ಇಸ್ರೇಲ್‌ನಿಂದ ಮರಳಿದ ಕಾರ್ಕಳ ವ್ಯಕ್ತಿಗೆ ಕೊರೊನಾ ಶಂಕೆ
Team Udayavani, Mar 6, 2020, 5:09 AM IST
ಉಡುಪಿ: ಕಾರ್ಕಳ ತಾಲೂಕಿನ ಮುನಿಯಾಲಿನ ವ್ಯಕ್ತಿಯೊಬ್ಬರು ಶಂಕಿತ ಕೊರೋನಾ ವೈರಸ್ ಪರೀಕ್ಷೆಗೆ ಮಾ. 4ರಂದು ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ವ್ಯಕ್ತಿಯ ಗಂಟಲಿನ ದ್ರವ (ಥ್ರೋಟ್ ಸ್ವಾಬ್)ವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ ಚಂದ್ರ ಸೂಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇಸ್ರೇಲ್ ಪ್ರವಾಸ ಮುಗಿಸಿ ಮರಳಿರುವ ಮುನಿಯಾಲಿನ 75 ವರ್ಷದ ವ್ಯಕ್ತಿ ಕೆಮ್ಮು ಹಾಗೂ ಶೀತದ ತೊಂದರೆಯಿಂದ ಬಳಲುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಅವರ ಮನೆಗೆ ಭೇಟಿ ನೀಡಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಬೆಂಗಳೂರಿನಿಂದ ವರದಿ ಬಂದ ಬಳಿಕ ಮುಂದಿನ ಚಿಕಿತ್ಸೆ ಕುರಿತು ಆಲೋಚಿಸಲಾಗುವುದು ಎಂದರು.
ವೈರಲ್ ಜ್ವರದ ಲಕ್ಷಣ ಹಾಗೂ ಕೊರೊನಾ ಲಕ್ಷಣಗಳಿಗೆ ಸಾಮ್ಯ ಇರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಇರಿಸಲಾಗಿದೆ. ದಂಪತಿ ಇಸ್ರೇಲಿನಲ್ಲಿ ಉದ್ಯೋಗದಲ್ಲಿರುವ ಪುತ್ರನ ಬಳಿ ತೆರಳಿ ಮಾ. 4ರಂದು ಮರಳಿದ್ದರು. ಕೆಮ್ಮು ಹಾಗೂ ನೆಗಡಿ ಇದ್ದು ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯದಿಂದ ಇದ್ದಾರೆ ಎಂದು ಪತ್ನಿ ಮಾಹಿತಿ ನೀಡಿದರು.
ವದಂತಿಗೆ ಗಮನ ಬೇಡ
ಕೊರೊನಾ ವೈರಸ್‌ನಿಂದ ಹರಡುವ ರೋಗದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಸಾರ್ವಜನಿಕರು ವದಂತಿಗೆ ಗಮನ ನೀಡಬೇಡಿ. ಯಾವುದೇ ಆತಂಕ, ಗಾಬರಿಪಡುವ ಅಗತ್ಯವಿಲ್ಲ. ಆದರೆ ರೋಗದ ಲಕ್ಷಣಗಳನ್ನು ತಿಳಿದುಕೊಂಡು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.
ವಿಶೇಷ ಕೊಠಡಿ
ಕೊರೊನಾ ವೈರಸ್ ಶಂಕಿತರಿಗೆ ಚಿಕಿತ್ಸೆ ನೀಡಲು ಉಡುಪಿ ಜಿಲ್ಲಾಸ್ಪತ್ರೆ ಯಲ್ಲಿ 5 ಬೆಡ್‌ಗಳ ಕೊಠಡಿ, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 3 ಐಸೋಲೇಷನ್ ಕೊಠಡಿಯನ್ನು ಕಾದಿರಿಸಲಾಗಿದೆ. ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಬಾಧಿತರ ಚಿಕಿತ್ಸೆಗೆ ಅಗತ್ಯವಿರುವ ಕೊಠಡಿಗಳನ್ನು ಕಾದಿರಿಸುವಂತೆ ಆದೇಶ ನೀಡಲಾಗಿದೆ ಎಂದರು.
ಶಂಕಿತರಿಗೆ ಸೂಚನೆ
ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗ ಶಾಲೆಯಿಂ ದಲೇ ಶಂಕಿತ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಆದ್ದರಿಂದ ಶಂಕಿತ ರೋಗಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡುವಂತೆ ಮನವಿ ಮಾಡಿದರು.
ತುರ್ತು ಕಾರ್ಯಪಡೆ ರಚನೆ
ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶನ ದಂತೆ ಜಿಲ್ಲೆಯಲ್ಲಿ ಈಗಾಗಲೇ ತುರ್ತು ಕಾರ್ಯಪಡೆ ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಅರೆ ವೈದ್ಯಕೀಯ ಸಿಬಂದಿ ಸೇರಿದಂತೆ ಪಿಡಿಒಗಳಿಗೆ ಮತ್ತೆ ತರಬೇತಿ ನೀಡಲಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಔಷಧ ಮತ್ತು ಮಾಸ್ಕ್ ಸೇರಿದಂತೆ ಎಲ್ಲ ವೈಯಕ್ತಿಕ ರಕ್ಷಣಾ ಸಾಮಗ್ರಿಗಳ ದಾಸ್ತಾನು ಇದೆ ಎಂದರು.
ಪ್ರವಾಸಿ ಸ್ಥಳದಲ್ಲಿ ಹೋರ್ಡಿಂಗ್
ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಮೂಡಿಸುವ ನಿಟ್ಟಿನಲ್ಲಿ ಉಡುಪಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಮಲ್ಪೆ ಬೀಚ್, ಕೊಲ್ಲೂರು ದೇವಸ್ಥಾನ ಮುಂತಾದ ಪ್ರಮುಖ ಸ್ಥಳಗಳಲ್ಲಿ ಹೋರ್ಡಿಂಗ್, ಪೋಸ್ಟರ್‌ಗಳನ್ನು ಅಳವಡಿಸಲಾಗುತ್ತಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ಕರಪತ್ರಗಳನ್ನು ಹಂಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಪರೀಕ್ಷೆ
ಜಿಲ್ಲೆಗೆ ವ್ಯಾಪಕವಾಗಿ ಹೊರರಾಜ್ಯ ಮತ್ತು ಹೊರದೇಶ ದಿಂದ ಆಗಮಿಸುವವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವಂತೆ ಇಲಾಖೆಯ ಸಿಬಂದಿಗೆ ಸೂಚಿಸಲಾಗಿದೆ. ವಿದೇಶದಿಂದ ಆಗಮಿಸುವ ಜಿಲ್ಲೆಯ ಸಾರ್ವಜನಿಕರು ಸೂಕ್ತ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹಾಗೂ ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಹೊರದೇಶದಿಂದ ಬರುವ ವಿದ್ಯಾರ್ಥಿಗಳ ಕುರಿತಂತೆ ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯ ದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಾಸುದೇವ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮರಾವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸಹಾಯವಾಣಿ
ಯಾವುದೇ ಸಮಸ್ಯೆಗಳಿದ್ದಲ್ಲಿ ಆರೋಗ್ಯ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 104 ಅಥವಾ 080 2228541/ 22374658 ಅಥವಾ ಉಡುಪಿ ಜಿಲ್ಲಾ
ಸರ್ವೇಕ್ಷಣಾ ಘಟಕ ದೂ.ಸಂ. 0820 2525561 ಸಂರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.