ಕಾರ್ಕಳ: ಮಸೀದಿ ಅಧ್ಯಕ್ಷರಿಗೆ ಮಾಜಿ ಅಧ್ಯಕ್ಷನಿಂದ ಇರಿಯಲು ಯತ್ನ
Team Udayavani, Oct 10, 2022, 12:31 AM IST
ಕಾರ್ಕಳ: ಮಸೀದಿಯ ಆಡಳಿತ ಮಂಡಳಿಯ ಸದಸ್ಯರ ನಡುವಿನ ಅಸಮಾಧಾನ ಉಂಟಾಗಿ ಮಸೀದಿಯ ಅಧ್ಯಕ್ಷನಿಗೆ ಚೂರಿಯಿಂದ ಇರಿಯಲು ಯತ್ನಿಸಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಕಾರ್ಕಳದ ನಿಟ್ಟೆಯಲ್ಲಿ ಅ. 8ರಂದು ನಡೆದಿದೆ.
ಅಹಮ್ಮದ್ ಹುಸೈನ್ ಅವರು ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿದ್ದು, ರವಿವಾರ ಈದ್ ಮಿಲಾದ್ ಹಬ್ಬದ ಆಚರಣೆಯ ಪೂರ್ವಭಾವಿಯಾಗಿ ಮಸೀದಿಯಲ್ಲಿ ಶನಿವಾರ ಸಂಜೆ ಮಿಲಾದ್ ಫೆಸ್ಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಅಹಮ್ಮದ್ ಹುಸೈನ್ ಅತಿಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಜಮಾತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮಹಮ್ಮದ್ ಹಾಳೆಕಟ್ಟೆ ಎನ್ನುವಾತ ತನ್ನ ಕಾರಿನಲ್ಲಿ ಅಡಗಿಸಿಟ್ಟಿದ್ದ ಚೂರಿಯನ್ನು ತಂದು ಏಕಾಎಕಿ ತಡೆದು ಅಹಮ್ಮದ್ ಹುಸೈನ್ ಬೆನ್ನಿಗೆ ಇರಿಯಲು ಯತ್ನಿಸಿದ್ದಾರೆ. ತಡೆಯಲು ಬಂದ ಮಸೀದಿ ಆಡಳಿತ ಮಂಡಳಿಯ ಕಾರ್ಯದರ್ಶಿ ಅಬ್ದುಲ್ ಜಬ್ಟಾರ್‌ಗೆ ಹೊಡೆದು ಕಾಲಿನಿಂದ ತುಳಿದು ಇಬ್ಬರಿಗೂ ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.