ಬೈಂದೂರು ಮೂಲ ಸೌಕರ್ಯ ಅಭಿವೃದ್ಧಿಗೆ ನಮ್ಮ ಪಣ
Team Udayavani, May 10, 2018, 6:15 AM IST
ಉದಯವಾಣಿ ಅಭ್ಯುದಯ ಪತ್ರಿಕೋದ್ಯಮದಲ್ಲಿ ಸದಾ ಮುಂಚೂಣಿಯಲ್ಲಿದೆ. ಸುವರ್ಣ ಸಂಭ್ರಮದ ಸನಿಹದಲ್ಲಿರುವ ಪತ್ರಿಕೆಯು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳೊಂದಿಗೆ ಅಭಿವೃದ್ಧಿ ಸಂವಾದವೆಂಬ ಹೊಸ ಉಪಕ್ರಮದ ಮೂಲಕ ಅಭಿವೃದ್ಧಿ ಬಗೆಗಿನ ನೈಜ ಚರ್ಚೆಗೆ ವೇದಿಕೆ ಕಲ್ಪಿಸಿದೆ. ಮೂರೂ ಪ್ರಮುಖ ಪಕ್ಷದ ಅಭ್ಯರ್ಥಿಗಳಿಗೆ ಸಮಾನ ಪ್ರಶ್ನೆ-ವಿಭಿನ್ನ ಉತ್ತರವೆಂಬುದೇ ಇದರ ವಿಶೇಷತೆ. ಬೈಂದೂರು ಕ್ಷೇತ್ರದ ಮೂವರೂ ಅಭ್ಯರ್ಥಿಗಳು ಬುಧವಾರದ ಸಂವಾದದಲ್ಲಿ ತಮ್ಮ ಅಭಿವೃದ್ಧಿ ಬಗೆಗಿನ ಪರಿಕಲ್ಪನೆಯನ್ನು ಇಲ್ಲಿ ವಿವರಿಸಿದ್ದಾರೆ.
ಸಮಾನ ಪ್ರಶ್ನೆಗಳು
1.ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿಮ್ಮ ಚಿಂತನೆ ಏನು?
2.ಪ್ರವಾಸೋದ್ಯಮ ಬೆಳವಣಿಗೆಗೆ ಏನು ಕೊಡುಗೆ ಕೊಡುವಿರಿ?
3.ಬೈಂದೂರಿನಲ್ಲಿ ಆರೋಗ್ಯ ಕ್ಷೇತ್ರ ಅಭಿವೃದ್ಧಿಗೆ ಹೇಗೆ ಆದ್ಯತೆ ಕೊಡುವಿರಿ?
4.ಅಧಿಕಾರಕ್ಕೆ ಬಂದರೆ ಮೀನುಗಾರರ ಹಿತಕ್ಕೇನು ಮಾಡುವಿರಿ?
5.ಕೊಲ್ಲೂರು ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಚಿಂತನೆ ಏನು?
6.ಉನ್ನತ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಚನೆ ಯೋಜನೆ ಏನು?
7.ನಕ್ಸಲ್ ಬಾಧಿತ ಪ್ರದೇಶದ ಅಭಿವೃದ್ಧಿಗೆ ಏನು ಮಾಡುವಿರಿ?
8.ನಿಮ್ಮ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಹೇಗೆ ಪ್ರಯತ್ನಿಸುತ್ತೀರಿ?
9.ಗ್ರಾಮೀಣ ಒಳಸಾರಿಗೆ ಬಲಪಡಿಸಲು ನಿಮ್ಮ ಚಿಂತನೆ ಏನು?
10.ನಿಮ್ಮ ಕ್ಷೇತ್ರ ಅಭಿವೃದ್ಧಿಗೆ ಮೂರು ಪ್ರಮುಖ ಆದ್ಯತೆ ಯಾವುದು?
1. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡುವ ಸಲುವಾಗಿ ಅನೇಕ ಚಿಂತನೆಗಳಿವೆ. ಕುಡಿಯುವ ನೀರಿಗೆ ಹೆಚ್ಚಿನ ಒತ್ತು ಕೊಡುವ ಸಲುವಾಗಿ ಸಮುದ್ರದ ನೀರನ್ನು ಸಿಹಿ ನೀರಾಗಿ ಪರಿವರ್ತಿಸಲು ರಾಜ್ಯ ಸರಕಾರದಿಂದ 800 ಕೋ.ರೂ. ವೆಚ್ಚದ ಪೈಲಟ್ ಯೋಜನೆಯಿದೆ. ಅಂತರ್ಜಲ ವೃದ್ಧಿಗೆ ವೆಂಟೆಡ್ ಡ್ಯಾಂ ನಿರ್ಮಾಣ, ಪಶ್ಚಿಮ ವಾಹಿನಿ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಜಾರಿ, 300 ಕೋ.ರೂ. ವೆಚ್ಚದಲ್ಲಿ ವಾರಾಹಿ ಬಲದಂಡೆ ಯೋಜನೆಯ ಸಮರ್ಪಕ ಜಾರಿಗೆ ಪ್ರಯತ್ನಿಸಲಾಗುವುದು.
2. ಮರವಂತೆ, ತ್ರಾಸಿ, ಸೋಮೇಶ್ವರ ಬೀಚ್‌ಗಳು ಹಾಗೂ ತೂದಳ್ಳಿ ಜಲಪಾತದಲ್ಲಿ ಮೂಲ ಸೌಕರ್ಯಕ್ಕೆ ಒತ್ತು. ಮರವಂತೆಯಲ್ಲಿ ರೆಸಾರ್ಟ್ ಆರಂಭಿಸಲು ಅನುಮತಿ ಸಿಕ್ಕಿದೆ. ಗ್ರಾಮೀಣ ಭಾಗವಾಗಿರುವ ಕೊಲ್ಲೂರು ಪ್ರದೇಶದ ಪ್ರೇಕ್ಷಣೀಯ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು.
3. ಹೊಸ ಬೈಂದೂರು ತಾಲೂಕಿಗೆ 100 ಬೆಡ್‌ಗಳ ಆಸ್ಪತ್ರೆ ಸರಕಾರದಿಂದ ಬರಲಿದೆ. ಈಗಿರುವ ಬೈಂದೂರಿನ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಪ್ರಮುಖವಾಗಿ ಪ್ರಯತ್ನಿಸುತ್ತೇವೆ.
4. ಕೊಡಿಕ್ಕಲ್ ಬಂದರು ಅಭಿವೃದ್ಧಿಗೆ 107 ಕೋ.ರೂ. ವೆಚ್ಚದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರವಂತೆ ಹಾಗೂ ಗಂಗೊಳ್ಳಿ ಬಂದರಿನ 2ನೇ ಹಂತದ ಅಭಿವೃದ್ಧಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಮೀನುಗಾರರಿಗೆ ಸಾಲ ಸೌಲಭ್ಯ, ಸೀಮೆಎಣ್ಣೆ, ಡೀಸೆಲ್ ಸಬ್ಸಿಡಿ ದರದಲ್ಲಿ ತ್ವರಿತವಾಗಿ ಸಿಗುವಂತೆ ಮಾಡಲಾಗುವುದು.
5. ಕೊಲ್ಲೂರಿನಲ್ಲಿ 18 ಕೋ.ರೂ. ವೆಚ್ಚದಲ್ಲಿ ವೆಂಟೆಡ್ ಡ್ಯಾಂ ನಿರ್ಮಿಸಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಯೋಜನೆ ಮಾಡಿಕೊಳ್ಳುತ್ತೇವೆ. 5 ಕೋ.ರೂ. ವೆಚ್ಚದಲ್ಲಿ ಕೊಲ್ಲೂರು ದೇವಸ್ಥಾನ ಭಾಗದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ಇನ್ನಷ್ಟು ಸಮರ್ಪಕವನ್ನಾಗಿ ಮಾಡಲಾಗುವುದು. ಭಕ್ತರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಲಾಡ್ಜ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. 5 ಕೋ.ರೂ. ವೆಚ್ಚದಲ್ಲಿ ಪ್ರವಾಸಿ ಬಂಗಲೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.
6. ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಒತ್ತಡ ಹಾಕಲಾಗುವುದು. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಆದ್ಯತೆ ನೆಲೆಯಲ್ಲಿ ಪ್ರಯತ್ನ. ಸಿದ್ದಾಪುರ ಭಾಗದಲ್ಲಿ ಜ್ಯೂನಿಯರ್ ಕಾಲೇಜಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
7. ನಕ್ಸಲ್ ಬಾಧಿತ ಪ್ರದೇಶವಾಗಿರುವ ಸಿದ್ದಾಪುರ, ಅಮಾಸೆಬೈಲು, ಮಡಾಮಕ್ಕಿ ಭಾಗದಲ್ಲಿನ ಶಿಕ್ಷಣ, ಆರೋಗ್ಯ, ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಲಾಗುವುದು. ಗುಜ್ಜಾಡಿ, ಅಂಪಾರು, ಆಲೂರಿನಲ್ಲಿ ಜ್ಯೂನಿಯರ್ ಕಾಲೇಜಿಗೆ ಪ್ರಸ್ತಾವನೆ ಸಲ್ಲಿಕೆ ಮಾಡುತ್ತೇವೆ.
8. ಹೊಸ ತಾಲೂಕಾಗಿರುವುದರಿಂದ ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡಲಾಗುವುದು. ಸಾಫ್ಟ್‌ವೇರ್ ಕಂಪೆನಿಗಳ ಬದಲು ಇಲ್ಲಿನ ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಕೊಡುವಂತಹ ಯೋಜನೆಗಳನ್ನು ರೂಪಿಸಲಾಗುವುದು. ಅದಕ್ಕಿರುವ ವಿಶೇಷ ಪ್ಯಾಕೇಜ್‌ಗಳು ಸುಲಭದಲ್ಲಿ ಸಿಗುವಂತೆ ಮಾಡುತ್ತೇವೆ.
9. ಬೈಂದೂರಿಗೆ ಬಸ್ ಡಿಪೋ, 5 ಕೋ.ರೂ. ವೆಚ್ಚದ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ಸರಕಾರಿ ಬಸ್ ಹಾಕಲು ಪ್ರಯತ್ನಿಸುತ್ತೇವೆ.
10. ಕುಡಿಯುವ ನೀರು, ಆರೋಗ್ಯ ಕ್ಷೇತ್ರ, ರೈತರಿಗೆ ಆದ್ಯತೆ ಕೊಟ್ಟು ಕಾರ್ಯ ನಿರ್ವಹಿಸಲಾಗುವುದು.
ಬೆಂಗಳೂರಿನಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿದ್ದ ಇವರು, ಅದಕ್ಕೆ ಗುಡ್‌ಬೈ ಹೇಳಿ ರಾಜಕೀಯ ಪ್ರವೇಶಿಸಿದರು. ಮೊದಲ ಬಾರಿ ಕೆಸಿಪಿಯಿಂದ ಸ್ಪರ್ಧಿಸಿ ಸೋತು, ಅನಂತರ 1997 ರಿಂದ 2004ರ ವರೆಗೆ ಸತತ 3 ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆ. ಬಳಿಕ 2008 ರಲ್ಲಿ ಲಕ್ಷ್ಮೀ ನಾರಾಯಣರೆದುರು ಸೋತು, 2013 ರಲ್ಲಿ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
– ಗೋಪಾಲ ಪೂಜಾರಿ
ಕಾಂಗ್ರೆಸ್ ಅಭ್ಯರ್ಥಿ
1. ಬೈಂದೂರು ಹೊಸ ತಾಲೂಕು ಆದ ಕಾರಣ ಸಾಕಷ್ಟು ಅಭಿವೃದ್ಧಿ ಮಾಡಬೇಕಿದೆ. 5 ನದಿಗಳಿರುವ ಇಲ್ಲಿ ವಿಪುಲ ಜಲಸಂಪನ್ಮೂಲ ಇದೆ. ವಾರಾಹಿ ಬಲದಂಡೆ ಯೋಜನೆ ಕೈಗೆತ್ತಿಕೊಂಡು ಕುಡಿಯುವ ಹಾಗೂ ಕೃಷಿ ನೀರು ಕೊಡುತ್ತೇವೆ. 64 ಗ್ರಾಮಗಳಿರುವ ಗ್ರಾಮೀಣ ಪ್ರದೇಶ ಇದು. ಪುರಸಭೆ, ನಗರಸಭೆಗಳಿಲ್ಲ. ಮೀನುಗಾರರು, ವ್ಯವಸಾಯ ಪ್ರಮುಖ ಆದಾಯಮೂಲಗಳು. ಉಪ್ಪು ನೀರಿಗೆ ತಡೆಗೋಡೆ ಕಟ್ಟಿ, ಕುಡಿಯುವ ನೀರಿಗೆ ಆದ್ಯತೆ ಕೊಡುತ್ತೇವೆ.
2. ಬೈಂದೂರು ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶ ಇರುವ ಕ್ಷೇತ್ರ. ಮರವಂತೆ, ಸೋಮೇಶ್ವರವನ್ನು ವ್ಯವಸ್ಥಿತ ರೀತಿ ಅಭಿವೃದ್ಧಿ ಪಡಿಸುತ್ತೇವೆ. ಪಶ್ಚಿಮಘಟ್ಟದ ಕೊಡಚಾದ್ರಿ, ಬೆಳ್ಕಲ್‌ತೀರ್ಥ, ಹೊಸಳ್ಳಿ ಜಲಪಾತ, ಮೂಡ್ಗಳ್ಳಿ ಗುಹೆ, ಕಮಲಶಿಲೆ, ಕೊಲ್ಲೂರು ಮೊದಲಾದೆಡೆ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮದ ಹೆಬ್ಟಾಗಿಲು ಮಾಡುವ ಉದ್ದೇಶ ಇದೆ. ಇದು ಉದ್ಯೋಗ ಸೃಷ್ಟಿಗೂ ಅವಕಾಶ ಒದಗಿಸುತ್ತದೆ.
3.ಹಳ್ಳಿ ಜನರ ಆರೋಗ್ಯ ಸುಧಾರಣೆಗೆ ಇರುವ ಏಕೈಕ ಉಪಾಯ ಬೈಂದೂರು ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ. ಇದರಿಂದ ಜನ ಚಿಕಿತ್ಸೆಗೆ ಧಾರವಾಡ, ಮಣಿಪಾಲ, ಮಂಗಳೂರಿಗೆ ಅಲೆಯುವುದು ತಪ್ಪುತ್ತದೆ. ಈಗಾಗಲೇ ಮಣಿಪಾಲದಲ್ಲಿ ಮೆಡಿಕಲ್ ಕಾಲೇಜು ಇರುವ ಕಾರಣ ಉಡುಪಿ ಜಿಲ್ಲೆಗೆ ಲಭ್ಯವಾಗುವ ಕಾಲೇಜು ಬೈಂದೂರಿನಲ್ಲಿ ಆಗಲಿ ಎನ್ನುವುದು ಬಯಕೆ.
4.ಕೊಡೇರಿ, ಶಿರೂರು, ಮರವಂತೆ, ಗಂಗೊಳ್ಳಿಯಲ್ಲಿ ಹಿಂದಿನ ಬಿಜೆಪಿ ಸರಕಾರ ಬಂದರಿಗೆ ಯೋಜನೆ ರೂಪಿಸಿತ್ತು. ಕರಾವಳಿಯಲ್ಲಿ ಮೀನುಗಾರಿಕೆಗೆ ಪ್ರಾಧಾನ್ಯವಾದ ಕಾರಣ ಮೀನುಗಾರರಿಗೆ 200 ಲೀ. ಸಬ್ಸಿಡಿ ಸೀಮೆಎಣ್ಣೆ ಬದಲು 400 ಲೀ. ಕೊಡಲಾಗುವುದು. ಪ್ರತಿ ಬಂದರಿನಲ್ಲಿ ಮೀನುಗಾರರಿಗೆ ವಿಶ್ರಾಂತಿ ಕೊಠಡಿ, ಎಲ್ಲ ಮೀನುಗಾರರಿಗೆ ಮೊಬೈಲ್ ಕೊಡಲಾಗುವುದು.
5.ಸೌಪರ್ಣಿಕಾ ನದಿ ನೀರು ಶುಚಿಗೊಳಿಸಬೇಕಿದೆ. ಹಸಿರುಗುಂಡಿ ಜಲಪಾತ ಮೂಲಕ ಹೊಳೆ ನೀರು ಬಂದರೆ ಸ್ವತ್ಛವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಕೊಲ್ಲೂರಿನ ರಥಬೀದಿ ಹಾದುಹೋಗುವ ಬದಲು ಬೈಪಾಸ್ ಮಾದರಿ ರಸ್ತೆ ರೂಪಿಸಲಾಗುವುದು. ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣಕ್ಕೆ ಆದ್ಯತೆ ನೀಡಿ, ಇಡೀ ಬೈಂದೂರಿನ ಚಿತ್ರಣ ಬದಲಾಗುವಂತೆ ಮಾಡುವುದು ಗುರಿ.
6. ನಾಡ, ಗಂಗೊಳ್ಳಿ, ವಂಡ್ಸೆಯಲ್ಲಿ ಪದವಿ ಕಾಲೇಜುಗಳ ಸ್ಥಾಪನೆಗೆ ಆದ್ಯತೆ. ಡಿಪ್ಲೋಮಾ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆಗೆ ಯತ್ನಿಸುತ್ತೇವೆ. ಎಂಜಿನಿಯರಿಂಗ್ ಕಾಲೇಜಿನ ಬದಲು ಮೆಡಿಕಲ್ ಕಾಲೇಜು ಸ್ಥಾಪನೆಗೆ ನಾನು ಆದ್ಯತೆ ಕೊಡುತ್ತೇನೆ.
7. ಸಿದ್ದಾಪುರದಲ್ಲಿ ಪದವಿ ಪೂರ್ವ ಕಾಲೇಜಿನ ಸ್ಥಾಪನೆಗೆ ಯೋಜನೆ ರೂಪಿಸುತ್ತೇವೆ. ಈಗ ಹೊಸಂಗಡಿ, ಶಂಕರ ನಾರಾಯಣಕ್ಕೆ ಹೋಗಬೇಕು. ಹಳ್ಳಿಹೊಳೆ ಪ್ರೌಢಶಾಲೆಯನ್ನು ಪಿಯು ಆಗಿ ಮಾಡುತ್ತೇವೆ. ಪ್ರತೀ 3 ಕಿಮೀ.ಗೊಂದು ಪ್ರೌಢಶಾಲೆ ನನ್ನ ಕನಸು.
8.ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪನೆಯಾದರೆ ಮಹಿಳೆಯರಿಗೂ ಉದ್ಯೋಗ ದೊರೆಯುತ್ತದೆ. ದೊಡ್ಡ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು ಉದ್ಯೋಗಾವಕಾಶಕ್ಕೆ ಯತ್ನಿಸುತ್ತೇವೆ.
9.ಮೊದಲು ರಸ್ತೆ ದುರಸ್ತಿಗೆ ಆದ್ಯತೆ ನೀಡುತ್ತೇವೆ. ಬಳಿಕ ಅತಿ ಗ್ರಾಮೀಣ ಭಾಗವನ್ನೂ ತಲುಪುವಂತೆ ಸಮಗ್ರ ಸಾರಿಗೆ ವ್ಯವಸ್ಥೆಗೆ ನೀಲ ನಕಾಶೆ ಮಾಡಲಾಗುವುದು.
10. ಕುಡಿಯುವ ನೀರು, ಉತ್ತಮ ರಸ್ತೆ, ಶಿಕ್ಷಣ. ಇವು ಮೂರು ಆದ್ಯತೆಯ ವಿಷಯಗಳು.
ಕೈಗಾರಿಕೋದ್ಯಮಿಯಾಗಿ, 2 ಬಾರಿ ಕೊಲ್ಲೂರು ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ, ಕುಗ್ರಾಮಗಳಾಗಿದ್ದ ಕೊಡ್ಲಾಡಿಯ ಹೆಮ್ಮಕ್ಕಿ, ಅರೆಶಿರೂರು, ಮಾವಿನಕಟ್ಟೆ ,ಹೊಸೂರು ಭಾಗದಲ್ಲಿ ಪ್ರೌಢಶಾಲೆಗಳು, ಕೊಲ್ಲೂರಿನಲ್ಲಿ ಪ.ಪೂ. ಕಾಲೇಜನ್ನು ಆರಂಭಿಸಿದರು. ಕುಂದಾಪುರ ಎಜುಕೇಶನ್ ಸೊಸೆ„ಟಿಯ ಅಧ್ಯಕ್ಷರಾಗಿ, ಸಂಚಾಲಕರಾಗಿ ಸತತ 17 ವರ್ಷಗಳಿಂದ ಕಾರ್ಯನಿರ್ವಹಣೆ. ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಆರ್.ಎನ್.ಎಸ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರು. 2013ರಿಂದ ಬಿಜೆಪಿಯಲ್ಲಿದ್ದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ.
– ಬಿ.ಎಂ. ಸುಕುಮಾರ ಶೆಟ್ಟಿ
ಬಿಜೆಪಿ ಅಭ್ಯರ್ಥಿ
1. ಏಕಗವಾಕ್ಷಿ ಪದ್ಧತಿ ಮೂಲಕ ಸಾರ್ವಜನಿಕರಿಗೆ ಎಲ್ಲ ಸೇವೆಗಳೂ ಒಂದೇ ಸೂರಿನಡಿ ದೊರೆಯಬೇಕೆಂಬ ಮಹದಾಶೆ ಇದೆ. ತಾಲೂಕು ಕೇಂದ್ರದಲ್ಲಿ ಮಾತ್ರವಲ್ಲ, ಹೋಬಳಿ, ಗ್ರಾಮಾಂತರ ಪ್ರದೇಶದಲ್ಲೂ ಇಂತಹ ಏಕಗವಾಕ್ಷಿ ಪದ್ಧತಿ ತರಲು ಮೊದಲು ಆದ್ಯತೆ ನೀಡುತ್ತೇನೆ.
2.ಸಿಆರ್‌ಝೆಡ್ ಸಮಸ್ಯೆ ಇದೆ. ಡೀಮ್ಡ್ ಅರಣ್ಯ ಸಮಸ್ಯೆ ಇದೆ. ಅರಣ್ಯ ಇಲಾಖೆ ಕಾನೂನಿನ ತೊಡಕಿದೆ. ಇವೆಲ್ಲ ಅಭಿವೃದ್ಧಿಗೆ ತೊಡಕಾಗುತ್ತಿದೆ. ಸರಕಾರಕ್ಕೆ ಸಂಬಂಧಪಟ್ಟ ಇಲಾಖೆಗಳಾದರೂ ಸಾರ್ವಜನಿಕರ ಹಿತಕ್ಕಾಗಿ ಇವುಗಳಿಂದ ಪ್ರಯೋಜನ ದೊರೆಯುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಈ ಇಲಾಖೆಗಳ ಕಾನೂನುಗಳನ್ನು ಮಾರ್ಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲಾಗುವುದು.
3.ಅಧಿಕಾರಕ್ಕೆ ಬಂದ ಎರಡೂವರೆ ವರ್ಷದೊಳಗೆ ಬೈಂದೂರು ಆಸ್ಪತ್ರೆ ಮೇಲ್ದರ್ಜೆಗೇರಿಸಲಾಗುವುದು. ಆರೋಗ್ಯ ಕ್ಷೇತ್ರದ ಸಮಗ್ರ ಸುಧಾರಣೆಗೆ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು.
4.ಹೊಗೆಮುಕ್ತ ಮಾಡಬೇಕೆಂದು ಸೀಮೆಣ್ಣೆ ನಿಲ್ಲಿಸಿದ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಮೀನುಗಾರರಿಗೆ ಸಮಸ್ಯೆಯಾಗುತ್ತದೆ. ಡೀಸೆಲ್ ಸಬ್ಸಿಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕಿದೆ. ಮೀನುಗಾರರಿಗೆ ಭದ್ರತೆ ಇಲ್ಲ. ಕಾರ್ಮಿಕ ಕಲ್ಯಾಣ ಯೋಜನೆ ಮೀನುಗಾರರಿಗೂ, ರೈತ ಕಾರ್ಮಿಕರಿಗೂ ಜಾರಿ ಮಾಡುತ್ತೇವೆ. ಜನ ಕಲ್ಯಾಣಕ್ಕೆ ಅನುಕೂಲವಾಗುವಂತೆ ಆಡಳಿತ ವ್ಯವಸ್ಥೆ ರೂಪಿಸುತ್ತೇವೆ.
5.ಕೊಲ್ಲೂರು ಇಂದು ಅಂತಾರಾಷ್ಟ್ರೀಯವಾಗಿ ಬೆಳೆದ ಧಾರ್ಮಿಕ ಕೇಂದ್ರ. ಕೆಲವೆಡೆ ಮೂಗುಮುಚ್ಚಿಕೊಂಡು ಹೋಗುವ ಸ್ಥಿತಿ ಇದೆ. ಅದಕ್ಕಾಗಿ ಅಲ್ಲಿ ಸ್ವತ್ಛತೆಗೆ ಆದ್ಯತೆ ಕೊಡಬೇಕು. ಬಸ್ ನಿಲ್ದಾಣ, ಸೌಪರ್ಣಿಕಾ ನದಿ ಸ್ವತ್ಛಗೊಳಿಸಿ ಸ್ನಾನಘಟ್ಟ ನಿರ್ಮಿಸುವುದು ಸೇರಿದಂತೆ ಅನೇಕ ಕೆಲಸ ಕಾರ್ಯಗಳಾಗಬೇಕಿದೆ. ಕೊಲ್ಲೂರು ಅಭಿವೃದ್ಧಿಗೂ ಗರಿಷ್ಠ ಆದ್ಯತೆ ನೀಡುತ್ತೇನೆ.
6.ತಳಮಟ್ಟದ ಶಿಕ್ಷಣದ ಭದ್ರ ಬುನಾದಿ ಹಾಕಲು ಪ್ರಯತ್ನಿಸುತ್ತೇನೆ. ಇದಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಸಮರ್ಪಕಗೊಳಿಸುವ ಉದ್ದೇಶಿವಿದೆ. ಕಾಲೇಜುಗಳ ಸ್ಥಾಪನೆಗೆ ಯತ್ನಿಸುತ್ತೇವೆ. ತಳಮಟ್ಟದ ಶಿಕ್ಷಣ ದೊರೆಯದೇ ಓದು ತೊರೆಯದಂತೆ ಮಾಡುತ್ತೇವೆ. ಇದಕ್ಕಾಗಿ ಯೋಜನೆಗಳನ್ನು ರೂಪಿಸುತ್ತೇವೆ.
7.ಶಿಕ್ಷಣ ಪಡೆಯಲು ಬೈಂದೂರಿನ ಜನ ದೂರ ಹೋಗುವಂತಾಗಬಾರದು. ಕೆರಾಡಿಯಂತಹ ಪ್ರದೇಶದಲ್ಲಿ ಬಸ್ ಸಮಸ್ಯೆ ಇದೆ. ತಳಮಟ್ಟದಲ್ಲಿ ಇದಕ್ಕೆ ಸೂಕ್ತ ವ್ಯವಸ್ಥೆಯಾಗದೇ ಇತರ ಅಭಿವೃದ್ಧಿಗೆ ತೊಡಕಾಗುತ್ತದೆ. ಇದಕ್ಕಾಗಿ ಸಮಸ್ಯೆಗಳ ಪಟ್ಟಿಯನ್ನು ನಾವು ಹೊಂದಿದ್ದು, ಅವುಗಳನ್ನು ತ್ವರಿತವಾಗಿ ಪರಿಹರಿಸುವತ್ತ ಗಮನಹರಿಸುತ್ತೇವೆ.
8.ಬೈಂದೂರಿಗೆ ಸಾಫ್ಟ್ವೇರ್ ಕಂಪನಿಗಳು ಬರಬೇಕಿದೆ. ಇಲ್ಲಿನ ಯುವಕರಿಗೆ ಶಿಕ್ಷಣ ಕೊಟ್ಟು ಅಂತಹ ಕಂಪನಿಗಳು ಬರುವಂತೆ ಯೋಜನೆ ರೂಪಿಸುತ್ತೇವೆ. ಮಹಿಳೆಯರಿಗೆ ಉದ್ಯೋಗಾವಕಾಶಕ್ಕೆ ಆದ್ಯತೆಯನ್ನು ನೀಡುತ್ತೇವೆ. ಇದಕ್ಕಾಗಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಸರಕಾರ ಖರೀದಿಸುವಂತೆ ವ್ಯವಸ್ಥೆ ಮಾಡುತ್ತೇವೆ.
9. ಹತ್ತು ಕೇಂದ್ರಗಳನ್ನು ಸಂಧಿಸುವ ಬಸ್‌ಗಳ ಸಂಚಾರಕ್ಕೆ ರಿಂಗ್ ರೋಡ್ (ವರ್ತುಲ ರಸ್ತೆ) ನಿರ್ಮಾಣ ಆಗಬೇಕಿದೆ. ನಂತರ ಅಲ್ಲಿಗೆ ಬಸ್ ವ್ಯವಸ್ಥೆ ಆಗಬೇಕಿದೆ. ಗ್ರಾಮೀಣ ಭಾಗಕ್ಕೂ ವಿಶೇಷ ಆದ್ಯತೆ ನೀಡುತ್ತೇವೆ.
10. ಪ್ರತಿ ಮನೆಗೆ ಸರಕಾರಿ ಸವಲತ್ತು ತಲುಪುವಂತೆ ಮಾಡುವುದು, ಶಿಕ್ಷಣ, ರಸ್ತೆ ದುರಸ್ತಿ.
ರವಿ ಶೆಟ್ಟಿ ಎಂದೇ ಖ್ಯಾತರಾದ ಸಿ. ರವೀಂದ್ರ ಅವರು ಉದ್ಯಮಿಯಾಗಿ, ಸಾಮಾಜಿಕ ಹೋರಾಟಗಾರನಾಗಿ, ಕಾರ್ಮಿಕ ವೇದಿಕೆಯ ಅಧ್ಯಕ್ಷರಾಗಿ, ಸಮಾಜಸೇವಕರಾಗಿ ಹೆಸರು ಮಾಡಿದವರು. ಆಸ್ಪತ್ರೆ ಅವ್ಯವಸ್ಥೆ, ಮರಳುಗಾರಿಕೆ ಸೇರಿದಂತೆ ಅನೇಕ ಹೋರಾಟಗಳ ಮೂಲಕ ಬೈಂದೂರಿನಲ್ಲಿ ಜನರಿಗೆ ಪರಿಚಿತರಾಗಿದ್ದಾರೆ.
– ರವಿ ಶೆಟ್ಟಿ
ಜೆಡಿಎಸ್ ಅಭ್ಯರ್ಥಿ
ನಿರ್ವಹಣೆ: ಉದಯವಾಣಿ ಕಚೇರಿ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.