ಕಚೇರಿಗೆ ಬಂದು ಅನುದಾನ ದಾಖಲೆ ಪರಿಶೀಲಿಸಿ: ಸಚಿವ ಪ್ರಮೋದ್
Team Udayavani, Mar 30, 2018, 6:40 AM IST
ಉಡುಪಿ: ಬಿಜೆಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಬಿಡುಗಡೆ ಮಾಡಿರುವ ಆರೋಪ ಪಟ್ಟಿಗೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಕಾರ್ಯಕರ್ತರು ಶಾಸಕರ ಕಚೇರಿಗೆ ಬಂದು ಅನುದಾನಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಬಹುದು ಎಂದು ಸವಾಲು ಎಸೆದಿದ್ದಾರೆ.
ಉಡುಪಿ ಕ್ಷೇತ್ರಕ್ಕೆ 2,026 ಕೋಟಿಗೂ ಮಿಕ್ಕಿ ಅನುದಾನ ತರಲಾಗಿದೆ. ಸರ್ವೆಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಗಳಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭ ವಿಷನ್ 2025ರಲ್ಲಿ ಕೊಟ್ಟ ಬಹುತೇಕ ಭರವಸೆಗಳನ್ನು ಈಡೇರಿಸಲಾಗಿದೆ. ಮಾಜಿ ಶಾಸಕರು ಉಡುಪಿಯ ಜನತೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದರೆ, ನಾನು ತಲೆ ಎತ್ತುವಂತಹ ಕೆಲಸ ಮಾಡಿ ತೋರಿಸಿದ್ದೇನೆ ಎಂದಿದ್ದಾರೆ.
ಆಸ್ಪತ್ರೆಗಳಿಗೆ 1354.62 ಲ.ರೂ.
ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಗೆ 132.26 ಲ.ರೂ., ಕ್ಯಾಂಟೀನ್ ಸೌಲಭ್ಯ, ಕೆ.ಎಂ.ಎಫ್. ನಂದಿನಿ ಹಾಲು ಕೇಂದ್ರ ಹಾಗೂ ಹಾಪ್‌ಕಾಮ್ಸ್ ಮಾರಾಟ ಮಳಿಗೆಗಳ ನಿರ್ಮಾಣ (ಸಿವಿಕ್ ಎಮನಿಟೀಸ್) 30 ಲ.ರೂ., ಟಿ.ಬಿ. ವಾರ್ಡ್ ನವೀಕರಣ ಹಾಗೂ ಇನ್ನಿತರ ಕಾಮಗಾರಿ 15 ಲ.ರೂ., ಶವಾಗಾರ ನಿರ್ಮಾಣ 85 ಲ.ರೂ., ನೀರು ಸರಬರಾಜು ಮತ್ತು ನೈರ್ಮಲ್ಯ ವ್ಯವಸ್ಥೆ ಹಾಗೂ ಕಟ್ಟಡದ ದುರಸ್ತಿ 36.32 ಲ.ರೂ., ವೈದ್ಯಾಧಿಕಾರಿಗಳ ವಸತಿಗೃಹ, ಶುಶ್ರೂಷಕಿ ಹಾಗೂ ಡಿ ಗ್ರೂಪ್ ನೌಕರರ ವಸತಿಗೃಹ ನಿರ್ಮಾಣ ಹಂತದಲ್ಲಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಆಸ್ಪತ್ರೆ ಕಟ್ಟಡಗಳಿಗೆ ಒಟ್ಟು 1354.62 ಲ.ರೂ. ವ್ಯಯಿಸಲಾಗಿದೆ.
ಉಡುಪಿಗೆ ವಾರಾಹಿ ನೀರು
ವಾರಾಹಿ ನದಿ ನೀರನ್ನು ಹಿರಿಯಡಕದ ಬಜೆಗೆ 42 ಎಂಎಲ್‌ಡಿ ನದಿ ನೀರು ತರಲು 36.50 ಕಿ.ಮೀ. ಉದ್ದ, 844 ಮಿ.ಮೀ. ವ್ಯಾಸದ ಕೊಳವೆ ಹಾಕಲು 122.25 ಕೋ.ರೂ., ಬಜೆಯಲ್ಲಿ ಪ್ರತಿದಿನ 30 ಎಂಎಲ್‌ಡಿ ನದಿ ನೀರನ್ನು ಶುದ್ಧೀಕರಿಸಲು, ಹೊಸ ಡಬ್ಲೂéಟಿಪಿ ನೀರು ಶುದ್ಧೀಕರಣ ಘಟಕಕ್ಕೆ 60 ಕೋ.ರೂ. ವೆಚ್ಚದ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ.
ಸರಕಾರಿ ಪ್ರಥಮ ಹೈಟೆಕ್ ಆಸ್ಪತ್ರೆ
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಿಂದೆ 70 ಹಾಸಿಗೆ ಇದ್ದು, ಈಗ 200 ಹಾಸಿಗೆಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸಾಹೇಬ್ ಅವರ ಹೆಸರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದ್ದು, ಇಲ್ಲಿ ವೈದ್ಯಕೀಯ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ಹೊರರೋಗಿಗಳ ವಿಭಾಗ ಆರಂಭಗೊಂಡಿದ್ದು, ಬರುವ ತಿಂಗಳಲ್ಲಿ ಒಳ ರೋಗಿಗಳ ದಾಖಲಾತಿ ಪ್ರಾರಂಭವಾಗಲಿದೆ. ಈ ಉಚಿತ ಸರಕಾರಿ ಆಸ್ಪತ್ರೆಯ ಆರು ಮಹಡಿಗಳು ಸಂಪೂರ್ಣ ಹವಾನಿಯಂತ್ರಿತವಾಗಿದೆ. 6 ಶಸ್ತ್ರ ಚಿಕಿತ್ಸಾ ಕೊಠಡಿ ಹೊಂದಿದ್ದು ದೇಶದಲ್ಲಿಯೇ ಪ್ರಥಮವಾಗಿ ಸರಕಾರಿ ಆಸ್ಪತ್ರೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಗಳಿರುವ ಹೈಟೆಕ್ ಆಸ್ಪತ್ರೆಯಾಗಿ ನಿರ್ಮಾಣಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ವ್ಯಥೆ!
ಉಡುಪಿ ನಗರಸಭೆಯ ಅಮೃತ ಮಹೋತ್ಸವದ ನಿಮಿತ್ತ ರಾಜ್ಯ ಸರಕಾರದಿಂದ ಮಂಜೂರಾದ 25 ಕೋಟಿಯಲ್ಲಿ ಮಣಿಪಾಲ-ಪರ್ಕಳ ಭೂಸ್ವಾಧೀನಕ್ಕೆ ಹಣ ಮೀಸಲಿರಿಸಲಾಗಿತ್ತು. 2014ರ ಫೆಬ್ರವರಿಯಲ್ಲಿ ಮಲ್ಪೆ-ಮಣಿಪಾಲ-ತೀರ್ಥಹಳ್ಳಿ ರಸ್ತೆಯು ರಾಷ್ಟ್ರೀಯ ಹೆದ್ಧಾರಿ 169ಎ ಆಗಿ ಘೋಷಣೆಯಾಗಿತ್ತು. ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ, ಪರ್ಕಳ-ಮಣಿಪಾಲ- ಮಲ್ಪೆ ರಸ್ತೆಯ ಒಂದೇ ಒಂದು ಕಿ.ಮೀ. ಚತುಷ್ಪಥ ಆಗಲಿಲ್ಲ. ಇನ್ನೂ ಸಹಾ ಡಿ.ಪಿ.ಆರ್ ಹಂತದಲ್ಲಿದೆ. ಇದು ಶೋಭಾ ಕರಂದ್ಲಾಜೆಯ ವೈಫಲ್ಯವಲ್ಲವೇ? ಎಂದರು.
ಉಪ್ಪೂರಿಗೆ ಜಿಟಿಟಿಸಿ ಕೇಂದ್ರ
ಉಪ್ಪೂರಿನಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಮೀಸಲಿರಿಸಿದ ಜಾಗವನ್ನು ಪರಿಶೀಲಿಸಿದ ಮಂಗಳೂರು ವಿವಿ ತಜ್ಞರ ಸಮಿತಿಯು ಜಾಗವು ಸಮತಟ್ಟು ಇಲ್ಲ.
ಉಬ್ಬುತಗ್ಗುಗಳ ಪ್ರದೇಶವಾದುದರಿಂದ ಈ ಸ್ಥಳ ಯೋಗ್ಯವಲ್ಲ ಎಂದು ವರದಿ ಕೊಟ್ಟಿರುವುದರಿಂದ ಕೇಂದ್ರವು ಬೆಳಪುವಿಗೆ ಸ್ಥಳಾಂತರಗೊಂಡಿದೆ. ಉಪ್ಪೂರಿನಲ್ಲಿ 44 ಕೋರೂ. ವೆಚ್ಚದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಕಾಮಗಾರಿ ಪ್ರಗತಿಯಲ್ಲಿದೆ.
ಮರಳುಗಾರಿಕೆ: ಕೇಂದ್ರವನ್ನು ಒತ್ತಾಯಿಸಲಿ
ಹಸಿರು ನ್ಯಾಯ ಪೀಠದಲ್ಲಿ ದಾವೆ ಇದ್ದುದರಿಂದ ಮರಳುಗಾರಿಕೆಗೆ ನಿರ್ಬಂಧ ಇತ್ತು. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಅರ್ಹರಿಗೆ ಮರಳುಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ. ನಿಯಮದ ಪ್ರಕಾರ ನದಿ ನೀರಿನಲ್ಲಿ ಮರಳು ದಿಬ್ಬಗಳು ಸೃಷ್ಟಿಯಾದಲ್ಲಿ ಅದು ಕಣ್ಣಿಗೆ ತೋರುವ ಮಟ್ಟದಲ್ಲಿ ಇದ್ದಲ್ಲಿ ಮಾತ್ರ ಮರಳುಗಾರಿಕೆಗೆ ಅವಕಾಶ ಇದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ ಕೊಡಲು ಒತ್ತಾಯಿಸಲಾಗಿದೆ. ರಘುಪತಿ ಭಟ್ಟರು ಕೇಂದ್ರಕ್ಕೆ ಪತ್ರ ಬರೆದು ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ ನೀಡುವಂತೆ ಕೇಂದ್ರವನ್ನು ಒತ್ತಾಯಿಸಬಹುದು. ಜಿಲ್ಲಾಧಿಕಾರಿ
ಹಾಗೂ ಎಸಿಯವರ ಮೇಲೆ ಮರಳು ಮಾಫಿಯಾ ದವರಿಂದ ಹಲ್ಲೆಯಾಗಿದ್ದಾಗ ಪೊಲೀಸರು ಕೇಸು ದಾಖಲಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.
ಕ್ರೀಡಾ ಕಿಟ್-ಮಾಜಿ ಶಾಸಕರಿಗೆ ಅವಕಾಶ
ರಾಜ್ಯದಾದ್ಯಂತ 5,000 ಕ್ರೀಡಾಕಿಟ್‌ಗಳನ್ನು ವಿತರಿಸುವ ಯುವ ಚೈತನ್ಯ ಯೋಜನೆ ಜಾರಿಗೆ ಬಂದಿದೆ. 15,000 ರೂ.ಗೆ ಕಿಟ್ ದೊರೆಯುತ್ತದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಅವರು ಹೇಳಿದ್ದಾರೆ. 15 ಸಾವಿರ ರೂ.ಗೆ ಕ್ರೀಡಾ ಕಿಟ್ ವಿತರಿಸುವುದಾದರೆ ಮುಂದಿನ ಟೆಂಡರ್‌ನಲ್ಲಿ ಅವರೇ ಭಾಗವಹಿಸಲಿ ಎಂದರು.
ಬಹುಗ್ರಾಮ ಕುಡಿಯುವ ನೀರು
ಉಡುಪಿ ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರಿನ 72 ಕೋ.ರೂ. ಯೋಜನೆಯ ಟೆಂಡರ್ ಹಂತದಲ್ಲಿದ್ದು, ಕಾಮಗಾರಿಗಳು ಪ್ರಾರಂಭವಾಗಲಿದೆ. ಚಾಂತಾರು, ತೆಂಕನಿಡಿಯೂರಿನ ಡಿಪಿಆರ್ ಆಗಿದೆ.
2013ರಲ್ಲಿ ನಗರಸಭೆ ಚುನಾವಣೆಯಾದಾಗ 3 ವರ್ಷ ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಲಾಗಿದೆ. ಆನಂತರ ಸರಕಾರದ ಆದೇಶದ ಮೇರೆಗೆ ನಗರಸಭೆ ಮಾಸಿಕ ಸಭೆಯಲ್ಲಿ ಚರ್ಚಿಸಿಯೇ ಶುಲ್ಕ ಹೆಚ್ಚಿಸಲಾಗಿದೆ. ಕೇಂದ್ರ ಸರಕಾರದ ನಗರೋತ್ಥಾನ ಯೋಜನೆ, ಅಮೃತ ಯೋಜನೆಯಲ್ಲಿ 2013-14ರಲ್ಲಿ ಮಂಜೂರಾಗಿದ್ದ 90 ಕೋ.ರೂ. ಅನುದಾನವನ್ನು ತಡೆ ಹಿಡಿಯಲಾಗಿತ್ತು. ಸತತ ಪ್ರಯತ್ನದಿಂದ 2016ರ ವೇಳೆಗೆ ಹೆಚ್ಚಿನ ಅನುದಾನಕ್ಕೂ ಹಸಿರು ನಿಶಾನೆ ಸಿಕ್ಕಿದೆ. 2017ರಲ್ಲಿ 270 ಕೋ.ರೂ. ಮಂಜೂರಾಯಿತು. ಯೋಜನೆಯ ಡಿಪಿಆರ್ ಆಗಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮ ಶಾಲೆ ಇರುವ ಜಾಗವನ್ನು ನಿಯಮಾನುಸಾರ ನಗರಸಭೆ ಸುಪರ್ದಿಗೆ ಪಡೆದುಕೊಂಡಿದೆ.
ಬ್ರಹ್ಮಾವರ ಪುರಸಭೆ ಆದ್ಯತೆಯ ಮೇರೆಗೆ ಆಗಲಿದೆ. ಬ್ರಹ್ಮಾವರ ತಾಲೂಕು ಘೋಷಣೆಯ ನಂತರದ ಪ್ರಕ್ರಿಯೆಗಳು ಅನುಷ್ಠಾನಗೊಳ್ಳುತ್ತಲಿದೆ. ಬ್ರಹ್ಮಾವರದಲ್ಲಿ ಎಲ್ಲ ಎಲ್ಲ ಸರಕಾರಿ ಇಲಾಖೆಗಳನ್ನು ಒಂದೇ ಸೂರಿನಡಿ ತರಲು ಹಳೆ ಐ.ಬಿ. ಪ್ರದೇಶದ 6 ಎಕರೆ ಸರಕಾರಿ ಭೂಮಿಯನ್ನು ಮಿನಿ ವಿಧಾನ ಸೌಧ ನಿರ್ಮಿಸುವುದಕ್ಕೆ ಮೀಸಲಿರಿಸಲಾಗಿದೆ. ಬ್ರಹ್ಮಾವರ ಗಾಂಧಿ ಮೈದಾನದ 5.5 ಎಕರೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ. ಕರ್ನಾಟಕದಲ್ಲಿ ಹೊಸ ಕೃಷಿ ಕಾಲೇಜು ಪ್ರಾರಂಭವಾಗುವುದಾದರೆ ಬ್ರಹ್ಮಾವರದಲ್ಲಿ ಪ್ರಥಮವಾಗಿ ತೆರೆಯಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದ್ದಾರೆ. ಬೀಡಿನಗುಡ್ಡೆಯಲ್ಲಿ ಬಯಲು ರಂಗಮಂದಿರ ಮಾತ್ರ ನಿರ್ಮಾಣವಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ನಗರಾಭಿವೃದ್ಧಿ ಪ್ರಾಧಿಕಾರದ 1 ಕೋ.ರೂ. ಅನುದಾನದ ಮೂಲಕ ಸುಸಜ್ಜಿತಗೊಳಿಸಲಾಗಿದೆ. ಬಯಲು ರಂಗ ಮಂದಿರದ ಎದುರು ಖಾಸಗಿ ಜಾಗ ಇರುವುದು ರಘುಪತಿ ಭಟ್ಟರಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದರು.
ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾಯಿಸುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಮಲ್ಪೆ ಮೀನುಗಾರಿಕಾ ಬಂದರು ಮೂರನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಮೀನುಗಾರರಿಗೆ ಬೋಟು ನಿರ್ಮಿಸಲು ಸಾವಿರಕ್ಕೂ ಮಿಕ್ಕಿ ಸಾಧ್ಯತಾ ಪತ್ರ ನೀಡಲಾಗಿದೆ. ಮೀನುಗಾರರ ಬಂಧುಗಳಿಗೆ ಸಂಕಷ್ಟ ಪರಿಹಾರ ನಿಧಿ 2 ಲ.ರೂ.ನಿಂದ 6 ಲ.ರೂ.ಗೆ ಏರಿಸಲಾಗಿದೆ.
ಉಡುಪಿಯ ಡಾ| ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 61 ಸೆಂಟ್ಸ್ ಜಾಗ ಮಂಜೂರು ಮಾಡಲಾಗಿದೆ. ಯಾವುದೇ ಹೊಸ ಶಾಲೆ ಹಾಗೂ ಕಾಲೇಜು ಸ್ಥಾಪನೆಗೆ ಬೇಡಿಕೆ ಇಲ್ಲದ ಕಾರಣ ಯಾವುದೇ ಹೊಸ ವಿದ್ಯಾ ಸಂಸ್ಥೆ ಪ್ರಾರಂಭವಾಗಿಲ್ಲ. ಕೊಕ್ಕರ್ಣೆಗೆ ಹೊಸ ಐಟಿಐ ಕಾಲೇಜು ಮಂಜೂರಾಗಿದೆ.
ಮಣಿಪಾಲದಲ್ಲಿ ಅಕ್ರಮ ಕಟ್ಟಡ ವ್ಯವಹಾರಗಳ ಕುರಿತು ಅಂದಿನ ಜಿಲ್ಲಾಧಿಕಾರಿ ಡಾ| ವಿಶಾಲ್ ಹಾಕಿದ್ದ 1,200 ಕೋ.ರೂ. ದಂಡವನ್ನು ರದ್ದುಗೊಳಿಸಿದ್ದು ಯಾರು? ವಜಾಗೊಳಿಸಿದ್ದ ಆಗಿನ ಕಂದಾಯ ಮಂತ್ರಿ ಶ್ರೀನಿವಾಸ ಪ್ರಸಾದ್ ಈಗ ಬಿಜೆಪಿಯಲ್ಲೆ ಇದ್ದಾರೆ. ಅವರನ್ನೇ ರಘುಪತಿ ಭಟ್ಟರು ಕೇಳಲಿ. ನಗರಸಭೆ ಪೌರಾಯುಕ್ತ ಮಂಜುನಾಥಯ್ಯನವರ ವಿರುದ್ಧ ಆರೋಪ ಮಾಡುವ ಅವರು ಶಿಕ್ಷಣ ಇಲಾಖೆಯಲ್ಲಿದ್ದ ಅವರನ್ನು ತಾ.ಪಂ. ಇ.ಒ ಮಾಡಿದ್ದು ಅವರೇ ಅಲ್ಲವೇ? ಭ್ರಷ್ಟಾಚಾರದ ಆರೋಪವಿದ್ದರೆ ಲೋಕಾಯುಕ್ತ, ಎಸಿಬಿಗೆ ದೂರು ಕೊಡಲಿ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಪ್ರಧಾನ ಕಾರ್ಯದರ್ಶಿ ಕೆ. ಜನಾರ್ದನ ಭಂಡಾರ್ಕರ್ ಪತ್ರಿಕಾಗೋಷ್ಠಿಯಲ್ಲಿದ್ದರು.
500 ಕೋ.ರೂ. ಆಸ್ಪತ್ರೆ ಯಾಕಾಗಿಲ್ಲ?
2013ರ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿತ್ತು. ಆಸ್ಕರ್ ಫೆರ್ನಾಂಡಿಸ್ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಕಾರಣ ಕೇಂದ್ರದ ಮೇಲೆ ಪ್ರಭಾವ ಬೀರಿ ಅರ್ಥಿಕ ಸಂಪನ್ಮೂಲ ತರುವ ಯೋಜನೆ ಇತ್ತು. ಆನಂತರ ಬಂದ ಕೇಂದ್ರದ ಬಿಜೆಪಿ ಸರಕಾರ ಯಾವುದೇ ಅನುದಾನ ನೀಡದೇ ಇದ್ದುದರಿಂದ 500 ಕೋ.ರೂ. ವೆಚ್ಚದ ಜಿಲ್ಲಾ ಸರಕಾರಿ ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿದೆ. ಇದಕ್ಕಾಗಿ ಬ್ರಹ್ಮಾವರದಲ್ಲಿ 25 ಎಕರೆ ಮೀಸಲಿರಿಸಲಾಗಿದೆ.
ರಸ್ತೆ ಚತುಷ್ಪಥ
ಉಡುಪಿ-ಅಂಬಾಗಿಲು-ಮಣಿಪಾಲ ರಸ್ತೆ ಚತುಷ್ಪಥಗೊಳಿಸುವ ಕಾಮಗಾರಿ ಲೋಕೋಪಯೋಗಿ ಇಲಾಖೆಯ ಮುಖಾಂತರ ಈಗಾಗಲೇ ಪ್ರಥಮ ಹಂತದ 3ರಿಂದ 3.90 ಕಿ.ಮೀ. ವರೆಗೆ ರಸ್ತೆ ಹಾಗೂ ಮೋರಿ ರಚಿಸುವ 5 ಕೋ.ರೂ. ವೆಚ್ಚದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. 3.90 ಕಿ.ಮೀ ನಿಂದ 5.10 ಕಿ.ಮೀ.ವರೆಗೆ 5.40 ಕೋ.ರೂ. ರಸ್ತೆ ಅಭಿವೃದ್ಧಿ ಹಾಗೂ ಇಕ್ಕೆಲಗಳಲ್ಲಿ ಮೋರಿ ರಚಿಸುವ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಾಮಗಾರಿ ಪ್ರಾರಂಭವಾಗುವ ಹಂತದಲ್ಲಿದೆ.
ಮೋನೊರೈಲು-ಗ್ಯಾಸ್ ಪೈಪ್‌ಲೈನ್
ಬಿಎಸ್‌ವೈ ಸಿಎಂ ಆಗಿದ್ದಾಗ ಮೋನೊ ರೈಲಿಗೆ ಮೀಸಲಿ ಟ್ಟಿದ್ದ 1 ಕೋ.ರೂ. ಎಲ್ಲಿ ಹೋಯಿತು? ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಇಂಧನ ಮಂತ್ರಿ ವೀರಪ್ಪ ಮೊಲಿಯವರು ದಾಬೋಲ್‌ನಿಂದ ಕೊಳವೆ ಮೂಲಕ ಅಡುಗೆ ಅನಿಲ ವಿತರಣೆ ಮಾಡುವ ಯೋಜನೆ ಪ್ರಾರಂಭಗೊಳಿಸಿದರು. ಆದರೆ ಈಗಿನ ಬಿಜೆಪಿ ಸರಕಾರ ಆ ಯೋಜನೆಯನ್ನು ಕಾರ್ಯಗತಗೊಳಿಸಿಲ್ಲ. ಮೋನೋರೈಲು ಯೋಜನೆಯೂ ಆಗಲಿಲ್ಲ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.