ಆನ್‌ಲೈನ್ ತರಗತಿಗಾಗಿ ಗುಡ್ಡ ಏರುವ ಮಕ್ಕಳು
Team Udayavani, Aug 14, 2021, 8:10 AM IST
ಅಜೆಕಾರು: ವರಂಗ ಗ್ರಾ.ಪಂ. ವ್ಯಾಪ್ತಿಯ ಮುಟ್ಲುಪಾಡಿ ಗ್ರಾಮದಲ್ಲಿ ಒಂದೇ ಒಂದು ಮೊಬೈಲ್ ಟವರ್ ಇಲ್ಲದೆ ಕುಗ್ರಾಮವಾಗಿ ಉಳಿದಿದೆ. ಪ್ರತಿಯೊಂದು ಕೆಲಸ ಕಾರ್ಯಗಳು ಆನ್‌ಲೈನ್ ಮೂಲಕ ನಡೆಯುವ ಇಂದಿನ ದಿನಗಳಲ್ಲಿ ಸಂಪೂರ್ಣ ಗ್ರಾಮವೇ ನೆಟ್‌ವರ್ಕ್ ಸಮಸ್ಯೆಯಿಂದ ಬಳಲುತ್ತಿದೆ. ಗ್ರಾಮದಲ್ಲಿ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸೇರಿದಂತೆ ಇತರ ಯಾವುದೇ ಖಾಸಗಿ ಕಂಪೆನಿಯ ಮೊಬೈಲ್ ಟವರ್ ಇಲ್ಲ. ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣಕ್ಕಾಗಿ ಮಳೆಯ ನಡುವೆ ಗುಡ್ಡ ಪ್ರದೇಶಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಪ್ರಸುತ್ತ ಜನಜೀವನವೇ ಆನ್‌ಲೈನ್ ಪದ್ಧತಿಗೆ ಹೆಚ್ಚಾಗಿ ಅವಲಂಬಿತವಾಗಿದ್ದರೂ ಸಹ ಮುಟ್ಲುಪಾಡಿ ಜನತೆ ಇದರಿಂದ ವಂಚಿತರಾಗಿದ್ದಾರೆ. ಆನ್‌ಲೈನ್ ಬ್ಯಾಕಿಂಗ್, ಶಿಕ್ಷಣ, ವರ್ಕ್ ಫ್ರಂ ಹೋಂ ಮುಟ್ಲುಪಾಡಿ ಜನತೆಗೆ ಇಲ್ಲವಾಗಿದೆ. ಇಲ್ಲಿ ಸುಮಾರು 200 ಮನೆಗಳಿದ್ದು 1,100 ಮಂದಿ ವಾಸಿಸುತ್ತಿದ್ದಾರೆ.
ಬೆಟ್ಟ ಏರಿ ಶಿಕ್ಷಣ :
ಕೊರೊನಾ ಸಂದರ್ಭ ಸರಕಾರ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಆರಂಭ ಮಾಡಿರುವುದರಿಂದ ಮುಟ್ಲುಪಾಡಿ ಭಾಗದ ವಿದ್ಯಾರ್ಥಿಗಳು ನೆಟ್‌ವರ್ಕ್‌ಗಾಗಿ ಗ್ರಾಮದಿಂದ ಸುಮಾರು 5 ಕಿ.ಮೀ. ದೂರದ ಬೋರ್ಗಲ್ ಕುಂಜ ಎಂಬ ಬೆಟ್ಟ ಏರಿ ಮಳೆ ಗಾಳಿಯಲ್ಲಿ ನಿಂತು ಪಾಠ ಕೇಳಬೇಕಾಗಿದೆ.
ಕ್ಷೀಣಗೊಂಡ ಸ್ಥಿರ ದೂರವಾಣಿ :
ಕೆಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಸುಮಾರು 25ರಷ್ಟು ಸ್ಥಿರ ದೂರವಾಣಿ ಗಳು ಇದ್ದವಾದರೂ ಗ್ರಾಮೀಣ ಭಾಗವಾಗಿ ರುವುದರಿಂದ ನಿರಂತರ ಸಮಸ್ಯೆ ಉಂಟಾಗಿ ಯಾವುದೇ ಪ್ರಯೋಜನ ಇಲ್ಲದಂತಾಗಿತ್ತು. ಈ ನಿಟ್ಟಿನಲ್ಲಿ ಸ್ಥಿರ ದೂರವಾಣಿಗೆ ವ್ಯರ್ಥವಾಗಿ ಬಿಲ್ ಪಾವತಿಸಬೇಕಾಗಿದ್ದರಿಂದ ಸ್ಥಿರ ದೂರವಾಣಿಯನ್ನು ಸಹ ಸ್ಥಳೀಯರು ಉಪಯೋಗಿಸುತ್ತಿಲ್ಲ.
ಮೊಬೈಲ್ ಟವರ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಸರಕಾರ, ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸೂಕ್ತ ರೀತಿಯ ಸ್ಪಂದನೆ ದೊರಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಊರಿನ ಮಕ್ಕಳಿಗೆ ಶಾಲೆಯೂ ಇಲ್ಲ ; ಆನ್‌ಲೈನ್ ಕ್ಲಾಸಿಗೆ ನೆಟ್ ವರ್ಕ್ ಕೂಡ ಇಲ್ಲ. ನೆಟ್‌ವರ್ಕ್ ಸಿಗಬೇಕಾದರೆ ಮಕ್ಕಳು ಬೆಟ್ಟ, ಗುಡ್ಡಕ್ಕೆ ತೆರಳಬೇಕು. ಆದರೆ ಕೆಲವೊಮ್ಮೆ ಗುಡ್ಡದ ಮೇಲೆಯು ನೆಟ್‌ವರ್ಕ್ ಸಿಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ.– ಸುದೀಪ್ ಅಜಿಲ, ಮುಟ್ಲುಪಾಡಿ
ಸಚಿವ ಸುನಿಲ್ ಕುಮಾರ್ ಅವರು ಈಗಾಗಲೇ ಈ ಬಗ್ಗೆ ಅಧಿಕಾರ ಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಸ್ಥಳೀಯರ ಸಮಸ್ಯೆ ನಿವಾರಣೆಗಾಗಿ ತ್ವರಿತವಾಗಿ ಮೊಬೈಲ್ ಟವರ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. -ಉಷಾ ಹೆಬ್ಟಾರ್, ಅಧ್ಯಕ್ಷರು, ವರಂಗ ಗ್ರಾಮ ಪಂಚಾಯತ್
– ಜಗದೀಶ್ ಅಂಡಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.