ಕಾಂಗ್ರೆಸ್ – ಜೆಡಿಎಸ್ ಹಿಂದೂ ವಿರೋಧಿ ನೀತಿ
Team Udayavani, Jun 7, 2018, 2:45 AM IST
ಉಡುಪಿ: ರಾಜ್ಯದ ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿ ವರ್ತಿಸುತ್ತಿದ್ದರು. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಕೂಡ ಒಂದಾಗಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಉಡುಪಿ ಶಾಸಕ ಕೆ. ರಘಪತಿ ಭಟ್ ಹೇಳಿದ್ದಾರೆ. ಪೆರ್ಡೂರಿನ ಗೋಸಾಗಾಟ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಮತ್ತು ಸರಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಜೂ.6ರಂದು ಬಿಜೆಪಿ, ವಿಎಚ್‌ಪಿ ಮತ್ತು ಬಜರಂಗದಳ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗೋಸಾಗಾಟ ರಾಜಾರೋಷವಾಗಿ ನಡೆಯುತ್ತಿದೆ. ಕೆಲವು ಪೊಲೀಸರು ಗೋಕಳ್ಳರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಅಂತಹ ಪೊಲೀಸರ ಆತ್ಮಸ್ಥೈರ್ಯವನ್ನು ಕುಗ್ಗಿಸಬಾರದು. ಪೆರ್ಡೂರು ಘಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾತಿನ ಮೇಲೆ ಭರವಸೆ ಇಟ್ಟು ಕೆಲವು ಮಂದಿ ಅಮಾಯಕರು ಶರಣಾದರು. ಆದರೆ ಪೊಲೀಸರು ನೀಡಿದ ಭರವಸೆ ಉಳಿಸಿಕೊಳ್ಳಲಿಲ್ಲ ಎಂದು ಹೇಳಿದರು.
ಹಿಂದೂ ಯುವಕರ ಮೇಲೆ ಕಣ್ಣು: ಲಾಲಾಜಿ
ಪೆರ್ಡೂರಿನ ಜನತೆ ಈ ಹಿಂದಿನಿಂದಲೂ ಹಿಂದೂ ಸಂಘಟನೆ, ಬಿಜೆಪಿ ಪರ ಇದ್ದವರು. ಹಾಗಾಗಿ ಸರಕಾರ ಅವರ ಮೇಲೆ ಕಣ್ಣಿಟ್ಟಿದೆ. ಮೊನ್ನೆ ಸಾವನ್ನಪ್ಪಿದ ಹಸನಬ್ಬ ಈ ಹಿಂದೆಯೂ ಪೆರ್ಡೂರು ಭಾಗದಲ್ಲಿ ಹಲವು ಬಾರಿ ಗೋಕಳ್ಳತನ ಸಂದರ್ಭ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಅನಂತರ ದಮ್ಮಯ್ಯ ಹಾಕಿ ಹೋಗುತ್ತಿದ್ದರು. ಶೀರೂರು ಮಠದಿಂದಲೂ ದನಗಳನ್ನು ಕಳವು ಮಾಡಲಾಗಿತ್ತು. ಹಸನಬ್ಬ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ನಿರಪರಾಧಿ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡುತ್ತಿರುವುದನ್ನು ಸಹಿಸಲಾಗದು ಎಂದು ಹೇಳಿದರು. ವಿಹಿಂಪ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿ, ಅಮಾಯಕರ ಬಿಡುಗಡೆಗೆ 7 ದಿನಗಳ ಗಡುವು ನೀಡಲಾಗುವುದು. ಅನಂತರ ಎಲ್ಲ ಪ್ರಖಂಡಗಳಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದರು.
ಬಜರಂಗದಳ ಕರ್ನಾಟಕ ದಕ್ಷಿಣ ಸಂಚಾಲಕ ಸುನಿಲ್ ಕೆ.ಆರ್. ಮಾತನಾಡಿ ಈಗ ಗೋವುಗಳನ್ನು ಸಾಗಿಸಲು ಹೊಸ ವಾಹನಗಳನ್ನು ಬಳಸಲಾಗುತ್ತಿದೆ. ಪೆರ್ಡೂರಿನಲ್ಲಿ ಸ್ಕಾರ್ಪಿಯೋ ವಾಹನದಲ್ಲಿ 14 ಗೋವುಗಳನ್ನು ಸಾಗಿಸಲಾಗುತ್ತಿತ್ತು. ತಲವಾರು ಹಿಡಿದು ಹಟ್ಟಿಗಳಿಂದ ದನ ಕಳ್ಳತನ ಮಾಡಲಾಗುತ್ತಿದೆ. ಗೋವುಗಳ ಅಕ್ರಮ ಸಾಗಾಟವನ್ನು ತಡೆದರೆ ಇಂತಹ ಘಟನೆಗಳು ನಡೆಯಲು ಅವಕಾಶವಿರುವುದಿಲ್ಲ ಎಂದು ಹೇಳಿದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪಕ್ಷದ ಮುಖಂಡರಾದ ತಿಂಗಳ ವಿಕ್ರಮಾರ್ಜುನ ಹೆಗ್ಡೆ, ಉದಯ ಕುಮಾರ ಶೆಟ್ಟಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಸುಪ್ರಸಾದ ಶೆಟ್ಟಿ ಬೈಕಾಡಿ, ಪ್ರಭಾಕರ ಪೂಜಾರಿ, ಶ್ಯಾಮಲಾ ಕುಂದರ್, ಗುರ್ಮೆ ಸುರೇಶ್ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಕಾಡೂರು ಸುರೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ವಿಹಿಂಪ, ಬಜರಂಗದಳದ ಮುಖಂಡರು, ಜಿ.ಪಂ., ನಗರಸಭಾ ಸದಸ್ಯರು ಪಾಲ್ಗೊಂಡಿದ್ದರು. ಕುಯಿಲಾಡಿ ಸುರೇಶ್ ನಾಯಕ್ ಮತ್ತು ಕುತ್ಯಾರು ನವೀನ್ ಶೆಟ್ಟಿ ನಿರ್ವಹಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪೊಲೀಸ್ ಕಸ್ಟಡಿಯಲ್ಲಿ ಸಾವು
ಇದು ಹಿಂದೂ ಕಾರ್ಯಕರ್ತರಿಂದ ನಡೆದಿರುವ ಕೊಲೆ ಅಲ್ಲ. ಪೊಲೀಸ್ ಕಸ್ಟಡಿಯ ಸಾವು. ಹೃದಯಸಂಬಂಧಿ ಕಾಯಿಲೆ ಇದ್ದ ಹುಸೈನಬ್ಬ ಸಾವನ್ನಪ್ಪಲು ಪೊಲೀಸರ ಅಚಾತುರ್ಯ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೂ ಕಾಯದೆ ಕಾರ್ಯಕರ್ತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಚಿಕ್ಕಮಗಳೂರಿನಲ್ಲಿ ಕಬೀರ್ ಎಂಬ ಗೋಸಾಗಾಟ ಗುಂಡಿಗೆ ಬಲಿಯಾದಾಗ ಸರಕಾರ ಪರಿಹಾರ ನೀಡಿತು. ಆದರೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮೃತಪಟ್ಟಾಗ ಯಾವುದೇ ಪರಿಹಾರ ನೀಡಿಲ್ಲ. ಪೆರ್ಡೂರು ಘಟನೆಯಲ್ಲಿ ದನಗಳು ಕೂಡ ಸಾವನ್ನಪ್ಪಿವೆ. ಅವುಗಳ ಜೀವಕ್ಕೂ ಬೆಲೆ ಇಲ್ಲದಂತಾಗಿದೆ. ಅಮಾಯಕರ ಬಂಧನದ ಕುರಿತು ಈಗಾಗಲೇ ಎಸ್.ಪಿ.ಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ವಸ್ತುಸ್ಥಿತಿ ಮನವರಿಕೆ ಮಾಡಲಾಗಿದೆ. ಆದರೆ ಪೊಲೀಸರ ಮೇಲೆ ಮುಖ್ಯಮಂತ್ರಿಯವರೇ ನೇರ ಒತ್ತಡ ಹಾಕುತ್ತಿದ್ದಾರೆ. ಕರಾವಳಿಯಲ್ಲಿ ಮಳೆ ಬಂದು ಅಪಾರ ಹಾನಿಯಾದರೂ ಅದರ ಬಗ್ಗೆ ವಿಚಾರಿಸದ ಮುಖ್ಯಮಂತ್ರಿ ಈ ಘಟನೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಭಟ್ ಆರೋಪಿಸಿದರು.
ಗೋಕಳ್ಳರಿಗೆ ರಕ್ಷಣೆ
ಸರಕಾರ ಗೋಕಳ್ಳರನ್ನು ರಕ್ಷಿಸುತ್ತಿದೆ. ಪೊಲೀಸರು ಅಮಾಯಕರನ್ನು ಬಿಡುಗಡೆಗೊಳಿಸದಿದ್ದರೆ ಸದನದಲ್ಲಿಯೂ ಪ್ರತಿಭಟಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅಸಹಜ ಸಾವು ಕೊಲೆಯಾಯ್ತು
ಹೃದಯಾಘಾತದಿಂದ ಮೃತಪಟ್ಟ ಕಾರಣ ಪೊಲೀಸರು ಅಸಹಜ ಪ್ರಕರಣವೆಂದು ದಾಖಲಿಸಿಕೊಂಡಿದ್ದರು. ಆದರೆ ಅನಂತರ ಸರಕಾರದ ಒತ್ತಡದಿಂದಾಗಿ ಕೊಲೆ ಪ್ರಕರಣವೆಂದು ಬದಲಾಯಿಸಿದರು. ದನಗಳನ್ನು ನೋಡುವುದಕ್ಕಾಗಿ ಹೋಗಿದ್ದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಫೀಕ್ ಎಂಬ ಪೊಲೀಸ್ ಅಧಿಕಾರಿ ‘ಕೇಸರಿ ಶಾಲು ಹಾಕಿದರೆ ಒಳಗೆ ಹಾಕುತ್ತೇನೆ’ ಎಂದಿದ್ದಾರೆ. ಕೇಸರಿ ಶಾಂತಿ, ಅಭಿವೃದ್ಧಿಯ ಸಂಕೇತ. ಕೇಸರಿ ಹೆಸರಿನಲ್ಲಿ ತೊಂದರೆ ನೀಡಿದರೆ ಅದಕ್ಕೆ ಸೂಕ್ತ ಉತ್ತರ ನೀಡಲಾಗುವುದು. ಮರಣೋತ್ತರ ವರದಿ ಬಂದ ಕೂಡಲೇ ಪೊಲೀಸರು ಬಿ ರಿಪೋರ್ಟ್ ಹಾಕಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.