ಆಹಾರ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಜಿಲ್ಲಾಡಳಿತ ಹೆಜ್ಜೆ
Team Udayavani, Dec 26, 2018, 1:30 AM IST
ಉಡುಪಿ: ಇತರೆ ತ್ಯಾಜ್ಯಗಳ ಜತೆಗೆ ಆಹಾರ ತ್ಯಾಜ್ಯವನ್ನು ಕೂಡ ಸಮರ್ಪಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆ ಬಯೋಗ್ಯಾಸ್‌ಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುತ್ತಿರುವ ಜಿಲ್ಲಾಡಳಿತ ಇದೀಗ ಜಿಲ್ಲಾಧಿಕಾರಿ ಕಚೇರಿ ಕ್ಯಾಂಟೀನ್‌ನಲ್ಲಿಯೇ ಬಯೋಗ್ಯಾಸ್ ಕ್ಯಾಂಟೀನ್ ಪ್ರಯೋಗ ಆರಂಭಿಸಿದೆ. ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸಂಪನ್ಮೂಲವಾಗಿಸುವ ಎಸ್‌ಎಲ್‌ಆರ್‌ಎಂ ಘಟಕಗಳನ್ನು ಎಲ್ಲಾ ಗ್ರಾ.ಪಂ.ಗಳಲ್ಲಿ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿದ್ದು ಇದಕ್ಕೆ ಪೂರಕವಾಗಿ ಆಹಾರ ತ್ಯಾಜ್ಯದಿಂದ ಅಡುಗೆ ಅನಿಲ ಉತ್ಪಾದನೆ ಘಟಕಗಳನ್ನು ಕೂಡ ಪರಿಚಯಿಸಲಾಗುತ್ತಿದೆ. ಡಿಸಿ ಕ್ಯಾಂಟೀನ್‌ನಲ್ಲಿ 15 ದಿನಗಳ ಹಿಂದೆ ಅಳವಡಿಸಲಾಗಿದ್ದು ಪ್ರಾಯೋಗಿಕವಾಗಿ ಅಡುಗೆ ಅನಿಲ ಉತ್ಪಾದಿಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಘಟಕ ಇನ್ನಷ್ಟೇ ಕಾರ್ಯಾರಂಭವಾಗಬೇಕಿದೆ.
ತ್ಯಾಜ್ಯವೆಷ್ಟು?
ಸಾಮಾನ್ಯವಾಗಿ 1 ಕ್ಯೂಬಿಕ್ ಸಾಮರ್ಥ್ಯದ ಘಟಕಕ್ಕೆ 5 ಕೆಜಿ, 2 ಕ್ಯೂಬಿಕ್ ಸಾಮರ್ಥ್ಯದ ಘಟಕಕ್ಕೆ 10, 3 ಕ್ಯೂಬಿಕ್‌ನ ಘಟಕಕ್ಕೆ 15ರಿಂದ 20 ಕೆಜಿ ಆಹಾರ ತ್ಯಾಜ್ಯ ಬೇಕಾಗುತ್ತದೆ. ಆರಂಭಿಕ ಹಂತದಲ್ಲಿ ಕೆಲವು ದಿನ ಸೆಗಣಿ ಕೂಡ ಅವಶ್ಯವಿರುತ್ತದೆ. ಅನಂತರ ಹಸಿ ತ್ಯಾಜ್ಯ, ಆಹಾರ ತ್ಯಾಜ್ಯದಿಂದಲೇ ಘಟಕ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ಈ ಘಟಕ ಅಳವಡಿಸಿರುವ ವಿಜಯ ಇಂಡಸ್ಟ್ರೀಸ್‌ನ ಗೋಬರ್ ಗ್ಯಾಸ್ ವಿಭಾಗದ ಸೂಪರ್‌ವೈಸರ್ ಪ್ರವೀಣ್ ಅವರು.
ಗೋಬರ್ ಗ್ಯಾಸ್‌ನಂತೆಯೇ ಇದು ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ತ್ಯಾಜ್ಯ ಹಾಕಲು ತರಬೇತಿ ಕೂಡ ನೀಡುತ್ತೇವೆ. ಸಾಮಾನ್ಯ ಅಡುಗೆ ಅನಿಲದಷ್ಟೇ ಇದು ಶಾಖ ಹೊಂದಿರುತ್ತದೆ. ಘಟಕಕ್ಕೆ ಹಾಕಿದ ಆಹಾರ ತ್ಯಾಜ್ಯದಿಂದ ಸ್ವಲ್ಪ ಪ್ರಮಾಣದ ಉತ್ತಮ ಗೊಬ್ಬರ ಕೂಡ ದೊರೆಯುತ್ತದೆ. ಕೊಳೆತ ತರಕಾರಿಗಳನ್ನು ಕೂಡ ಇದಕ್ಕೆ ಬಳಸಬಹುದಾದರೂ ಇಲ್ಲಿ ಸ್ಥಾಪಿಸುತ್ತಿರುವ ಘಟಕದ ಮುಖ್ಯ ಉದ್ದೇಶ ಆಹಾರ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದಾಗಿದೆ. ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇದೇ ರೀತಿಯ 6 ಕ್ಯೂಬಿಕ್ ಸಾಮರ್ಥ್ಯದ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎನ್ನುತ್ತಾರೆ ಪ್ರವೀಣ್ ಅವರು.
ಡಿಸಿ ಕಚೇರಿ ಸಂಕೀರ್ಣದಲ್ಲೂ ಎಸ್‌ಎಲ್‌ಆರ್‌ಎಂ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೂ ಎಸ್‌ಎಲ್‌ಆರ್‌ಎಂ ಘಟಕವನ್ನು ಇತ್ತೀಚೆಗೆ ಆರಂಭಿಸಲಾಗಿದ್ದು ಇಲ್ಲಿ ಒಣಕಸಗಳ ವಿಂಗಡಣೆ, ವಿಲೇವಾರಿ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸ್ವತ್ಛತಾ ಕೆಲಸ ಮಾಡುವ ಸಿಬಂದಿಗೆ ಇದರ ತರಬೇತಿ ನೀಡಲಾಗಿದೆ.
ಮನೆಗಳಿಂದಲೂ ಬೇಡಿಕೆ
ದ.ಕ ಜಿಲ್ಲೆಯ ಹಾಸ್ಟೆಲ್‌ಗಳು ಸೇರಿದಂತೆ 150ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ, 50ರಷ್ಟು ಮನೆಗಳಲ್ಲಿ ಈ ರೀತಿಯ ಬಯೋಗ್ಯಾಸ್ ಘಟಕ ಅಳವಡಿಸಲಾಗಿದೆ. ಉಡುಪಿ ಜಿಲ್ಲೆಯ ಅಮಾಸೆಬೈಲಿನ ಹಾಸ್ಟೆಲ್‌ವೊಂದರಲ್ಲಿ ಅಳವಡಿಸಲಾಗಿದೆ. ಕಾರ್ಕಳ ಮತ್ತು ಕಾಪುವಿನ ಹಾಸ್ಟೆಲ್‌ಗಳಲ್ಲಿ ಅಳವಡಿಸುವ ಯೋಜನೆ ಇದೆ. ನಿಟ್ಟೆಯ ಖಾಸಗಿ ಶಾಲೆಯೊಂದು ಕೂಡ ಇಂತಹ ಘಟಕವನ್ನು ಸ್ಥಾಪಿಸಿಕೊಂಡಿದೆ. ಉಡುಪಿ ಭಾಗಕ್ಕಿಂತಲೂ ದ.ಕ ಜಿಲ್ಲೆಗಳಲ್ಲಿ ಗೋಬರ್ ಗ್ಯಾಸ್ ಮತ್ತು ಆಹಾರ ತ್ಯಾಜ್ಯದ ಬಯೋಗ್ಯಾಸ್‌ಗೆ ಬೇಡಿಕೆ ಹೆಚ್ಚು. ಇವು ಸಭಾಂಗಣಗಳಿಗೂ ಪ್ರಯೋಜನಕಾರಿ ಎಂಬುದಾಗಿ ಪ್ರವೀಣ್ ಅವರು ಹೇಳುತ್ತಾರೆ.
3 ಕ್ಯೂಬಿಕ್ ಸಾಮರ್ಥ್ಯ
ಕ್ಯಾಂಟೀನ್‌ನಲ್ಲಿ ಉತ್ಪಾದನೆ ಯಾಗುವ ಹಸಿ ಕಸ, ಮುಖ್ಯವಾಗಿ ಆಹಾರ ತ್ಯಾಜ್ಯವನ್ನು ಬಳಸುವ ಈ ಘಟಕ 3 ಕ್ಯೂಬಿಕ್ ಸಾಮರ್ಥ್ಯದ್ದು. ಇದರಿಂದ ದಿನಕ್ಕೆ ಮೂರರಿಂದ ಮೂರೂವರೆ ತಾಸು ಅಡುಗೆ ಅನಿಲ ಪಡೆಯ ಬಹುದಾಗಿದೆ. ಈಗ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
ಸೆಗಣಿಯೊಂದಿಗೂ ಬಳಕೆ ಸಾಧ್ಯ
ಆರಂಭಿಕ ದಿನಗಳನ್ನು ಹೊರತುಪಡಿಸಿದರೆ ಅನಂತರ ಆಹಾರ ತ್ಯಾಜ್ಯದಿಂದಲೇ ಅಡುಗೆ ಅನಿಲ ಉತ್ಪಾದನೆಯಾಗುತ್ತದೆ. ಮನೆಯಲ್ಲಿ 1 ದನ ಇರುವವರಿಗೆ ಸೆಗಣಿ ಮತ್ತು ಆಹಾರ ತ್ಯಾಜ್ಯ ಎರಡೂ ದೊರೆಯುವುದರಿಂದ ಅವರಿಗೆ ಇಂತಹ ಘಟಕ ಹೆಚ್ಚು ಪ್ರಯೋಜನಕಾರಿ. 4-5 ದನಗಳಿದ್ದರೆ ಗೋಬರ್ ಗ್ಯಾಸ್ ಘಟಕ ಉತ್ತಮ. ಈ ಘಟಕಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಹಾಯಧನವೂ ದೊರೆಯುತ್ತದೆ.
– ಪ್ರವೀಣ್, ಗೋಬರ್‌ಗ್ಯಾಸ್, ಬಯೋಗ್ಯಾಸ್ ಘಟಕ ತಂತ್ರಜ್ಞ
ಇತರರಿಗೆ ಪ್ರೇರಣೆ ಆಗಲಿ
ಪ್ರಾಯೋಗಿಕ ನೆಲೆಯಲ್ಲಿ ಡಿಸಿ ಕಚೇರಿ ಕ್ಯಾಂಟೀನ್‌ನಲ್ಲಿ ಅಳವಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಸ್‌ಎಲ್‌ಆರ್‌ಎಂ ಘಟಕಗಳ ಜತೆ ಬಯೋಗ್ಯಾಸ್ ಉತ್ಪಾದನೆ ಕೂಡ ನಡೆದರೆ ಹಸಿ, ಆಹಾರ ತ್ಯಾಜ್ಯದ ವಿಲೇವಾರಿಯೂ ಸಮರ್ಪಕವಾಗುತ್ತದೆ. ಇಲ್ಲಿರುವ ಘಟಕ ಇತರೆಡೆಗಳಲ್ಲಿಯೂ ಸ್ಥಾಪನೆಯಾಗಲು ಪ್ರೇರಣೆಯಾಗಲಿ.
– ಶ್ರೀನಿವಾಸ ರಾವ್, ಜಿ.ಪಂ. ಸಿಪಿಒ
— ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.