ಉಡುಪಿ ಜಿಲ್ಲೆಯ ಪ್ರಗತಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ; ಅಧಿಕಾರಿಗಳ ವಿರುದ್ಧ ಕೆಂಡಮಂಡಲ
Team Udayavani, Aug 1, 2023, 5:45 PM IST
ಮಣಿಪಾಲ: ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ಜನರ ಆಶೋತ್ತರಿಗಳಿಗೆ ಧ್ವನಿಯಾಗಬೇಕು. ರಾಜ್ಯ ಸರಕಾರದ ಗ್ಯಾರಂಟಿಗಳು ಅರ್ಹರಿಗೆ ತಲುಪುವಂತೆ ಮಾಡಬೇಕು. ಅಧಿಕಾರಿಗಳು ನಿಲಕ್ಷ್ಯ, ಉದಾಸೀನ ತೋರಿಸಿದರೆ, ಜನರಿಗೆ ಸ್ಪಂದಿಸದಿದ್ದರೆ ಸಹಿಸಲು ಸಾಧ್ಯವಿಲ್ಲ. ಜನ ಸ್ಪಂದನೆಗೆ ಸಿದ್ಧರಿಲ್ಲದವರು ಸ್ಥಾನ ತ್ಯಾಗ ಮಾಡಿ. ಜನ ಸ್ಪಂದನೆಗೆ ಸಾಕಷ್ಟು ಅಧಿಕಾರಿಗಳು ಇದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿ.ಪಂ.ನ ಡಾ| ವಿ.ಎಸ್.ಆಚಾರ್ಯ ಸಂಭಾಗಣದಲ್ಲಿ ಸೋಮವಾರ ಜಿಲ್ಲೆಯ ಪ್ರಗತಿ ಪರಿಶೀಲಿಸಿದ ಅವರು, ವಿವಿಧ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜನರಿಗೆ ಕೆಲಸ ಮಾಡಿಕೊಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪಕ್ಷ ರಾಜಕಾರಣ ಚುನಾವಣೆಗೆ ವೇಳೆ ಮಾತ್ರ. ಜನರ ತೆರಿಗೆ ಹಣದಿಂದ ಅಧಿಕಾರಿಗಳಿಗೆ ಸ್ಥಾನಮಾನ, ಸಂಬಳ, ಸವಲತ್ತುಗಳು ಸಿಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡಬಾರದು. ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಠಾಣೆಗಳಿಗೆ ಭೇಟಿ ನೀಡಬೇಕು. ದೂರುಗಳು ಬಂದಾಗ ಮೊದಲು ಎಫ್‌ಐಆರ್ ದಾಖಲಿಸಿಕೊಳ್ಳಿ ಎಂದು ನಿರ್ದೇಶಿಸಿದರು.
ಆರೋಗ್ಯ ಸೂಚ್ಯಂಕ ಆತಂಕ
2015ರ ಆರೋಗ್ಯ ಸೂಚ್ಯಂಕದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈಗ 18ನೇ ಸ್ಥಾನದಲ್ಲಿದೆ. ತಾಯಿ, ಮಕ್ಕಳ ಸಾವಿನ ಪ್ರಮಾಣದಲ್ಲಿ ಏರಿಕೆ ಆಗಿರುವುಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ವಿರುದ್ಧ ಗರಂ ಆಗಿ, ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸುಶಿಕ್ಷಿತರ ಜಿಲ್ಲೆಯ ಆರೋಗ್ಯ ಸೂಚ್ಯಂಕದಲ್ಲಿ ಈ ಪ್ರಮಾಣದ ಕುಸಿತ ಕಂಡಿರುವುದಕ್ಕೆ ನಿಮ್ಮ ಹೊಣೆಗಾರಿಕೆ ಇಲ್ಲವೆ ಎಂದು ಪ್ರಶ್ನಿಸಿದರು. ಜಿಲ್ಲೆಯನ್ನು ಮತ್ತೆ ಮೊದಲ ಸ್ಥಾನಕ್ಕೆ ತರಬೇಕು. ಇಲ್ಲದಿದ್ದರೆ ಅಮಾನತ್ತು ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು. ಈ ಬಗ್ಗೆ ನಿಗಾ ವಹಿಸಿ ಸುಧಾರಣೆ ಕಾಣದಿದ್ದರೆ ಡಿಎಚ್‌ಒ ಅವರನ್ನು ಮುಲಾಜಿಲ್ಲದೆ ಅಮಾನತ್ತು ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೂಚಿಸಿದರು.
ಶಿಕ್ಷಣ ಇಲಾಖೆ ಅಧಿಕಾರಿ ವಿರುದ್ಧ ಗರಂ
ಜಿಲ್ಲೆ ಶೈಕ್ಷಣಿಕ ಸೂಚ್ಯಂಕದಲ್ಲಿ 13ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಜಿಲ್ಲಾ ಉಪನಿರ್ದೇಶಕರು/ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಈ ಕುಸಿತ ನಿಮಗೆ ನಾಚಿಕೆ, ಬೇಸರ ತರುವುದಿಲ್ಲವೇ ಎಂದು ಪ್ರಶ್ನಿಸಿದರು. ಮುಂದಿನ ಅವಧಿ ವೇಳೆಗೆ ನಿಮ್ಮ ಮತ್ತು ಜಿಲ್ಲೆಯ ಕಾರ್ಯಕ್ಷಮತೆ ಕಾಣದಿದ್ದರೆ ನಿಮ್ಮನ್ನು ಶಾಶ್ವತವಾಗಿ ಮನೆಗೆ ಕಳಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸೈಬರ್ ಕ್ರೈಮ್ ತೆಡೆಗೆ ಸೂಚನೆ
ಜಿಲ್ಲೆಯಲ್ಲಿ ರಸ್ತೆ ಗುಂಡಿಗಳು, ಅಪಘಾತ ಮತ್ತು ಸಾವುಗಳ ಪ್ರಮಾಣ ಹೆಚ್ಚಳ ಹಾಗೂ ಸೈಬರ್ ಅಪರಾಧಗಳ ಹೆಚ್ಚುತ್ತಿದೆ. ಇದರ ನಿಯಂತ್ರಣಕ್ಕೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಜಿಲ್ಲಾ ಎಸ್ಪಿಯವರನ್ನು ಮುಖ್ಯಮಂತ್ರಿಯವರು ಪ್ರಶ್ನಿಸಿದರು. ಇದಕ್ಕೆ ಸೂಕ್ತ ಉತ್ತರ ಬರದಿದ್ದಾಗ, ಅಪರಾಧ ನಿಯಂತ್ರಣ, ಸೈಬರ್ ಕ್ರೈಮ್ ತಡೆಯುವುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ರಸ್ತೆಗಳನ್ನು ಶೀಘ್ರವೇ ದುರಸ್ತಿಪಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
5 ಲಕ್ಷ ಪರಿಹಾರ
ಮಳೆ ಅನಾಹುತಗಳಲ್ಲಿ ಪೂರ್ಣ ಮನೆ ಹಾನಿ ಆಗಿದ್ದರೆ 5 ಲಕ್ಷ ರೂ.ಗಳ ವರೆಗೂ ಪರಿಹಾರ ನೀಡಬೇಕು. ಇದು ಸರಕಾರದ ನಿರ್ಧಾರ. ಮನೆ ಸ್ವಂತ ಜಾಗದಲ್ಲಿ ಕಟ್ಟಿದ್ದಾರೋ-ಇಲ್ಲವೋ, ಹಕ್ಕು ಪತ್ರ ಇದೆಯೋ-ಇಲ್ಲವೋ ಎನ್ನುವುದನ್ನು ನೋಡದೆ ಮಳೆಯಿಂದ ಬಿದ್ದ ಮನೆಗೆ ಪರಿಹಾರ ನೀಡಿ, ಪುನಃ ಮನೆ ನಿರ್ಮಾಣ ಆಗಬೇಕು. ಮಳೆ ಹಾನಿಗೆ ಸಂಬಂಧಪಟ್ಟಂತೆ ಸಂಪೂರ್ಣ ಸಮೀಕ್ಷೆ ನಡೆಸಬೇಕು. ಬೆಳೆ ಹಾನಿಗೊಳಗಾದವರಿಗೆ ತಪ್ಪದೆ ಪರಿಹಾರ ಸಿಗಬೇಕು. ಬೆಳೆ ಹಾನಿ ಆದವರಿಗೆ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು. ಒಮ್ಮೆ ಬೆಳೆ ಪರಿಹಾರ ಕೊಟ್ಟ ಬಳಿಕ ಪರ್ಯಾಯ ಬೆಳೆ ಬೆಳೆಯಲು ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು. ಅಡಕೆ ಬೆಳೆಗೆ ಬಂದಿರುವ ಎಲೆಚುಕ್ಕೆ ರೋಗದ ಬಗ್ಗೆ ಕೃಷಿ ವಿಜ್ಞಾನಿಗಳ ನೆರವು ಪಡೆದು ಪರಿಹಾರ ಕಂಡುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
2 ವರ್ಷಗಳಲ್ಲಿ ಕಾಲುಸಂಕ ನಿರ್ಮಾಣ
ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗಿರುವ ಕಾಲುಸಂಕಗಳ ದುರಸ್ತಿ ಅಥವಾ ಪುನಃ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಬೇಕು. ಕಾಲುಸಂಕ ದುರಸ್ತಿ ಆಗದೇ ಇರುವುದರಿಂದ ಅನಾಹುತಗಳು ಸಂಭವಿಸಬಾರದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್(ನರೇಗಾ) ಮತ್ತು ಲೋಕೋಪಯೋಗಿ ಇಲಾಖೆಯು ಜಂಟಿಯಾಗಿ ಸೇತುವೆಗಳನ್ನು ನಿರ್ಮಿಸಲು ಯೋಜನೆ ಸಿದ್ಧಪಡಿಸಿ ಮತ್ತು ಎರಡು ವರ್ಷಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಮುಗಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವ ಮಾಂಕಳ ವೈದ್ಯ, ಶಾಸಕರಾದ ವಿ.ಸುನಿಲ್ ಕುಮಾರ್, ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ ಭಂಡಾರಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ| ರಜನೀಶ್ ಗೋಯಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ಎಂ.ಟಿ.ರೇಜು, ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಜಿಪಂ ಸಿಇಒ ಪ್ರಸನ್ನ ಎಚ್., ಎಸ್‌ಪಿ ಅಕ್ಷಯ್ ಮಚ್ಚೀಂದ್ರ ಸಹಿತ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಳೆ ಹಾನಿ ಪರಿಹಾರ ಹೆಚ್ಚಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಜತೆಗೆ ಕಾಲುಸಂಕ ನಿರ್ಮಾಣ ಮತ್ತು ಕಡಲ್ಕೊರೆತ ಶಾಶ್ವತ ಕಾಮಗಾರಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಹಾಗೆಯೇ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಹಲವು ಸೂಚನೆ, ನಿರ್ದೇಶಕಗಳನ್ನು ನೀಡಿದ್ದಾರೆ.
-ಡಾ| ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.