ಕಲ್ಲು ಸಾಗಾಟದಿಂದ ಕಿತ್ತುಹೋದ ಕಾಂಕ್ರೀಟ್ ರಸ್ತೆ
Team Udayavani, Jun 23, 2018, 6:00 AM IST
ಶಿರ್ವ: ಕರಾವಳಿ ಭಾಗದಲ್ಲಿ ಕಡಲ್ಕೊರೆತ ತಪ್ಪಿಸಲು ಕಲ್ಲು ಹಾಕುವ ಕೆಲಸವೇನೋ ನಡೆಯುತ್ತಿದೆ. ಆದರೆ ಶಿರ್ವ ಪರಿಸರದಿಂದ ಇದಕ್ಕಾಗಿ ನಡೆಯುತ್ತಿರುವ ಕಲ್ಲು ಸಾಗಾಟ ಸ್ಥಳೀಯರ ನಿದ್ದೆಗೆಡಿಸಿದೆ.
ಕಟಪಾಡಿ ಪಡುಕೆರೆ ಕಡೆಗೆ ಮಟ್ಟಾರು, ಪಳ್ಳಿ ಪರಿಸರದ ಕ್ವಾರಿಗಳಿಂದ ಶಿರ್ವ ಕಲ್ಲೊಟ್ಟು ಮಾರ್ಗವಾಗಿ ಅಪಾಯಕಾರಿ ರೀತಿಯಲ್ಲಿ ಬೃಹತ್ ಬಂಡೆಗಳನ್ನು ಟಿಪ್ಪರ್‌ಗಳಲ್ಲಿ ಸಾಗಿಸಲಾಗುತ್ತಿದೆ. ಇದರಿಂದ ಇಲ್ಲಿನ ರಸ್ತೆಗಳು ಹಾಳಾಗಿವೆ.
ಹದಗೆಟ್ಟ ಕಾಂಕ್ರೀಟ್ ರಸ್ತೆ
ಕೆಲವು ವರ್ಷಗಳ ಹಿಂದೆ ಪಾದೂರು ಐಎಸ್‌ಪಿಆರ್‌ಎಲ್‌ಗೆ ಟ್ಯಾಂಕರ್ ಮೂಲಕ ನೀರು ಸಾಗಿಸಿದ್ದರಿಂದ ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿತ್ತು. ಬಳಿಕ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.
ಪರಿಣಾಮ ಶಿರ್ವ ಪದವಿನಿಂದ ಕಲ್ಲೊಟ್ಟು- ಮುಟ್ಲಪಾಡಿವರೆಗೆ ರೂ.3 ಕೋಟಿ 26 ಲಕ್ಷದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಕಾಂಕ್ರೀಟೀಕರಣ ಆಗಿತ್ತು. ಆದರೆ ಈಗ ಮತ್ತೆ ಬಂಡೆ ಕಲ್ಲು ಸಾಗಾಟದಿಂದಾಗಿ ರಸ್ತೆ ಹಾಳಾಗಿದೆ.
ಅಪಾಯಕಾರಿ ಸಾಗಾಟ
ಟಿಪ್ಪರ್‌ಗಳಲ್ಲಿ ಹಿಂದಿನ ಬಾಗಿಲುಗಳನ್ನು ಅಳವಡಿಸದೆ ಮಿತಿ ಮೀರಿದ ಭಾರದ ಕಲ್ಲುಗಳ ಸಾಗಾಟ ನಡೆಯುತ್ತಿದೆ. ಇದರಿಂದ ಅವುಗಳ ಹಿಂದೆ ಸಾಗುವ ವಾಹನ ಸವಾರರು ಜೀವ ಭಯದಲ್ಲೇ ಸಾಗುವಂತಾಗಿದೆ. ಈ ಟಿಪ್ಪರ್‌ಗಳಲ್ಲಿ ನಂಬರ್ ಪ್ಲೇಟ್ ಮತ್ತು ಬ್ರೇಕ್ ಲೈಟ್ ಕೂಡ ಇಲ್ಲ. ಕೆಲವು ಸಮಯದ ಹಿಂದೆ ಇಲ್ಲಿನ ಸೊರ್ಪು ಮುಗ್ಗೇರ್ಕಳ ದೈವಸ್ಥಾನದ ತಿರುವಿನ ಬಳಿ ಲಾರಿಯಿಂದ ಕಲ್ಲು ರಸ್ತೆಗೆ ಉರುಳಿ ಬಿದ್ದು ಅವಘಡವೊಂದು ಕೂದಲೆಳೆಯಿಂದ ತಪ್ಪಿತ್ತು.
ಅಧಿಕಾರಿಗಳ ಮೌನ
ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಗುಜರಿ ವಾಹನಗಳಲ್ಲಿ ಬಂಡೆಕಲ್ಲು ಸಾಗಿಸಲಾಗುತ್ತಿದೆ. ಶಾಲಾ ಕಾಲೇಜು, ಅಂಗನವಾಡಿ ಮಕ್ಕಳು ನಡೆದಾಡುತ್ತಿರುವ ಈ ರಸ್ತೆಯಲ್ಲಿ ನಿರಂತರವಾಗಿ ಬೃಹತ್ ಗಾತ್ರದ ಬಂಡೆಕಲ್ಲು ಸಾಗಾಟ ನಡೆಯುತ್ತಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಭಾರೀ ಗಾತ್ರದ ಬಂಡೆಕಲ್ಲುಗಳನ್ನು ಸಾಗಿಸುವುದರಿಂದಾಗಿ ಅವಘಡ ನಡೆಯುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ನಾಗರಿಕರ ಪ್ರತಿಭಟನೆ
ಶಿರ್ವ ಕಲ್ಲೊಟ್ಟು-ಮುಟ್ಲಪಾಡಿ -ಪಳ್ಳಿ ಕಾಂಕ್ರೀಟ್ ರಸ್ತೆ ಹಾಳಾದ್ದರಿಂದ ಈ ನಾಗರಿಕರು ಬಂಡೆಕಲ್ಲುಗಳನ್ನು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ತಡೆದು ನಿಲ್ಲಿಸಿ ಶುಕ್ರವಾರ ಮುಂಜಾನೆ ಪ್ರತಿಭಟನೆ ನಡೆಸಿದರು. ಬಳಿಕ ಶಿರ್ವ ಪೊಲೀಸರು ಸ್ಥಳಕ್ಕಾಗಮಿಸಿ ಈ ಮಾರ್ಗದಲ್ಲಿ ಟಿಪ್ಪರ್ ಚಲಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಸೇತುವೆಯಲ್ಲೂ ಬಿರುಕು
ಬೃಹತ್ ಬಂಡೆಗಳ ಸಾಗಾಟ ಅಪಾಯಕಾರಿಯಾಗಿದ್ದು ಅಧಿಕ ಭಾರದ ಒತ್ತಡದಿಂದಾಗಿ ಕಾಂಕ್ರೀಟ್ ರಸ್ತೆ ಹಾಳಾಗುತ್ತಿದ್ದು ಸೇತುವೆ ಕೂಡ ಬಿರುಕು ಬಿಟ್ಟಿದೆ.
– ಗಣೇಶ್, ಸ್ಥಳೀಯರು
ಕಲ್ಲುಗಳು ಉರುಳುವ ಭಯ
ಟಿಪ್ಪರ್‌ಗಳ ಹಿಂದೆ ಚಲಿಸುವುದೇ ಅಪಾಯಕಾರಿ. ರಸ್ತೆಯ ಏರಿನಲ್ಲಿ ಯಾವಾಗ ಲಾರಿಯಿಂದ ಕಲ್ಲುಗಳು ಉರುಳುತ್ತವೆ ಎಂಬ ಜೀವ ಭಯದಿಂದಲೇ ವಾಹನ ಚಲಾಯಿಸುವಂತಾಗಿದೆ.
– ರಮೇಶ್ ಶೆಟ್ಟಿ, ಬೈಕ್ ಸವಾರ
ತನಿಖೆ ನಡೆಸಿ ಸೂಕ್ತ ಕ್ರಮ
ಜಿಲ್ಲಾಧಿಕಾರಿ ಆದೇÍದ ಮೇರೆಗೆ ಕಲ್ಲು ಸಾಗಾಟ ನಡೆಯುತ್ತಿದೆ ಎಂದು ಟಿಪ್ಪರ್‌ನವರು ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕೇಳಲಾಗುವುದು. ಜನರ ಪ್ರತಿಭಟನೆ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಅಬ್ದುಲ್ ಖಾದರ್, ಶಿರ್ವ ಪಿಎಸ್‌ಐ
– ಸತೀಶ್ಚಂದ್ರ ಶೆಟ್ಟಿ , ಶಿರ್ವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.