Udupi; ಕೋಟ್ಯಂತರ ರೂ. ವಂಚಕರ ಪಾಲು; ಆತ್ರಾಡಿ ಮೂಲದ ವೈದ್ಯ ವರ್ಚುವಲ್‌ನಲ್ಲೇ ಅರೆಸ್ಟ್ !
Team Udayavani, Aug 14, 2024, 6:55 AM IST
ಉಡುಪಿ: ವರ್ಚುವಲ್ ಅರೆಸ್ಟ್ ಮಾಡಿ ಗೃಹಬಂಧನ ವಿಧಿಸಿ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಆತ್ರಾಡಿ ನಿವಾಸಿ ಡಾ| ಅರುಣ್ ಕುಮಾರ್ (53) ಅವರಿಗೆ ಆನ್‌ಲೈನ್ ವಂಚಕರು ಕೋಟ್ಯಂತರ ರೂ. ವಂಚಿಸಿದ ಘಟನೆ ನಡೆದಿದೆ.
ನೇಪಾಲದ ಕಾಠ್ಮಂಡುವಿನಲ್ಲಿ ವಾಸವಿ ರುವ ಡಾ| ಅರುಣ್ ಕುಮಾರ್ ಅವರು ಈ ಹಿಂದೆ ಮಣಿಪಾಲದ ಆಸ್ಪತ್ರೆಯಲ್ಲಿಯೂ ನಾಲ್ಕು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಕಾಠ್ಮಂಡುವಿನಿಂದ ಜುಲೈ 29ಕ್ಕೆ ಆತ್ರಾಡಿಯ ಮನೆಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ವಂಚಕರು ಕರೆ ಮಾಡಿ ಡಿಜಿಟಲ್ ಗೃಹಬಂಧನ ವಿಧಿಸಿದ್ದಾರೆ.
ಘಟನೆ ವಿವರ
ಜು. 29ರಂದು +919232037584 ಸಂಖ್ಯೆಯಿಂದ ಯಾರೋ ಅಪರಿಚಿತರು ಕರೆ ಮಾಡಿ ಕಸ್ಟಮ್ಸ್‌ನಿಂದ ಕರೆ ಮಾಡುವುದಾಗಿ ತಿಳಿಸಿ ನಿಮ್ಮ ಆಧಾರ್ ನಂಬರ್ ಬಳಸಿ ಬುಕ್ ಆಗಿರುವ ಫೆಡ್‌ಎಕ್ಸ್ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200 ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್‌ಡಿ ಇದ್ದು ಈ ಕೊರಿಯರ್ ಪ್ರಸ್ತುತ ಮುಂಬಯಿ ಕಸ್ಟಮ್ಸ್ ಅವರ ವಶದಲ್ಲಿರುವುದಾಗಿ ತಿಳಿಸಿದ್ದಾರೆ.
ಈ ವೇಳೆ ಅರುಣ್ ಅವರು ಕೋರಿಯರ್ ಮಾಡಿಲ್ಲ ಎಂದು ತಿಳಿಸಿದಾಗ ಅಪರಿಚಿತ ವ್ಯಕ್ತಿ ಆತನ ಮೇಲಾಧಿಕಾರಿಯವರಿಗೆ ಹಾಟ್‌ಲೆçನ್ ಮೂಲಕ ಸಂಪರ್ಕ ಕಲ್ಪಿಸಿಕೊಟ್ಟಿದ್ದು, ಆ ವ್ಯಕ್ತಿ ತಾನು ಪೊಲೀಸ್ ಅಧಿಕಾರಿ ಎಂದು ನಂಬಿಸಿ “ನಿಮ್ಮ ಆಧಾರ್ ನ ದುರ್ಬಳಕೆಯ ಬಗ್ಗೆ ದೂರು ಸ್ವೀಕರಿಸಲಾಗಿದೆ ಎಂದು ತಿಳಿಸಿ ನಮ್ಮ ಕೇಂದ್ರ ಕಚೇರಿಗೆ ಕರೆಯನ್ನು ಫಾರ್ವಡ್ ಮಾಡುವುದಾಗಿ ಹೇಳಿದ್ದ. ಅನಂತರದಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿ ನಿಮ್ಮ ಆಧಾರ್ ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿದೆ.
ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದಾರೆ ಎಂದಿದ್ದ. ಆತ, ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದು ಸ್ಕೈಪೇ ಆ್ಯಪ್ ಮೂಲಕ ವೀಡಿಯೋ ಮಾನಿಟರಿಂಗ್ ಮಾಡುವುದಾಗಿ ಹೇಳಿದ್ದಾನೆ.
ಏನಿದು ವರ್ಚುವಲ್ ಅರೆಸ್ಟ್?
ವೈದ್ಯರನ್ನು ಆರೋಪಿಗಳು ಜು. 29ರಿಂದ ಆ. 9ರ ವರೆಗೆ ಅವರದೇ ಮನೆಯ ಕೊಠಡಿಯಲ್ಲಿ ಗೃಹಬಂಧನಕ್ಕೆ ಒಳಪಡಿಸಿದ್ದಾರೆ! ಅಷ್ಟೂ ದಿನ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ಸೂಚಿಸಿದ್ದ ಆರೋಪಿಗಳು ವಾಶ್‌ರೂಂಗೆ ಹೋಗುವಾಗಲೂ ಮೊಬೈಲ್ ಆನ್ ಇಟ್ಟು ಕ್ಷಣಾರ್ಧದಲ್ಲಿ ಬರುವಂತೆ ಸೂಚಿಸಿದ್ದರು. ಜತೆಗೆ ಮೊಬೈಲ್ ಅನ್ನು ಯಾವುದೇ ಕಾರಣಕ್ಕೂ ಆಫ್ ಮಾಡದಂತೆ ಎಚ್ಚರಿಕೆಯನ್ನೂ ನೀಡಿದ್ದರು. ವೈದ್ಯರು ಯಾವುದೋ ಕೆಲಸದಲ್ಲಿ ಇರಬಹುದು ಎಂದುಕೊಂಡು ಮನೆಮಂದಿ ಅನ್ನ-ಆಹಾರವನ್ನು ಕೊಠಡಿಯೊಳಗೆ ನೀಡಿ ಹೋಗುತ್ತಿದ್ದರು. ಬಳಿಕ ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು ವೈದ್ಯರು ತನ್ನ ಎಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಯಿಂದ ಆ. 6ರಿಂದ ಆ. 9ರ ವರೆಗೆ ಹಂತ-ಹಂತವಾಗಿ ಒಟ್ಟು 1,33,81,000 ರೂ.ಗಳನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾರೆ. ಈ ವೇಳೆ ಆರೋಪಿಗಳು ಈ ಹಣವನ್ನು ಆ. 12ಕ್ಕೆ ನಿಮ್ಮ ಅಕೌಂಟ್‌ಗೆ ಜಮೆ ಮಾಡಲಾಗುವುದು ಎಂದು ತಿಳಿಸಿದ್ದು, ಇದುವರೆಗೂ ಹಣ ಜಮೆಯಾಗಿಲ್ಲ. ಇದರಿಂದ ವಂಚನೆ ಅರಿವಿಗೆ ಬಂದ ವೈದರು ಸೆನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಸ್ತುತ ವೈದ್ಯರು ನೇಪಾಲಕ್ಕೆ ತೆರಳಿದ್ದು, ಪೊಲೀಸರು ಮತ್ತಷ್ಟು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.