ಕೊರೊನಾ ಭೀತಿ: ಉಡುಪಿ ನಗರ ಭಾಗಶಃ ಸ್ತಬ್ಧ
ವ್ಯಾಪಾರ-ವಹಿವಾಟಿಗೆ ತಟ್ಟಿದ ಬಿಸಿ; ಬಸ್‌ಗಳಲ್ಲಿ ಪ್ರಯಾಣಿಕರೂ ಕಡಿಮೆ
Team Udayavani, Mar 15, 2020, 4:54 AM IST
ಉಡುಪಿ: ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಕಾರ ಅಧಿಕೃತ ರಜೆ ಘೋಷಿಸಿರುವುದರಿಂದ ಮೊದಲ ದಿನ ಶನಿವಾರ ಉಡುಪಿ ನಗರ ಭಾಗಶಃ ಸ್ತಬ್ಧವಾಗಿರುವುದು ಕಂಡು ಬಂತು.
ಗೊಂದಲ-ಬಂದ್
ಜಿಲ್ಲಾಡಳಿತದಿಂದ ಅಧಿಕೃತ ಆದೇಶ ಬಾರದ ಹಿನ್ನೆಲೆಯಲ್ಲಿ ಗೊಂದಲದಿಂದಾಗಿ ಬಿಗ್‌ಬಜಾರ್ ಸೇರಿದಂತೆ ಅಧಿಕ ಮಂದಿ ಸೇರುವ ದೊಡ್ಡ ಅಂಗಡಿಗಳು ಬೆಳಗ್ಗೆ 10 ಗಂಟೆಯವರೆಗೆ ತೆರೆದಿದ್ದವು. ಬಳಿಕ ಬಿಗ್‌ಬಜಾರ್ ಬಂದ್ ಮಾಡಲಾಯಿತು. ನಗರದ ಸಿಟಿ ಸೆಂಟರ್ ಬಂದ್ ಆಗಿತ್ತು.
ಚಿತ್ರಮಂದಿರ ಬಂದ್
ನಗರದ ಅಲಂಕಾರ, ಕಲ್ಪನಾ, ಆಶೀರ್ವಾದ, ಡಯಾನ ಚಿತ್ರಮಂದಿರ ಸೇರಿದಂತೆ ಬಿಗ್ ಸಿನೆಮಾ, ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಮಧ್ಯಾಹ್ನದಿಂದ ವೀಕೆಂಡ್ ಮಜಾ ಅನುಭವಿಸಲು ಹೊರಗೆ ಮಾಲ…, ಸಿನೆಮಾಗಳಿಗೆ ತೆರಳುತ್ತಿದ್ದ ನಗರದ ನಿವಾಸಿಗಳು ಕೊರೊನಾದಿಂದಾಗಿ ಮನೆಗಳಲ್ಲಿಯೇ ಕುಳಿತು ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜನಸಂಚಾರ ವಿರಳ
ಮಾರುಕಟ್ಟೆ ಸೇರಿದಂತೆ ನಗರದ ತರಕಾರಿ ಹಾಗೂ ದಿನಸಿ ಮಾರುಕಟ್ಟೆಗಳಿಗೆ ಯಾವುದೇ ಅಡೆತಡೆ ಇಲ್ಲದ ಕಾರಣ ಜನರು ತರಕಾರಿ ಸೇರಿದಂತೆ ಇತರ ವಸ್ತುಗಳನ್ನು ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು. ಜನಸಂದಣಿ ಸೇರುವುದನ್ನು ನಿಷೇಧಿಸಿದ್ದರಿಂದ ಜನರ ಓಡಾಟ ಕಂಡು ಬರಲಿಲ್ಲ. ಸಂಜೆ 6.30ರ ಅನಂತರ ಜನಸಂದಣಿ ಎಂದಿನಂತಿತ್ತು.
ಕೋಳಿ ಮಾಂಸ ಬೆಲೆ ಇಳಿಕೆ
ಕೋಳಿ ಅಂಗಡಿಯಲ್ಲಿ ವ್ಯಾಪಾರ ಹೆಚ್ಚುc ಕಡಿಮೆ ಸಂಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ. ಕೋಳಿ ಮಾಂಸ ತೆಗೆದು ಕೊಂಡು ಹೋಗುವವರ ಸಂಖ್ಯೆ ಶೇ. 90 ಇಳಿಕೆಯಾಗಿದೆ. ಒಂದು ಕೆ.ಜಿ. ಚಿಕನ್‌ಗೆ ಗ್ರಾಹಕ ದರ 50 ರೂ. ಇಳಿಕೆಯಾಗಿದೆ. ಮೀನು ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ಮೀನು ಖರೀದಿ ವಿರಳವಾಗಿತ್ತು. ಆದರೆ ಬೆಲೆ ಮಾತ್ರ ಯಥಾಸ್ಥಿತಿಯಲ್ಲಿತ್ತು.
ಸೂಕ್ತ ಪರವಾನಿಗೆ ಪಡೆದುಕೊಳ್ಳಿ
ಪಡುಬಿದ್ರಿ: ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವಗಳನ್ನು ನಡೆಸಲು ಜಿಲ್ಲಾಧಿಕಾರಿ ಅವರಿಂದ ಸೂಕ್ತ ಪರವಾನಿಗೆ ಪಡೆದುಕೊಳ್ಳಬೇಕು. ಇಂತಹ ಧಾರ್ಮಿಕ ಕೇಂದ್ರಗಳು ಯಾವ ಪ್ರಾ. ಆ. ಕೇಂದ್ರಗಳ ಸರಹದ್ದಿನಲ್ಲಿ ಬರುತ್ತವೆಯೋ ಆ ಕೇಂದ್ರಗಳಿಗೆ ಕೊರೊನಾ ಕುರಿತಾದ ಜಾಗೃತಿ ವಹಿಸುವಂತೆ ಸೂಕ್ತ ನಿರ್ದೇಶನ ನೀಡಲಾಗುವುದು. ಸ್ಥಳೀಯ ಉತ್ಸವಗಳ ಸಂದರ್ಭ ಜಾಗೃತಿ, ಎಚ್ಚರಿಕೆ ಫಲಕ ಅಳವಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ ಸೂಡಾ ತಿಳಿಸಿದ್ದಾರೆ.
ರಕ್ತದಾನಕ್ಕೂ ಕೊರೊನಾ ಕಾಟ!
ಕೊರೊನಾ ವೈರಸ್ ಏಕಾಏಕಿ ರಕ್ತದಾನಿಗಳ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರಿದೆ. ವೈರಸ್ ತಡೆಗಟ್ಟುವ ಕ್ರಮವಾಗಿ ರಕ್ತದಾನ ಶಿಬಿರವನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ರಕ್ತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ರಕ್ತದ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಮನವಿ ಮಾಡಿದ್ದಾರೆ.
ಬಸ್‌ಗಳು ಖಾಲಿ
ಎಲ್ಲೆಂದರಲ್ಲಿ ಜನಜಂಗುಳಿಯಿಂದ ಕೂಡಿರುತ್ತಿದ್ದ ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣಗಳಲ್ಲಿ ಜನ ಸಂಚಾರ ಕಡಿಮೆಯಿತ್ತು. ಎಂದಿನಂತೆ ಜನಜಂಗುಳಿ ಇರದೆ ಪ್ರಯಾಣಿಕರು ಅಲ್ಲಲ್ಲಿ ಸೀಟುಗಳಲ್ಲಿ ಕುಳಿತಿರುವುದು ಕಂಡು ಬಂತು. ಬಸ್ಸುಗಳು ಎಂದಿನಂತೆ ಸಂಚಾರ ನಡೆಸುತ್ತಿದ್ದರೂ ಪ್ರಯಾಣಿಕರು ಇರಲಿಲ್ಲ. ಮಣಿಪಾಲ ಸೇರಿದಂತೆ ವಿವಿಧ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಯಾವುದೆಲ್ಲ ಬಂದ್?
ಕೊರೊನಾ ವೈರಸ್ ಮುಂಜಾಗ್ರತ ಕ್ರಮವಾಗಿ ನಗರದ ಸರಕಾರಿ ಜಿಮ್, ಟೆನ್ನಿಸ್ ಕೋರ್ಟ್, ಈಜುಕೊಳ ಬಂದ್ ಮಾಡಲಾಗಿತ್ತು. ಖಾಸಗಿ ಜಿಮ್ ಸೇರಿದಂತೆ ಅಧಿಕ ಮಂದಿ ಸೇರುವ ಪ್ರದೇಶಗಳನ್ನು ಮುಚ್ಚಲಾಗಿತ್ತು. ಮಧ್ಯಾಹ್ನದ ಬಳಿಕ ಕೆಲವು ಹೊಟೇಲ್‌ಗಳನ್ನು ಬಂದ್ ಮಾಡಲಾಗಿತ್ತು.
ಪ್ರಯಾಣಿಕರ ಸಂಖ್ಯೆ ಕಡಿಮೆ
ನಿತ್ಯ ಸಂಚರಿಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ. ಬೆರಳೆಣಿಕೆ ಪ್ರಮಾಣದಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಮುಂಜಾಗ್ರತ ಕ್ರಮವಾಗಿ ಬಸ್ ವಾಹನ ಚಾಲಕ -ನಿರ್ವಾಹಕರು ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ.
-ಮಂಜುನಾಥ್, ಬಸ್ ನಿರ್ವಾಹಕ.
ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ
ಸಿನೆಮಾ ಮಂದಿರ, ಮಾಲ್, ನಾಟಕಗಳು, ರಂಗಮಂದಿರ, ಪಬ್, ಕ್ಲಬ್, ನೈಟ್‌ಕ್ಲಬ್‌ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಆದೇಶ ನೀಡಲಾಗಿದೆ. ವಸ್ತು ಪ್ರದರ್ಶನ, ಮ್ಯಾರಥಾನ್ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ನೀಡಲಾಗಿದೆ.
-ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.