ಕಂಬಳದಲ್ಲಿ “ಚೆನ್ನ’ನ ಓಟಕ್ಕೆ ಯಾರೂ ಸಾಟಿಯಿಲ್ಲ
Team Udayavani, Feb 1, 2020, 7:34 AM IST
ಪಡುಬಿದ್ರಿ: ನಿರಂತರ 5 ವರ್ಷಗಳಲ್ಲಿ ಸರಣಿ ಶ್ರೇಷ್ಠ ಗೌರವ ಪಡೆದು, 13 ವರ್ಷಗಳಲ್ಲಿ 150ಕ್ಕೂ ಅಧಿಕ ಚಿನ್ನ ಗೆದ್ದ ಮಹತ್ತರ ಸಾಧನೆ ಮಾಡಿದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ರ ಅವರ ಕೋಣ “ಚೆನ್ನ’ ಕಂಬಳ ಕ್ಷೇತ್ರದ ಮಿಂಚಿನ ಓಟಗಾರ.
ಈಗ 19ರ ಹರೆಯವಾದರೂ ಓಟದಲ್ಲಿ ಮೀರಿಸುವ ಕೋಣ ಮತ್ತೂಂದಿಲ್ಲ. ಯಾವುದೇ ತರಬೇತಿಯಿಲ್ಲದೆ 4ರ ಹರೆಯದಲ್ಲೇ ಕಂಬಳಕ್ಕೆ ಇಳಿದಿದ್ದ ಚೆನ್ನ ಸೆಮಿಫೈನಲ್‌ಗೇರಿದ್ದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. 75 ಬಾರಿ ಬಿರುಸಿನ ಫೈನಲ್ ಸ್ಪರ್ಧೆಯಲ್ಲಿ ವೀಡಿಯೋ ತೀರ್ಪಿನಲ್ಲಿ ಗೆಲುವು ಸಾಧಿಸಿದ್ದಿದೆ. ತನ್ನೊಂದಿಗೆ ಜೊತೆಯಾದ ಯಾವುದೇ ಕೋಣಗಳಿದ್ದರೂ, ಗೆಲುವು ದಕ್ಕಿಸಿಕೊಂಡಿದೆ.
ನಾಲ್ವರು ಯಜಮಾನರು:
ಹಲವಾರು ಓಟಗಾರರು
ಬೆಳುವಾಯಿ ಪೈರಿನಿಂದ ಕಾಂತಾವರ ಗ್ರಾಮದ ಬೈದೊಟ್ಟು ಪ್ರಕಾಶ್ ಪೂಜಾರಿ ಮನೆಗೆ ಬಂದಿದ್ದ 2 ವರ್ಷದ ಚೆನ್ನ ಬಳಿಕ ಕಡಂದಲೆ ಕಾಳು ಪಾಣಾರ, ಬಾಕೂìರು ಶಾಂತಾರಾಮ ಶೆಟ್ಟಿ ಹಾಗೂ ಪ್ರಸ್ತುತ 13 ವರ್ಷಗಳಿಂದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿಯವರ ಬಳಿ ಇದೆ. 2004ರಿಂದ 2009 ರವರೆಗೆ ನೇಗಿಲು ಕಿರಿಯ, ಹಿರಿಯ ಹಾಗೂ ಹಗ್ಗ ಹಿರಿಯ ವಿಭಾಗಳಲ್ಲಿ ಚಿನ್ನದ ಬೇಟೆ ಮೂಲಕ ಸತತ 5 ವರ್ಷ ಸರಣಿ ಶ್ರೇಷ್ಠ ಗೌರವ ಪಡೆದಿದೆ. 2006 ನವೆಂಬರ್‌ನಿಂದ 2007 ಜನವರಿವರೆಗೆ 10 ಕಂಬಳ ಕೂಟಗಳಲ್ಲಿ 8 ಮೆಡಲ್ ಪಡೆದಿದೆ.
ನಕ್ರೆ ಜಯಕರ ಮಡಿವಾಳ, ಅಳದಂಗಡಿ ರವಿ ಕುಮಾರ್, ಮರೋಡಿ ಶ್ರೀಧರ್, ಮಾರ್ನಾಡ್ ರಾಜೇಶ್, ಹಕ್ಕೇರಿ ಸುರೇಶ್ ಶೆಟ್ಟಿ, ಅಳದಂಗಡಿ ಸತೀಶ್ ದೇವಾಡಿಗ, ಪಣಪೀಲು ಸಾಧು ಶೆಟ್ಟಿ ಸಹಿತ ದೀರ್ಘ ಕಾಲ ಪಲಿಮಾರು ದೇವೇಂದ್ರ ಕೋಟ್ಯಾನ್ ಚೆನ್ನನಿರುವ ಜೋಡಿ ಕೋಣಗಳನ್ನು ಓಡಿಸಿ ಓಟದ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ.
ಇಂದು ಚೆನ್ನಗೆ ಸಮ್ಮಾನ
2019ರ ಅಕ್ಟೋಬರ್‌ನಲ್ಲಿ ನಾರಾವಿ ಬೊಟ್ಟು ಜವನೆರ್, ಶ್ರೀ ಸೂರ್ಯ ಫ್ರೆಂಡ್ಸ್ ಸಂಘಟನೆ ಚಿನ್ನದ ವೀರ ಚೆನ್ನನನ್ನು ಸಮ್ಮಾನಿಸಿತ್ತು. ಫೆ.1 ರಂದು ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಬೃಹತ್ ಗೋ ಸಮ್ಮೇಳನದಲ್ಲಿ ಚೆನ್ನನನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ಸಂಘಟಕರು ಇಟ್ಟುಕೊಂಡಿದ್ದಾರೆ.
ದೈಹಿಕ ಕ್ಷಮತೆ ಇರುವವರೆಗೆ ಓಟ
ಸುಮಾರು 150 ಚಿನ್ನದ ಪದಕ ಗಳಿಸುವ ಮೂಲಕ ಯಜಮಾನನಿಗೆ ನ್ಯಾಯ ಒದಗಿಸಿಕೊಟ್ಟಿರುವ ಚೆನ್ನ, ಕಂಬಳ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಕ್ರೀಡಾರತ್ನ ಪುರಸ್ಕಾರ ಲಭಿಸಲು ಕಾರಣನಾಗಿದ್ದಾನೆ. ಅಡ್ವೆ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಚೆನ್ನನ ಕೊನೆ ಓಟವಾಗಿತ್ತು. ದೈಹಿಕ ಕ್ಷಮತೆ ಇರುವವರೆಗೆ ನೇಗಿಲು ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾನೆ ಎಂದು ಚೆನ್ನನ ಯಜಮಾನ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಅಪಾರ ಬುದ್ಧಿ
ಸಾಧು ಸ್ವಭಾವದ ಚೆನ್ನ ಕಂಬಳದ ದಿನ ಹಟ್ಟಿಯಿಂದ ಹೊರಬಂದಂತೆ ಮನೆ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಬಂದು ತಾನು ಸಾಗುವ ವಾಹನವನ್ನೇರಿ ಮಲಗಿಬಿಡುವ ಬುದ್ಧಿಮತ್ತೆಗೆ ಸಲಾಂ ಹೊಡೆಯಲೇ ಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.