Shirva: ಮಾನವೀಯ ಮೌಲ್ಯಗಳೊಂದಿಗೆ ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಿ; ಜ| ಸಂತೋಷ್ ಹೆಗ್ಡೆ
ಬಂಟಕಲ್ ತಾಂತ್ರಿಕ ಕಾಲೇಜು; ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮ
Team Udayavani, Sep 1, 2024, 4:32 PM IST
ಶಿರ್ವ: ದುರಾಸೆ ದೇಶದಲ್ಲಿ ರೋಗವಾಗಿ ಬೆಳೆಯುತ್ತಿದ್ದು, ಯುವಜನತೆ ಹೆತ್ತವರ ಸಹಕಾರದೊಂದಿಗೆ ಇದ್ದುದರಲ್ಲಿಯೇ ಸಂತಸ ಪಡುವ ಗುಣಗಳನ್ನು ಬೆಳೆಸಿಕೊಂಡಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ.ಮಾನವೀಯತೆ ಇದ್ದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಾಮಾಣಿಕ ಬದುಕು ಕಟ್ಟಿಕೊಳ್ಳುವುದ ರೊಂದಿಗೆ ಸಮಾಜದ ಭಾವನೆಗಳನ್ನು ಬದಲಾಯಿಸಬಹುದು ಎಂದು ಸರ್ವೋತ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜ| ಎನ್.ಸಂತೋಷ್ ಹೆಗ್ಡೆ ಹೇಳಿದರು.
ಅವರು ಸೆ.1 ರಂದು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಎಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ನಡೆದ ಮಾರ್ಗದರ್ಶನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಬಳಿಕ ವಿದ್ಯಾರ್ಥಿಗಳು ಮತ್ತು ಹೆತ್ತವರೊಂದಿಗೆ ಸಂವಾದ ನಡೆಸಿದರು.
ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ ಉತ್ತಮ ಶಿಕ್ಷಣ ನೀಡಲು ಬದ್ಧವಾಗಿರುವ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆಯಬೇಕಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಸಂಸ್ಥೆಯ ಬೆಳವಣಿಗೆಗೆ ಕೈಗನ್ನಡಿಯಾಗಿದೆ. ಅಧ್ಯಯನದೊಂದಿಗೆ ಉತ್ತಮ ವಿಷಯಗಳ ಬಗ್ಗೆ ಚಿಂತನೆ ನಡೆಸಿ ಸಂಕಲ್ಪ ಶುದ್ಧಿಯೊಂದಿಗೆ ಸಾಧನೆ ಮಾಡಿ ಎಂದು ಹೇಳಿದರು. ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ|ಲೊಲಿಟಾ ಪ್ರಿಯಾ ಕ್ಯಾಸ್ತಲಿನೊ ಅತಿಥಿ ಪರಿಚಯ ಮಾಡಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಪಾಡಿಗಾರು ಶ್ರೀನಿವಾಸ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ| ಗಣೇಶ್ ಐತಾಳ್ ಮತ್ತು ಆಡಳಿತ ಮಂಡಳಿಯ ಸದಸ್ಯ ಹರೀಶ್ ಬೆಳ್ಮಣ್ ವೇದಿಕೆಯಲ್ಲಿದ್ದರು. ಅಕಾಡೆಮಿಕ್ ಡೀನ್ ಡಾ| ನಾಗರಾಜ ಭಟ್ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಸಂಸ್ಥೆಯ ನಿಯಮಗಳ ಕುರಿತು ಮಾಹಿತಿ ನೀಡಿದರು .ವಿದ್ಯಾರ್ಥಿಗಳ ಹೆತ್ತವರಾದ ಸಂಜೀವ ,ಶ್ಯಾಮಸುಂದರ್ ಮತ್ತಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಗಣಕ ಯಂತ್ರ ವಿಭಾಗದ ಪ್ರಾಧ್ಯಾಪಕಿ ಪ್ರೀತಿ ಮತ್ತು ವಿದ್ಯುನ್ಮಾನ ಹಾಗೂ ಸಂವಹನ ವಿಭಾಗದ ಪ್ರಾಧ್ಯಾಪಕ ಸಚಿನ್ ಪ್ರಭು .ಕೆ ಕಾರ್ಯಕ್ರಮ ನಿರೂಪಿಸಿ, ಬಿ.ಇ ಪ್ರಥಮ ವರ್ಷದ ಸಂಯೋಜಕಿ / ಸಿವಿಲ್ ವಿಭಾಗದ ಮುಖ್ಯಸ್ಥೆ ಡಾ|ದೀಪಿಕಾ ಬಿ.ವಿ. ವಂದಿಸಿದರು.
ದುರಾಸೆ ಎಂಬ ರೋಗಕ್ಕೆ ಮದ್ದಿಲ್ಲ:
ಉತ್ತಮ ಕೆಲಸ ಮಾಡಿದವರನ್ನು ಸಮ್ಮಾನಿಸಿ, ತಪ್ಪು ಮಾಡಿದವರನ್ನು ಬಹಿಷ್ಕರಿಸುವ ಸಮಾಜದಲ್ಲಿಂದು ಭಾವನೆ ಬದಲಾಗಿ ಶ್ರೀಮಂತನಾದರೆೆ ,ಅಧಿಕಾರದಲ್ಲಿದ್ದರೆ ಸಲಾಂ ಹೊಡೆಯುವ ಕಾಲ ಬಂದಿದ್ದು, ಪ್ರಾಮಾಣಿಕತೆಗೆ ಬೆಲೆಯಿಲ್ಲ. ಇದು ವ್ಯಕ್ತಿಗಳ ತಪ್ಪಲ್ಲ, ಸಮಾಜದ ತಪ್ಪು. ಸಮಾಜದ ಭಾವನೆ ಬದಲಾಯಿಸಲು ಯುವಜನತೆಗೆ ಸಾಧ್ಯವಿದ್ದರೂ, ಅವರಿಗೆ ಸರಿದಾರಿ ತೋರಿಸುವವರಾರು..?. ಇದಕ್ಕೆ ಮೂಲ ಕಾರಣ ದೇಶದಲ್ಲಿ ಅಭಿವೃದ್ಧಿ ಹೊಂದಿರುವ ದುರಾಸೆ ಎಂಬ ರೋಗ, ಅದಕ್ಕೆ ಮದ್ದಿಲ್ಲ. ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಸಾಮಾಜಿಕ ಮೌಲ್ಯಗಳನ್ನು ತಿಳಿಸಿದಾಗ ಸಮಾಜದಲ್ಲಿ ತಪ್ಪು ಮಾಡುವವರ ಸಂಖ್ಯೆ ಕಡಿಮೆಯಾದೀತು.ಸಮಾಜದಲ್ಲಿ ಬದಲಾವಣೆಯಾಗಿ ಮಕ್ಕಳ ಜತೆ ಹೆತ್ತವರ ಸಂಬಂಧ ಹಿಂದೆ ಇದ್ದಂತೆ ಇಲ್ಲ. ಇವತ್ತು ಯಾವುದು ಸರಿ ಯಾವುದು ತಪ್ಪು ಎಂದು ಹೇಳುವವರು ಯಾರೂ ಇಲ್ಲ. -ನ್ಯಾ| ಎನ್.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.