ಬೈಂದೂರು,ಕುಂದಾಪುರ : ಸಿದ್ಧವಾಯಿತು ಚುನಾವಣಾ ಕಣ
Team Udayavani, Apr 17, 2018, 6:55 PM IST
ಕುಂದಾಪುರ: ಬೈಂದೂರು ಬಿಜೆಪಿ ಅಭ್ಯರ್ಥಿ ಹಾಗೂ ಕುಂದಾಪುರ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗದೆ ಹಚ್ಚಲಷ್ಟೇ ಬಾಕಿಯಿರುವ ಪಟಾಕಿಯಂತಿದ್ದ ಚುನಾವಣಾ ಕಣ ಸೋಮವಾರದಿಂದ ಕಳೆಗಟ್ಟತೊಡಗಿದೆ.
ಹಾಲಾಡಿ ಪ್ರಚಾರ
ಕುಂದಾಪುರದಲ್ಲಿ ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅಭ್ಯರ್ಥಿ ಎಂದು ಮೊದಲ ಪಟ್ಟಿಯಲ್ಲಿ ಘೋಷಣೆಯಾಗಿದೆ. ಬಳಿಕ ಅವರು ಆಂತರಿಕ ಭಿನ್ನಮತ ಶಮನ ಕಾರ್ಯವನ್ನು ಮೊದಲು ನಡೆಸಿದರು. ತಮ್ಮ ರಾಜಕೀಯದ ಗುರು ಎಂದೇ ಪರಿಗಣಿತರಾದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಅವರು ಹಾಲಾಡಿ ಸ್ಪರ್ಧೆಗೆ ವಿರೋಧಿ ಎಂಬ ಸುದ್ದಿ ಹಬ್ಬಿದ್ದನ್ನು ಶಮನ ಮಾಡಲು ನೋಡಿದರು. ಜತೆಯಾಗಿ ಉಪಾಹಾರ ಸೇವಿಸಿದರು.
ಯಾವ ಜಾಲತಾಣದಲ್ಲಿ ಹಾಲಾಡಿ -ಕೊಡ್ಗಿ ಮುನಿಸು ಎಂದು ಸುದ್ದಿ ಹಬ್ಬಿತೋ ಅದೇ ಜಾಲತಾಣದಲ್ಲಿ ಹಾಲಾಡಿ- ಕೊಡ್ಗಿ ಉಪಾಹಾರ ದೃಶ್ಯ ದುಪ್ಪಟ್ಟು ಪ್ರಸಾರವಾಯಿತು. ಇದೇ ರೀತಿ ಅಪ್ಪಣ್ಣ ಹೆಗ್ಡೆ ಅವರಿಗೆ ಅಸಮಾಧಾನವಿದೆ ಎನ್ನುವ ಸುದ್ದಿಗಳನ್ನೂ ನಿವಾಳಿಸಿ ಹಾಕಿದರು. ಹಾಲಾಡಿ ಅವರು ಬಸೂÅರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎ. 13ರಿಂದ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಬಹಿರಂಗ ಸಭೆಗಳಿಗಿಂತ ಹೆಚ್ಚಾಗಿ ಮನೆ ಮನೆ ಭೇಟಿಗೆ ಆದ್ಯತೆ ನೀಡಿದ್ದಾರೆ.
ಮಲ್ಲಿಗೆ ಸಿಕ್ಕಿತು ಗ್ರೀನ್ ಸಿಗ್ನಲ್
ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರಿಗೆ ರವಿವಾರ ರಾತ್ರಿ ಗ್ರೀನ್ ಸಿಗ್ನಲ್ ದೊರೆತಿದೆ. ಚುನಾವಣೆ ಘೋಷಣೆಯಾಗುವವರೆಗೆ ಅವರು ಪಕ್ಷದ ಪ್ರಚಾರ ಕಾರ್ಯವನ್ನು ವ್ಯವಸ್ಥಿತ ವಾಗಿಯೇ ಮಾಡಿದ್ದಾರೆ. ವಿವಿಧ ಹಳ್ಳಿ ಗಳಿಗೆ ತೆರಳಿದ್ದಾರೆ. ಕಾರ್ಯಕರ್ತರನ್ನು ಒಟ್ಟುಗೂಡಿಸಿದ್ದಾರೆ. ಜನರ ಮನದಲ್ಲಿ ನೆಲೆಯಾಗಲು ಯತ್ನಿಸಿದ್ದಾರೆ. ಟಿಕೆಟ್ ಘೋಷಣೆಯಾಗಿರದ ಕಾರಣ ಅಧಿಕೃತ ಪ್ರಚಾರ ಕೈಗೊಳ್ಳಲು ನೀತಿ ಸಂಹಿತೆಯ ಅಡ್ಡಿ ಇತ್ತು. ಅವರು ಎ. 16ರಂದು ಕುಂದೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಚಾರಕ್ಕೆ ತೊಡಗಿದ್ದಾರೆ. ಈವರೆಗೆ ಪಕ್ಷಕ್ಕಾಗಿ ಇಲ್ಲಿ ಕೆಲಸ ಮಾಡಿ ಕೊನೆ ಕ್ಷಣದಲ್ಲಿ ಟಿಕೆಟ್ ಬೇರೆಯವರ ಪಾಲಿಗಾದರೆ ಎನ್ನುವುದು ಅವರಿಗಿದ್ದ ಆತಂಕ.
ಬೈಂದೂರು ತಲೆಬಿಸಿ
ಬೈಂದೂರಿನಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ. ಗೋಪಾಲ ಪೂಜಾರಿ ಎನ್ನುವುದು ರವಿವಾರ ರಾತ್ರಿ ಪಕ್ಕಾ ಆಗಿದೆ. ಬಿಜೆಪಿಯಿಂದ ಬಿ.ಎಂ. ಸುಕುಮಾರ ಶೆಟ್ಟಿ ಅವರೆಂದು ಸೋಮವಾರ ಪ್ರಕಟವಾಗಿದೆ. ಇಲ್ಲಿ ಸುಕುಮಾರ ಶೆಟ್ಟರ ಜತೆ ಜಯಪ್ರಕಾಶ್ ಹೆಗ್ಡೆ ಅವರಿಗೆ ವಾಂಛೆ ಇದ್ದ ಕಾರಣ ಮೊದಲ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಕಳೆದ ಬಾರಿ ಪಕ್ಷಕ್ಕೆ ಸೇರ್ಪಡೆಯಾದ 15 ದಿನಗಳಲ್ಲಿ ಚುನಾವಣಾ ಅಭ್ಯರ್ಥಿ ಎಂದು ಘೋಷಣೆಯಾದರೂ 51 ಸಾವಿರ ಮತಗಳನ್ನು ಪಡೆದು ಸೋತವರು ಸುಕುಮಾರ ಶೆಟ್ಟರು. ಭಟ್ಕಳ, ಕುಂದಾಪುರ, ಉಡುಪಿಯಲ್ಲಿ ಪಕ್ಷ ಸಾಕಷ್ಟು ಬಲಿಷ್ಠವಾಗಿದೆ. ಹಾಗಿದ್ದರೂ ಅಲ್ಲಿನ ಬಿಜೆಪಿ ಅಭ್ಯರ್ಥಿಗಳಿಗೆ 16 ಸಾವಿರಕ್ಕಿಂತ ಹೆಚ್ಚು ಓಟು ಬರಲಿಲ್ಲ. ಆದರೆ ಇಲ್ಲಿ ಕೆಜೆಪಿ ಅಭ್ಯರ್ಥಿ ಇದ್ದರೂ ಪಕ್ಷಕ್ಕೆ ಹೊಸಬನಾಗಿ ಕಾರ್ಯಕರ್ತರ ಪರಿಚಯ ಇಲ್ಲದಿದ್ದರೂ ತನಗಿಷ್ಟು ಮತ ಬಂದಿದೆ. ಚುನಾವಣೆ ಅನಂತರ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುವುದು ಸುಕುಮಾರ ಶೆಟ್ಟರ ವಾದ.
ಜೆಪಿ ಹೆಗ್ಡೆ ಪ್ರಯತ್ನ
ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ಜಯಪ್ರಕಾಶ್ ಹೆಗ್ಡೆಯವರಿಗೆ ಪಕ್ಷ ಎ. 16 ಸಂಜೆಯ ವರೆಗೆ ಯಾವೊಂದೂ ಸೀಟು ಘೋಷಿಸಿಲ್ಲ.ಅವರು ಕುಂದಾಪುರದಿಂದ ಸ್ಪರ್ಧಿಸಬೇಕೆಂದು ಬೆಂಬಲಿಗರ ಒತ್ತಾಯ ಇತ್ತು. ಸಾಧ್ಯವಾಗಲಿಲ್ಲ. ಬೈಂದೂರಿನ ಕಡೆಗೆ ಚಿತ್ತ ಹರಿಸಿ ಸುಕುಮಾರ ಶೆಟ್ಟರ ನಿದ್ದೆ ಕೆಡಿಸಿದರು. ಪಕ್ಷದಲ್ಲಿ ಅವರಿಗೆ ಇರುವ ಪ್ರಭಾವಿ ಸಂಪರ್ಕಗಳು ಅವರ ಹೆಸರು ಚಾಲ್ತಿಯಲ್ಲಿರುವಂತೆ ಮಾಡಿತ್ತು. ಆದರೆ ಪಕ್ಷದ, ಸಂಘದ ಹಿರಿಯರ ಸೂಚನೆ ಇದ್ದಾಗಲೂ ಕುಂದಾಪುರದಿಂದ ಟಿಕೆಟ್‌ಗೆ ಯತ್ನಿಸಿದ್ದು, ಹಾಲಾಡಿ ವಿರೋಧಿ ಬಣದ ಜತೆಗೆ ಗುರುತಿಸಿಕೊಂಡದ್ದು ಅವರ ಪಾಲಿಗೆ ತುಸು ಸಂಕಷ್ಟ ತಂದೊಡ್ಡಿದೆ. ಒಟ್ಟಿನಲ್ಲಿ ಬೈಂದೂರು, ಕುಂದಾಪುರ ಕ್ಷೇತ್ರಗಳು ಕಳೆಗಟ್ಟತೊಡಗಿವೆ. ಬೈಂದೂರಿನಲ್ಲಿ ಜೆಡಿಎಸ್‌ನಿಂದ ರವಿ ಶೆಟ್ಟಿ, ಸಿಪಿಐಎಂನಿಂದ ಸುರೇಶ್ ಕಲ್ಲಾಗರ ಸ್ಪರ್ಧಿಸುತ್ತಿದ್ದಾರೆ.
– ಲಕ್ಷ್ಮೀಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
Delhi; ಈಗ ಟೈಂ ಬಾಂಬ್! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ
Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!
Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ
Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.