BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್
Team Udayavani, Apr 20, 2024, 12:33 AM IST
ಉಡುಪಿ: ಸ್ವ-ಇಚ್ಛೆಯಿಂದ ಬಿಜೆಪಿ ಸೇರಿದ್ದೇನೆ. ನಾನು ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂಬುದನ್ನು ಬಿಜೆಪಿ ನಿರ್ಧರಿಸುತ್ತಿದೆ. ಮಂಡ್ಯದಲ್ಲಿ ಪ್ರಚಾರ ಮಾಡಬೇಕು ಎಂದು ಬಿಜೆಪಿ ಹೇಳಿದರೆ ಪ್ರಚಾರ ಮಾಡುತ್ತೇನೆ ಎಂದು ಸುಮಲತಾ ಅಂಬರೀಷ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ದರ್ಶನ್ ಅವರನ್ನು ಬೇರೆ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗು ಅಥವಾ ಹೋಗುವುದು ಬೇಡ ಎಂದು ನಾನು ಹೇಳಲು ಸಾಧ್ಯವಿಲ್ಲ. ನಾನು ಮಂಡ್ಯದಲ್ಲಿ ನಿಂತಿದ್ದರೆ ನನ್ನ ಪರ ಪ್ರಚಾರ ಮಾಡುತ್ತಿದ್ದರು ಮತ್ತು ಹಿಂದಿನ ಚುನಾವಣೆಯಲ್ಲಿ ದರ್ಶನ್ ಹಾಗೂ ಯಶ್ ಪ್ರಚಾರ ಮಾಡಿದ್ದರು. ಪ್ರಚಾರ ಯಾರಿಗೆ ಮಾಡಬೇಕು ಅನ್ನೋದು ಅವರ ಇಚ್ಛೆ. ಹೋಗು ಅಥವಾ ಬೇಡ ಎನ್ನಲು ನಾನು ಯಾರು? ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಮದ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು. ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಪಕ್ಷ ಮುಖ್ಯ ಅಲ್ಲ ನಿಂತಿರುವ ವ್ಯಕ್ತಿ ಮುಖ್ಯ ಎಂದು ದರ್ಶನ್ ಹೇಳುತ್ತ ಬಂದಿದ್ದಾರೆ ಎಂದರು.