ಬ್ರಹ್ಮಾವರ ತಾಲೂಕು: ಹೋರಾಟ, ಅರ್ಹತೆಗೆ ಸಂದ ಗೌರವ
Team Udayavani, Mar 16, 2017, 4:32 PM IST
ಬ್ರಹ್ಮಾವರ: ನಿರಂತರ ಹೋರಾಟದ ಫಲವಾಗಿ ಬ್ರಹ್ಮಾವರಕ್ಕೆ ಅರ್ಹವಾಗಿಯೇ ತಾಲೂಕು ಮಾನ್ಯತೆ ದೊರಕಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬುಧವಾರ ಮಂಡಿಸಿದ ಬಜೆಟ್‌ನಲ್ಲಿ ಬ್ರಹ್ಮಾವರವು ಸೇರಿದಂತೆ 49 ಹೊಸ ತಾಲೂಕುಗಳ ಘೋಷಣೆಯಾಗಿದೆ.
ಸುಮಾರು 40 ವರ್ಷಗಳಿಂದ ಬ್ರಹ್ಮಾವರ ತಾಲೂಕಿಗಾಗಿ ಬೇಡಿಕೆ ಇದ್ದು, ಕಳೆದ 10 ವರ್ಷಗಳಿಂದ ಇದಕ್ಕಾಗಿ ನಿರಂತರ ಮನವಿ, ಹೋರಾಟಗಳು ನಡೆದಿವೆ.
2013ರ ಫೆ.8ರಂದು ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿದ ಬಜೆಟ್‌ನಲ್ಲಿ ಬ್ರಹ್ಮಾವರ ಸೇರಿದಂತೆ ರಾಜ್ಯದಲ್ಲಿ 43 ಹೊಸ ತಾಲೂಕುಗಳನ್ನು ಘೋಷಿಸಲಾಗಿತ್ತು. ಆದರೆ ಅನುಷ್ಠಾನವಾಗದೆ 4 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಮತ್ತೆ ಹೊಸ 6 ತಾಲೂಕು ಗಳೊಂದಿಗೆ ಒಟ್ಟು 49 ತಾಲೂಕುಗಳು ಘೋಷಣೆಗೊಂಡಿದ್ದು, ಅನುಷ್ಠಾನದೊಂದಿಗೆ ಅಭಿವೃದ್ಧಿಯ ನಿರೀಕ್ಷೆ ಹುಟ್ಟಿಸಿದೆ.
ನಿರಂತರ ಹೋರಾಟ
ಬ್ರಹ್ಮಾವರ ತಾಲೂಕು ರಚನೆಯಲ್ಲಿ ನಿರಂತರ ಹೋರಾಟದ ಇತಿಹಾಸವಿದೆ. 1975ರ ವಾಸುದೇವ ರಾವ್ ಸಮಿತಿ, 1985-86ರಲ್ಲಿ ಗದ್ದಿಗೌಡರ್, ಹುಂಡೇಕರ್ ಸಮಿತಿಯಲ್ಲಿ ಬ್ರಹ್ಮಾವರ ತಾಲೂಕಿಗೆ ಶಿಫಾರಸು ಮಾಡಲಾಗಿತ್ತು. ಇದರ ಪರಿಣಾಮ 2003ರ ಸೆ.8ರಂದು ಬ್ರಹ್ಮಾವರಕ್ಕೆ ವಿಶೇಷ ತಹಶೀಲ್ದಾರ್ ನೇಮಕವಾಗಿತ್ತು. ಆದರೆ 2008ರ ಎಂ.ಬಿ. ಪ್ರಕಾಶ್ ಸಮಿತಿ ಮಾತ್ರ ಬ್ರಹ್ಮಾವರವನ್ನು ಕೈಬಿಟ್ಟಿತ್ತು.
ತಾಲೂಕಿಗೆ ಯೋಗ್ಯ ಪ್ರದೇಶ
ಬ್ರಹ್ಮಾವರವು ತಾಲೂಕು ರಚನೆಗೆ ಯೋಗ್ಯ ಹಾಗೂ ಅರ್ಹವಾದ ಪ್ರದೇಶ. ತಾಲೂಕಿಗೆ ಪೂರಕವಾಗಿ ವಿಶೇಷ ತಹಶೀಲ್ದಾರ್ ಕಚೇರಿ, ಉಪನೊಂದಾವಣಾಧಿಕಾರಿ ಕಚೇರಿ, ಖಜಾನಾಧಿಕಾರಿ ಕಚೇರಿ, ಪೊಲೀಸ್ ವೃತ್ತ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಿಶು ಅಭಿವೃದ್ದಿ ಮತ್ತು ಮಹಿಳಾ ಕಲ್ಯಾಣ ಇಲಾಖೆ, ಅರಣ್ಯ, ಕೃಷಿ, ಮೆಸ್ಕಾಂ ಕಚೇರಿಗಳನ್ನು ಹೊಂದಿದೆ. ಜೊತೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ, ಪ್ರವಾಸೀ ಬಂಗಲೆ, ಸಮುದಾಯ ಆರೋಗ್ಯ ಕೇಂದ್ರ ಇತ್ಯಾದಿ ವ್ಯವಸ್ಥೆಗಳನ್ನು ಹೊಂದಿದೆ.
ಅಭಿವೃದ್ದಿಗೆ ಅತ್ಯಗತ್ಯ
ಬೆಳೆಯುತ್ತಿರುವ ಬ್ರಹ್ಮಾವರಕ್ಕೆ ತಾಲೂಕು ರಚನೆ ಹಾಗೂ ಪುರಸಭೆ ರಚನೆ ಅತ್ಯಗತ್ಯವಾಗಿದೆ. ಬ್ರಹ್ಮಾವರವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಕೈಗಾರಿಕಾ ಘಟಕಗಳು, ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ಹತ್ತು ಹಲವು ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯಗಳನ್ನು ಒಳಗೊಂಡ ಕೇಂದ್ರ ಪ್ರದೇಶವಾಗಿದೆ.
ಮುಖ್ಯವಾಗಿ ಬ್ರಹ್ಮಾವರವನ್ನು ಕಾಡುತ್ತಿರುವುದು ತ್ಯಾಜ್ಯ ವಿಲೇವಾರಿ ಹಾಗೂ ಒಳಚರಂಡಿ ವ್ಯವಸ್ಥೆ. ತಾಲೂಕು ರಚನೆಯಿಂದ ಅನುದಾನ ಹೆಚ್ಚಳಗೊಂಡು ಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ಸಂಪರ್ಕ ರಸ್ತೆಗಳ ಅಭಿವೃದ್ಧಿªಯನ್ನು ನಿರೀಕ್ಷಿಸಲಾಗಿದೆ.
ಬ್ರಹ್ಮಾವರ ತಾಲೂಕಿಗೆ
ಬರುವ ಗ್ರಾಮಗಳು
ಬ್ರಹ್ಮಾವರ ತಾಲೂಕು ಬ್ರಹ್ಮಾವರ ಹಾಗೂ ಕೋಟ ಹೋಬಳಿಗಳನ್ನು ಒಳಗೊಂಡಿದೆ.ಬ್ರಹ್ಮಾವರ ಹೋಬಳಿಯ ನಾಲ್ಕೂರು, ನಂಚಾರು, ಕುದಿ, ಕೆಂಜೂರು, ಪೆಜಮಂಗೂರು, ಹೊಸೂರು, ಕಳೂ¤ರು, ಹಲುವಳ್ಳಿ, ಪೆರ್ಡೂರು, ಬೈರಂಪಳ್ಳಿ, ಬೆಳ್ಳರ್ಪಾಡಿ, ಶಿರೂರು, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ, ಹಾವಂಜೆ, ಚೇರ್ಕಾಡಿ, ಉಪ್ಪೂರು, ಹೇರೂರು, ಆರೂರು, ನೀಲಾವರ, ಚಾಂತಾರು, ಮಟಪಾಡಿ, ಹಂದಾಡಿ, ಕುಮ್ರಗೋಡು, ವಾರಂಬಳ್ಳಿ,
ಹಾರಾಡಿ, ಬೈಕಾಡಿ, ಪಡುತೋನ್ಸೆ, ಮೂಡುತೋನ್ಸೆ ಗ್ರಾಮಗಳನ್ನು ಒಳಗೊಂಡಿದೆ.ಕೋಟ ಹೋಬಳಿಯ ಮಣೂರು, ಕೋಟತಟ್ಟು, ಗಿಳಿಯಾರು, ಪಾಂಡೇಶ್ವರ, ಮೂಡಹಡು, ಕೋಡಿ, ಐರೋಡಿ, ಬಾಳುRದ್ರು, ವಡ್ಡರ್ಸೆ, ಅಚಾÉಡಿ, ಬನ್ನಾಡಿ, ಕಾವಡಿ, ಶಿರಿಯಾರ, ಕಾಡೂರು, ನಡೂರು, ಹೇರಾಡಿ, ಯಡ್ತಾಡಿ, ವಂಡಾರು, ಆವರ್ಸೆ, ಕಕ್ಕುಂಜೆ, ಹಿಲಿಯಾಣ, ಹೆಗ್ಗುಂಜೆ, ಶಿರೂರು, ಬಿಲ್ಲಾಡಿ, ಹನೆಹಳ್ಳಿ, ಕಚ್ಚಾರು, ಹೊಸಾಳ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ, ಗುಂಡ್ಮಿ, ಚಿತ್ರಪಾಡಿ, ಪಾರಂಪಳ್ಳಿ ಭಾಗಗಳನ್ನು ಒಳಗೊಳ್ಳಲಿದೆ. ಬ್ರಹ್ಮಾವರ ತಾಲೂಕು ಎರಡು ಹೋಬಳಿ ವ್ಯಾಪ್ತಿಯ 2.5 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.
ಮುಂದೆ ಆಗಬೇಕಾಗಿರುವುದು
ತಾಲೂಕು ಘೋಷಣೆಯಾದ ಅನಂತರ ಹಲವು ಪ್ರಕ್ರಿಯೆಗಳು ಆಗಬೇಕಾಗಿದೆ. ಮುಖ್ಯವಾಗಿ ಈಗಿರುವ ವಿಶೇಷ ತಹಶೀಲ್ದಾರ್ ಪೂರ್ಣಕಾಲಿಕ ತಹಶೀಲ್ದಾರ್ ಆಗಿ ಭಡ್ತಿ, ಗಜೆಟೆಡ್ ಆಫೀಸರ್ ಹಾಗೂ ಸಹಾಯಕ ದರ್ಜೆ ಅಧಿಕಾರಿಗಳ ನೇಮಕ, ತಾಲೂಕು ಪಂಚಾಯತ್ ಕಟ್ಟಡ, ತಾ.ಪಂ. ಕ್ಷೇತ್ರ ವಿಂಗಡಣೆ ಹಾಗೂ ತಾಲೂಕು ಪಂಚಾಯತ್ ರಚನೆ, ತಾಲೂಕು ನ್ಯಾಯಾಲಯ ರಚನೆ ಆಗಬೇಕಾಗಿರುವ ಕಾರ್ಯಗಳು. ಜೊತೆಗೆ ಮಿನಿ ವಿಧಾನಸೌದದ ಬೇಡಿಕೆಯೂ ಇದೆ.
ತಾಲೂಕು ಕೇಂದ್ರ ಎಲ್ಲಿ…?
ಪ್ರಸ್ತುತ ವಿಶೇಷ ತಹಶೀಲ್ದಾರ್ ಕಚೇರಿ, ಕಂದಾಯ ಇಲಾಖೆ ಕಚೇರಿ, ಉಪ ನೋಂದಾವಣಾಧಿಕಾರಿಗಳ ಕಚೇರಿ ಬ್ರಹ್ಮಾವರದ ಹೃದಯ ಭಾಗದಲ್ಲೇ ಕಾರ್ಯಾಚರಿಸುತ್ತಿವೆ. ಆದರೆ ತಾಲೂಕಿಗಾಗಿ ಪೇಟೆಯಿಂದ ಹೊರಭಾಗದ ಇಂದಿರಾನಗರದಲ್ಲಿ ಜಾಗ ಮೀಸಲಿರಿಸಲಾಗಿದೆ. ಮೀಸಲಿರಿಸಿದ ಜಾಗವನ್ನೇ ತಾಲೂಕು ಕೇಂದ್ರವನ್ನಾಗಿಸುವುದಾದರೆ ಈ ಭಾಗದಲ್ಲಿ ಸಂಪರ್ಕ ರಸ್ತೆಯ ಅಭಿವೃದ್ದಿ ಅನಿವಾರ್ಯ.
ಪ್ರಯೋಜನಗಳೇನು..?
ಹೊಸ ತಾಲೂಕು ರಚನೆಯಿಂದ ಸಹಜವಾಗಿಯೇ ಆಡಳಿತಾತ್ಮಕ ಕಾರ್ಯಗಳು ವೇಗ ಕಂಡುಕೊಳ್ಳುತ್ತವೆ. ತಾಲೂಕಿಗೆ ಪ್ರತ್ಯೇಕ ಅನುದಾನ ಬಿಡುಗಡೆಯಾಗುವುದರಿಂದ ಅಭಿವೃದ್ದಿ ಸಾಧ್ಯ. ಬ್ರಹ್ಮಾವರ ತಾಲೂಕು ಕೇಂದ್ರವಾಗುವುದರಿಂದ ದೂರದ ನಾಲ್ಕೂರು, ನಂಚಾರು, ಕೋಟ, ಗಿಳಿಯಾರು ಪ್ರದೇಶದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.
ಕಾಂಗ್ರೆಸ್ ನಗರ ಘಟಕ ಸ್ವಾಗತ
ಬ್ರಹ್ಮಾವರ ತಾಲೂಕು ಘೋಷಣೆ ಯನ್ನು ಬ್ರಹ್ಮಾವರ ಕಾಂಗ್ರೆಸ್ ನಗರ ಘಟಕ ಸ್ವಾಗತಿಸಿದೆ. ಬ್ರಹ್ಮಾವರಕ್ಕೆ ತಾಲೂಕು ಭಾಗ್ಯ ದೊರಕಿಸಿಕೊಡುವಲ್ಲಿ ವಿಶೇಷ ಪಾತ್ರ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದೆ. ಅಲ್ಲದೆ ಬ್ರಹ್ಮಾವರ ತಾಲೂಕು ರಚನೆ ಸಂಬಂಧ ಬ್ರಹ್ಮಾವರ ಕಾಂಗ್ರೆಸ್ ನಗರ ಘಟಕದ ನಿಯೋಗದೊಂದಿಗೆ ಸಕ್ರಿಯ ಪಾತ್ರ ವಹಿಸಿ ಮುಖ್ಯಮಂತ್ರಿ, ಕಂದಾಯ ಸಚಿವರೊಂದಿಗೆ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಿರುವುದನ್ನು ಸ್ಮರಿಸುವುದಾಗಿ ನಗರ ಘಟಕ ತಿಳಿಸಿದೆ.
ಪ್ರಬಲ ಹೋರಾಟ
ಪ್ರಬಲ ಹೋರಾಟದ ಫಲವಾಗಿ ವಾಸುದೇವ್ ರಾವ್, ಗದ್ದಿಗೌಡರ್, ಹುಂಡೇಕರ್ ಸಮಿತಿಯಲ್ಲಿ ಬ್ರಹ್ಮಾವರ ವನ್ನು ತಾಲೂಕಿಗೆ ಶಿಫಾರಸು ಮಾಡ ಲಾಯಿತು. ತಾಲೂಕಿಗಾಗಿ 1987ರಲ್ಲಿ 13 ಎಕ್ರೆ ಮೀಸಲಿರಿಸುವಲ್ಲಿ, ಸಿಬಂದಿಗಳ ಕ್ವಾರ್ಟರ್ಸ್‌ಗಾಗಿ ಕುಂಜಾಲು ರೋಡ್‌ನಲ್ಲಿ ಸುಮಾರು 5 ಎಕ್ರೆ ಜಾಗ ಮೀಸಲಿರಿಸುವಲ್ಲಿ ನಿರಂತರ ಪ್ರಯತ್ನವಿದೆ.
– ಬಿ.ಭುಜಂಗ ಶೆಟ್ಟಿ,
ಮಾಜಿ ಅಧ್ಯಕ್ಷರು, ಉಡುಪಿ ಜಿ.ಪಂ.
ಶ್ರೇಯಸ್ಸು ಎಲ್ಲರಿಗೂ ಸಲ್ಲಬೇಕು
ಹೋರಾಟದ ಫಲವಾಗಿ ಬ್ರಹ್ಮಾವರಕ್ಕೆ ತಾಲೂಕು ಲಭಿಸಿದೆ. ಈ ಶ್ರೇಯಸ್ಸು ಎಲ್ಲರಿಗೂ ಸಲ್ಲಬೇಕು. ಸಮಿತಿಯೊಂದಿಗೆ ನಿರಂತರ ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಕೈ ಜೋಡಿಸಿದ್ದಾರೆ. ಘೋಷಣೆ ಮಾಡಿದ ಹಿಂದಿನ ಮತ್ತು ಅನುಮೋದಿಸಿದ ಈಗಿನ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಬ್ರಹ್ಮಾವರ ತಾಲೂಕು ರಾಜ್ಯದಲ್ಲೇ ಮಾದರಿ ತಾಲೂಕಾಗಿ ಹೊರಹೊಮ್ಮಲಿ.
– ಬಾರಕೂರು ಸತೀಶ್ ಪೂಜಾರಿ, ಅಧ್ಯಕ್ಷರು, ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ.
ಈ ಬಾರಿಯ ಬಜೆಟ್ ಹಾಗೂ ತಾಲೂಕು ಘೋಷಣೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜಕೀಯ ಪ್ರಬುದ್ಧತೆ ಸೂಚಿಸುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಜನಪರ ಕಾಳಜಿ, ಸಾಮಾಜಿಕ ಪ್ರಜ್ಞೆಯ ಪ್ರತಿಫಲವಾಗಿ ಬ್ರಹ್ಮಾವರ ತಾಲೂಕು ಘೋಷಣೆಯಾಗಿದೆ.-
– ನಿತ್ಯಾನಂದ ಶೆಟ್ಟಿ ಹಾರಾಡಿ, ಅಧ್ಯಕ್ಷರು,
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ.
ಕೇವಲ ತಾಲೂಕು ಘೋಷಣೆಯಾದರೆ ಸಾಲದು. ಸಮರ್ಪಕ ಅನುದಾನ ಬಿಡುಗಡೆಗೊಳಿಸಿ ಅನುಷ್ಠಾನಗೊಳಿಸಬೇಕು. ಹಾಗಾದಲ್ಲಿ ಮಾತ್ರ ಗ್ರಾಮಾಂತರ ಭಾಗದ ಜನರಿಗೆ ಅನುಕೂಲವಾಗಲಿದೆ.-
– ಪ್ರತಾಪ್ ಹೆಗ್ಡೆ ಮಾರಾಳಿ, ಅಧ್ಯಕ್ಷರು,
ಉಡುಪಿ ಗ್ರಾಮಾಂತರ ಬಿಜೆಪಿ
– ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ