ಅಂತ್ಯಸಂಸ್ಕಾರ ಸಹಾಯನಿಧಿ ಸ್ಥಗಿತ; ಮರು ಆರಂಭದ ನಿರೀಕ್ಷೆಯಲ್ಲಿ ಅಸಹಾಯಕರು
ಅಂತ್ಯಕ್ರಿಯೆಗೆ ಸಿಗುತ್ತಿತ್ತು 5 ಸಾವಿರ ರೂ.
Team Udayavani, Sep 14, 2023, 6:50 AM IST
ಕಾರ್ಕಳ: “ಗ್ಯಾರಂಟಿ’ ಯೋಜನೆಗಳ ಮೂಲಕ ಬಡವರಿಗೆ ಹಲವು ಸವಲತ್ತುಗಳನ್ನು ಉಚಿತವಾಗಿ ನೀಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ಬಡಕುಟುಂಬದ ಸದಸ್ಯರ ಅಂತ್ಯಸಂಸ್ಕಾರ ನಡೆಸಲು ನೀಡುತ್ತಿದ್ದ 5 ಸಾವಿರ ರೂ.ಗಳನ್ನು ಮಾತ್ರ ಸ್ಥಗಿತಗೊಳಿಸಿದೆ!
ದಿನಬಳಕೆ, ಗೃಹಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರಾಜ್ಯದ ಜನ ತತ್ತರಿಸಿದ್ದಾರೆ. ಜೀವನ ದುಸ್ತರ ಎನ್ನುವ ಈ ದಿನಗಳಲ್ಲಿ ಬಡವರು, ಅಸಹಾಯಕರಿಗೆ ಕುಟುಂಬದ ಸದಸ್ಯರ ಅಂತ್ಯಕ್ರಿಯೆ, ಅಪರಕ್ರಿಯೆ ಕೂಡ ದೊಡ್ಡ ಸವಾಲೇ ಸರಿ. ಅದಕ್ಕೂ ಪರರ ಮುಂದೆ ಕೈಚಾಚುವ ಅಸಹಾಯಕ ಜನ ಈಗಲೂ ರಾಜ್ಯದಲ್ಲಿ ಕಂಡುಬರುತ್ತಾರೆ. ಅಂಥವರಿಗೆ ಈ ಹಿಂದಿನ ಸರಕಾರ ನೀಡುತ್ತಿದ್ದ 5 ಸಾವಿರ ಮೊತ್ತ ಕಷ್ಟಕಾಲದಲ್ಲಿ ನೆರವಾಗುತ್ತಿತ್ತು.
2006ರಲ್ಲಿ ಆರಂಭವಾದ ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಸದಸ್ಯರು ಮೃತಪಟ್ಟಾಗ ಮೃತರ ವಾರಸುದಾರರು ಅಥವಾ ಅಂತಿಮ ಕ್ರಿಯೆ ನೆರವೇರಿಸುವ ಜವಾಬ್ದಾರಿ ಹೊಂದಿರುವ ಸದಸ್ಯರು, ಅವಲಂಬಿ ತರಿಗೆ 1 ಸಾವಿರ ರೂ. ಸಹಾಯಧನ ನೀಡಲಾಗುತ್ತಿತ್ತು. ಬಳಿಕ ಇದು ತೀರಾ ಜುಜುಬಿ ಮೊತ್ತ ಎಂದರಿತ ಸಿದ್ದರಾಮಯ್ಯ ನೇತೃತ್ವದ ಸರ ಕಾರವು ಶವಸಂಸ್ಕಾರವನ್ನು ಗೌರವ ಯುತವಾಗಿ ನಡೆಸಬೇಕು ಎಂಬ ನೆಲೆಯಲ್ಲಿ 2015ರ ಎಪ್ರಿಲ್‌ನಿಂದ 5 ಸಾವಿರ ರೂ.ಗೆ ಹೆಚ್ಚಿಸಿತ್ತು.
ಮಾನವೀಯ ನೆರವಿನ ಈ ಯೋಜನೆಗೆ ಬಿಜೆಪಿ ನೇತೃತ್ವದ ಸರಕಾರದ 2021-22ನೇ ಸಾಲಿನ ಆಯವ್ಯಯದಲ್ಲಿ ಅನುದಾನ ಬಿಡುಗಡೆಗೊಳಿಸಲಿಲ್ಲ. ಅಂತ್ಯ ಸಂ ಸ್ಕಾರ ಯೋಜನೆಯಡಿ 2021ರ ಆಗಸ್ಟ್ ಅಂತ್ಯಕ್ಕೆ ಜಿÇÉೆಗಳಿಂದ ಸ್ವೀಕೃತವಾಗಿರುವ ಅರ್ಜಿಗಳಿಗೆ ಮಾತ್ರ ಸಹಾಯಧನ ವಿತರಿಸಲು 17.92 ಕೋಟಿ ರೂ. ಬಿಡುಗಡೆ ಮಾಡಿ 2021ರ ಸೆಪ್ಟಂಬರ್‌ನಲ್ಲಿ ಈ ಯೋಜನೆಗೂ ಅಂತ್ಯ ಹಾಡಿತ್ತು. ಈಗ ಮತ್ತೆ ಸಿದ್ದರಾಮಯ್ಯ ಸರಕಾರ ಆಡಳಿತಕ್ಕೆ ಬಂದಿದ್ದು, ಯೋಜನೆ ಮರುಆರಂಭದ ನಿರೀಕ್ಷೆಯಲ್ಲಿ ಜನರಿದ್ದಾರೆ.
ಅಸಹಾಯಕತೆ
ಅಂತ್ಯಸಂಸ್ಕಾರ ನೆರವು ಪಡೆಯಬೇಕಿದ್ದರೆ ಸ್ಥಳೀಯ ಕಂದಾಯ ಕಚೇರಿಯ ಅಧಿಕಾರಿಗಳಿಂದ ಬರೆಸಿಕೊಂಡು ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ತಹಶೀಲ್ದಾರರಿಂದ ಮಂಜೂರುಗೊಂಡು ಫಲಾನುಭವಿ ಖಾತೆಗೆ ಹಣ ಸಂದಾಯವಾಗುತ್ತಿತ್ತು. ಪ್ರಸ್ತುತ ಆ ಯೋಜನೆ ಇಲ್ಲವಾದರೂ ನೆರವು ಕೋರಿ ಅರ್ಜಿ ಹಿಡಿದು ಕಚೇರಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿಲ್ಲ. ಕಳೆದೊಂದು ವರ್ಷದಿಂದ ಅರ್ಜಿ ಸ್ವೀಕರಿಸುವುದನ್ನೇ ಕೆಲವೆಡೆ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಇನ್ನು ಕೆಲವೆಡೆ ಅರ್ಜಿ ಸ್ವೀಕರಿಸಿ “ಸರಕಾರದಿಂದ ಹಣ ಬಂದರೂ ಬರಬಹುದು’ ಎಂದು ಭರವಸೆ ನೀಡಿ ಅರ್ಜಿದಾರರನ್ನು ಸಾಗಹಾಕುತ್ತಿದ್ದಾರೆ.
ನಿರ್ಗತಿಕರಿಗೆ ಕಷ್ಟ ಮತ್ತು ನೋವಿನ ಕಾಲದಲ್ಲಿ ಈ ಹಣ ಅತ್ಯಂತ ಬೆಲೆಬಾಳುತ್ತದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಯೋಜನೆ ಆರಂಭಗೊಂಡಿದ್ದು ಈಗ ಮತ್ತೆ ಅದೇ ಪಕ್ಷದ ಸರಕಾರ ಇರುವುದರಿಂದ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಮರುಜೀವ ನೀಡುವರೆಂಬ ವಿಶ್ವಾಸವಿದೆ. ಈ ಕುರಿತು ಸಂಘಟನೆ ವತಿಯಿಂದಲೂ ಸರಕಾರವನ್ನು ಆಗ್ರಹಿಸಲಿದ್ದೇವೆ.
– ಅಣ್ಣಪ್ಪ ನಕ್ರೆ , ದಲಿತ ಮುಖಂಡ
ಕಂದಾಯ ಇಲಾಖೆಯ ಪಿಂಚಣಿ ಅಥವಾ ಇನ್ಯಾವ ಇಲಾಖೆಯಡಿ ಸಹಾಯಧನ ಈ ಹಿಂದೆ ನೀಡಲಾಗುತ್ತಿತ್ತು ಮತ್ತು ಸ್ಥಗಿತಕ್ಕೆ ಕಾರಣವೇನು ಎಬುದನ್ನು ಪರಿಶೀಲಿಸುವೆ. ತಾಂತ್ರಿಕ ಕಾರಣಗಳನ್ನು ಕಂಡುಕೊಂಡು ಸರಕಾರದ ಗಮನಕ್ಕೆ ತಂದು ಮರುಜಾರಿಗೆ ಪ್ರಯತ್ನಿಸಲಾಗುವುದು.
– ಡಾ| ರಶ್ಮಿ ವಿ. ಮಹೇಶ್,
ಕಾರ್ಯದರ್ಶಿ (ವಿಪತ್ತು ನಿರ್ವಹಣೆ ನೋಂದಣಿ ಮತ್ತು ಮುದ್ರಾಂಕ), ಕಂದಾಯ ಇಲಾಖೆ, ಪ್ರಧಾನ ಕಚೇರಿ ಬೆಂಗಳೂರು
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.