ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನದ ಮೊಳಕೆ
Team Udayavani, Dec 13, 2018, 3:00 AM IST
ವಿಶೇಷ ವರದಿ : ಬ್ರಹ್ಮಾವರ: ಅವಿಭಜಿತ ದ.ಕ. ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ವಿಚಾರ ಮೊಳಕೆಯೊಡೆದಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಬಗ್ಗೆ ಮುಖ್ಯಮಂತ್ರಿ ಭರವಸೆ ಹಿನ್ನೆಲೆಯಲ್ಲಿ ಕಬ್ಬಿನ ಸಸಿ ವಿತರಣೆಗೆ ಚಾಲನೆ ದೊರೆತಿದೆ. ವಾರಾಹಿ ನೀರಾವರಿ ಯೋಜನೆಯನ್ನು ಅವ ಲಂಬಿಸಿಕೊಂಡು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪ್ರಾರಂಭಗೊಂಡಿತ್ತು. 1985ರ ಜ. 22ರಂದು ಕಾರ್ಯಾರಂಂಭಗೊಂಡ ಕಾರ್ಖಾನೆಯು ದಿನವೊಂದಕ್ಕೆ 1,250 ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು. 1985-86ರಿಂದ 2002-03ನೇ ಸಾಲಿನವರೆಗೆ 18 ವರ್ಷ ಕಾರ್ಯನಿರ್ವಹಿಸಿದ ಕಾರ್ಖಾನೆಯು ಕಬ್ಬಿನ ಕೊರತೆ ಹಾಗೂ ದುಡಿಯುವ ಬಂಡವಾಳದ ಅಭಾವದಿಂದಾಗಿ 2003-04ನೇ ಸಾಲಿನಿಂದ ಕಬ್ಬು ಅರೆಯುವಿಕೆಯ ಕಾರ್ಯವನ್ನು ಸ್ಥಗಿತಗೊಳಿಸಿತು. 2006ರ ಎ. 16ರಂದು ಮುಚ್ಚುಗಡೆಗೊಂಡಿತು.
ಮರು ಜೀವ
ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ವಿಸ್ತರಣೆಗೊಂಡ ಪರಿಣಾಮ ರೈತರು ಕಬ್ಬು ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಅಲ್ಲದೆ ಕರಾವಳಿ ಭಾಗದ ವೈಪರೀತ್ಯ ಹವಾಮಾನದಿಂದ ಭತ್ತದ ಬೆಳೆಗಿಂತ ಕಬ್ಬಿನ ಬೆಳೆಯು ಲಾಭದಾಯಕವಾಗಿರುವುದರಿಂದ ಬ್ರಹ್ಮಾವರದಲ್ಲಿರುವ ಸ್ಥಗಿತಗೊಂಡ ಸಕ್ಕರೆ ಕಾರ್ಖಾನೆಯನ್ನು ಪುನಃ ಪ್ರಾರಂಭಿಸುವಂತೆ ಆಗ್ರಹ ಕೇಳಿ ಬಂದಿದೆ.
ವಾರಾಹಿ ನೀರು
ಪ್ರಸ್ತುತ ವಾರಾಹಿ ನೀರಾವರಿ ಯೋಜನೆಯ ಕಾಮಗಾರಿಯು ಪ್ರಗತಿಯಲ್ಲಿದೆ. ವಾರಾಹಿ ಎಡದಂಡೆ ಕಾಲುವೆ 38 ಕಿ.ಮೀ.ವರೆಗೆ ಮತ್ತು ಉಪಕಾಲುವೆ ಹಾಗೂ ವಿತರಣಾ ಕಾಲುವೆಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ ಸುಮಾರು 12,000 ಎಕ್ರೆ ಕೃಷಿ ಜಮೀನಿಗೆ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಅಲ್ಲದೆ 9 ಪ್ಯಾಕೇಜ್ ಮೂಲಕ ಹೆಚ್ಚುವರಿಯಾಗಿ ಕಾಮಗಾರಿಗಳು ನಡೆಯುತ್ತಿದ್ದು, ಇದರಿಂದಾಗಿ ಇನ್ನೂ ಸುಮಾರು 8,000 ಎಕ್ರೆ ಕೃಷಿ ಜಮೀನಿಗೆ ನೀರು ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ವಾರಾಹಿ ಯೋಜನೆಯು ಪೂರ್ಣಗೊಂಡಾಗ ಎಡದಂಡೆ ಕಾಲುವೆಯ ಪ್ರದೇಶದಲ್ಲಿ ಒಟ್ಟು 22,000 ಎಕ್ರೆಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಇದರಲ್ಲಿ 12ರಿಂದ 15 ಸಾವಿರ ಎಕ್ರೆ ಜಮೀನಿನಲ್ಲಿ ಕಬ್ಬು ಅಭಿವೃದ್ಧಿಯಾಗುವ ನಿರೀಕ್ಷೆ ಇದೆ.
ಸುಧಾರಿತ ತಳಿ
ಬೀಜೋತ್ಪಾದನೆಗಾಗಿ ಉತ್ತಮ ತಳಿಯ ಮತ್ತು ಅಧಿಕ ಇಳುವರಿಯ 25,000 ಕಬ್ಬಿನ ಬೀಜವನ್ನು ಮಂಡ್ಯದ ವಿ.ಸಿ. ಫಾರ್ಮ್ನಿಂದ ಖರೀದಿಸಿ ತರಿಸಲಾಗಿದೆ. 2018-19ನೇ ಸಾಲಿನಲ್ಲಿ 200 ಎಕ್ರೆಯಲ್ಲಿ ಕಬ್ಬಿನ ನಾಟಿ ನಡೆಯಲಿದೆ.
1ಕಬ್ಬಿನ ಸಾಂಪ್ರದಾಯಿಕ ನಾಟಿಗಿಂತ ಬೀಜದಿಂದ ಸಸಿ ಮಾಡಿ ನಾಟಿ ಮಾಡುವುದು ಹೆಚ್ಚು ಲಾಭದಾಯಕ ಜತೆಗೆ ನಿಖರವಾದ ಇಳುವರಿ ಗಳಿಕೆ ಸಾಧ್ಯ. 2200 ಎಕ್ರೆಯಲ್ಲಿ ಬಂದ ಕಬ್ಬಿನ ಬೀಜವನ್ನು 2019-20ನೇ ಸಾಲಿನಲ್ಲಿ 6,000 ಎಕ್ರೆ ಜಾಗದಲ್ಲಿ ಬಿತ್ತನೆ ಮಾಡಿದರೆ 2 ಲಕ್ಷ ಟನ್ ಕಬ್ಬು ಬೆಳೆಯ ಬಹುದು. ಆಗ ಕಾರ್ಖಾನೆ ಪುನಶ್ಚೇತನ ಸಾಧ್ಯವಾಗಲಿದೆ. 3 ಕಾರ್ಖಾನೆಗೆ ನಿತ್ಯ 1,250 ಟನ್‌ನಂತೆ ವಾರ್ಷಿಕ 2.25 ಲಕ್ಷ ಟನ್ ಕಬ್ಬು ಪೂರೈಕೆಯಾದರೆ ಕಾರ್ಖಾನೆ ಮುನ್ನಡೆಯಲು ಯಾವುದೇ ಸಮಸ್ಯೆಯಾಗದು. 4ಸಕ್ಕರೆ ಜತೆಗೆ ವಿದ್ಯುತ್, ಮೊಲಾಸಿಸ್, ಎಥೆನಾಲ್‌ನಂತಹ ಉಪಉತ್ಪನ್ನಗಳೂ ಹೆಚ್ಚು ಲಾಭದಾಯಕವಾಗಲಿವೆ.
ಪುನಶ್ಚೇತನಕ್ಕೆ ಸಿಎಂ ಒಲವು ಕಾರ್ಖಾನೆ ಪುನಶ್ಚೇತನ ಕುರಿತು ಪೂನಾದ ಮಿಟ್ಕಾನ್ ಸಂಸ್ಥೆ ವಿಸ್ತೃತ ಯೋಜನಾ ವರದಿ ತಯಾರಿಸಿದೆ. ಪುನರುಜ್ಜೀವನಕ್ಕೆ 30 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾರ್ಖಾನೆ ಪುನಶ್ಚೇತನಕ್ಕೆ ಒಲವು ತೋರಿಸಿದ್ದು, ವಾರಾಹಿ ನೀರು ದೊರೆಯುತ್ತಿರುವುದರಿಂದ ಕಾರ್ಖಾನೆ ಕಾರ್ಯ ವ್ಯಾಪ್ತಿಯಲ್ಲಿ ಸಾಕಷ್ಟು ಕಬ್ಬು ಬೆಳೆಯುವಂತೆ ಸಲಹೆ ನೀಡಿದ್ದಾರೆ, ಅದರಂತೆ ಕಬ್ಬಿನ ಬೀಜ ಪೂರೈಸಲಾಗುತ್ತಿದೆ.
– ಎಚ್. ಜಯಶೀಲ ಶೆಟ್ಟಿ, ಅಧ್ಯಕ್ಷರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ
ಕಬ್ಬಿನ ಹಣ ಪಾವತಿಯಲ್ಲಿ ಶಿಸ್ತಿರಲಿ
ಕಬ್ಬಿಗೆ ಉತ್ತಮ ದರ ನಿಗದಿಪಡಿಸಬೇಕು. ಮುಖ್ಯವಾಗಿ ಕಬ್ಬಿನ ಹಣವನ್ನು ಸರಿಯಾದ ಸಮಯದಲ್ಲಿ ಪಾವತಿಸಿದರೆ ರೈತರು ಖಂಡಿತ ಕಬ್ಬು ಬೆಳೆದು ಪೂರೈಸುವ ವಿಶ್ವಾಸವಿದೆ.
– ರಘುವೀರ ಕಿಣಿ ಮೊಗವೀರಪೇಟೆ, ಕಬ್ಬು ಬೆಳೆಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ