ಡಿವೈಡರ್ ನಡುವೆ ದ್ವಿಚಕ್ರ ವಾಹನ ಚಾಲಕರ ಅಪಾಯಕಾರಿ ಸವಾರಿ
Team Udayavani, Apr 27, 2018, 6:05 AM IST
ಉಡುಪಿ: ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಹೋಗುತ್ತಿದ್ದರೆ, ಧುತ್ತೆಂದು ಡಿವೈಡರ್ ನಡುವೆ ತೂರುವ ದ್ವಿಚಕ್ರವಾಹನ ಸವಾರರು! ನಿಯಮ ಗಳನ್ನು ಉಲ್ಲಂಘಿಸಿ, ವಾಹನಸವಾರರು ಹೀಗೆ ತೂರುವುದರಿಂದ ಅದೆಷ್ಟೋ ಅಪಘಾತಗಳಾಗಿವೆ.
ರಾ.ಹೆ.66ರಲ್ಲಿ ಇಂತಹ ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರ ಅಪಘಾತಗಳು ಸಂಭವಿಸಿದರೆ, ಕೆಲವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರೆ. ಇಂತಹ ಅಪಘಾತದಿಂದ ಜೀವನಪೂರ್ತಿ ಸಮಸ್ಯೆ ಎದುರಿಸುತ್ತಿರುವ ಹಲವರಿದ್ದಾರೆ.
ಯಾರಧ್ದೋ ತಪ್ಪಿಗೆ ಇನ್ಯಾರೋ ಬಲಿ
ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ದಾಟಲು ಡಿವೈಡರ್ ಓಪನ್ ಇರುವಲ್ಲಿವರೆಗೆ ತೆರಳಬೇಕು. ಇದಕ್ಕೆ ಸಮಯ, ಪೆಟ್ರೋಲ್ ವ್ಯರ್ಥ ಎಂದು ಅಂದಾಜಿಸಿ ಸವಾರರು ಅಡ್ಡ ಮಾರ್ಗ ಹಿಡಿಯುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ಡಿವೈಡರ್‌ಗಳಲ್ಲಿ ಹುಲ್ಲು ಬೆಳೆದು ನಿಲ್ಲುವುದರಿಂದ ಮಧ್ಯೆ ದಾಟಿದರೆ ಎದುರಿಂದ ಬರುವ ವಾಹನಗಳ ಚಾಲಕರಿಗೆ ಕಾಣದೇ, ಗಲಿಬಿಲಿಗೊಂಡು ಅಪಘಾತಕ್ಕೆ ಕಾರಣವಾಗುತ್ತದೆ.
ಕೋಟದಲ್ಲಿ ಅಪಘಾತ ಹೆಚ್ಚು!
ಕೋಟದ ಗಿಳಿಯಾರು ಕ್ರಾಸ್ ಬಳಿ ಅಧಿಕ ಅಪಘಾತಗಳಾಗುತ್ತಿದೆ. ಇಲ್ಲಿ ಸ್ಥಳೀಯ ದೇಗುಲವೊಂದರ ರಥ ಸಂಚಾರ ಕ್ಕಾಗಿ ಡಿವೈಡರ್‌ನ ನೀರು ಹಾದಿಯನ್ನು ಅಗಲಗೊಳಿಸಲಾಗಿತ್ತು. ಇದರಿಂದ ದ್ವಿಚಕ್ರವಾಹನ ಸವಾರರು ನಿರ್ಲಕ್ಷ್ಯದಿಂದ ಏಕಾಏಕಿ ರಸ್ತೆಗೆ ನುಗ್ಗಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ.
ಎಲ್ಲೆಲ್ಲಿ ಅಡ್ಡ ದಾಟುತ್ತಾರೆ?
– ಸಂತೆಕಟ್ಟೆ- ಕಲ್ಯಾಣಪುರ ಸೇತುವೆ
– ಉಪ್ಪೂರು
– ಹೇರೂರು
– ಬ್ರಹ್ಮಾವರದ ದೂಪದಕಟ್ಟೆ
– ಸಾಸ್ತಾನದ ಹೆಬ್ಟಾರಬೆಟ್ಟು ರಸ್ತೆ
– ಪಾಂಡೇಶ್ವರ ಬಸ್ ನಿಲ್ದಾಣ
– ಸಾಲಿಗ್ರಾಮದ ಡಿವೈನ್ ಪಾರ್ಕ್
– ಚಿತ್ರಪಾಡಿ
– ಕೋಟ ಪೆಟ್ರೋಲ್ ಬಂಕ್
– ಗಿಳಿಯಾರು ಕ್ರಾಸ್
– ತೆಕ್ಕಟ್ಟೆ ಗ್ರೇಸ್
– ಅಡಿಟೋರಿಯಂ ಎದುರು
– ಕುಂಭಾಶಿ ಬಸ್ ನಿಲ್ದಾಣ
– ಕೋಟೇಶ್ವರ ಫ್ಲೈಓವರ್
ಕೂಡಲೇ ಕ್ರಮಕ್ಕೆ ಸೂಚನೆ
ಹೆದ್ದಾರಿ ನಿರ್ಮಾಣದ ವೇಳೆ ಗುತ್ತಿಗೆ ಸಂಸ್ಥೆ ನೀರು ಹರಿದು ಹೋಗುವ ಜಾಗವನ್ನು ತೆರೆದಿಡದೇ ಬೇರೆ ರೀತಿಯಲ್ಲಿ ರಚಿಸಿದ್ದರೆ, ಅಪಘಾತಗಳನ್ನು ತಡೆಗಟ್ಟಬಹುದಿತ್ತು. ಈ ಜಾಗವನ್ನು ದ್ವಿಚಕ್ರ ವಾಹನ ಸವಾರರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಹೆಜಮಾಡಿಯಿಂದ ಕುಂದಾಪುರದವರೆಗಿನ ಪೊಲೀಸ್ ಠಾಣೆ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ ಡಿವೈಡರ್ ಮಧ್ಯೆ ವಾಹನ ಸಂಚಾರ ನಡೆಸದಂತೆ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.
– ಲಕ್ಷ್ಮಣ ಬ. ನಿಂಬರ್ಗಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ರಾತ್ರಿ ವೇಳೆ ಸಮಸ್ಯೆ
ಈ ಸಮಸ್ಯೆ ಕುರಿತು ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಂದಿನ ಎಸ್.ಪಿ ಸಂಜೀವ್ ಪಾಟೀಲ್ ಅವರು ಡಿವೈಡರ್ ಮಧ್ಯೆ ಸಂಚಾರ ನಿರ್ಬಂಧಿಸಲು ಹೆದ್ದಾರಿ ಇಲಾಖೆಗೆ ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾತ್ರಿ ವೇಳೆ ಈ ರೀತಿಯ ಸಂಚಾರದಿಂದ ಅಪಾಯ ಹೆಚ್ಚು.
– ಪ್ರತಾಪ್ ಶೆಟ್ಟಿ, ಅಧ್ಯಕ್ಷರು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ
ಕೋಟ ಗಿಳಿಯಾರು ಕ್ರಾಸ್‌ನಲ್ಲಿ ಡಿವೈಡರ್ ದಾಟುತ್ತಿರುವ ದ್ವಿಚಕ್ರ ಸವಾರ.
– ಹರೀಶ್ ತುಂಗ ಸಾಸ್ತಾನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.