Udupi ಹೂತುಹಾಕಿದ ಎಂಡೋ: ಹಸುರು ಪೀಠ ನೋಟಿಸ್
Team Udayavani, Dec 26, 2023, 6:15 AM IST
ಉಡುಪಿ: ಕೇರಳದ ಪ್ಲಾಂಟೇಶನ್ ಕಾರ್ಪೊರೇಶನ್‌ನವರ ಗೋದಾಮುಗಳಲ್ಲಿ ಉಳಿದಿದ್ದ ವಿಷಕಾರಕ ಕೀಟನಾಶಕವನ್ನು ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ಮಿಂಚಿಪದವು ಗುಡ್ಡ ಪ್ರದೇಶದಲ್ಲಿ ಹೂಳಲಾಗಿದೆ ಎನ್ನಲಾದ ಪ್ರಕರಣದಲ್ಲಿ ರಾಷ್ಟ್ರೀಯ ಹಸುರು ನ್ಯಾಯಮಂಡಳಿಯ ದಕ್ಷಿಣ ಪೀಠವು ಈಗ ಭಾರತ ಒಕ್ಕೂಟ, ಕರ್ನಾಟಕ ಹಾಗೂ ಕೇರಳ ಸರಕಾರ, ಕರ್ನಾಟಕ ಹಾಗೂ ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ಉಡುಪಿಯ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ್ ಶಾನುಭಾಗ್ ಈ ಕುರಿತು ಸಲ್ಲಿಸಿದ ದೂರು ಅರ್ಜಿಯನ್ನು ಸ್ವೀಕರಿಸಿದ ನ್ಯಾಯ ಮಂಡಳಿಯು ಅಕ್ರಮವಾಗಿ ಹೂಳಲಾಗಿದ್ದ ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ಗೌರವ್ ಕುಮಾರ್ ಬನ್ಸಾಲ್ ಹಾಗೂ ಡಾ| ರವೀಂದ್ರನಾಥ್ ಶಾನುಭಾಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೈಜ್ಞಾನಿಕವಾಗಿ ನಾಶ
ಪಡಿಸಲು ಆದೇಶ
ಎಂಡೋಸಲ್ಫಾನ್‌ನ ವಿಷಕಾರಕ ಗುಣಗಳಿಂದಾಗಿ ಉಭಯ ರಾಜ್ಯಗಳ ಸುಮಾರು 12 ಸಾವಿರ ಮಕ್ಕಳು ಅಂಗವಿಕಲರಾಗಿದ್ದರು. ಈ ಪ್ರಕರಣದಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನ ಹಾಗೂ ಇತರರು ಸುಪ್ರೀಂ ಕೋರ್ಟ್‌ಗೆ ನೀಡಿದ ದೂರು ಅರ್ಜಿಯನ್ನು ಅನುಸರಿಸಿ 2011ರ ಮೇ 13ರಂದು ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಇಡೀ ದೇಶದಲ್ಲಿ ಎಂಡೋಸಲ್ಫಾನ್‌ನ ಉಪಯೋಗ ಹಾಗೂ ಮಾರಾಟವನ್ನು ನಿಷೇಧಿಸಲಾಗಿತ್ತು. ಗೇರು ತೋಟಗಳ ಗೋದಾಮುಗಳಲ್ಲಿ ಉಳಿದಿರುವ ಎಂಡೋಸಲ್ಫಾನ್ ದಾಸ್ತಾನುಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲು ಆದೇಶ ನೀಡಲಾಗಿತ್ತು ಎಂದರು.
ವಿಚಾರ ಮರೆತಿದ್ದ ಸಾರ್ವಜನಿಕರು !
ಕೆಲವು ದಿನಗಳಲ್ಲಿ ಕಾಸರಗೋಡಿನ ಗೋದಾಮುಗಳಲ್ಲಿ ಉಳಿದಿದ್ದ ಎಂಡೋಸಲ್ಫಾನ್ ಅನ್ನು ನಾಶ ಪಡಿಸಲು ರಾಸಾಯನಿಕ ತಜ್ಞರು ಬಂದಾಗ ಸ್ಥಳೀಯರಿಂದ ಬಂದ ವಿರೋಧ ದಿಂದಾಗಿ ನಾಶ ಪಡಿಸುವ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸ ಲಾಗಿತ್ತು. ಅನಂತರದ ದಿನಗಳಲ್ಲಿ ಈ ಕೀಟನಾಶಕದ ದಾಸ್ತಾನನ್ನು ಏನು ಮಾಡಲಾಯಿತು ಎಂಬ ವಿಚಾರ ಸಾರ್ವಜನಿಕರಿಗೆ ತಿಳಿಯಲೇ ಇಲ್ಲ. ಕ್ರಮೇಣ ಜನರು ಈ ವಿಚಾರವನ್ನು ಮರೆತರು. ಇದನ್ನು ಎಲ್ಲಿ ನಾಶಪಡಿಸಲಾಯಿತು ಎಂದು ಹಲವು ಬಾರಿ ಲಿಖೀತದಲ್ಲಿ ಕೇಳಿದರೂ ಕಾರ್ಪೊರೇಶನ್ ಅಧಿಕಾರಿಗಳು ಸ್ಪಷ್ಟನೆ ನೀಡಿರಲಿಲ್ಲ.
ಹೂತಿಟ್ಟ ಬಗ್ಗೆ ಮಾಹಿತಿ
ಇದಾಗಿ ಎರಡು ವರ್ಷಗಳ ಬಳಿಕ 2013ರಲ್ಲಿ ಗೇರು ಕಾರ್ಪೊರೇಶನ್‌ನ ಸಿಬಂದಿ ಅಚ್ಯುತ ಮಣಿಯಾಣಿ ಅವರು ನಿವೃತ್ತರಾದಾಗ ಸುಮಾರು 600 ಲೀ. ಎಂಡೋಸಲ್ಫಾನ್ ಅನ್ನು ಮಿಂಚಿಪದವಿನ ಗೇರು ತೋಟದಲ್ಲಿ ಹೂಳಿರುತ್ತಾರೆ ಎಂಬ ಮಾಹಿತಿ ನೀಡಿದ್ದರು. ಇದು ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವೂ ಅಧಿಕಾರಿಗಳು ಅಲ್ಲಗಳೆದಿರಲಿಲ್ಲ. ವಿಚಾರ ತಿಳಿದ ಪ್ರತಿಷ್ಠಾನವು ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ದ.ಕ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಸಮಸ್ಯೆ ಪರಿಹಾರವಾಗಲಿಲ್ಲ. ಈಗ ಎಂಡೋಸಲ್ಫಾನ್ ಸೋರಿಕೆಯಾಗಿ ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಗ್ರಾಮಗಳ ಅಂತರ್ಜಲವನ್ನು ಕಲುಷಿತಗೊಳಿಸುವ ಸಾಧ್ಯತೆಯಿದೆ ಎಂಬುದನ್ನು ರಾಷ್ಟ್ರೀಯ ಹಸುರು ನ್ಯಾಯಮಂಡಳಿ ಯಲ್ಲಿ ಸಲ್ಲಿಸಿದ ದೂರು ಅರ್ಜಿಯಲ್ಲಿ ಸೂಚಿಸಿದ್ದಾರೆ ಎಂದರು.
ವರದಿ ಸಲ್ಲಿಸಿದ ಪುರಾವೆ
2022ರ ಜ. 11ರಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅಧ್ಯಕ್ಷತೆಯಲ್ಲಿ ಕೇರಳದ ಪ್ಲಾಂಟೇಶನ್ ಕಾರ್ಪೊರೇಶನ್‌ನವರು ಪಾಳು ಬಾವಿಯಲ್ಲಿ ಅಕ್ರಮವಾಗಿ ಹೂಳಿದ್ದಾರೆ ಎನ್ನಲಾದ ಎಂಡೋಸಲ್ಫಾನನ್ನು ತೆಗೆದುಹಾಕುವ ಅಗತ್ಯತೆಯನ್ನು ತಿಳಿಸಿದರು.
ಈ ಸಭೆಯಲ್ಲಿದ್ದ ದ.ಕ. ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು “ನೆಟ್ಟಣಿಗೆ ಗ್ರಾಮದ ಬಳಿಯ ಪಾಳು ಬಾವಿಯಲ್ಲಿ ಎಂಡೋಸಲ್ಫಾನ್ ಕ್ಯಾನ್‌ಗಳನ್ನು ಹಾಕಿರುವ ಕುರಿತು ನಾನು ಪುತ್ತೂರಿನಲ್ಲಿ ಸಹಾಯಕ ಕಮಿಷನರ್ ಆಗಿದ್ದ ಕಾಲದಲ್ಲಿ ವರದಿ ಸಲ್ಲಿಸಿದ್ದೇನೆ. ಇದು ನಿಜವಾದಲ್ಲಿ ಬಾಂಬ್‌ನಂತೆ ಸ್ಫೋಟಗೊಳ್ಳಲಿದೆ ಎಂದಿದ್ದರು. ಕೇವಲ 30 ಅಡಿ ಆಳದ ಮಣ್ಣು ಅಗೆದು ವಿಷಯ ಖಾತರಿಪಡಿಸುವುದು ಒಂದು ದಿನದ ಕೆಲಸ. ಅಲ್ಲಿ ಎಂಡೋಸಲ್ಫಾನ್ ಇಲ್ಲವೆಂದಾದಲ್ಲಿ ಎಲ್ಲರಿಗೂ ನೆಮ್ಮದಿ. ಕಳೆದ 10 ವರ್ಷಗಳಿಂದ ನೆಟ್ಟಣಿಗೆ ಗ್ರಾಮದವರು ಭಯದಿಂದ ಇದ್ದಾರೆ ಎಂದು ಡಾ| ಶಾನುಭಾಗ್ ತಿಳಿಸಿದರು.
ಪ್ರಾಧಿಕಾರಕ್ಕೆ ಪತ್ರ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು 2022ರ ಜ. 21ರಂದು ಕೇರಳ ಕಾನೂನು ಸೇವಾ ಪ್ರಾಧಿಕಾರಕ್ಕೆ ಪತ್ರದಲ್ಲಿ “ಕಾಸರಗೋಡಿನ ನೆಟ್ಟಣಿಗೆ ಗ್ರಾಮದಲ್ಲಿರುವ ಪಾಳು ಬಾವಿಗೆ ಎಂಡೋಸಲ್ಫಾನ್ ಕ್ಯಾನ್‌ಗಳನ್ನು ಹಾಕಿರುವ ಬಗೆಗಿನ ಸಮಸ್ಯೆಯನ್ನು ಪರಿಹರಿಸಲು ಕ್ರಮ ಅಗತ್ಯವಿದೆ ಎಂದು ಸೂಚಿಸಲಾಗಿದ್ದರೂ ಈ ಬಗ್ಗೆ ಪ್ರಾಧಿಕಾರ ಹಾಗೂ ಸರಕಾರ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲವಾದ್ದರಿಂದ ಈ ದೂರು ಅರ್ಜಿಯನ್ನು ಸಲ್ಲಿಸಲಾಗಿದೆ ಎಂದರು.ನ್ಯಾಯವಾದಿ ವಿಜಯಲಕ್ಷ್ಮೀ, ಪ್ರಮುಖರಾದ ಅನುರಾಗ್ ಕಿಣಿ, ರಮೇಶ್ ಶೆಣೈ ಪತ್ರಿಕಾ ಗೋಷ್ಠಿಯಲ್ಲಿದ್ದರು.
ಜ. 28ರಂದು ಸ್ಥಳ ಪರಿಶೀಲನೆ?
ಕೆಮಿಕಲ್ ಡಿಯಾಕ್ಟಿವೇಶನ್ ಮಾಡಲು ಸುಮಾರು 2,100 ಕೋ.ರೂ. ವೆಚ್ಚವಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಅರಣ್ಯ ಪ್ರದೇಶದಲ್ಲಿ ಹೂತಿಟ್ಟಿರುವ ಸಾಧ್ಯತೆಗಳಿವೆ. ಡಿ. 28ರಂದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಜ. 2ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.