ರಾಷ್ಟ್ರಪತಿಯಾಗಿ ರಾಮ್‌ನಾಥ್ ಕೋವಿಂದ್ ಆಯ್ಕೆ ಬಿಜೆಪಿ ಸಂಭ್ರಮಾಚರಣೆ
Team Udayavani, Jul 21, 2017, 7:55 AM IST
ಉಡುಪಿ: ದೇಶದ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಮನಾಥ್ ಕೋವಿಂದ್ ಅವರ ವಿಜಯೋತ್ಸವವನ್ನು ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಎಸ್ಸಿ ಮೋರ್ಚಾದ ವತಿಯಿಂದ ಉಡುಪಿಯ ಕ್ಲಾಕ್ ಟವರ್ ಮುಂಭಾಗ ಗುರುವಾರ ಪಕ್ಷದ ನಾಯಕರು, ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಕಾಂಗ್ರೆಸ್ ಹಾಗೂ ಎಡಪಕ್ಷಗಳ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್ ಅವರನ್ನು ಸೋಲಿಸಿ ದೇಶದ ರಾಷ್ಟ್ರಪತಿಯಾಗಿರುವ ರಾಮನಾಥ್ ಕೋವಿಂದ್ ಅವರನ್ನು ಆ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಪಕ್ಷದ ಕೇಂದ್ರೀಯ ಮಂಡಳಿಗೆ ಇದೇ ವೇಳೆ ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಅಭಿನಂದನೆ ಸಲ್ಲಿಸಿದರು.
ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ್ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಪ್ರ.ಕಾರ್ಯದರ್ಶಿ ಸಂಧ್ಯಾ ರಮೇಶ್, ಎಸ್‌ಸಿ ಮೋರ್ಚಾದ ಹೇಮಂತ್ ಕುಮಾರ್, ನಾಯಕರಾದ ರಾಧಕೃಷ್ಣ ಮಲ್ಪೆ, ಸಂತೋಷ್ ಜತ್ತನ್, ಮಹಿಳಾ ಪ್ರಮುಖರಾದ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ತಾರಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.