ಬೈಂದೂರಿಗೆ ಕಮಲಶಿಲೆ, ಹಳ್ಳಿಹೊಳೆ ಗ್ರಾಮ ಸೇರ್ಪಡೆಗೆ ಆಕ್ಷೇಪ
Team Udayavani, Dec 23, 2017, 12:01 PM IST
ಕುಂದಾಪುರ: ಜ. 1ರಿಂದ ಹೊಸ ತಾಲೂಕುಗಳು ಅಸ್ತಿತ್ವಕ್ಕೆ ಬರುವ ಸಾಧ್ಯತೆ ನಿಚ್ಚಳವಾಗಿರುವಂತೆಯೇ, ಕಮಲಶಿಲೆ, ಹಳ್ಳಿಹೊಳೆ ಗ್ರಾಮಗಳನ್ನು ಬೈಂದೂರು ತಾಲೂಕಿಗೆ ಸೇರಿಸುವುದಕ್ಕೆ ಸ್ಥಳೀಯವಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಗ್ರಾಮಗಳ ವಿಂಗಡನೆ ಕುಂದಾಪುರ ತಾಲೂಕಿನ 3 ಹೋಬಳಿಗಳಲ್ಲಿ ಸದ್ಯ 101 ಗ್ರಾಮಗಳಿದ್ದು, ಅವುಗಳಲ್ಲಿ ಬೈಂದೂರು ಹೋಬಳಿಯ 26 ಹಾಗೂ ವಂಡ್ಸೆ ಹೋಬಳಿಯ 2 ಗ್ರಾಮಗಳಾದ ಕಮಲಶಿಲೆ, ಸೇನಾಪುರ ಸೇರಿದಂತೆ 28 ಗ್ರಾಮಗಳು ಬೈಂದೂರು ತಾಲೂಕಿಗೆ, ಕುಂದಾಪುರ ಹೋಬಳಿಯ 36 ರಲ್ಲಿ 32 (ಬೆಳ್ವೆ, ಅಲಾºಡಿ, ಶೇಡಿಮನೆ, ಮಡಾಮಕ್ಕಿ ಹೆಬ್ರಿ ತಾಲೂಕಿಗೆ) ಗ್ರಾಮ, ವಂಡ್ಸೆ ಹೋಬಳಿಯ 35 ಗ್ರಾಮಗಳು ಒಟ್ಟು 67 ಗ್ರಾಮಗಳು ಕುಂದಾಪುರ ತಾಲೂಕಲ್ಲೇ ಉಳಿಯಲಿವೆ.
ಆಕ್ಷೇಪ ಸಲ್ಲಿಕೆಗೆ ಅವಕಾಶ
ಹೊಸ ತಾಲೂಕಿಗೆ ಗ್ರಾಮಗಳನ್ನು ಸೇರಿಸಿ ರಾಜ್ಯ ಸರಕಾರವು ಹೊರಡಿಸಿದ ಅಧಿಸೂಚನೆಗೆ ಗ್ರಾಮಗಳ ನಾಗರಿಕರು ಆಕ್ಷೇಪ ಸಲ್ಲಿಸಬಹುದು. ಡಿ. 16 ರಿಂದ ತಿಂಗಳೊಳಗೆ ಕಂದಾಯ ಇಲಾಖೆ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಲಿಖೀತವಾಗಿ ಆಕ್ಷೇಪಣೆ ಸಲ್ಲಿಸಬಹುದು. ಕಮಲಶಿಲೆ ಗ್ರಾಮದ ಒಂದು ಬದಿ ಸಿದ್ದಾಪುರ ಗ್ರಾಮದ ಪೇಟೆಯವರೆಗೂ ಚಾಚಿಕೊಂಡಿದ್ದು, ಈಗ ಈ ಗ್ರಾಮವನ್ನು ಕುಂದಾಪುರದಲ್ಲೇ ಉಳಿಸಿಕೊಂಡು, ಮುಂದೆ ಶಂಕರನಾರಾಯಣ ತಾಲೂಕು ರಚನೆಯಾದಾಗ ಅದಕ್ಕೆ ಸೇರ್ಪಡೆಗೊಳಿಸುವುದು ಜನರ ಹಿತದೃಷ್ಟಿಯಿಂದ ಒಳ್ಳೆಯದು ಎಂಬುದು ಇಲ್ಲಿನವರ ಅಪೇಕ್ಷೆಯಾಗಿದೆ.
ವಿರೋಧ ಯಾಕೆ ?
ಕಮಲಶಿಲೆಯಿಂದ ಈಗಿನ ತಾಲೂಕು ಕೇಂದ್ರವಾದ ಕುಂದಾ ಪುರಕ್ಕೆ 35 ಕಿ.ಮೀ. ದೂರವಿದ್ದು, ನೇರ ಬಸ್ಸಿನ ಸಂಪರ್ಕವಿದೆ. ಆದರೆ ಬೈಂದೂರು ತಾಲೂಕು ಕಮಲಶಿಲೆ, ಹಳ್ಳಿಹೊಳೆಯಿಂದ 70 ಕಿ.ಮೀ. ದೂರವಿದ್ದು, ನೇರ ಬಸ್ ಸಂಪರ್ಕವಿಲ್ಲ. ಕುಂದಾಪುರಕ್ಕೆ ಬಂದೇ ಅಲ್ಲಿಂದ ಬೈಂದೂರಿಗೆ ಹೋಗಬೇಕಾಗುತ್ತದೆ. ಇದರಿಂದ ಉಭಯ ಗ್ರಾಮಸ್ಥರು ಕಂದಾಯ, ಕೋರ್ಟ್, ತಾ.ಪಂ. ಸಹಿತ ಎಲ್ಲ ಸರಕಾರಿ ಕೆಲಸಗಳಿಗೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
ಶಂಕರನಾರಾಯಣ ತಾ| ಹೋರಾಟ ಸಮಿತಿ ವಿರೋಧ
ಬೈಂದೂರು ತಾಲೂಕಿಗೆ ಕಮಲಶಿಲೆ ಹಾಗೂ ಹಳ್ಳಿಹೊಳೆ ಗ್ರಾಮ ಸೇರ್ಪಡೆಗೆ ಸರಕಾರದ ಅಧಿಸೂಚನೆ ಸರಿಯಲ್ಲ. ಇವರೆಡೂ ಗ್ರಾಮಗಳಿಗೆ ಕುಂದಾಪುರವೇ ಹತ್ತಿರ. ಶಂಕರನಾರಾಯಣ ತಾಲೂಕು ರಚನೆಯಾದರೆ ಕಮಲಶಿಲೆ ಗ್ರಾ.ಪಂ. ಸೇರುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಸಹ ಸರಕಾರಕ್ಕೆ ತಾಲೂಕು ರಚನೆಗೆ ಕಳುಹಿಸಿದ ವರದಿಯಲ್ಲಿ ಕಮಲಶಿಲೆಯನ್ನು ಸೇರಿಸಿದ್ದಾರೆ. ಹೀಗಿರುವಾಗ ಏಕಾಏಕಿ ಈ ಎರಡೂ ಗ್ರಾಮಗಳನ್ನು ಬೈಂದೂರಿಗೆ ಸೇರಿಸಿರುವುದಕ್ಕೆ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತದೆ.
ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕರು, ಶಂಕರನಾರಾಯಣ ತಾ| ರಚನಾ ಹೋರಾಟ ಸಮಿತಿ
ಕುಂದಾಪುರದಲ್ಲೇ ಉಳಿಸಿಕೊಳ್ಳಿ
ನಾವು ಎಲ್ಲ ಕೆಲಸಕ್ಕೂ ಕುಂದಾಪುರವನ್ನೇ ಅವಲಂಬಿಸಿದ್ದು, ಈಗ ಕಮಲಶಿಲೆ, ಹಳ್ಳಿಹೊಳೆಯನ್ನು ಬೈಂದೂರಿಗೆ ಸೇರಿಸಿದರೆ ಸಿಕ್ಕಾಪಟ್ಟೆ ದೂರ ಆಗುತ್ತದೆ. ಬೈಂದೂರಿಗೆ ಸುತ್ತಿ ಬಳಸಿ ತೆರಳಬೇಕಿರುವುದರಿಂದ ಈ ಗ್ರಾಮಗಳನ್ನು ಕುಂದಾಪುರದಲ್ಲೇ ಉಳಿಸಿಕೊಳ್ಳಿ.
– ಸಚ್ಚಿದಾನಂದ ಛಾತ್ರ, ಆನುವಂಶೀಯ ಆಡಳಿತ ಮೊಕ್ತೇಸರ, ಕಮಲಶಿಲೆ ದೇವಸ್ಥಾನ
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.