಗಿದ್ದರು. ಪ್ರಶಾಂತ ಪೂಜಾರಿ ಅವರು ಉಡುಪಿಯ ಸಹಕಾರಿ ಸಂಘದಿಂದ ರಕ್ಷಕ್ ಮತ್ತು ಸಚಿನ್‌ಗೆ 50 ಸಾ. ರೂ. ಸಾಲ ಕೊಡಿಸಿದ್ದರು. ಈ ಬಗ್ಗೆ ಕಮಿಶನ್ ಆಗಿ 5 ಸಾ. ರೂ. ಅನ್ನು ಇಬ್ಬರಿಂದಲೂ ಪಡೆದುಕೊಂಡಿದ್ದರು. ಜತೆಗೆ 20 ಸಾ. ರೂ. ಅನ್ನು ಪ್ರಶಾಂತ ಪೂಜಾರಿ ಸಾಲ ರೂಪದಲ್ಲೂ ಪಡೆದು ಕೊಂಡಿದ್ದರು. ಇದನ್ನು ವಾಪಸ್ ನೀಡದೆ ಸತಾಯಿಸಿದ್ದರು ಹಾಗೂ ಇದೇ ದ್ವೇಷದಿಂದ ಜು.11ರಂದು ಕೊಲೆ ನಡೆದಿತ್ತು ಎಂದು ಆರೋಪಿಸಲಾಗಿದೆ.