ಉಡುಪಿ ಲೋಕಸಭಾ ಕ್ಷೇತ್ರ ಬಿಜೆಪಿ ಗುಮ್ಮಕ್ಕೆ ಕಾಂಗ್ರೆಸ್ ಪ್ರತಿಗುಮ್ಮ
Team Udayavani, Mar 14, 2017, 11:08 AM IST
ಉಡುಪಿ: ದೈವಸ್ಥಾನಗಳಲ್ಲಿ ದರ್ಶನ ಸೇವೆ ನಡೆಯುವ ಸಂದರ್ಭ ಪೂಜೆ, ನಗಾರಿ, ವಾದ್ಯಗಳ ಸದ್ದು ಮೊಳಗುತ್ತಿರುವಂತೆ ದರ್ಶನಕ್ಕೆ ಕೆಲ ಹೊತ್ತು ಇರುವಾಗಲೇ ದರ್ಶನ ಆವೇಶ ಬರುವಂತೆ, ದೊಡ್ಡ ದೊಡ್ಡ ಮನುಷ್ಯರು ಬರುವ ಮುನ್ನವೇ ದೂರವಾಣಿಗಳು ರಿಂಗಣಿಸಿ ವಾದ್ಯ, ಕೊಂಬು, ಕಹಳೆಗಳು, ಭೇರಿ ತಾಡನಗಳು ಅವರನ್ನು ಸ್ವಾಗತಿಸಲು ಮೊಳಗುವಂತೆ, ಚುನಾವಣೆಗೆ ಒಂದೆರಡು ವರ್ಷ ಇರುವಾಗಲೇ ರಾಜಕೀಯ ಕಾರ್ಯಕರ್ತರು, ನಾಯಕರಲ್ಲಿ ಒಂಥರದ ಆವೇಶ ಬರುತ್ತದೆ. ಈಗ ಇಂತಹ ಸ್ಥಿತಿ ಉಡುಪಿಯಲ್ಲಿ ಕಂಡುಬಂದಿದೆ.
ಲೋಕಸಭಾ ಚುನಾವಣೆಗೆ ಮುನ್ನವೇ ವಿಧಾನಸಭಾ ಚುನಾವಣೆ ಬರುವುದಾದರೂ ಲೋಕಸಭಾ ಕ್ಷೇತ್ರದಲ್ಲಿಯೇ ಕಂಪನ ಶುರುವಾಗಿದೆ. ಕಾರಣವೆಂದರೆ ಹಾಲಿ ಇರುವ ಸಂಸದರಿಗೆ ಲೋಕಸಭೆಗಿಂತ ವಿಧಾನಸಭೆ ಮೇಲೆ ಹೆಚ್ಚಿನ ಆಸಕ್ತಿ ಇದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಹಿಂದಿನ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ರಾಜಕೀಯ ಬಿರುಗಾಳಿ ನಿಗದಿತ ಅವಧಿಗೆ ಮುನ್ನವೇ ಬೀಸುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಓರ್ವ ಸಮರ್ಥ ಅಭ್ಯರ್ಥಿ ಬೇಕಾಗಿರುವುದಂತೂ ಸತ್ಯ. ಜಯಪ್ರಕಾಶ್ ಹೆಗ್ಡೆ ಅವರಿಗೆ ಗಟ್ಟಿ ನೆಲೆಯೂ ಬೇಕಾಗಿದೆ. ಪಕ್ಷ ವಿಷಯ ಬಿಟ್ಟು ಮಾತನಾಡುವುದಾದರೆ ಹೆಗ್ಡೆ ಅವರಿಗೆ ಅವರದ್ದೇ ಆದ ಬ್ರ್ಯಾಂಡ್ ಇರುವುದು ಸುಳ್ಳಲ್ಲ. ಹೀಗಾಗಿ ರಾಜಕೀಯ ಹೇಳಿಕೆ ಏನಿದ್ದರೂ ಹೆಗ್ಡೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಡುವುದು ಬಹುತೇಕ ಅನಿವಾರ್ಯ ಎನ್ನಲಾಗುತ್ತಿದೆ.
ಬಿಜೆಪಿಯ “ಗುಮ್ಮ’ಕ್ಕೆ ಕಾಂಗ್ರೆಸ್ ಪಕ್ಷವೂ ಸೂಕ್ತ “ಪ್ರತಿಗುಮ್ಮ’ವನ್ನು ಹುಡುಕುತ್ತಿದೆ. ರಾಜಕೀಯ ಕ್ಷೇತ್ರಗಳಲ್ಲಿ ರಂಗತಾಲೀಮು ಬಹಳ ದಿನಗಳ ಮುನ್ನವೇ ಮಾಡಬೇಕಾಗುತ್ತದೆ. ಉಡುಪಿ ಮತ್ತು ಚಿಕ್ಕಮಗಳೂರು ಎರಡು ಜಿಲ್ಲೆಗಳ ಶೇ. 90 ಭಾಗ ಹೊಂದಿದ ಲೋಕಸಭಾ ಕ್ಷೇತ್ರ ತಲುಪಲು ಸಮರ್ಥ ಗುಮ್ಮವೇ ಬೇಕು. ಈ ಎರಡೂ ಜಿಲ್ಲೆಗಳಲ್ಲಿ ಜನಪ್ರಿಯತೆ ಗಳಿಸಿದ, ಯುವಕರಿಗೆ ಆಕರ್ಷಕ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಅಭ್ಯರ್ಥಿಯಾಗಿ ಮಾಡಲು ಕಾಂಗ್ರೆಸ್ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಇದು ಸಂಭವವೋ ಅಸಂಭವವೋ ಈಗಲೇ ಹೇಳಲಾಗದು. ಹಿರಿಯ ಅಧಿಕಾರಿಗಳಾಗಿದ್ದವರು ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದೂ, ಗೆದ್ದದ್ದೂ, ಸೋತದ್ದೂ ಇದೆ. ಇದೇ ವೇಳೆ ಜಯಪ್ರಕಾಶ್ ಹೆಗ್ಡೆ ಅವರ ಆಗಮನವನ್ನು ಬಿಜೆಪಿಯಲ್ಲಿ ವಿರೋಧಿಸಿದ ಜನಪ್ರಿಯ ನಾಯಕರೊಬ್ಬರಿಗೂ ಕಾಂಗ್ರೆಸ್ “ಗಾಳ’ ಹಾಕಿದೆ ಎನ್ನಲಾಗಿದೆ.
ಏತನ್ಮಧ್ಯೆ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೆಸರು ತೇಲಿಬಂದ ಶೃಂಗೇರಿ ಮೂಲದ ಡಾ| ಆರತಿ ಕೃಷ್ಣ ಸೋಮವಾರ ಅನಿವಾಸಿ ಭಾರತೀಯರ ವೇದಿಕೆ ರಾಜ್ಯ ಉಪಾಧ್ಯಕ್ಷರ ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗ ಪತ್ರ ಕರ್ತರ ಪ್ರಶ್ನೆಗಳಿಗೆ ತುಸು ರಾಜಕೀಯ ಮಾತುಗಳನ್ನೂ ತೇಲಿಬಿಟ್ಟರು.
“ನನ್ನ ಮನೆಯ ಸದಸ್ಯರು ಅಮೆರಿಕದಲ್ಲಿದ್ದಾರೆ. ನಾನಿನ್ನೂ ಇಲ್ಲಿ ನೆಲೆಸಲು ಚಿಂತನೆ ನಡೆಸಿಲ್ಲ. ಅವಕಾಶ ಸಿಕ್ಕಿದರೆ ನೋಡೋಣ’ ಎಂದರು. ಆರತಿ ಅವರು ಸಕ್ರಿಯ ರಾಜಕೀಯ ಒಪ್ಪಲೂ ಇಲ್ಲ, ನಿರಾಕರಿಸಲೂ ಇಲ್ಲ.
ರಿಸ್ಕ್ ತೆಗೆದುಕೊಳ್ಳುವವರಾರು?
ಏತನ್ಮಧ್ಯೆ ಲೋಕಸಭಾ ಚುನಾವಣೆಯ “ಲಾಟರಿ’ ಟಿಕೆಟ್‌ನ್ನು ಯಾರು ಕೊಳ್ಳುತ್ತಾರೆ ಎನ್ನುವುದು ಕುತೂಹಲ. ಈ ಚುನಾವಣೆ ಮುನ್ನವೇ ವಿಧಾನಸಭಾ ಚುನಾವಣೆ ಬರುವುದರಿಂದ ಹಾಲಿ ಸಂಸದರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆದ್ದ ಬಳಿಕವಾದರೂ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಗ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಾಗುತ್ತದೆ. ಇದರ ಅವಧಿ ಕೇವಲ ಒಂದು ವರ್ಷದ್ದಾಗಿರುತ್ತದೆ. ಈ “ಲಾಟರಿ’ ಹಾರಿದರೂ ಒಂದು ವರ್ಷದ ಅವಧಿಯದ್ದು. ಸೋತರೆ ಇನ್ನಷ್ಟು ಭಯಾನಕ. ಇದಕ್ಕಾಗಿ ಯಾರು ರಿಸ್ಕ್ ತೆಗೆದುಕೊಳ್ಳುತ್ತಾರೆ? ಗೆಲ್ಲುವ ಕುದುರೆಯಾದರೂ ಕುದುರೆ ಏರಲು ಹಲವರು ತಯಾರಿರುತ್ತಾರೆ. ಸೋಲುವ ಕುದುರೆಯಾದರೆ ಯಾರು ತಯಾರು ಇರುತ್ತಾರೆ. ಸೋಲುವ ಕುದುರೆಗೆ ಮತ್ತೆ ಬರುವ ಮಹಾಚುನಾವಣೆಯಲ್ಲಿ ಟಿಕೆಟ್ ಖಾತ್ರಿ ಕೊಟ್ಟರೆ ಮಾತ್ರ ಅದು ರಿಸ್ಕ್ ಎದುರಿಸಲು ಸಿದ್ಧವಾಗಬಹುದು.
ಈಗ ಬಿಜೆಪಿ ವರಿಷ್ಠರು ಹಿಂದಿನಂತಲ್ಲ. ರಾಜ್ಯದ ನಾಯಕರನ್ನು ಏಮಾರಿಸಿದಂತೆ ಕೇಂದ್ರದ ನಾಯಕರನ್ನು ಏಮಾರಿಸಲು ಆಗುತ್ತಿಲ್ಲ ಎಂಬುದೂ ಸತ್ಯ. ಇಂತಹ ಸಂದರ್ಭ ಉಪಚುನಾವಣೆಗೆ ವರಿಷ್ಠರು ಒಲವು ತೋರಿಸದೆಯೂ ಹೋಗಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.