ಮಕ್ಕಳಿಂದಲೇ ವಂಚನೆಗೊಳಗಾಗಿದ್ದ 86ರ ವೃದ್ಧೆಗೆ ನ್ಯಾಯ
Team Udayavani, Oct 4, 2022, 7:15 AM IST
ಉಡುಪಿ: ಆಸ್ತಿಗಾಗಿ ಜಗಳವಾಡುತ್ತಿದ್ದ ಮಕ್ಕಳಿಂದ ವಂಚನೆಗೊಳಗಾಗಿ ಇತರರ ಮುಂದೆ ಕೈಚಾಚುವ ಪರಿಸ್ಥಿತಿ ಎದುರಿಸಿದ್ದ ದ.ಕ. ಜಿಲ್ಲೆಯ 86ರ ವಯೋವೃದ್ಧೆ ಮೊಂತಿನ್ ಡಿ’ಸಿಲ್ವ ಅವರಿಗೆ ಕೊನೆಗೂ ಮಂಗಳೂರಿನ ಹಿರಿಯ ನಾಗರಿಕರ ಮೇಲ್ಮನವಿ ನ್ಯಾಯಮಂಡಳಿ ನ್ಯಾಯ ನೀಡಿದೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನ್‌ಭಾಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರತಿಷ್ಠಾನದ ಟ್ರಸ್ಟಿ ಅಶೋಕ್ ಭಟ್ ಹಾಗೂ ಸಂತ್ರಸ್ಥೆ ಉಪಸ್ಥಿತರಿದ್ದರು.
ಘಟನೆಯ ವಿವರ
ಮೊಂತಿನ್ ಅವರು ಕಲ್ಲಮುಂಡ್ಕೂರು ಗ್ರಾಮದ ದಿ| ಬ್ಯಾಪ್ಟಿಸ್ಟ್ ಡಿ’ಸಿಲ್ವರ ಪತ್ನಿ. ದಂಪತಿ ಸ್ವತಃ ದುಡಿದು ಮಕ್ಕಳಿಗೆ ಶಿಕ್ಷಣ ನೀಡಿ, ಮದುವೆ ಮಾಡಿಸಿ ಜಮೀನು ಖರೀದಿಸಿದ್ದರು. ಬ್ಯಾಪ್ಟಿಸ್ಟ್ 2006ರಲ್ಲಿ ನಿಧನ ಹೊಂದಿದರು. 6.25 ಎಕ್ರೆ ಜಮೀನು ಹಾಗೂ ಮನೆಯನ್ನು ದಂಪತಿ ಸ್ವಂತ ದುಡಿಮೆಯಿಂದ ಮಾಡಿರುವುದರಿಂದ ಮಕ್ಕಳಿಗೆ ಯಾವುದೇ ಹಕ್ಕಿರಲಿಲ್ಲ. ತಂದೆ ತೀರಿಕೊಂಡ ಬಳಿಕ ಆಸ್ತಿಯಲ್ಲಿ ಪಾಲಿಗಾಗಿ ಆಗ್ರಹಿಸುತ್ತಿದ್ದ ಮಕ್ಕಳ ಬೇಡಿಕೆಗೆ ಮಣಿದ ಮೊಂತಿನಮ್ಮ ಕೊನೆಗೆ ಪಾಲು ಮಾಡಿಕೊಳ್ಳುವಂತೆ ಸೂಚಿಸಿದರು.
2009ರಲ್ಲಿ ಕುಟುಂಬದ ಎಲ್ಲ ಮಕ್ಕಳೂ ಸೇರಿ ವಿಭಾಗ ಪತ್ರವೊಂದರ ಮೂಲಕ ಎಲ್ಲ ಜಮೀನನ್ನು ಪಾಲು ಮಾಡಿಕೊಂಡು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ತಾಯಿಯ ಪಾಲಿಗೆ ಬಂದ ಹಳೆಯ ಮನೆ ಹಾಗೂ 2.25 ಎಕರೆ ಜಮೀನನ್ನು ವಿಂಗಡಿಸಿಟ್ಟರೂ ಹಕ್ಕುಪತ್ರಗಳಲ್ಲಿ ಅವರ ಹೆಸರು ದಾಖಲಾಗಲೇ ಇಲ್ಲ. ತಾಯಿಯ ಪಾಲಿನ ಜಮೀನಿಗೆ “ಎಲ್ಲ ಮಕ್ಕಳೂ ಜಂಟಿಯಾಗಿ ಹಕ್ಕುದಾರರು’ ಎಂದು ವಿಭಾಗ ಪತ್ರದಲ್ಲಿ ದಾಖಲಿಸಿ ಹಕ್ಕುಪತ್ರಗಳಲ್ಲಿ ಮಕ್ಕಳ ಹೆಸರು ಮಾತ್ರ ಸೇರ್ಪಡೆಗೊಂಡವು.
ಮಗಳೂ ವಂಚಿಸಿದಳು
2014ರಲ್ಲಿ ವೃದ್ಧಾಪ್ಯದಲ್ಲಿ ತನ್ನನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡ ಮಗಳೊಬ್ಬಳ ಹೆಸರಿಗೆ ತಾಯಿ ತನ್ನ ಪಾಲಿನ ಜಮೀನನ್ನು ವರ್ಗಾಯಿಸಿದರು. ಆಗಲೂ ಅಕ್ಷರ ಜ್ಞಾನವಿಲ್ಲದ ಮೊಂತಿನಮ್ಮ ತಿಳಿಯದೆ ಸಹಿ ಹಾಕಿಕೊಟ್ಟರು. ಜವಾಬ್ದಾರಿ ಹೊತ್ತ ಮಗಳೂ ಖರ್ಚಿಗೆ ಹಣ ನೀಡದ ಕಾರಣ ತನ್ನ ಪಾಲಿನ ಜಮೀನನ್ನು ಮಾರಲು ಮುಂದಾಗಿದ್ದು, ತನ್ನ ಹೆಸರಿನಲ್ಲಿ ಯಾವುದೇ ಆಸ್ತಿ ಉಳಿದಿಲ್ಲ ಎಂಬ ಆಘಾತಕಾರಿ ವಿಷಯ ಗೊತ್ತಾಯಿತು.
ತನ್ನ ಪಾಲಿನ ಆಸ್ತಿಯನ್ನು ಹಿಂದಿರುಗಿಸಬೇಕೆಂದು ಮಂಗಳೂರಿನ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮೊಂತಿನಮ್ಮ ಮನವಿ ಸಲ್ಲಿಸಿ ಪಾಂಡೇಶ್ವರ ಠಾಣೆಗೂ ದೂರು ನೀಡಿದರು. 2018ರ ಮೇಯಲ್ಲಿ ಪೊಲೀಸರು ಹಾಗೂ ಸಹಾಯವಾಣಿ ಕೇಂದ್ರ ಕರೆದ ಸಭೆಯಲ್ಲಿ ಭಾಗವಹಿಸಿದ ಮಕ್ಕಳು ಮಾಡಿದ ಅನ್ಯಾಯವನ್ನು ಒಪ್ಪಿಕೊಂಡು 6 ತಿಂಗಳೊಳಗೆ ತಾಯಿಯ ಪಾಲಿನ ಆಸ್ತಿಯನ್ನು ಹಿಂದಿರುಗಿಸಿ ಅವರ ಹೆಸರಿನಲ್ಲಿಯೇ ಹಕ್ಕುಪತ್ರ ಮಾಡಿಸಿಕೊಡುವುದಾಗಿ ಲಿಖೀತವಾಗಿ ಒಪ್ಪಿಕೊಂಡರು.
6 ತಿಂಗಳು ಕಳೆದರೂ ಆಸ್ತಿಯನ್ನು ಮರಳಿಸ ದಿದ್ದಾಗ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಸಹಕಾರದಿಂದ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯ ಮಂಡಳಿ 2019ರ ಮಾ. 5ರಂದು ಆದೇಶ ಹೊರಡಿಸಿ ಮಕ್ಕಳೆಲ್ಲ ಪ್ರತೀ ತಿಂಗಳು ತಾಯಿಗೆ ತಲಾ 2 ಸಾವಿರ ರೂ. ಕೊಡುವಂತೆ ಆದೇಶಿಸಿತು. 6 ತಿಂಗಳ ಬಳಿಕವೂ ಯಾವ ಮಕ್ಕಳೂ ನಿಯಮಿತವಾಗಿ ಹಣ ನೀಡದಿದ್ದಾಗ ಮೊಂತಿನಮ್ಮ ಮತ್ತೆ ನ್ಯಾಯ ಮಂಡಳಿಗೆ ದೂರು ನೀಡಿದರು. ಅದೇ ವರ್ಷದ ಅ. 14ರಂದು ಮಂಡಳಿ ಮಂಗಳೂರಿನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತನ್ನ ಆದೇಶ ಅಮಲ್ಜಾರಿಗೆ ಸೂಚಿಸಿತು. ಎರಡು ವರ್ಷ ಕಳೆದರೂ ಆದೇಶವನ್ನು ಜಾರಿಗೊಳಿಸಲು ಪೊಲೀಸ್, ಕಂದಾಯ ಇಲಾಖೆಗಳಿಗೆ ಸಾಧ್ಯವಾಗಲಿಲ್ಲ.
ಈ ನಡುವೆ ಮೊಂತಿನಮ್ಮರ ಮೂವರು ಮಕ್ಕಳು ನ್ಯಾಯಮಂಡಳಿಗೆ ಪತ್ರ ಬರೆದು, ತಾಯಿಗೆ ಮಾಸಾಶನ ನೀಡುವ ವಿಷಯದಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆಗಳಿಂದ ತಮಗೆ ಮಾನಸಿಕ ವೇದನೆ ಹಾಗೂ ಕಿರಿ ಕಿರಿ ಉಂಟಾಗುತ್ತಿದ್ದು, ತಾಯಿಯ ಪೋಷಣೆಗೆ ಹಣ ನೀಡುವುದು ಅಸಾಧ್ಯ ಎಂದು ಲಿಖೀತವಾಗಿ ತಿಳಿಸಿದ್ದರು.
ಪ್ರತಿಷ್ಠಾನದ ಮೂಲಕ ಮೊಂತಿನಮ್ಮ ಮಂಗಳೂರು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದರು. ಹಿರಿಯ ನಾಗರಿಕರ ರಕ್ಷಣ ಕಾಯ್ದೆಯ ಕಲಂ 23ರ ಪ್ರಕಾರ “ಹಿರಿಯರಿಂದ ಆಸ್ತಿ ಪಡೆದು ಕೊಂಡವರು ಮೂಲ ಸೌಕರ್ಯ ಹಾಗೂ ದೈಹಿಕ ಅಗತ್ಯಗಳನ್ನು ಪೂರೈಸಲು ಅಥವಾ ವಿಫಲರಾದಲ್ಲಿ ಅಂತಹ ಆಸ್ತಿ ವರ್ಗಾವಣೆಯನ್ನು ಅಸಿಂಧು ಎಂದು ನ್ಯಾಯ ಮಂಡಳಿ ಘೋಷಿಸುತ್ತದೆ’ ಎಂಬ ಅಂಶವನ್ನು ಉಲ್ಲೇಖಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಅಂತಿಮವಾಗಿ ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷ, ಮಂಗಳೂರಿನ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಅವರು ಮೊಂತಿನಮ್ಮ 2009ರ ಮಾ. 6ರಂದು ನೀಡಿದ ವಿಭಾಗ ಪತ್ರ ಹಾಗೂ 2014ರ ಡಿ. 6ರಂದು ಮಕ್ಕಳಿಗೆ ನೀಡಿರುವ ಹಕ್ಕು ಖುಲಾಸೆ ಪತ್ರಗಳನ್ನು ಅಸಿಂಧುಗೊಳಿಸಿ ಆಸ್ತಿಯ ಸಂಪೂರ್ಣ ಹಕ್ಕನ್ನು ಮೊಂತಿನಮ್ಮರ ಹೆಸರಿಗೆ ವರ್ಗಾಯಿಸಿದರು.
ಮಕ್ಕಳ ವಿರುದ್ಧವೇ ನಾಲ್ಕು ವರ್ಷ ಹೋರಾಡಿದ ಬಳಿಕ ಮೊಂತಿನಮ್ಮರಿಗೆ ತಾವು ಮಾಡಿದ 6.25 ಎಕರೆ ಜಾಗ ಹಾಗೂ ಕಟ್ಟಿದ ಮನೆಯ ಒಡೆತನ ಪ್ರಾಪ್ತವಾಗಿದೆ. ಎಲ್ಲ ದಾಖಲೆಗಳು ಮೊಂತಿನಮ್ಮರ ಹೆಸರಿಗೆ ಬಂದಿದ್ದು, ಅವರ ಹೆಸರಿನಲ್ಲಿ ತಹಶೀಲ್ದಾರ್ ಹಕ್ಕುಪತ್ರ ನೀಡುವುದು ಮಾತ್ರ ಬಾಕಿ ಇದೆ.
ಒಂದು ವೇಳೆ ಮಕ್ಕಳು ತೀರ್ಪಿನ ವಿರುದ್ಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗೆ ಹೋದರೂ ಪ್ರತಿಷ್ಠಾನ ಮೊಂತಿನಮ್ಮರ ಜತೆಗೆ ನಿಲ್ಲುತ್ತದೆ ಎಂದು ಡಾ|ಶಾನುಭಾಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.