ಆಜ್ರಿ : ಕಾರ್ಯಾಚರಿಸದ ಉಪ ಆರೋಗ್ಯ ಕೇಂದ್ರ
Team Udayavani, Jan 25, 2019, 12:50 AM IST
ಆಜ್ರಿ : ಸ್ವಂತ ಕಟ್ಟಡವಿದೆ. ಆದರೆ ಕೆಲಸ ನಿರ್ವಹಿಸಲು ಬೇಕಾದ ಅಗತ್ಯ ಸಿಬಂದಿಯೇ ಇಲ್ಲ. ಇದರಿಂದ ಸುಮಾರು 1 ವರ್ಷದಿಂದ ಈಚೆಗೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಉಪ ಆರೋಗ್ಯ ಕೇಂದ್ರ ಮುಚ್ಚಿದೆ.
ಹೊಸ ಸಿಬಂದಿ ನೇಮಕವಾಗದೇ ಸಂಕಷ್ಟ
ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಈ ಕೇಂದ್ರದಲ್ಲಿ ಹಿರಿಯ ನರ್ಸ್, ಸಹಾಯಕ ನರ್ಸ್ ಸೇರಿದಂತೆ ಸಹಾಯಕ ಸಿಬಂದಿಯೂ ಇಲ್ಲದೆ ಬೀಗ ಹಾಕಲಾಗಿದೆ. ಪಂ. ವ್ಯಾಪ್ತಿಯಲ್ಲಿ 4,800 ಕ್ಕೂ ಹೆಚ್ಚು ಜನರು ವಾಸವಾಗಿದ್ದು, ಇವರ ಅನುಕೂಲಕ್ಕಾಗಿ ಹಲವು ವರ್ಷಗಳ ಹಿಂದೆಯೇ ಉಪ ಕೇಂದ್ರವನ್ನು ತೆರೆಯಲಾಗಿತ್ತು. ಆದರೆ ಇದರಿಂದ ಈವರೆಗೆ ಜನತೆಗಂತೂ ಯಾವುದೇ ಪ್ರಯೋಜನವಾಗಿಲ್ಲ. ಈ ಮೊದಲು ಒಬ್ಬ ನರ್ಸ್ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರಾದರೂ, ಒಂದು ವರ್ಷದ ಹಿಂದೆ ವರ್ಗಾವಣೆಗೊಂಡಿದ್ದಾರೆ.. ಆಗ ಮುಚ್ಚಿದ ಕೇಂದ್ರ ಈವರೆಗೆ ತೆರೆದಿಲ್ಲ.
ಚಿಕಿತ್ಸೆಗೆ ಸಿದ್ದಾಪುರಕ್ಕೆ ಹೋಗಬೇಕು
ತುರ್ತು ಅಗತ್ಯ ಅಥವಾ ಅಪಘಾತ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಚಿಕಿತ್ಸೆಗೆ ಸುಮಾರು 7 ಕಿ.ಮೀ. ದೂರದ ಸಿದ್ದಾಪುರ ಅಥವಾ 30 ಕಿ.ಮೀ. ದೂರದ ಕುಂದಾಪುರದ ತಾಲೂಕು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆಯಿದೆ.ಆದ್ದರಿಂದ ಇಲ್ಲಿಗೆ ಒಬ್ಬ ಸಿಬಂದಿಯನ್ನಾದರೂ ನೇಮಿಸಿದಲ್ಲಿ ಕನಿಷ್ಟ ಪಕ್ಷ ಸಾಮಾನ್ಯ ಖಾಯಿಲೆಗಳಿಗಾದರೂ ಲ್ಲೇ ಔಷಧ ದೊರೆಯುವಂತಾಗಬಹುದುಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಸಿಬಂದಿ ಇಲ್ಲದೆ ಸಮಸ್ಯೆ
ಪಶ್ಚಿಮ ಘಟ್ಟದ ತಪ್ಪಲಿನ ಹೆಚ್ಚಿನ ಗ್ರಾಮಗಳಲ್ಲಿ ಮಂಗಗಳು ಮೃತಪಟ್ಟಿರುವುದು ಕಾಯಿಲೆಯಿಂದ ಎನ್ನುವುದು ದೃಢಪಟ್ಟಿದ್ದು, ಇಲ್ಲಿ ಭೀತಿ ಆವರಿಸಿದೆ. ಈ ನಿಟ್ಟಿನಲ್ಲಿ ಜಾಗೃತಿಯ ಜತೆಗೆ ಅರಿವು ಮೂಡಿಸುವ ಕಾರ್ಯ ಉಪ ಆರೋಗ್ಯ ಕೇಂದ್ರದ ಮೂಲಕ ಆಗಬೇಕಾಗಿದೆ. ಆದರೆ ಸಿಬಂದಿಯೇ ಇಲ್ಲದಿರುವುದೇ ಜನರಿಗೆ ಸಮಸ್ಯೆಯಾಗಿದೆ.
ಸಿಬಂದಿ ನೇಮಕ ಶೀಘ್ರ
ಸಿಬಂದಿ ಕೊರತೆಯಿರುವುದರಿಂದ ತಾತ್ಕಲಿಕವಾಗಿ ಪ್ರಭಾರ ನೆಲೆಯಲ್ಲಿ ಒಬ್ಬರನ್ನು ನಿಯೋಜಿಸಲಾಗಿದೆ. ಆದರೆ ಕೇಂದ್ರದ ವಾಹನ ಕೆಟ್ಟು ಹೋಗಿದ್ದರಿಂದ ಅವರಿಗೆ ಫೀಲ್ಡ್‌ನಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಮಂಗನಕಾಯಿಲೆ ಭೀತಿ ಇರುವುದರಿಂದ ಈಗ ಇರುವ ಸಿಬಂದಿಗೆ ಹೆಚ್ಚಿನ ಕಾರ್ಯದೊತ್ತಡ ಇದೆ. ಶೀಘ್ರ ಆಜ್ರಿಗೆ ಸಿಬಂದಿ ನೇಮಕ ಮಾಡಲಾಗುವುದು. ಅದಲ್ಲದೆ ಪ್ರತಿ ಶುಕ್ರವಾರ ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೂ ಇಲ್ಲಿನ ಕ್ಲಿನಿಕ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.
– ಡಾ| ನಾಗಭೂಷಣ ಉಡುಪ,ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ
- ಪ್ರಶಾಂತ್ ಪಾದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.