ರಸ್ತೆ ತಿರುವಿಗೆ ಅಂಟಿಕೊಂಡಿರುವ ಕಂಪೌಂಡ್: ಪ್ರಯಾಣಿಕರಿಗೆ ಆತಂಕ
6 ತಿಂಗಳಾದರೂ ರಸ್ತೆ ವಿಸ್ತರಣೆ ಜಾಗ ನೀಡದ ಆಹಾರ ನಿಗಮ
Team Udayavani, Apr 18, 2022, 12:05 PM IST
ಉಡುಪಿ: ಅಂಬಾಗಿಲು- ಪೆರಂಪಳ್ಳಿ ಮೂಲಕ ಮಣಿಪಾಲ ಸಂಪರ್ಕಿಸುವ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದೆ. ಆದರೆ ಪೆರಂಪಳ್ಳಿಯಲ್ಲಿರುವ ಕೇಂದ್ರ ಸರಕಾರದ ಆಹಾರ ನಿಗಮದ ಡಿಪೋ ಆವರಣ ಗೋಡೆ ರಸ್ತೆಗೆ ಅಂಟಿಕೊಂಡಿರುವುದರಿಂದ ಪ್ರಯಾಣಿಕರು ನಿತ್ಯ ಆತಂಕದಲ್ಲಿ ಸಂಚರಿಸುವಂತಾಗಿದೆ.
ಈ ಅಪಾಯಕಾರಿ ಆವರಣಗೋಡೆ ಕೂಡಲೇ ತೆರವುಗೊಳಿಸಿ, ಪ್ರಯಾಣಿಕರ ಆತಂಕ ನಿವಾರಣೆ ಮಾಡಿದಿದ್ದಲ್ಲಿ ಮುಂದೆ ಇಂದೊಂದು ದೊಡ್ಡ ಅಪಘಾತ ವಲಯವೇ ಆಗಬಹುದು. ತಿರುವಿನಲ್ಲಿ ರಸ್ತೆಗೆ ಅಡ್ಡವಾಗಿರುವ ಈ ಗೋಡೆ ಯನ್ನು ತೆರವುಗೊಳಿಸಿ ನೇರ ರಸ್ತೆ ನಿರ್ಮಿಸುವಂತೆ ಸ್ಥಳೀಯರು ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ ಮತ್ತು ಸ್ಥಳೀಯ ಶಾಸಕರ ಗಮನಕ್ಕೂ ತಂದಿದ್ದಾರೆ.
ಪೆರಂಪಳ್ಳಿಯಲ್ಲಿರುವ ಆಹಾರ ನಿಗಮದ ಕಚೇರಿಯ ಆವರಣಗೋಡೆ ರಸ್ತೆಗೆ ಅಂಟಿಕೊಂಡಿದೆ. ಚರಂಡಿಗೂ ಕನಿಷ್ಠ ಒಂದು ಅಡಿ ಜಾಗವೂ ಬಿಟ್ಟಿಲ್ಲ. ಮಳೆಗಾಲ ದಲ್ಲಿ ನೀರು ರಸ್ತೆಯ ಮೇಲೆ ಹರಿದು ಹೋಗಬೇಕು. ಏಕಮುಖ ಸಂಚಾರ ರಸ್ತೆಯಾದರೂ ಎರಡು ವಾಹನಗಳು ಒಟ್ಟಿಗೆ ಸಾಗುವಾಗ ಅಥವಾ ದ್ವಿಚಕ್ರ ವಾಹನ ವೇಗಕ್ಕೆ ಒಮ್ಮೆಲೆ ನಿಯಂತ್ರಣ ಸಿಗದಿದ್ದರೆ ಎಡಬದಿಯ ಗೋಡೆಗೆ ಢಿಕ್ಕಿ ಹೊಡೆಯುವ ಸ್ಥಿತಿ ಇದೆ. ಅಪಾಯ ಕಾರಿ ತಿರುವಿನಂತೆ ಭಾಸವಾಗುವ ಈ ಕಾಂಪೌಂಡ್‌ನ್ನು ಕೂಡಲೆ ತೆರವುಗೊಳಿಸಿ ನೇರ, ಸಮತಟ್ಟಾದ ರಸ್ತೆ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ನಿಗಮದಿಂದ ವಿಳಂಬ ಧೋರಣೆ
ಆವರಣ ಗೋಡೆ ತೆರವು ಮಾಡದೆ ರಸ್ತೆ ನಿರ್ಮಿಸಿದಲ್ಲಿ ಅಪಘಾತ ವಲಯ ವಾಗಲಿದೆ ಎಂದು ಮೊದಲೇ ಯೋಜನೆ ರೂಪಿಸಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು 40 ಮೀಟರ್ ಜಾಗವನ್ನು ರಸ್ತೆಗೆ ನೀಡುವಂತೆ ನಿಗಮಕ್ಕೆ ಮನವಿ ಮಾಡಿದ್ದರು. ಅದರಂತೆ ನಿಗಮದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಿಡಬ್ಲ್ಯುಡಿ ಎಂಜಿನಿಯರ್‌ಗಳ ಜತೆ ಜಂಟಿ ಸಮೀಕ್ಷೆ ನಡೆಸಿದ್ದರು. ಈ ವರದಿ ಬೆಂಗಳೂರಿನ ವಿಭಾಗೀಯ ಕಚೇರಿಗೆ ಸಲ್ಲಿಸ ಲಾಗಿತ್ತು. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
23 ಕೋ.ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ, ಟಿಡಿಆರ್ ಪ್ರಕ್ರಿಯೆ ಮೂಲಕ ಭೂಸ್ವಾಧೀನ, ಒಟ್ಟು 3.9 ಕಿ.ಮೀ. ರಸ್ತೆ ನಿರ್ಮಾಣಗೊಂಡಿದೆ. ಕೆಲವು ಕಡೆ ರಸ್ತೆ ಉಬ್ಬು, ತಗ್ಗಾಗಿದೆ. ಸಮತಟ್ಟಾಗಿಲ್ಲ ಎಂಬ ದೂರು ವಾಹನ ಸವಾರರದು. ಕೆಲವು ಭಾಗದಲ್ಲಿ ಸೆಕೆಂಡ್ ಲೇಯರ್ ಡಾಮರು ಹಾಕುವ ಕೆಲಸ ಬಾಕಿ ಇದೆ. ಕೊನೆಯ ಹಂತದ ಕಾಮಗಾರಿ ಶೀಘ್ರ ಸಂಪೂರ್ಣಗೊಳ್ಳಲಿದೆ ಎಂದು ಇಲಾಖೆ ಎಂಜಿನಿಯರ್‌ಗಳು ತಿಳಿಸಿದ್ದಾರೆ.
40 ಮೀಟರ್ ಜಾಗಕ್ಕೆ ಬೇಡಿಕೆ
ಕೇಂದ್ರ ಆಹಾರ ನಿಗಮದ ಡಿಪೋ ಅವರಲ್ಲಿ ಕಂಪೌಂಡ್‌ನ ಕಾರ್ನರ್‌ನಲ್ಲಿ 40 ಮೀಟರ್ ಜಾಗಕ್ಕೆ ಬೇಡಿಕೆ ಸಲ್ಲಿಸಿದ್ದೆವು. 6 ತಿಂಗಳಿನಿಂದ ಈ ಬಗ್ಗೆ ಪ್ರಯತ್ನ ನಡೆಸುತ್ತಿದ್ದೇವೆ. ನಿಗಮದ ಬೆಂಗಳೂರು ವಿಭಾಗೀಯ ಕಚೇರಿಯಿಂದ ಅನುಮತಿ ಬಂದಿಲ್ಲ. ಹೀಗಾಗಿ ವಿಳಂಬವಾಗಿದೆ. ಶಾಸಕರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಪ್ರಯತ್ನಿಸುತ್ತಿದ್ದಾರೆ. -ಜಗದೀಶ್ ಭಟ್, ಎಇಇ, ಲೋಕೋಪಯೋಗಿ ಇಲಾಖೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.