ಭಾಸ್ಕರ ಶೆಟ್ಟಿ ಕೊಲೆ: ಪತ್ನಿ, ಮಗ ಜೈಲುಪಾಲು ಕೋಟ್ಯಂತರ ರೂ. ಆಸ್ತಿಯದ್ದೇ ಪ್ರಶ್ನೆ
Team Udayavani, Jun 11, 2021, 8:00 AM IST
ಉಡುಪಿ: ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ಪತ್ನಿ, ಮಗ ಸೇರಿದಂತೆ ಮೂವರು ಜೀವಿತಾವಧಿ ಜೈಲುಶಿಕ್ಷೆಗೆ ಗುರಿಯಾಗಿರುವ ಹಿನೆ°ಲೆಯಲ್ಲಿ ಈಗ ಭಾಸ್ಕರ ಅವರ ಆಸ್ತಿಯ ವಾರಸುದಾರಿಕೆಯ ಕುರಿತು ಚರ್ಚೆಗಳು ಆರಂಭವಾಗಿವೆ.
ಹತ್ಯೆಗೆ 2 ವಾರಗಳ ಹಿಂದೆ ಅಂದರೆ 2016ರ ಜು. 15ರಂದು ಭಾಸ್ಕರ ಶೆಟ್ಟಿ ತನ್ನ ಆಸ್ತಿಗೆ ಸಂಬಂಧಿಸಿದಂತೆ ವೀಲುನಾಮೆ ಯನ್ನು ಬರೆಸಿದ್ದರು. ಈ ವೀಲೆನಾಮೆಯು ಕೊಲೆ ಪ್ರಕರಣದ ಆರೋಪಪಟ್ಟಿಯಲ್ಲಿ ಸಲ್ಲಿಸಿರುವ ಒಟ್ಟು 270 ದಾಖಲೆಗಳ ಪೈಕಿ 95ನೇ ದಾಖಲೆಯಾಗಿದ್ದು, ಇದನ್ನು ಉಡುಪಿ ಜಿಲ್ಲಾ ಮತ್ತು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿಸಿತ್ತು.
ವಿಲೇನಾಮೆಯಲ್ಲಿ ಏನಿದೆ? :
“ನನ್ನ ಪತ್ನಿ ಬೇರೆ ವ್ಯಕ್ತಿಯ ಜತೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರದಲ್ಲಿ ನನ್ನ ಪತ್ನಿ ಮತ್ತು ಮಗ ನನಗೆ ದೈಹಿಕ ಹಲ್ಲೆ ನಡೆಸಿದ್ದಾರೆ. ನಾನು ಆಗಸ್ಟ್‌ನಲ್ಲಿ ವಿದೇಶಕ್ಕೆ ಹೋಗಲಿದ್ದು, ಈ ಮಧ್ಯೆ ನನ್ನ ಜೀವಕ್ಕೆ ಪತ್ನಿ ಮತ್ತು ಮಗನಿಂದ ಅಪಾಯ ಇರುವ ಕಾರಣ ಹಾಗೂ ನನ್ನ ಪತ್ನಿಯು ಮಗನೊಂದಿಗೆ ಸೇರಿಕೊಂಡು ಆಸ್ತಿಗಳನ್ನು ಲಪಟಾಯಿಸುವ ಸಾಧ್ಯತೆ ಇರುವುದರಿಂದ ಆಸ್ತಿಗಳ ಬಗ್ಗೆ ಈ ವೀಲುನಾಮೆ ಬರೆದು ಇಡುತ್ತಿದ್ದೇನೆ’ ಎಂದು ಭಾಸ್ಕರ ಶೆಟ್ಟಿ ವೀಲುನಾಮೆಯಲ್ಲಿ ತಿಳಿಸಿದ್ದಾರೆ.
“ನನ್ನ ಜೀವಕ್ಕೆ ಅಪಾಯವಾಗಿ, ನಾನು ಅಕಾಲಿಕ ಮರಣ ಅಥವಾ ದುರ್ಮರಣ ಕ್ಕೀಡಾದಲ್ಲಿ ನನ್ನ ಎಲ್ಲ ಹಕ್ಕಿನ ಚರಾಚರ ಆಸ್ತಿಗಳು, ಅವುಗಳಲ್ಲಿರುವ ವಾಣಿಜ್ಯ ಕಟ್ಟಡಗಳಿಂದ ಬರುವ ಬಾಡಿಗೆ ಹಣ, ಬ್ಯಾಂಕ್ ಖಾತೆಯಲ್ಲಿರುವ ಹಣ, ನನ್ನ ಹೆಸರಿನಲ್ಲಿ ರುವ ವಿಮಾ ಪಾಲಿಸಿಗಳಿಂದ ಬರುವ ಹಣ, ನನ್ನ ತಾಯಿ ಗುಲಾಬಿ ಶೆಡ್ತಿಗೆ ಸೇರತಕ್ಕದ್ದು. ಹೊರತು ಅದರಲ್ಲಿ ಬೇರೆ ಯಾರಿಗೂ ಹಕ್ಕು ಹಾಗೂ ಸಂಬಂಧಗಳು ಇರಬಾರದು’. “ಒಂದು ವೇಳೆ ನನ್ನಗಿಂತ ಮೊದಲು ನನ್ನ ತಾಯಿಯವರು ನಿಧನ ಹೊಂದಿದಲ್ಲಿ ನನ್ನ ಕಾಲಾನಂತರ ನನ್ನ ಆಸ್ತಿಗಳಲ್ಲಿ ತಲಾ ಶೇ. 10ರಂತೆ ಮೂವರು ಸಹೋದರಿಯರಿಗೆ ಪಾಲು ಸಿಗಬೇಕು ಮತ್ತು ಉಳಿದ ಆಸ್ತಿಗಳನ್ನು ಸರಿಯಾಗಿ ಮೂರು ಭಾಗ ಮಾಡಿ ಮೂವರು ಸಹೋದರರು ಹಂಚಿಕೊಳ್ಳಬೇಕೇ ಹೊರತು ನನ್ನ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತನಿಗೆ ನನ್ನ ಯಾವುದೇ ಆಸ್ತಿಗಳಲ್ಲಿ ಹಕ್ಕು ಇರಕೂಡದು’ ಎಂದು ಉಲ್ಲೇಖೀಸಲಾಗಿದೆ.
ಭಾಸ್ಕರ ಶೆಟ್ಟಿ ಸ್ಥಿರಾಸ್ತಿಗಳು :
ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಶಿರಿಬೀಡುವಿನಲ್ಲಿರುವ ಸರ್ವೇ ನಂಬ್ರ 114ರಲ್ಲಿರುವ ಒಟ್ಟು 26 ಸೆಂಟ್ಸ್ ಸ್ಥಿರಾಸ್ತಿ ಹಾಗೂ ಅದರಲ್ಲಿರುವ ಶ್ರೀದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್ ಕಟ್ಟಡ ಮತ್ತು ಅದರಲ್ಲಿ ಇರುವ ಬಾಡಿಗೆ ಅಂಗಡಿ ಕೋಣೆಗಳು. ಅದೇ ರೀತಿ ನಗರದ ಮಸೀದಿ ರಸ್ತೆಯಲ್ಲಿರುವ ಸರ್ವೇ ನಂಬರ್ 120/14ರಲ್ಲಿನ 26ಸೆಂಟ್ಸ್ ಜಾಗದಲ್ಲಿರುವ ಶಂಕರ್ ಬಿಲ್ಡಿಂಗ್ ಹೆಸರಿನ ವಾಣಿಜ್ಯ ಕಟ್ಟಡ, ಅದರಲ್ಲಿರುವ ಅಂಗಡಿ ಕೋಣೆಗಳು. ನಗರದ ಬಾಳಿಗ ಟವರ್‌ನಲ್ಲಿರುವ ಸುಮಾರು 210 ಚದರ ಅಡಿ ವಿಸ್ತ್ರೀರ್ಣದ ವಾಣಿಜ್ಯ ಅಂಗಡಿ ಕೋಣೆ. ಶಿವಳ್ಳಿ ಗ್ರಾಮದ ಇಂದ್ರಾಳಿಯಲ್ಲಿರುವ 4,500 ಚದರಡಿ ವಿಸ್ತ್ರೀರ್ಣದ “ಈಶ್ವರಿ’ ಹೆಸರಿನ ವಾಸದ ಮನೆ.
ಜೀವಾವಧಿ-ಜೀವಿತಾವಧಿ ಒಂದೇ :
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಹಂತಕರ ಅರ್ಜಿಯನ್ನು ಪರಿಗಣಿಸುವಾಗ ಸುಪ್ರೀಂ ಕೋರ್ಟಿನ ಐವರು ನ್ಯಾಯಾಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು 2015ರಲ್ಲಿ ಜೀವಾವಧಿ ಶಿಕ್ಷೆಯ ಕುರಿತು ಅಂತಿಮ ತೀರ್ಪು ನೀಡಿದ್ದು, ಅದರಂತೆ ಜೀವಾವಧಿ ಶಿಕ್ಷೆ ಅಂದರೆ ಅಪರಾಧಿಗಳು ಜೀವನ ಪರ್ಯಂತ ಜೈಲಿನಲ್ಲಿ ಇರಬೇಕು ಎಂಬುದಾಗಿದೆ ಎಂದು ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಎಂ. ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.
14 ವರ್ಷ ಜೈಲಿನ ಅನಂತರ ಅಪರಾಧಿಯನ್ನು ಸನ್ನಡತೆ ಹಾಗೂ ಇತರ ಆಧಾರ ದಲ್ಲಿ ಬಿಡುಗಡೆಗೊಳಿಸುವ ಅಧಿಕಾರ ರಾಜ್ಯ ಸರಕಾರಗಳಿಗಿವೆ. ಆದರೆ 14 ವರ್ಷ ಶಿಕ್ಷೆಯ ಬಳಿಕ ಜೈಲಿನಿಂದ ಹೊರಬರುವುದು ನನ್ನ ಹಕ್ಕು ಎಂದು ಅಪರಾಧಿಗಳು ಭಾವಿಸಬಾರದು. ಅದೇ ರೀತಿ ಅಪರಾಧಿ ತನ್ನನ್ನು ಬಿಡುಗಡೆಗೊಳಿಸುವಂತೆ ನೇರವಾಗಿ ನ್ಯಾಯಾಲಯ ಅಥವಾ ಸರಕಾರದ ಮುಂದೆ ಅರ್ಜಿ ಕೂಡ ಸಲ್ಲಿಸುವಂತಿಲ್ಲ. ಇದರ ಪೂರ್ಣ ಅಧಿಕಾರ ಸರಕಾರದ ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ಅಪರಾಧಿಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ ಎಂದು ಅವರು ತಿಳಿಸಿದ್ದಾರೆ.
ಕಾನೂನು ಏನು ಹೇಳುತ್ತದೆ? :
ಹಿಂದೂ ಅನುಕ್ರಮ ಕಾಯಿದೆ 1956ರಂತೆ ಒಬ್ಬ ವ್ಯಕ್ತಿ ಕೊಲೆಗೀಡಾದಲ್ಲಿ ಆ ವ್ಯಕ್ತಿಯ ಕೊಲೆ ಮಾಡಿದವರು ಅಥವಾ ಕೊಲೆಗೆ ಪ್ರಚೋದನೆ ನೀಡಿದವರು ಮೃತನ ಆಸ್ತಿಗೆ ವಾರಸುದಾರರಾಗಿದ್ದರೆ ಆ ಆಸ್ತಿಯ ಹಕ್ಕಿನಿಂದ ಅವರು ಅನರ್ಹರಾಗಿರುತ್ತಾರೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಭಾಸ್ಕರ ಅವರ ಆಸ್ತಿಯ ಬಗ್ಗೆ ವೀಲುನಾಮೆ ಬರೆದ ನ್ಯಾಯವಾದಿ ವಿನಯ ಆಚಾರ್ಯ ಸಾಕ್ಷಿಯಾಗಿದ್ದು, ಅವರು ವಿಚಾರಣೆಯ ಸಂದರ್ಭ ವೀಲುನಾಮೆ ಬರೆಸಿರುವ ಬಗ್ಗೆ ಸಾಕ್ಷ್ಯ ನುಡಿದಿದ್ದರು. ಈ ಮಧ್ಯೆ ಭಾಸ್ಕರ ಆಸ್ತಿ ವಿಚಾರಕ್ಕೆ ಸಂಬಂಧಿಸಿ ರಾಜೇಶ್ವರಿ ಶೆಟ್ಟಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಸಂಬಂಧ ವಿಚಾರಣೆ ನಡೆಯುತ್ತಿದೆ.
ವಿದೇಶದಲ್ಲಿನ ಆಸ್ತಿ ಸಹೋದರರಿಗೆ :
ವಿದೇಶದಲ್ಲಿ 6 ಮಾಲ್‌ಗಳು ಇದ್ದು, ಸೋದರರಾದ ಸುರೇಂದ್ರ, ಸುರೇಶ ಮತ್ತು ಅಶೋಕ ಶೆಟ್ಟಿ ನನ್ನೊಂದಿಗೆ ವ್ಯವಹಾರ ನೋಡಿಕೊಳ್ಳುತ್ತಿದ್ದು, ನನ್ನ ಬಳಿಕ ಈ ಆಸ್ತಿಯ ಪೂರ್ಣ ಹಕ್ಕು ಈ ಮೂವರು ಸೋದರರಿಗೆ ಸೇರಿದ್ದು ಎಂದು ಭಾಸ್ಕರ ಶೆಟ್ಟಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.