![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Nov 13, 2019, 5:30 AM IST
ಮಲ್ಪೆ: ಗೋವಾ, ಕೇರಳದಂತೆ ಕರ್ನಾಟಕದ 300 ಕಿ.ಮೀ. ಉದ್ದದ ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳೆಸಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಕೇಂದ್ರ ಸರಕಾರದಿಂದ ಎಲ್ಲ ಸಹಕಾರ ದೊರೆಯಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ಮಂಗಳವಾರ ಉಡುಪಿ ಜಿಲ್ಲಾಡ ಳಿತ, ಉಡುಪಿ ಮತ್ತು ಮಲ್ಪೆ ಅಭಿವೃದ್ಧಿ ಸಮಿತಿ, ಉಡುಪಿ ನಗರಸಭೆ, ಪ್ರವಾಸೋದ್ಯಮ ಇಲಾಖೆ, ದ.ಕಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನಿನ ಸಹಯೋಗದೊಂದಿಗೆ ಮಂಗಳವಾರ ನಡೆದ ಮಲ್ಪೆ-ಪಡುಕರೆ ಬೀಚ್ ಸ್ವತ್ಛತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕರ ಬೇಡಿಕೆಯಂತೆ ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಪಡುಕರೆ ಸಮೀಪದ ಐಲ್ಯಾಂಡ್ ವರೆಗೆ ಬ್ರೇಕ್ ವಾಟರ್ ನಿರ್ಮಾಣ, ಪ್ರವಾಸಿ ಬೋಟುಗಳಿಗಾಗಿ ಇಲ್ಲಿ ಮರೀನಾ ಸೌಲಭ್ಯವನ್ನು ಕಲ್ಪಿಸುವ ಮೂಲಕ ಪಡುಕರೆ ಬೀಚ್ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಮುಂದಿನ ಅಧಿವೇಶದಲ್ಲಿ ಮಂಡಿಸಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಪಡುಕರೆಗೂ ಬ್ಲೂಫ್ಲ್ಯಾಗ್
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಹೊಸದಾಗಿ ನಿರ್ಮಾಣವಾಗುತ್ತಿರುವ ಪಡುಕರೆ ಬೀಚನ್ನು ಪಡುಬಿದ್ರಿಯ ಬ್ಲೂಫ್ಲ್ಯಾಗ್ ಯೋಜನೆಯೊಂದಿಗೆ ವಿಸ್ತರಿಸುವ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಕೇಂದ್ರಕ್ಕೆ ಕಳುಹಿಸಿಕೊಟ್ಟಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಲಾಗುವುದು. ಕರಾವಳಿಯ ಬಂದರು ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ರಾಜ್ಯ ಮತ್ತು ಹೆಚ್ಚಿನ ಒತ್ತನ್ನು ನೀಡುವಲ್ಲಿಯೂ ಎಲ್ಲ ಪ್ರಯತ್ನಮಾಡಲಾಗುವುದು ಎಂದು ಹೇಳಿದರು.
ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ. ಜಗದೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಕರಾವಳಿ ಕಾವಲುಪಡೆಯ ಎಸ್ಪಿ ಚೇತನ್ ಆರ್., ಎಡಿಸಿಸದಾಶಿವ ಪ್ರಭು, ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಮೀನುಗಾರಿಕೆ ಇಲಾಖಾಧಿಕಾರಿಗಳಾದ ಕೆ. ಗಣೇಶ್, ಶಿವ ಕುಮಾರ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ನಗರಸಭಾ ಸದಸ್ಯೆ ಎಡ್ಲಿನ್ ಕರ್ಕಡ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶಾಸಕ ರಘುಪತಿ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ನಿರೂಪಿಸಿ, ವಂದಿಸಿದರು.
ಹಿಂದೆಯೂ ಮಿತ್ರರು; ಮುಂದೆಯೂ ಮಿತ್ರರಾಗಿರೋಣ
ಮಹಾರಾಷ್ಟ್ರದ ಬೆಳವಣಿಗೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸದಾನಂದ ಗೌಡರು, ಜನಾದೇಶ ಬಿಜೆಪಿಗೆ ಸಿಕ್ಕಿದರೂ ಅಧಿಕಾರಕ್ಕಾಗಿ ನಮ್ಮ ಮಿತ್ರರೇ (ಶಿವಸೇನೆ) ಒಂದು ರೀತಿಯ ನಾಟಕವಾಡುತ್ತಿರುವುದು ಪ್ರಜಾತಂತ್ರಕ್ಕೆ ಮಾರಕವಾಗಿದೆ. ಇದು ಶೋಭೆಯಲ್ಲ. ನಾವು ಹಲವು ವರ್ಷಗಳಿಂದ ಮಿತ್ರರಾಗಿ ಇದ್ದೇವೆ, ಮುಂದೆಯೂ ಮಿತ್ರರಾಗಿಯೇ ಇರೋಣ ಎಂದು ಶಿವಸೇನೆಗೆ ಹೇಳಬಯಸುತ್ತೇನೆ ಎಂದರು.
You seem to have an Ad Blocker on.
To continue reading, please turn it off or whitelist Udayavani.