ಜನಸಂಪರ್ಕ ಸಭೆ ಪ್ರಾಮಾಣಿಕ ಸೇವೆಯ ತೃಪ್ತಿ: ಸಚಿವ ಪ್ರಮೋದ್
Team Udayavani, Aug 8, 2017, 8:45 AM IST
ಉಡುಪಿ: ಜನರ ಜೀವನ ಮಟ್ಟ ಸುಧಾರಣೆಯಾಗಬೇಕು, ಜನರ ಜೀವನಶೈಲಿ ಉತ್ತಮವಾಗ ಬೇಕು ಹಾಗೂ ನಿರಂತರ ಅಭಿವೃದ್ಧಿಯನ್ನು ಸಾಧಿಸಬೇಕೆಂಬ ನೆಲೆಯಲ್ಲಿ “ಸರಕಾರ’ ರಚಿಸಲ್ಪಟ್ಟಿದೆ. ಸರಕಾರದ ಈ ಉದ್ದೇಶ ಈಡೇರಬೇಕಾದರೆ ಪ್ರತಿ ಯೊಬ್ಬ ವ್ಯಕ್ತಿಯ ಸಮಸ್ಯೆಯೂ ಪರಿಹರಿಸಲ್ಪಡಬೇಕು. ಜನಪ್ರತಿನಿಧಿಯಾಗಿ ಕರ್ತವ್ಯದಲ್ಲಿ ಲೋಪವೆಸಗದೆ ಪ್ರಾಮಾಣಿಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಚಿಟಾ³ಡಿ ಶ್ರೀ ಶಾರದಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ “ಚಿಟಾ³ಡಿ ವಾರ್ಡ್ ಮಟ್ಟದ ಜನಸಂಪರ್ಕ ಸಭೆ’ಯ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶೀಘ್ರ ನಿವೇಶನ ಹಂಚಿಕೆ
ಅರ್ಜಿ ಸಲ್ಲಿಸಿದ ಬಾಡಿಗೆ ಮನೆಯಲ್ಲಿ ವಾಸ್ತವ್ಯ ವಿರುವವರು, ನಿವೇಶನರಹಿತ 500 ಮಂದಿಗೆ ಇನ್ನೆರಡು ತಿಂಗಳಲ್ಲಿ ಹೆರ್ಗ ಮತ್ತು ಶಿವಳ್ಳಿಯಲ್ಲಿ ನಿವೇಶನ ನೀಡಲಾಗುವುದು. 94ಸಿಸಿ ಅಡಿ ಅರ್ಜಿ ಸಲ್ಲಿಸಲು ಸೆ. 8ರವರೆಗೆ ಅವಕಾಶವಿದ್ದು, ಅರ್ಜಿ ಸಲ್ಲಿಸಿ ಹಕ್ಕುಪತ್ರ ಪಡೆದುಕೊಳ್ಳಬೇಕು. ನಗರಸಭೆಯ ಸ್ವತ್ಛ ಉಡುಪಿ ಅಥವಾ ಕಸರಹಿತ ಉಡುಪಿ ಯೋಜನೆಗೆ ಜನರಿಂದ ಸಹಕಾರ ಒದಗಿ ಬಂದರೆ ಉಡುಪಿ ನಗರವನ್ನು ಮಾದರಿ ಸ್ವತ್ಛ ನಗರವನ್ನಾಗಿಸಬಹುದು ಎಂದರು.
ಉಡುಪಿ ವಿಧಾನಸಭಾ ವ್ಯಾಪ್ತಿಯ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳಲ್ಲದೇ ವಿಶೇಷ ಅನುದಾನ ಗಳನ್ನು ಈಗಾಗಲೇ ತರಲಾಗಿದ್ದು, ಇನ್ನಷ್ಟು ವಿಶೇಷ ಅನುದಾನಕ್ಕಾಗಿ ಮುಖ್ಯಮಂತ್ರಿಯವರಲ್ಲಿ ಬೇಡಿಕೆ ಇರಿಸಿದ್ದೇನೆ. ಒಟ್ಟಾರೆ ಉಡುಪಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದು, ಜನರ ಆಶೀರ್ವಾದ ವಿದ್ದರೆ ಇನ್ನೂ ಹೆಚ್ಚಿನ ಚಾಕರಿ ಮಾಡಲು ಸಿದ್ಧನಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.
ವಿವಿಧ ಸವಲತ್ತು ವಿತರಣೆ
ಸಚಿವರು ಫಲಾನುಭವಿಗಳಿಗೆ ವಿವಿಧ ಪಿಂಚಣಿ, ಸವಲತ್ತುಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಅಂಗವಿಕಲ ವೇತನ, ಪ್ರೋತ್ಸಾಹಧನ ವಿತರಿಸಿದರು. ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಸಚಿವರು ಬಹುತೇಕ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಚಿಟಾ³ಡಿ ವಾರ್ಡ್ ಸದಸ್ಯ ನವೀನ್ ಭಂಡಾರಿ, ನಗರಸಭೆ ಸದಸ್ಯರಾದ ರಮೇಶ್ ಕಾಂಚನ್, ಜನಾರ್ದನ್ ಭಂಡಾರ್ಕರ್, ಗಣೇಶ್ ನೇರ್ಗಿ, ನಾರಾಯಣ ಕುಂದರ್, ಹಸನ್ ಸಾಹೇಬ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್, ತಾ.ಪಂ. ಸಿಇಒ ಮೋಹನ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಪ್ರಸ್ತಾವನೆಗೈದು, ಸ್ವಾಗತಿಸಿದರು. ಸುಧಾಕರ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ತಹಶೀಲ್ದಾರ್ ಮಹೇಶ್ಚಂದ್ರ ವಂದಿಸಿದರು.
ಹಸಿವು ನೀಗಿಸಿದ ಅನ್ನಭಾಗ್ಯ ಯೋಜನೆ
ಸಿದ್ದರಾಮಯ್ಯ ನೇತೃತ್ವದ ಸರಕಾರ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಹಸಿವು ಮುಕ್ತ ರಾಜ್ಯಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಹಲವರ ಭಿನ್ನಾಭಿಪ್ರಾಯ ಮತ್ತು ಆಕ್ಷೇಪಗಳೂ ಕೇಳಿ ಬಂದಿವೆ. ಆದರೆ ಉಡುಪಿ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಆರ್ಥಿಕ ಸಂಕಷ್ಟದಲ್ಲಿರುವ ಸುಮಾರು 100 ಕುಟುಂಬಗಳು ಸರಕಾರದಿಂದ ಕೊಡಲ್ಪಡುವ 500 ರೂ. ಸಹಾಯಧನ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿವೆ. ಹಾಗಾದರೆ ರಾಜ್ಯದಾದ್ಯಂತ ಅದೆಷ್ಟು ಮಂದಿಗೆ ಈ ಯೋಜನೆ ಆಶ್ರಯವಾಗಿರಬಹುದು ಎಂಬುದನ್ನು ಟೀಕೆ ಮಾಡುವವರು ಊಹಿಸಿ ಪ್ರಶ್ನಿಸಿಕೊಳ್ಳ ಬೇಕಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.